ಕುಣಿದಾಡುವ ಶೋಕಿಯಿಲ್ಲ
ತಣ್ಣಗೆ ಕೂರಿಸಿ ಕಟ್ಟಿಸುತಿದ್ದಳು
ಅವ್ವ ಅರಿಶಿಣದ ದಾರವನು
ತಂಗಿಯೋ ಅಕ್ಕಳೋ
ಒಬ್ಬರಲ್ಲ, ಸಾವಿರವಿದ್ದರೂ ಬೇಕು
ನಾಗರಪಂಚಮಿ ಬಂದೊಡನೆ
ಉಮ್ಮಳಿಸುವುದು ದುಃಖ
ಬಿಗಿಯುವುದು ಕಂಠ
ತೊಟ್ಟಿಕ್ಕುವುವು ಕಂಗಳು
ಗತಿಸಿದ ತಂಗಿಯ ನೆನೆನೆನೆದು
'ಮೂಡಣಕೆ ಮುಖ ಮಾಡಿ
ಸೂರ್ಯನಂತೆ ಬೆಳಗುವನಣ್ಣ
ಬೆಂಗಟಿಗೆ ನೇರದಲಿ ಕೂತು
ಮನೆಗೆ ಆಧಾರವು ನಮ್ಮಣ್ಣ'
ಆರತಿಯ ಬೆಳಗಿ ತಿಲಕವಿಟ್ಟು
ನಾಗಬಂಧವ ಕಟ್ಟಿ ಹರಸುತಿದ್ದಳು ತಂಗಿ
ನೆನಪಿಗಿಟ್ಟ ಎರಡೇ ರೂಪಾಯಿಗೆ ಹಿರಿಹಿರಿ ಹಿಗ್ಗಿ
ಬಳಪದ ಕಲ್ಲಲಿ ಕೆತ್ತಿದ ನಾಗ
ಬಳಿದೆಣ್ಣೆ ಅರಿಶಿಣಕೆ ಮಿಂಚುವುದೀಗ
ಲೋಟಕೆರಡು ಹನಿ ತುಪ್ಪ ತುಂಬ ಹಾಲು
ತಂಗಿಯ ಕೈಹಿಡಿದು ಗರಿಕೆಯಲಿ ಎರೆಯಲು
ಕಿಲಕಿಲ ನಗುವನು ನಾಗ
ಎದುರೆಲೆಯ ಮೇಲೆ ಎಳ್ಳುಂಡೆ ಚಿಗಣಿ-ಟಮಟ
ನೆನೆಸಿಟ್ಟ ಕಾಳು ಬಿಸಿಬಿಸಿ ಹೂರಣ
ತರತರದುಂಡೆ ಹಬೆಯಾಡುವ ಅನ್ನ
ನನಗೆಂದೇ ಒಬ್ಬಳಿದ್ದರೆ ತಂಗಿ
ನಾಗಪಂಚಮಿಯೇ ಸುಗ್ಗಿ
ಅಕ್ಕತಂಗಿಯರು ಬೇಕು ನರಜನ್ಮಕೆ
ಜಗಳವಾಡಲಾದರೂ
ತವರೆಂದೊಡನೆ
ಓಡೋಡಿ ಬರುವವರು
ಸತ್ತಾಗಲೂ ಮೊದಲ ಸುದ್ಧಿ ಅವರಿಗೇ
'ಕಾಯಲು ಯಾರೂ ಇಲ್ಲ
ಬೇಗ ಮಣ್ಣು ಮಾಡಿಬಿಡಿ'
ಅನಾಥವಾಗಿ ಹೋಗುವೆನಲ್ಲ!?
ಅಕ್ಕತಂಗಿಯವರು ಬೇಕು ನರಜನ್ಮಕೆ
ಓಡೋಡಿ ಬರುವವರವರೆ! ಅವರೊಬ್ಬರೆ!!
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ