ಸ್ಪೂರ್ತಿಯ ಸೆಲೆಯಾದ ಅಪ್ಪ
ಅಸಂಖ್ಯಾತ ಅಕ್ಷರಗಳ ಸೇರಿದ " ಅಪ್ಪ" ಎಂಬ ಎರಡಕ್ಷರಗಳಿಂದ ಪ್ರೀತಿ ಮತ್ತು ಸ್ಪೂರ್ತಿಯ ಸೆಲೆಯಾದ ನನ್ನ ಅಪ್ಪನಿಗೆ ಈ ಬರೆದಿರುವೆ ಈ ಬರಹ..
ಪ್ರೀತಿಯ ಅಪ್ಪನಿಗೆ,
"ಅಪ್ಪ"
ತಾಯಿಯ ಎರಡನೇ ಮುಖ 'ಅಪ್ಪ'
ಅಭಿಮಾನದ ಆಗರ 'ಅಪ್ಪ '
ನಾ ನೋಡುವ ಕಂಗಳ ಪ್ರತಿಬಿಂಬ 'ಅಪ್ಪ'
ಸೌಮ್ಯತೆಯ ಪ್ರತಿರೂಪ 'ಅಪ್ಪ'
ಪರಿಪೂರ್ಣತೆ ಪದದ ಅರ್ಥ ' ಅಪ್ಪ'
ನಂಬಿಕೆಯ ಬುನಾದಿ ' ಅಪ್ಪ'
ಏಣಿಸಲಾಗದ ಗುಣಗಳ ಗರಿಷ್ಠ ಮಟ್ಟ ' ಅಪ್ಪ'
ನಿಸ್ವಾರ್ಥತೆಯ ನಿಜರೂಪ 'ಅಪ್ಪ'
ಸರಳತೆಯ ಸದ್ಗುಣಿ 'ಅಪ್ಪ'
ಅಭೂತಪೂರ್ವ ಆಕಾಂಕ್ಷೆಗಳ ಅನುರಾಗಿ ' ಅಪ್ಪ'
ತನ್ನ ನೋವ ಒಳಗೆ ಮರೆಸೋ ಮಹಾದೈವ ' ಅಪ್ಪ'
ಕಡಲಾಳದೊಳಗಿನ ಅಮೃತ ' ಅಪ್ಪ'
ಮುಗ್ಧತೆಯ ಮಹಾನುಭಾವ ' ಅಪ್ಪ'
ನೊಂದ ಮನಕೆ ನವ ಚೈತನ್ಯ 'ಅಪ್ಪ'
ನನ್ನೊಳಗಿನ ಆತ್ಮವಿಶ್ವಾಸಕ್ಕೆ ಬುನಾದಿ ' ನನ್ನಪ್ಪ'
ನೋವಿಗೂ ನೋವಾಗುವಂತೆ ನಗುವವನು ' ನನ್ನಪ್ಪ'
ಜಗತ್ತೇ ಬದಲಾದರೂ ಬದಲಾಗದ ಅಪರೂಪದ ವ್ಯಕ್ತಿತ್ವ ' ನನ್ನಪ್ಪ'
"ಅಪ್ಪ" ಎಂಬ ಎರಡಕ್ಷರ ನನ್ನ ಬರವಣಿಗೆಯ ಸ್ಪೂರ್ತಿಯ ಸೆಲೆ. ಅವರೊಳಗಿದ್ದ ಬರವಣಿಗೆಯ ಚೈತನ್ಯವೇ ನನ್ನಲ್ಲಿ ಹರಿದಿದೆ. ನನ್ನೊಳಗಿನ ಆಂತರ್ಯದಲಿ ಅಡಗಿದ್ದ ಪದಗಳಿಗೆ ರೂಪ ಕೊಡಲು ಅವರ ಪದಗಳೇ ಸ್ಪೂರ್ತಿ.
ನನ್ನ ಬಾಲ್ಯದ ಗುರುವಾಗಿ, ಅಮ್ಮನಿಗಿಂತ ಹೆಚ್ಚು ತಿದ್ದಿತೀಡಿದ ನನ್ನ ತಂದೆ, ಶಿಕ್ಷಣಕ್ಕೆ ನೀಡಿದ ಮಹತ್ವದಿಂದಲೇ ಇಂದು ನನ್ನ ಬಾಳು ಒಂದು ನೆಲೆ ಕಂಡಿದ್ದು. ಜನರು ಗುರುತಿಸುವ ಅವಶ್ಯಕತೆ ಇಲ್ಲ. ಜಗದಲ್ಲಿ ಜನರ ನಡುವೆ ನೀನು ಒಬ್ಬಳಾಗಿ ಬದುಕಿದರೆ ಸಾಕು ಎಂದವರು ನನ್ನ ತಂದೆ. " ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತ ಕಡೆ" ಎಂಬುದು ಸತ್ಯ. ಸಮಾಜದಲ್ಲಿ ಗೌರವ ದೊರಕುವದೇ ವಿದ್ಯೆಯಿಂದ.
ಮೊದಲಿನಿಂದಲೂ ನೂರಾರು ವಿದ್ಯಾರ್ಥಿಗಳಿಗೆ ತಮ್ಮಲ್ಲಿದ್ದ ಜ್ಞಾನವನ್ನು ಧಾರೆ ಎರೆಯುತ್ತಿದ್ದ ನನ್ನ ಅಪ್ಪ ಅಂತಹ ವಿದ್ಯಾರ್ಥಿಗಳಲ್ಲಿ ನನ್ನನ್ನು ಒಬ್ಬಳಾಗಿಸಿ ಅಕ್ಷರ ಕಲಿಸಿ ವಿದ್ಯೆ ನೀಡಿದವರು. ನಾ ಕಲಿತ ಅಕ್ಷರಗಳ ಹಿಂದೆ ನನ್ನ ಅಪ್ಪನ ಕೈಯಿದೆ. ಅವರ ತ್ಯಾಗವಿದೆ.
ಅರ್ಥವಿರದ ಬದುಕಿಗೆ ಅರ್ಥವ ಕೊಟ್ಟು , ಸಮಾಜದಲ್ಲೊಂದು ಅಸ್ತಿತ್ವ ಕಲ್ಪಿಸಿ ಕೊಟ್ಟ " ಅಪ್ಪ" ಎಂಬ ಅಪರೂಪದ ವ್ಯಕ್ತಿಗೆ ಅಮ್ಮನಿಗಿಂತಲೂ ಹೆಚ್ಚು ಪ್ರೀತಿ, ನಮನಗಳ ಸಲ್ಲಿಸುವೆ.
ಅವರ ಜೀವನದ ಹಾದಿ ಬರೀ ಕಲ್ಲು- ಮುಳ್ಳುಗಳಿಂದ ಕೂಡಿದ್ದರೂ ನಮ್ಮ ಬಾಳು ಬಂಗಾರವಾಗಲೀ ಎಂದು ಎಲ್ಲ ತಂದೆ- ತಾಯಿಯರ ಬಯಕೆ. ಅಂತೆಯೇ ನಮಗೆ ಚಿನ್ನದ ಬದುಕ ,ಭವಿಷ್ಯ ರೂಪಿಸಿದವರಿಗೆ ಕೋಟಿ ನಮಸ್ಕಾರಗಳು.
ಒಂದು ಹಕ್ಕಿ ಗೂಡಿನಲ್ಲಿ ಎಷ್ಟು ಮರಿಗಳಿವೆ ಎಂಬುದಕ್ಕಿಂತ, ಆ ಮರಿಗಳಿಗೆ ಹಕ್ಕಿ ಹೇಗೆ ಹಾರುವದ ಕಲಿಸಿ, ಜೊತೆ ಕರೆದೊಯ್ಯುವದೆಂಬುದು ಮುಖ್ಯ. ಎಲ್ಲಿ ಹೋದರೂ ಜೊತೆ ಬರುವ , ಪ್ರತಿಕಾರ್ಯದಲ್ಲೂ ಜೊತೆಯಾದ " ಅಪ್ಪ" , ನನ್ನ ಎಲ್ಲ ಏಳು- ಬೀಳುಗಳಿಗೆ ಹೆಗಲು ಕೊಟ್ಟವರು. ಸೋತಾಗ ಬೈಗುಳಗಳ ಅಷ್ಟಾರ್ಚನೆ ಮಾಡದೇ ಬೆನ್ನುತಟ್ಟಿ ಕೈ ಹಿಡಿದು ಮುಂದೆ ನಡೆಸಿದವರು. ಅವರ ಪ್ರೀತಿ, ವಿಶ್ವಾಸದ ಮುಂದೆ ಯಾವ ಪ್ರೇಮಿಯ ಪ್ರೀತಿಯೂ ನಿಲ್ಲದು. ನನ್ನ ಅಪ್ಪನ ಪ್ರೀತಿ ನೋಡಿ ಹೊಟ್ಟೆ ಉರಿದುಕೊಂಡ ಗೆಳತಿಯರೆಷ್ಟೋ. ಇಂಥ ಅಪ್ಪ ನಮಗೆ ಸಿಕ್ಕಿಲ್ಲ ಎಂದು ಹಲುಬಿದವರೆಷ್ಟೋ. ಅಂಥಹ ಆತ್ಮೀಯ ಗೆಳೆಯ ನನ್ನ " ಅಪ್ಪ".
' ಅಪ್ಪ' ಎಂಬ ಅದ್ಭುತಗಳ ಆಗರದಲ್ಲಿ ನಗುವ ಹೂವಾಗಿ ಅರಳಿದವರು ನಾವು. ಅರಳಿದ ಹೂಗಳಲ್ಲಿ ನಗುವಿನ ಚಿಲುಮೆ ಚಿಮ್ಮಿಸಿದವರು ನೀವು..ಈ ' ಪ್ರೀತಿ' ಎಂಬ ಎರಡಕ್ಷರಕ್ಕೆ ಎಂದೂ ಧಕ್ಕೆ ತಂದಿಲ್ಲ, ಎಂದೂ ಅದರ ಕೊರತೆ ಕಂಡಿಲ್ಲ..' ಅಪ್ಪ' ಎಲ್ಲ ಸಂಕಷ್ಟಗಳ ಸಮಯದಿ ಅಂಗಾರಕನಾಗಿ ಕಾವಲು ಕಾದವರು ನೀವು.
'ಅಪ್ಪ' ಎಂದರೆ ಆಕಾಶ ,ಅದರೊಳಗೆ ಮಿನುಗೋ ಚುಕ್ಕಿಗಳು ನಾವು. ಪ್ರಪಂಚಕ್ಕೆ ನಮ್ಮನ್ನು ಪರಿಚಯಿಸಿ
ಹಸಿವಿನ ಬೆಲೆ ತಿಳಿಸಿ,ಸ್ವಾಭಿಮಾನದ ಬದುಕಿನ ದಾರಿಯ ತೋರಿಸಿ,ನಗ -ನಾಣ್ಯಗಳೇ ಜೀವನ ಅಲ್ಲ ಎಂದವರು. ಅನುಭವವೇ ವಿದ್ಯೆ ಎಂದು ಸಾರಿ ಹೇಳಿದವರು ನೀವು. ಕರ್ತವ್ಯ ನಿಷ್ಠೆಯ ಪಾಲನೆ ಕಲಿಸಿದವರು. ಅಂಜಿಕೆಗೂ ಅಳುಕಿಗೂ ಕೊನೆಯ ಪುಟ ತೆರೆದವರು ನೀವು. ಹೆಗಲ ಮೇಲೆ ಕುಟುಂಬ ಎಂಬ ಜಗದ ಭಾರ ಹೊತ್ತು ಸದಾ ಕತ್ತಿನ ಅಲಗಿನ ಮೇಲೆ ಅಲೆದಾಟ ನಡೆಸಿದವರು ನೀವು..
ಹೆಣ್ಣು ನದಿಯಂತೆ ಬೆಟ್ಟ ಗುಡ್ಡಗಳು ,ಗಿರಿ ಶಿಖರಗಳ ದಾಟಿ ನಿತ್ಯ ನಿರಂತರ ಹರಿವವಳು. ಹುಟ್ಟಿದ ಮನೆಯ ತೊರೆದು ಪರರ ಮನೆಯ ಮೆಟ್ಟಿಲೇರಿ ನಂದಾದೀಪವಾಗಲೇ ಬೇಕು. ಅಂತ ಮಗಳ ಜೀವ 'ಅಪ್ಪ'. ಅವಳ ಮನದ ತಳಮಳವನ್ನ ಅರಿತರೂ ಕಾಣದಂತೆ ನಟಿಸುವವನು..ರೆಕ್ಕೆ ಬಲಿತ ಹಕ್ಕಿ ಪರರ ಗೂಡು ಸೇರುವದನ್ನು ಕಂಡು ಖುಷಿಪಡುವ ಹಿರಿಯ ಹಕ್ಕಿ 'ಅಪ್ಪ'.
ಒಂಭತ್ತು ತಿಂಗಳು ಹೊತ್ತು ಹೆತ್ತ ತಾಯಿಯ ಪ್ರೀತಿ ಒಂದೆಡೆ ಆದರೆ ನಾವಿಡುವ ಪ್ರತಿ ಹೆಜ್ಹೆಗೂ ಕಾವಲಿದ್ದು ಜೀವನದ ಪ್ರತಿ ಕ್ಷಣವೂ ಜೊತೆಯಾಗುವ ಜೊತೆಗಾರ 'ಅಪ್ಪ'..
ಒಂದು ಸಲ ಅಪ್ಪನ ಕಣ್ಣಲ್ಲಿ ಕಣ್ಣ ಹನಿ ಜಿನುಗಿ
' ಮಗಳೇ,ಕಣ್ರೆಪ್ಪೆಯಲ್ಲಿ ಕಾವಲಿರಿಸಿ,ಅಂಗೈ ಎಂಬ ಆಗಸದಿ ಹೂವಾಗಿ ಅರಳಿಸಿರುವೆ ನಿನ್ನ ,ನೀ ನಡೆವ ಭವಿಷ್ಯವೆಲ್ಲ ಸಂತಸ ತುಂಬಿರಲಿ.. ಎಂದಿಗೂ ನನ್ನ ಗೌರವಕ್ಕೆ ಧಕ್ಕೆ ತರದಿರು ...' ಎಂದಾಗ ಮನದ ಪ್ರತಿ ಮೂಲೆಯೂ ಕಳವಳದ ಛಾಯೆ,ಕಣ್ಣೀರ ಕೋಡಿ ಮಗಳ ಮೊಗದಿ...ಅದೇ ಛಾಯೆಯ ರೂಪ 'ಅಪ್ಪ'
ಶ್ರಧ್ದೆ , ಸೌಮ್ಯತೆ, ಸಾಧನೆಗೆ ಸ್ಪೂರ್ತಿ. ನೀವು ನಡೆದ ನಿಮ್ಮ ಜೀವನದ ದಾರಿ ಸದಾ ನಮ್ಮನ್ನು ತಪ್ಪಿನ ತೆಡವಿನಿಂದ ಬಡಿದೆಬ್ಬಿಸುತ್ತದೆ. ನೈತಿಕತೆಯ ಬದುಕು ಕಲಿಸಿದ ಸಂತೋಷಿ ಅಪ್ಪ. ತಂದೆ- ತಾಯಿ ಎಂದರೆ ನಮ್ಮ ಜೀವನದ ಪರಿಪೂರ್ಣ ವ್ಯಕ್ತಿಗಳು.
"ಅಪ್ಪ" ಎಂಬ ಅಭೇದ್ಯ ಶಕ್ತಿಯ ಬಗ್ಗೆ ಎಷ್ಟೂ ಬರೆದರೂ ಕಡಿಮೆಯೇ.... ಮುಗಿಯದಷ್ಟು ಭಾವನೆಗಳು ನನ್ನ ಮನದಲ್ಲಿ.
ನಾನಿಷ್ಟು ಬರೆದದ್ದ ಓದಿ ನಿಮ್ಮ ಕಂಗಳು ತೇವವಾಗದೇ ಇರುವವೇ?? ಖಂಡಿತ ಇಲ್ಲ. ಇನ್ನಷ್ಟು ಬರೆದು ,ಮತ್ತಷ್ಟು ಹೇಳಿ ನಿಮ್ಮನ್ನೂ ಇನ್ನೂ ಭಾವುಕರನ್ನಾಗಿಸಲು ಹಿಂಜರಿದಿದೆ ಮನವು. ಈ ಜೀವನದ ಸಂಬಂಧಗಳಲ್ಲೀ ನೀವು ' ಅಪ್ಪ' ಎಂಬ ಪಟ್ಟದಲ್ಲಿದ್ದರೂ....ಬದುಕಿನ ನಾಟಕರಂಗದಲ್ಲಿ ನೀವೇ ನನ್ನ 'Favorite Hero'...
ಕೊನೆಯದಾಗಿ ಒಂದು ಮಾತು.... ಅಪ್ಪ, ನಿಮ್ಮ ಪ್ರೀತಿ, ವಿಶ್ವಾಸ , ನಂಬಿಕೆ ಸದಾ ಹೀಗೆ ಇರುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ, ಅದನ್ನ ಉಳಿಕೊಳ್ಳುವ ಶಕ್ತಿ ನೀಡಿ ಹರಸಿ ಹಾರೈಸಿ. ಹೀಗೆ ಪದಗಳ ಪರಿಮಳ ಹರಡುವ ಸಾಮರ್ಥ್ಯ ಉಳಿಸಿಕೊಳ್ಳಲು ನಿಮ್ಮ ಪ್ರೇರಣೆ ದೊರೆಯುತಿರಲಿ.
'ಅಪ್ಪ'
ಹುಟ್ಟಿಗೆ ಕಾರಣ ನೀವು
ಹಸಿವಿನ ಅಮೃತ ನೀವು
ಹೊತ್ತಿರುವಿರಿ ಜವಾಬ್ದಾರಿಯ ನೀವು
ಹೊತ್ತುಗಳ ಮರೆಸಿದ ಕಾಳಜಿಯ ರೂಪ ನೀವು
ಹೆಗಲ ಮೇಲೆ ಹೊತ್ತು ಜಗ ಪರಿಚಯಿಸಿರುವಿರಿ ನೀವು
ಹೆದರಿಕೆ ಎಂಬುದರ ಪುಟವ ತಿರುವಿರಿ ನೀವು
ಹಠದ ದಾರಿಯ ಹಸಿರು,ಬೆಳಕು ನೀವು
ಹೊಸ ಕನಸುಗಳಿಗೆ ಹೊಂಗಿರಣ ನೀವು
ಹೊಸ ತಿರುವುಗಳಿಗೆ ಉತ್ತೇಜನ ನೀವು
ಹೋರಾಟದ ಅಭೆದ್ಯ ಶಕ್ತಿ ನೀವು
ಹೇರಳವಾದ ಜ್ಞಾನದ ಕಣಜ ನೀವು
ಹೆಜ್ಜೆ ಹೆಜ್ಜೆಗೂ ಪಾಠದ ಪರಿಚಾರಕ ನೀವು
ಹೂನಗೆಯ ಕಾರಣ ನೀವು
ಹೇಳದ ಮಾತುಗಳಿಗೆಲ್ಲ ಉತ್ತರ ನೀವು
ಹೆಚ್ಚಾದರೂ ಕಡಿಮೆಯಾದರೂ ಬದುಕೆಲ್ಲ ನೀವೇ ನೀವು.....!!
ಇಂತಿ ನಿಮ್ಮ ಮಗಳು.....
ಅಶ್ವಿನಿ
- ಅಶ್ವಿನಿ ಭೀ ಬರಗಾಲಿ
ವೀವೆಕಾನಂದ 7ನೇ ಅಡ್ಡರಸ್ತೆ
ಗೋಕಾಕ- 591307.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ