ಭರತ ಭೂಮಿ (ದೇಶಭಕ್ತಿ ಗೀತೆ)
೧)
ಶಿರದಲ್ಲಿ ಹಿಮದ ಸೆರಗನೊದ್ದು
ಅಡಿಯಲಿ ತ್ರಿವಳಿ ಶರಧಿಗಳಿಂದಪ್ಪಿಕೊಂಡು
ಘಟ್ಟಗಳ ಹಚ್ಚಹಸಿರ ನೆರಿಗೆಗಳಂದದಲಿ
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೨)
ಋಷಿ ಮುನಿಗಳ ಸಾಧು ಸಂತರ ತಪೋಭೂಮಿ
ಗಿರಿಜನ ಅಲೆಮಾರಿಗಳ ತಾಣ
ವನ್ಯಜೀವಿ ಖನಿಜ ಸಂಪತ್ತಿನ ತವರು
ಔಷಧೀಯ ಸಸ್ಯ ಶಾಮಲೆಯ ಹೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೩)
ತ್ರೇತಾ ದ್ವಾಪರ ಯುಗದ ಮಹಾಕಾವ್ಯಗಳ
ಕಲಿಯುಗದಿ ಸಾಹಿತಿಗಳ ಕವಿಪುಂಜರ ಕೃತಿಗಳ
ಜ್ಞಾನಭಂಡಾರದ ಹೊತ್ತಿಗೆಗಳ ಹೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೪)
ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಜೈನ ಪಾರ್ಸಿ
ಸರ್ವಧರ್ಮಗಳ ನೆಲೆವೀಡು
ದೇವಾಲಯ ಮಸೀದಿ ಚರ್ಚ್ ವಿಹಾರ ಬಸದಿಗಳ
ಭಾವೈಕ್ಯತೆಯ ಸೊಗಡನೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೫ )
ಸಿಂಧು ಆರ್ಯಜನಾಂಗದ ನೆನಪಿನ ಕಲರವ
ಮೌರ್ಯ ಗುಪ್ತ ವರ್ಧನ ಪಲ್ಲವ
ಚೋಳ ಚೇರ ಶಾತವಾಹನ ರಾಷ್ಟ್ರಕೂಟ
ಗಂಗ ಕದಂಬ ಚಾಲುಕ್ಯ ಹೊಯ್ಸಳರ ದೇಗುಲಗಳೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮ॥
೬)
ಸಿಂಧೂ ಗಂಗಾ ಬ್ರಹ್ಮಪುತ್ರೆ ಯ ಭೋರ್ಗರೆತ
ಯಮುನೆ ನರ್ಮದೆ ಗೋದಾವರಿ ಯ ಕಲರವ
ಕೃಷ್ಣೆ ತುಂಗೆ ಕಾವೇರಿ ಅಬ್ಬರದ
ನದಿ ತೊರೆಗಳನ್ನು ಮಡಿಲಲೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೭)
ವೀರ ಗಂಡುಗಲಿ ವನಿತೆಯರ ನಾಡು
ದಾಸ್ಯದಿಂದ ತಾಯ್ನೆಲವನ್ನು ಮುಕ್ತಗೊಳಿಸಲು
ರಕ್ತತರ್ಪಣ ಮಾಡಿದ ವೀರಹೋರಾಟಗಾರರ ನೆಲೆವೀಡು
ಅಹಿಂಸೆ ಸತ್ಯಾಗ್ರಹದ ಜನಕನ ನೆನಪನೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೮)
ಸ್ವಾತಂತ್ರ್ಯದ ಸಂಭ್ರಮ ಪ್ರಜಾಪ್ರಭುತ್ವದ ಬೆಸುಗೆ
ಸರದಿ ಸಾಲಿನಲ್ಲಿ ಪ್ರಧಾನಿಗಳ ಕೊಡುಗೆ
ಯೋಧ ರೈತ ನೇಕಾರ ಹಿಂದುಳಿದವರ
ಉದ್ಧಾರಕ್ಕಾಗಿ ಹಲವು ಕನಸುಗಳನೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
೯)
ಅಗೋಚರ ಶಕ್ತಿ ಯಲ್ಲಿ ವಿಶ್ವಾಸವನ್ನಿಟ್ಟು
ಯೋಗ ಧ್ಯಾನದ ಮಾರ್ಗವ ಕೊಟ್ಟು ಶಾಂತಿ ಸಹಬಾಳ್ವೆಯ ನಡಿಗೆಯ ತೊಟ್ಟು
ಇದರಿಂದ ಜಗದ ಕಲ್ಯಾಣವೆಂಬ ಕನಸನ್ನೊತ್ತು
ಮೈದುಂಬಿ ನಿಂತಿದೆ ನನ್ನ ಭಾರತ
ಇದು ನನ್ನ ದೇಶ ಇದು ನಮ್ಮ ಹೆಮ್ಮೆ॥
- ಶ್ರೀಮತಿ ಸುಮಂಗಲಾ ಕಷ್ಣ ಕೊಪ್ಪರದ ಇಳಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ