ನನ್ನ ಗುರು ಮೋಡಿಗಾರ
ನನ್ನ ಗುರು ಮೋಡಿಗಾರ ನುಡಿದರೆ ಮುತ್ತು ಪೋಣಿಸಿದಂತೆ
ಭೇಧ ಭಾವ ಅರಿಯದ ಮುಗ್ಧ
ನೀಲಿ ಅಂಗಿಯ ಬಂಡಾಯಗಾರ
ನಮ್ಮ ಜನಗಳ ನೋವ ಎಚ್ಚರಿಸಿದವ
ಹೆಣ್ಣುಮಕ್ಕಳಿಗೆ ತಾಯ್ತನವ ತೋರಿದವ
ಶೋಷಿತರ ಅವಮಾನಿತರ ಪ್ರಾಣಮಿತ್ರ
ಆನ ಮರುಳ ಕಂಡು ಮುಗ್ಧತೆಯಿಂದ ನಕ್ಕವ
ತನ್ನೊಡಲ ಕರುಳು ಬಳ್ಳಿಯ ಸಂಬಂಧ ಬೆಸೆದ,
ತನ್ನವಲ್ಲದ ಕೂಸುಗಳ ಜೋಗುಳವಾಡಿದ ಮೋಡಿಗಾರ
ವಾತ್ಸಲ್ಯದ ಕರುಣಾಮೂರ್ತಿ ನನ್ನ ಗುರು ಮೋಡಿಗಾರ.
ತನ್ನವರ ಕುರಿತು ಗದ್ಯಪದ್ಯಗಳ ಬರೆದು
ತನ್ನವರ ಶೋಷಣೆಗೆ ಬರವಣಿಗೆಯ ಹಾದಿ ತೋರಿ
ದಲಿತ ಬಂಡಾಯಕ್ಕೆ ಹೊಸ ದಾರಿ ತೋರಿದ ಮೋಡಿಗಾರ
ಮಾರ್ಕ್ಸ ಲೋಹಿಯಾ ಗಾಂಧಿ ಚಿಂತನೆ
ಬುದ್ಧ ಬಸವ ಅಂಬೇಡ್ಕರರ ಬಿಗಿದಪ್ಪಿದ
ಮೌನ ಗುಣದ ನಿಜ ಮೋಡಿಗಾರ
ಎಲ್ಲಿ ಹೋಯಿತು ಮೋಡಿಗಾರನ ಕರುಳಬಳ್ಳಿ
ಕರೆದರೂ ಬಾರದು, ಮರೆಯಲೂ ಆಗದು
ಹಣತೆಯಲ್ಲಿನ ತೈಲ ಬತ್ತಿಯೊಂದಿಗೆ ಬೆರೆತು
ಭಾವನೆಯ ಕತ್ತಲೆಯು ಕಳಿಯುತ್ತಾ
ಗುರುವಿನ ಹಣತೆಯಾ ಜ್ಯೋತಿ ಮೋಡಿಯಾಯಿತು.
ಜ್ಯೋತಿಯೆನ್ನುವ ಜೀವ ಜಾರಿ ಹೋಯಿತು
ಬತ್ತಿಯೇನ್ನುವ ಭಾವನೆ ಮುಳುಗಿ ಮುಗಿಯಿತು.
ದೇಹವೆನ್ನುವ ಹಣತೆ ಒಡೆದು ಮಣ್ಣುಗೂಡಿತು.
ಇನ್ನು ಜ್ಯೋತಿಯು ಇಲ್ಲ ಹಣತೆಯೂ ಇಲ್ಲ
ಬತ್ತಿಯೆನ್ನುವ ಭಾವನೆ ಹತ್ತಿ ಉರಿದ ನೆನಪು ಮಾತ್ರ
ಉಳಿಸಿದ ಮೋಡಿಗಾರ ನನ್ನ ಗುರು ನಿಜದ ಮೋಡಿಗಾರ.
- ಡಾ. ನಾಗಮಣಿ ಸಿ.ಎಂ.
ಸಂಯೋಜಕರು, ಕನ್ನಡ ವಿಭಾಗ.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ಕೋಲಾರ.
ರಾಜ್ಯ ಮಟ್ಟದ ಕರುನಾಡು ಆದರ್ಶ ಗುರು ಪ್ರಶಸ್ತಿ ಪುರಸ್ಕೃತರಾದ ಡಾ ನಾಗಮಣಿ ಸಿ ಎಂ ರವರು ತಮ್ಮ ಗುರುಗಳಾದ ಡಾ ವಿ ನಾಗರಾಜ್ ಸರ್ ರವರ ಕುರಿತು ರಚಿಸಿರುವ 'ನನ್ನ ಗುರು' ಕವನ ಸಂಕಲನದಿಂದ ಆಯ್ದ ಪದ್ಯ ನಮ್ಮ ಓದುಗರಿಗಾಗಿ.... ಇವರ ನನ್ನ ಗುರು ಕವನ ಸಂಕಲನ ಸಧ್ಯದಲ್ಲಿಯೇ ಬಿಡುಗಡೆಯಾಗಲಿದ್ದು ಇದಕ್ಕಾಗಿ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗದ ವತಿಯಿಂದ ಮಾನ್ಯರಿಗೆ ಅಭಿನಂದನೆಗಳು 💐💐
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ