ಎಡವಿದ ಸಮಾಜವನು
'ತಾಯಿ'ಯಂತೆ ಕೈಹಿಡಿ
ದೆತ್ತಬೇಕಾದ ಲೇಖನಿಗಳು
ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ
ತಮ್ಮಯ ಕಾಯಕಕೆ ವಿರಾಮ
ಘೋಷಿಸಿಹವು!
ಅಸತ್ಯ, ಅನ್ಯಾಯಗಳ
ಆರ್ಭಟದ ಹುಟ್ಟಡಗಿಸುವ
ಮಂತ್ರ 'ಬೇಕೆ ಬೇಕು ನ್ಯಾಯ
ಬೇಕೆಂದು' ಬೀದಿಗಿಳಿಯಬೇಕಿದ್ದ
ಹೋರಾಟದ ಕೆಚ್ಚಿನ ದನಿಗಳು
'ನಾನು' ನನ್ನದೆಂಬ ಸ್ವಾರ್ಥದಲಿ
ಮೌನವ್ರತ ಪಾಲಿಸಿಹವು!
ಇನ್ನು,ಪ್ರಜೆಗಳ ಹಿತ ಕಾಯ್ವ ಕೈಗಳೋ
ಅದ್ಭುತ,ಅಮೋಘ,ಅವರ್ಣನೀಯ!
ಕಾಗೆಯನು ಕೋಗಿಲೆಯೆಂದು
ಕೋಗಿಲೆಯನು ಕಾಗೆಯೆಂದು ತೋರ್ವವು!
ಅದೇ ಸತ್ಯ ಎಂದು ಸಾರುವುದಕೆ
ಅಜ್ಞಾನಿಗಳ ದಂಡೊಂದು
ತುದಿಗಾಲಲಿ ನಿಂತು ಕಾದಿಹದು,
ಸಾಕಲ್ಲವೇ ಇಷ್ಟು,
ಸತ್ಯ ಅಸತ್ಯವಾಗುವುದಕೆ,
ನ್ಯಾಯ ಅನ್ಯಾಯವಾಗುವುದಕೆ,
ನಿರಪರಾಧಿ ಅಪರಾಧಿಯಾಗುವುದಕೆ!
ಇನ್ನು ನ್ಯಾಯದೇವತೆಯ ಪಾಡು ಕೇಳಿ,
ಇವರೆಲ್ಲರ ತಾಳಕೆ ಹೆಜ್ಜೆಯೆ ಹಾಕಿ
ನಿಸ್ಸಹಾಯಕಳಾಗಿ ನಿಂತಿಹಳು
ಕಣ್ಣಿದ್ದು ಕುರುಡಾದ ಗಾಂಧಾರಿಯಂತೆ!
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ