ಸರ್ಕಾರಿ ಶಾಲೆ ಅಳಿವು ಉಳಿವು
(ಹಣತೆ ಕವಿ ಬಳಗ ಮಹಾರಾಷ್ಟ್ರ ಘಟಕದ ಲೇಖನ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಲೇಖನ)
ವನರಾಜ ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಒಂದು ಕ್ಷಣ ನಿಂತು,ಹಿಂದಿರುಗಿ ತಾನು ಸಾಗಿ ಬಂದ ದಾರಿಯನ್ನು ಗಂಭೀರವಾಗಿ ಅವಲೋಕಿಸಿ ಮತ್ತೆ ಮುಂದೆ ಸಾಗುತ್ತದೆ. ಅದಕ್ಕೆ ಸಿಂಹಾವಲೋಕನವೆನ್ನುತ್ತಾರೆ.ಹೊಸ ದಾರಿಗೆ ಹೆಜ್ಜೆ ಹಾಕಲಿರುವ ನಾವು ಸಾಗಿ ಬಂದ ದಾರಿಯನ್ನು ಸಿಂಹಾವಲೋಕನ ಮಾಡುವುದೆಂದೇ ನನ್ನ ಅಭಿಪ್ರಾಯ..
ಶಿಕ್ಷಣವೆಂಬ ಶಬ್ದ ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಅದರ ಹಿಂದೆಯೇ ಪೂರಕವಾಗಿ ಬರುವ ಇನ್ನೊಂದು ಶಬ್ದವೆಂದರೆ ಅದು ಶಿಕ್ಷಕ.ಶಿಕ್ಷಣದ ಅರ್ಥವನ್ನು ಅರ್ಥೈಸುವುದು ಅಷ್ಟು ಸುಲಭವಾದುದಲ್ಲ.ಯಾಕೆಂದರೆ ಶಿಕ್ಷಣದ ಕ್ಷಿತಿಜವು ಇಂದು ವಿಶಾಲವಾಗಿದ್ದು ಅದು ಜೀವನದ ಎಲ್ಲ ರಂಗಗಳಲ್ಲಿ ಪ್ರವೇಶಿಸಿದೆ.ಅನೇಕ ಶಿಕ್ಷಣ ತಜ್ಞರು, ಮನಶಾಸ್ತ್ರಜ್ಞರು ನೀಡಿದ ಶಿಕ್ಷಣದ ವ್ಯಾಖ್ಯಾನಗಳು ಅವರವರ ಅನಿಸಿಕೆಗಳು ಆಯಾ ಕಾಲದ ಅವಶ್ಯಕತೆ ಹಾಗೂ ಮೌಲ್ಯ ಗಳಿಗೆ ಅನುಗುಣವಾಗಿರುತ್ತದೆ.ಕಾಲ ಬದಲಾದಂತೆ ಮಾನವನ ಮೌಲ್ಯಗಳು, ಆಶೋತ್ತರಗಳು ಬದಲಾಗುತ್ತ ಶಿಕ್ಷಣದ ಅರ್ಥ ಮತ್ತು ವ್ಯಾಪ್ತಿ ವಿಶಾಲವಾಗುತ್ತ ಸಾಗುತ್ತಿದೆ.ಹೊಸ ಹೊಸ ಅನ್ವೇಷಣೆಗಳಿಂದ ಹೊಸ ದೃಷ್ಟಿ ಬೆಳೆಯುತ್ತಿದೆ..
ನಾವು ಕಲಿಯುವ ಸಂದರ್ಭದಲ್ಲಿ " ಛಡಿ ಛಂ ಛಂ..ವಿದ್ಯಾ ಘಂ ಘಂ..ಅಲ್ಲಿ ಉತ್ತಮ ಕಲಿಕೆಯಾಗುತಿತ್ತು.
"ಕೃತಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯ..!
ತ್ರೇತಾಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಬಡಿದು,ಬಯ್ದು ಬುದ್ದಿಯ ಕಲಿಸಿದೊಡೆ ಆಗಲಿಮಹಾಪ್ರಸಾದವೆಂದನಯ್ಯ..!!
ದ್ವಾಪಾರಯುಗದಲ್ಲಿ ಶ್ರೀಗುರು ಶಿಷ್ಯಂಗೆ, ಝಂಕಿಸಿ ಬುದ್ದಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯ..!!
ಕಲಿಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಕೈ ಮುಗಿದು ಬುದ್ದಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯಗುಹೇಶ್ವರಾ..
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು..
ಎಂದು ಶರಣರು ಹೇಳಿದ ಮಾತು ಸರ್ವಕಾಲಿಕ ಸತ್ಯವಾಗಿದೆ.ಇಂದು ಈ ವಿಷಯ ಎಲ್ಲರೂ ಯೋಚಿಸಬೇಕಾಗಿದೆ.
ಆಗಿನ ಪಠ್ಯದಲ್ಲಿ ಮೌಲ್ಯ ಶಿಕ್ಷಣ, ಬದುಕು ಕಟ್ಟಿಕೊಳ್ಳುವ ಕಲೆ ಇನ್ನಿತರ ವಿಷಯಗಳು ಹಾಸು ಹೊಕ್ಕಾಗಿದ್ದವು.ಆದರೆ ಈಗ....? ?
"ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಲು ಕಲಿತ.ಸಮುದ್ರದಲ್ಲಿ ಮೀನಿನಂತೆ ಈಜಲು ಕಲಿತ.
ಆದರೆ ಸಮಾಜದಲ್ಲಿ ಮನುಷ್ಯನಂತೆ ಬದುಕಲು ಕಲಿಯಲೇ ಇಲ್ಲ" ವೆಂದು ಡಾ: ಎಸ್ ರಾಧಾಕೃಷ್ಣನ್ ಹೇಳಿದ್ದಾರೆ.ನಮಗೆ ಇಲ್ಲಿ ಮೌಲ್ಯ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ.
ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಆದರೆ ಮೌಲ್ಯ ಕುಸಿಯಬಾರದಲ್ವ... ಹೊಂದಾಣಿಕೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು.
*ಹಳೆಯ ಮತದ ಕೊಳೆಯಲ್ಲಿ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ,ಬರಲಿ ವಿಜ್ಞಾನದ ಬುದ್ದಿ......* ರಾಷ್ಟ್ರ ಕವಿ ಕುವೆಂಪು ರವರ ಅಮರವಾಣಿಯಂತೆ,ಶಿಕ್ಷಣ ಕ್ಷೇತ್ರವನ್ನಾವರಿಸಿದ ಹಳೆಯ ಅಭಿಪ್ರಾಯಗಳ ಕಳೆಯಲ್ಲವೂ ಮನೋವೈಜ್ಞಾನಿಕ ದೃಷ್ಟಿಯಿಂದ ಹೊಸಮತಿಯ ಹೊಳೆಯಲ್ಲಿ ಸಾಗಬೇಕಾಗಿದೆ.
ಮಗುವಿನ ವಿಕಾಸದ ಕ್ರಿಯೆಯಲ್ಲಿ ಬೋಧನಾ ಸೂತ್ರ ಹಿಡಿದಿರುವ ಶಿಕ್ಷಕನ ಪಾತ್ರ ಬಹಳ ಗುರುತರವಾದದ್ದು. ಶಿಕ್ಷಣವೇ ಬಾಳಿನ ಬೆಳಕು.ಆ ಬೆಳಕನ್ನು ಶಿಕ್ಷಕರು ಮಗುವಿಗೆ ಒದಗಿಸಿಕೊಡುವಲ್ಲಿ ವಿಫಲವಾದರೆ ಮಗುವಿನ ಭಾವಿ ಭವಿಷ್ಯವನ್ನು ಅಜ್ಞಾನದ ಬಾವಿಗೆ ನೂಕಿದಂತೆಯೇ ಸರಿ.ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದಾಗಬೇಕು..
ಒಂದು ಉತ್ತಮ ಶಾಲೆಯಾಗಬೇಕಾದರೆ ವಾಚನಾಲಯ, ಪ್ರಯೋಗಾಲಯ,ದೃಕ್ ಶ್ರವಣದಿಂದ ಮಕ್ಕಳು ನೋಡಿ ಕಲಿಯುವಂತೆ ಪ್ರೊಜೆಕ್ಟರಗಳು,ವಿಸಿಡಿ,ಡಿವಿಡಿ, ಕಂಪ್ಯೂಟರ್ ಗಳು, ಟಿ.ವಿ ಮೊದಲಾದವುಗಳಿದ್ದರೆ ಮಕ್ಕಳಲ್ಲಿ ಉತ್ತಮ ಕಲಿಕೆಯಾಗಿ ಸರ್ವಾಂಗೀಣ ಉನ್ನತಿಯಾಗುತ್ತದೆಂದು ಎಲ್ಲೋ ಕೇಳಿದ್ದೆ...ಓದಿದ್ದೆ...ಅದರೆ ಇಂದು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸರಕಾರ ಇವುಗಳ ವ್ಯವಸ್ಥೆ ಮಾಡಿದೆ.ಅವುಗಳ ಬಳಕೆ ಹಾಗೂ ಅನುಷ್ಠಾನ ಉತ್ತಮೀಕರಿಸಿದರೆ ಮಕ್ಕಳ ಕಲಿಕೆ ಉತ್ತಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಎರಡು ವರ್ಷದಿಂದ ಕಾಡುತ್ತಿರುವ ಈ ಕೊರೋನಾ ಮಹಾ ಮಾರಿ ಯಿಂದ ಖಾಸಗಿ ಶಾಲೆಗಳು ನಡೆಯದೆ ಪಾಲಕರಲ್ಲಿ ಫೀ ವಸೂಲಿ ಮಾಡುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿನ ಉತ್ತಮ ಕಲಿಕಾ ವ್ಯವಸ್ಥೆಯಿಂದ ಪಾಲಕರು ಸಹಜವಾಗಿ ಸರಕಾರಿ ಶಾಲೆಳಗತ್ತ ಮುಖಮಾಡಿ ತಮ್ಮ ಮಕ್ಕಳಿಗೆ ದಾಖಲಿಸುತ್ತಿದ್ದಾರೆ.ಇದು ಉತ್ತಮ ಬೆಳವಣಿಗೆಯಲ್ಲವೇ..
ಇಲ್ಲಿ ಶಿಕ್ಷಕ ತನ್ನ ವೃತ್ತಿಯನ್ನು ತುಂಬು ಗೌರವದಿಂದ ಕಂಡು ಕರ್ತವ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು.
ಜೊತೆಗೆ ಪಾಲಕರು, ಪೋಷಕರು, ಸಮಾಜ ಸಂಘಟಕರು ಮಗುವಿನ ಬಗ್ಗೆ ಭಾವಿ ಕುಡಿಗಳ ಬಗ್ಗೆ ಆಸಕ್ತಿ ಹೊಂದಿದ್ದಾಗ ಮಾತ್ರ ಬರುವ ದಿನಗಳು ಸುಂದರವಾಗಿರಲು ಸಾಧ್ಯ.
ಅದಲ್ಲದೇ ನಮ್ಮ ಸರ್ಕಾರಿ ಶಾಲೆಗಳ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ ಎಂದರೆ ತಪ್ಪಾಗಲಾರದು.
- ವೀರಂತರೆಡ್ಡಿ ಜಂಪಾ
ಹುಮನಾಬಾದ.ಜಿ.ಬೀದರ
ಪಿನ್. ಸಂ.೫೮೫೩೩೦.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಧನ್ಯವಾದಗಳು
ಪ್ರತ್ಯುತ್ತರಅಳಿಸಿ