ತಂಬೂರಿ ಜನಪದ ಹಾಡುಗಾರರು ಮಾಂಬಳ್ಳಿ ಶ್ರೀನಿವಾಸ್
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಮಾಂಬಳ್ಳಿಯ ಶ್ರೀನಿವಾಸ್ ಅವರು ಚಿಕ್ಕವಯಸ್ಸಿನಿಂದಲೂ ಜನಪದ ಹಾಡು, ತಂಬೂರಿ ಶೈಲಿಯ ಕತೆಗಳನ್ನು ಹಾಡುತ್ತಾ ಬಂದಿದ್ದಾರೆ. ಸಿದ್ದಪ್ಪಾಜಿ ಪವಾಡಗಳು, ಮಂಟೇಸ್ವಾಮಿ ಕತೆ ಬಿಳಿಗಿರಿರಂಗನ ಕತೆ, ಮುಡುಕುತೊರೆ ಮಲ್ಲಿಕಾರ್ಜುನನ ಕತೆ, ಮಲೆಮಹದೇಶ್ವರ ಕತೆ.. ಹೀಗೆ ಹಲವಾರು ಕತೆಗಳನ್ನು ತಾಳ ತಂಬೂರಿ ಗಗ್ಗರದ ನಾದಕ್ಕೆ ತಕ್ಕಂತೆ ಹಾಡುತ್ತಾರೆ. ಸರಿಸುಮಾರು ಐವತ್ತಕ್ಕೆ ಹೆಚ್ಚು ತತ್ವಪದಗಳನ್ನು, ಅಂತಿಮಯಾತ್ರೆಯ ಭಜನೆ ಪದಗಳನ್ನು ಶೋಕಗೀತೆಗಳನ್ನು ಹಾಡುವಲ್ಲಿ ಕರಗತ ಮಾಡಿಕೊಂಡಿದ್ದಾರೆ. ಇವರ ಮಾಂಬಳ್ಳಿ ಮನೆಯ ಪಕ್ಕ ಮಹದೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನ ಆ ಕಾಲಕ್ಕೆ ಮಠವಾಗಿತ್ತು. ಮುಂಭಾಗದಲ್ಲಿ ಮಜ್ಜನದ ಹನ್ನೆರಡಾಳುದ್ದ ನೆಲಬಾವಿ ಇದೆ. ಆ ಬಾವಿಗೆ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಕಾಲು ಜಾರಿ ಬೀಳುತ್ತಾರೆ. ಮಗ ಕಾಣದಿದ್ದಾಗ ತಂದೆತಾಯಿಗಳು ಊರೆಲ್ಲಾ ಹುಡುಕಾಡುತ್ತಾರೆ. ಎಲ್ಲೂ ಸಿಕ್ಕುವುದಿಲ್ಲ. ಕೊನೆಗೆ ಮಠದ ಮುಂದಿನ ಬಾವಿಯಿಂದ ತಾಳದ ಶಬ್ಧ ಕೇಳಿಸುತ್ತದೆ. ಜನ ಓಡಿಹೋಗಿ ನೋಡಲು ತಾಳ ಹಾಕುತಿದ್ದ ಹುಡುಗ ಕಾಣಿಸುತ್ತಾನೆ. ಆಗ ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಿ ನೋಡಿದಾಗ ಬಾಲಕ ಶ್ರೀನಿವಾಸನ ಕೈಲಿ ತಾಳಗಳಿರುತ್ತವೆ. ಇದನ್ನು ನೋಡಿ ತಂದೆತಾಯಿಗಳು ಮತ್ತು ಊರಿನವರು ಇವನನ್ನು ತಡೆಯಬಾರದು, ಹಾಡಲಿ ಬಿಡಿ ಎಂದು ಹೇಳುತ್ತಾರೆ. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬರೀ ತಾಳ ನುಡಿಸಿಕೊಂಡು ಸಿದ್ಧಪ್ಪಾಜಿಯ ಒಂಬತ್ತು ಪವಾಡವನ್ನು ಹಾಡುತ್ತಿದ್ದರು. ಇವರ ಸ್ವರಮಾಧುರ್ಯಕ್ಕೆ ಜನ ಮನಸೋತು ರಾತ್ರಿಯಿಡಿ ಕುಳಿತು ಕತೆ ಕೇಳುವುದರ ಜೊತೆಗೆ ಸೊಲ್ಲು ಹಿಮ್ಮೇಳ ಹಾಡುತಿದ್ದರೆಂದರೆ ಕೇವಲ ಹನ್ನೆರಡನೇ ವಯಸ್ಸಿಗೆ ಇವರಿಗೆ ಕಲಾಸರಸ್ವತಿ ಒಲಿದಿದ್ದಳು ಎಂದು ಹೇಳಬಹುದು. ಇವರು ತಾಳ ಹಿಡಿದು ಹಾಡಲು ಪ್ರಾರಂಭಿಸಿದಾಗ ಈಗಿನ ಹೆಸರಾಂತ ಗಾಯಕರು ಯಾರು ಇರಲಿಲ್ಲ. ಅವರೆಲ್ಲರಿಗೂ ಹಿರಿಯ ಕಲಾವಿದರು. ಇವರು ಒಂದೆರಡು ಕಡೆ ಸಿದ್ದಪ್ಪಾಜಿಯ ಕಳ್ಳಿಪವಾಡದ ಸಮಯದಲ್ಲಿ ಕಳ್ಳಿ ಹಾಲನ್ನು ಕುಡಿದಿರುವುದಾಗಿ ಹೇಳಿದ್ದಾರೆ. ಅಂದರೆ ಅಷ್ಟು ಮೈದುಂಬಿ ಮೈಮರೆತು ಹಾಡುತಿದ್ದರು. ಇವರಿಗೆ ತಂದೆತಾಯಿ, ಮಡದಿ ಇಬ್ಬರು ಮಕ್ಕಳಿದ್ದಾರೆ. ಕತೆ ಕಾರ್ಯಕ್ರಮ ಉಳಿದಂತೆ ಪ್ರತಿದಿನವು ಬೆಳಗ್ಗೆ 7 ಗಂಟೆಯಿಂದ 10 ಗಂಟೆ ನಡುವಿನಲ್ಲಿ ಹೆಗಲಿಗೆ ಜೋಳಿಗೆ ನೇತುಹಾಕೊಕೊಂಡು ಕೈಲಿ ದಂಬಡಿ ತಾಳ ಹಾಕುತ್ತಾ ಉಪದಾನ ಮಾಡುತ್ತಾರೆ. ಉಪದಾನದಿಂದ ಬಂದ ದವಸ ದಾನ್ಯವನ್ನು ತಂದೆತಾಯಿಗಳಿಗೂ ಕೊಟ್ಟು ಅವರು ಮೂರೊತ್ತು ಊಟ ಮಾಡುವಂತೆ ನೋಡಿಕೊಳ್ಳುತ್ತಿರುವುದು ನಮ್ಮ ಈವತ್ತಿನ ಯುವಜನರಿಗೆ ಮಾದರಿ ತಂದೆ ತಾಯಿಯನ್ನು ಭಿಕ್ಷೆ ಮಾಡಿ ಸಾಕುತ್ತಿರುವವರಲ್ಲಿ ಇವರು ಮೊದಲಿಗರಿರಬಹುದು. ಕೆಲವೊಮ್ಮೆ ಇವರು ಜೋಳಿಗೆ ಹಿಡಿದು ರಾತ್ರಿ ವೇಳೆ ಕಂತೆ ಭಿಕ್ಷೆ ಮಾಡಿ ತಂದು ನೆರೆಮನೆಯವರಿಗೂ ಕೊಟ್ಟು ಊಟ ಮಾಡಿಸಿರುವ ನಿದರ್ಶನವಿದೆ. ಸುತ್ತಲಿನ ಎಲ್ಲಾ ಊರುಗಳ ಮಾಹಿತಿ ಇವರಲ್ಲಿ ಲಬಿಸುತ್ತದೆ. ಕೋಪವೇ ಇಲ್ಲದ ವ್ಯಕ್ತಿತ್ವ ಇವರದು ಎನ್ನುವ ನನಗೆ ಮಾಹಿತಿ ಒದಗಿಸಿದ ಮಳವಳ್ಳಿ ಪಿ. ನಾಗರತ್ನಮ್ಮ ರವರು ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯ ಶೀಲ ವ್ಯಕ್ತಿತ್ವದವರು. ಅಂಗಡಿಯ ತರಕಾರಿಯಾಗಲಿ, ಭಿಕ್ಷೆ ಮಾಡಿದ ಅಕ್ಕಿ ರಾಗಿಯಾಗಲಿ ಹಣ್ಣಾಗಲಿ ಮಾಂಸವೇ ಆಗಲಿ ಮಡದಿ ಮನೆಗೆ, ತಾಯಿ ಮನೆಗೆಂದು ಎರಡೆರಡು ಕಟ್ಟಿಸುತ್ತಾರೆ. ಹಾಗೆಯೇ ತಾಯಿ ಮನೆಗೆ, ಮಡದಿ ಮಕ್ಕಳಿಗೆ ತಲುಪಿಸುವುದು ಇವರ ದೊಡ್ಡ ಗುಣ ಎ೦ದು ಹಾಡಿ ಹೊಗಳಿದರು ಮೇಡಂ.
---
ಗೊರೂರು ಅನಂತರಾಜು
ಹಾಸನ
9449462879
ವಿಳಾಸ : ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3 ನೇ ಕ್ರಾಸ್
ಶ್ರೀ ಶನೇಶ್ವರ ದೇವಸ್ಥಾನ,
ಹಾಸನ - 573201
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ