ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ. ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ. ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದುವಾಗ ಮಲೆನಾಡಿನ ಜನಜೀವನ ಹಾಗೂ ಪರಿಸರದಲ್ಲಿ ತೆರೆದುಕೊಂಡಂತೆ ಇಲ್ಲಿಯ ಚಾರಣದಲ್ಲಿ ದಟ್ಟ ಅರಣ್ಯ ಪರಿಸರ ಪಿಕ್ನಿಕ್ ಕಥನದಲ್ಲಿ ರೂಪುಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇವಸ್ಥಾನಗಳು, ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅನುಭವವನ್ನು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಬರೆಯುತ್ತಿರುತ್ತೇನೆ. ಆಗುಂಬೆ ಎಸ್.ನಟರಾಜ್‌ರಂತಹ ಲೇಖಕರು ಬರೆದ ತಮ್ಮ ಪ್ರವಾಸಾನುಭವವನ್ನು ಜೊತೆಗೆ ಆ ಸ್ಥಳದ ಐತಿಹಾಸಿಕ ಹಿನ್ನೋಟದ ಜೊತೆಗೆ ಸುಧೀರ್ಘವಾಗಿ ಬರೆದ ಪುಸ್ತಕಗಳನ್ನು ಓದುತ್ತಿದ್ದೇನೆ. ಯೂ ಟ್ಯೂಬ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ ಕ್ಯಾಮರ, ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿ ಪ್ರಸಿದ್ಧ ತಾಣಗಳನ್ನು ಕಣ್ಣಮುಂದೆಯೇ ಕಟ್ಟಿಕೊಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇನೆ. ಈ ದಿಸೆಯಲ್ಲಿ ಚಾರಣ ಹೊರಟ ಲೇಖಕರು ತ್ಯಾಗರಾಜ್ ಮತ್ತು ಆರು ಮಂದಿಯ ತಂಡ ಮಂಜಿನ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಬಂದ ಚಾರಣದ ಸಾಹಸ ಕಥೆ ಸಹಜ ಬರವಣಿಗೆಯಲ್ಲಿ ನಿರೂಪಿತವಾಗಿದೆ. ಹಾಗೆಯೇ ತಮ್ಮ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತಾ ಸಾಗುವ ಚಾರಣದ ಅನುಭವ ಲೇಖಕರ ಬರಹ ಶೈಲಿಯಿಂದ ಓದುಗರಿಗೂ ಬೋರಾಗದೆ ಓದಿಸಿಕೊಂಡು ಹೋಗುತ್ತದೆ. ಎಲ್ಲೋ ನಾವೇ ಆ ಪಯಣದಲ್ಲಿ ಭಾಗಿಯಾದಂತೆ ಕಣ್ಮುಂದೆ ದೃಶ್ಯ ಗೋಚರಿಸುತ್ತದೆ. ಕಡೆಯಲ್ಲಿ ಒಂದು ನಿತ್ಯ ಹರಿದ್ವರ್ಣದ ಕಾಡಿನ ಪಯಣವು ಹಚ್ಚ ಹಸಿರಾಗಿ ಮನದಲ್ಲಿ ಉಳಿದುಬಿಡುತ್ತದೆ. ಲೇಖಕರ ಮೊದಲ ಕಂತಾದ ಈ ಪುಸ್ತಕ ೪೪ ಪುಟಗಳ ವಿಸ್ತಾರದಲ್ಲಿ ಹರಡಿಕೊಂಡಿದೆ ಹಾಗೂ ಚಾರಣದ ಸರಣಿಗಳು ಭಾಗ-೧ ಎಂದೇ ಹೆಸರಿಡಲಾಗಿದೆ. ಅಲ್ಲದೆ ಇನ್ನು ಮುಂದೆಯೂ ಸಹ ಲೇಖಕರು ಹೊಸ ಹೊಸ ಪ್ರದೇಶಗಳಿಗೆ ಚಾರಣ ಮಾಡಿದ ಅನುಭವ ದಾಖಲಿಸಿ ಕೃತಿ ರೂಪದಲ್ಲಿ ಪ್ರಕಟಿಸುವ ಇಂಗಿತ ಅಭಿವ್ಯಕವಾಗಿದೆ. ಲೇಖಕರು ಹಲವಾರು ಸಾಹಸ ಚಾರಣಗಳನ್ನು ಮಾಡಿರುವ ಅನುಭವ ದಟ್ಟವಾದಂತಿದೆ. ಈ ಲೇಖನವು ಮುಂದೆ ಈ ಪ್ರದೇಶದಲ್ಲಿ ಚಾರಣ ಮಾಡುವ ಸಾಹಸಿಗರಿಗೆ ಮಾರ್ಗದರ್ಶಿ ಗೈಡ್ ಆಗುವುದು ನಿಶ್ಚಿತ. ಪ್ರಸ್ತುತ ಈ ಕೃತಿಯ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಮಾಡುವವರಿಗೆ ಉಪಯುಕ್ತವಾಗಿದೆ. ಹಾಗೆಯೇ ಒಮ್ಮೆ ಓದಿಸಿಕೊಳ್ಳುವ ಸದಭಿರುಚಿಯ ಕೃತಿಯಾಗಿದೆ.
ಗೊರೂರು ಅನಂತರಾಜು, ಹಾಸನ. ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ