ಕಪ್ಪು ಸುಂದರಿ
ಎದೆ ಮಿಡಿಯುವಾಕಿ ಮನ ಸೆಳೆಯುವಾಕಿ
ಮಿರು ಮಿರುಗಿ ಹೊಂಟಿಯಲ್ಲೇ
ಮಿಡಿಕ್ಯಾಡಿ ನನ್ನ ತನು ಮನವ ಕೆಡಿಸಿ
ಮಾಯಾವಿಯಾದಿಯಲ್ಲೇ
ಕಪ್ಪು ಸುಂದರಿ ಕಪ್ಪು ಸುಂದರಿ
ನಿಟ್ಟಿಲೇ ದುಡಿವ ಭಟ್ಟಂಗಿಗಳಿಗೆ
ಕೈ ಕೊಟ್ಟು ನಡಿದಿಯಲ್ಲೇ
ಕೂಳಿಲ್ಲದವರ ಹೊಟ್ಟೆಯನು ಬಸಿದು
ಹೊಂಚಾಕಿ ಕುಳಿತಿಯಲ್ಲೇ
ಕಪ್ಪು ಸುಂದರಿ ಕಪ್ಪು ಸುಂದರಿ
ಸೂರಿಲ್ಲದವರ ಮಾತಿಲ್ಲದವರ
ಕಣ್ಣೀರ ಕೋಡೆಯಾದೆ
ಮೆರೆವವರ ಭಂಟಿ ಪುಂಡರ ಒಡತಿ
ಕುಲುಕ್ಯಾಡಿ ನಕ್ಕಿಯಲ್ಲೇ
ಕಪ್ಪು ಸುಂದರಿ ಕಪ್ಪು ಸುಂದರಿ
ಗುಡಗುಡಿಯ ಹೊಕ್ಕೆ ಉಳ್ಳವರ ಸವತಿ
ಕಳ್ಳಾಟ ಆಡಿ ನೀನೂ
ಮಾಡಿರುವ ತಪ್ಪ ಹೊಟ್ಟಿಯಲಿ ಹಾಕಿ
ಹುಂಡಿಯ ಸೇರಿಬಿಟ್ಟೆ
ಕಪ್ಪು ಸುಂದರಿ ಕಪ್ಪು ಸುಂದರಿ
ಬಚ್ಚಿಟ್ಟ ಹೆಣವ ಮುಚ್ಚಿಟ್ಟ ಹಣವ
ಕೊಳೆಯಾದ ಕೊಳ್ಳೆ ಯಾಗಿ
ಸುಟ್ಟಾವೋ ನಿನ್ನ ಟೊಳ್ಳಾದ ಮೈಯ
ಹಪ ಹಪಿಸೊ ದೆವ್ವವಾಗಿ.
ಕಪ್ಪು ಸುಂದರಿ ಕಪ್ಪು ಸುಂದರಿ
✍ಶ್ರೀಧರ ಗಸ್ತಿ. ಶಿಕ್ಷಕರು ಹಾಗೂ ಸಾಹಿತಿಗಳು ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸಪರಗ ಸರ್
ಪ್ರತ್ಯುತ್ತರಅಳಿಸಿ