ಸಮಯಕ್ಕೆ
ಯಾವ ಕವಿತೆಗಳೂ
ಹುಟ್ಟುವುದಿಲ್ಲ
ರಚನೆಗೊಂದು
ವಿರಾಮ ನಿಲ್ದಾಣ ಬೇಕು
ನಿಲ್ಲುತಿದ್ದಂತೆ
ಕಾಡುವವಿರುವಾಗ
ಯಾವ ಕವಿತೆ
ತರಲಿ ನಿಮ್ಮ ಮುಂದೆ?
ಇಷ್ಟೆಲ್ಲ ಗೋಜಲುಗಳ ಮಧ್ಯೆ
ಮತ್ತೊಂದು ಬೇಡವೆನಿಸಿರಬಹುದು
ನಿಮಗೆ!
ಆದರೆ ನಿಮ್ಮನ್ನು ನಾನು
ತಲುಪಲಿ ಹೇಗೆ?
ನೆಪಕಾದರೊಂದು ಕವಿತೆ ಬೇಡವೆ?
ಬೆಟ್ಟವೆ ಕುಸಿದಂತೆ
ಮೈಮೇಲೊಮ್ಮೆಲೆ
ಅಂಗೈ ಜಾಲದೊಳಗಿಂದ
ಧುತ್ತನೆದ್ದು ಕುಣಿಯುತ್ತವೆ
ಒಂದಾದರೂ ಹಿಡಿದು
ಕಾಡಿದರೆ ಹೊಸೆಯಬಹುದು
ಒಂದೆರಡು! ಹರಡಿ ಕೇಳಬಹುದು
ಹೇಗಿದೆ? ಕಾವ್ಯರಂಗೋಲಿ!?
ಬಿಡುವೇನೋ ಹಾಸಿ
ಹೊದೆಯುವಷ್ಟಿದೆ
ತಲೆಯೊಳಗಣ ಜಾತ್ರೆಗಿಲ್ಲ
ನೆಮ್ಮದಿ
ಎಲ್ಲರೂ ಎಲ್ಲವೂ ಎದ್ದೆದ್ದು
ಕುಣಿವಾಗ ಸಪ್ಪೆಯೆನಿಸಬಹುದು
ಅಕ್ಷರ ಚುಕ್ಕಿಯ ಭಾವಬಂಧ!
ಬರೆಬರೆದು ಬಿಸಾಕುವರು
ಕೆಲವರು! ಢಂ! ಢುಮ್! ಟುಸ್! ಪುಸ್!
ಹೊಟ್ಟೆಕಿಚ್ಚು ನನಗೆ
ಚಟಪಟ ಹುಳ್ಳಿಕಾಳೂ ದಕ್ಕದೆ!
ಬೆಳಕಿಲ್ಲದ ಕಾರಣಕೆ
ಕತ್ತಲೇ ಹೊರತು
ಕತ್ತಲಿರುವಿಕೆಗಲ್ಲ!
ಜಗಮಗಿಸುವ ವಿಶ್ವಾನಂತ
ಚೇತನವ್ಯೂಹದೊಳಗೆ
ಮಣ್ಣ ಪ್ರಣತಿಯು ನಾನು
ಅದೆಷ್ಟೆ ಜಗಮಗಿಸಲಿ ಜಗತ್ತು
ಉರಿದರಷ್ಟೆ ಬೆಲೆ!
ಆದರದೂ ತಿಳಿಯದಂತೆ
ಬೆಳಗಬೇಕೆಂಬ 'ಆಸೆ' ಕೊನೆಗೆ!
ಅಕ್ಕರದ ಬತ್ತಿ ಹೊಸೆದು
ಭಾವತೈಲವೆರೆದು
ಭರವಸೆಯ ಕಿಡಿ ತಾಗಿ
ಪ್ರಜ್ವಲಿಸಲಿ ಬೆಳಗು
ಕಾವ್ಯಜ್ಯೋತಿಯೆ ನನ್ನ ಪ್ರಾಣದೀಪ್ತಿ!
~ ಅರಬಗಟ್ಟೆ ಅಣ್ಣಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ