ಗೌಳ ದೇಶದ ಅರಸ ಇಂದ್ರದ್ಯುಮ್ನನು,
ಸಂಸಾರ ಬಂಧನವ ತೊರೆದನು
ದೊರೆಯ ಪಟ್ಟವೇ ನನಗೆ ಬೇಡವೆಂದನು
ದಿನವೂ ಹರಿನಾಮ ಜಪವೇ ಸಾಕೆಂದನು.
ಸುಂದರ ತಪ್ಪಲಿನಲ್ಲಿ ಕುಳಿತನು
ಹರಿನಾಮ ಸ್ಮರಣೆಯಲ್ಲಿ ತಲ್ಲೀನನಾದನು
ತನ್ನ ಶಿಷ್ಯರೊಂದಿಗೆ ಬಂದನಲ್ಲಿಗೆ ಅಗಸ್ತ್ಯ ಮುನಿ ವರ್ಯನು
ನಾ ಬಂದರೂ ನನ್ನ ಸತ್ಕರಿಸಲಿಲ್ಲವೆಂದನು.
ದೊರೆಗೆ ಸಿಟ್ಟಿನಿಂದ ಶಪಿಸಿದನು
ಮಂದ ಹೆಜ್ಜೆಗಳನಿಡುವ ಗಜ ರೂಪ ನಾಗೆಂದನು
ಸಿಟ್ಟೇಕೆ ಮುನಿವರ್ಯ ನಾ ಗಮನಿಸಲಿಲ್ಲ ನಿಮ್ಮ ಆಗಮನವನ್ನು
ಶಾಪವನು ಹಿಂಪಡೆಯಿರಿ ಮನ್ನಿಸಿ ನನ್ನ ತಪ್ಪನ್ನು.
ಕೊಟ್ಟ ಶಾಪವ ಹಿಂಪಡೆಯೆನು ನಾನು
ಶಾಪ ವಿಮೋಚನೆಯ ಮಾರ್ಗವ ತಿಳಿಸಿ ಕರುಣಿಸಿ ನನ್ನನು
ಹಲವು ವರ್ಷಗಳು ಗಜರಾಜನಾಗಿರು ನೀನು
ಅನುಭವಿಸ ಬೇಕಾಗುವುದು ನೀನೊಮ್ಮೆ ನೋವನ್ನು.
ಜಪಿಸುವೆ ನೀ ನಂದು ಹಿಂದಿನ ಜನ್ಮದ ಹರಿ ನಾಮವನ್ನು
ಬಂದು ನಿನಗೆ ತಾಕಿಸಲು ನೀಲ ಮೇಘನು ಸುದರ್ಶನವನ್ನು
ಶ್ರೀ ಹರಿಯು ನೀಡುವನಂದು ನಿನಗೆ ಮುಕ್ತಿಯನ್ನು
ಎಂದು ದೊರೆಗೆ ಪೇಳಿ ಹೊರಟನು
ಮುನಿವರ್ಯನು.
ನೀಲಾಕಾಶದಲ್ಲಿ ಮುಳುಗುತ್ತಿರಲು ಆ ಭಾಸ್ಕರನ್ನು
ಸುತ್ತಲೂ ಆವರಿಸಿ ನಿಶೆ ಕತ್ತಲಾಯಿತು ಕಾನನ
ನೋಡು ನೋಡುತ ದೊರೆಯಾದನು ಗಜರಾಜನು
ಕರಿಯಾಗಿ ಜನಿಸಿ ಸಂತಾನವ ಪಡೆದನು.
ಆಡಿ ನಲಿದು ಅವರೊಂದಿಗೆ ಸಂತೋಷದಿಂದ ಇದ್ದನು
ಕಂಡನು ಎಂದೂ ಕಾಣದ ಬರಗಾಲವನ್ನು
ಬಾ ಯಾರಿದರೆ ನೀರಿಲ್ಲ ಹಸಿವಾದರೆ ಆಹಾರವಿಲ್ಲ ಬಳಲಿದನು ಗಜರಾಜನು
ತನ್ನ ಜೊತೆ ಕೂಡಿಕೊಂಡು ಹೆಂಡತಿ ಮಕ್ಕಳನ್ನು.
ಬೆಟ್ಟ ಗುಡ್ಡಗಳ ಹತ್ತಿ ಇಳಿದನು
ಮರಗಳ ಮುರಿದು ತುಳಿದು ತುಂಡರಿಸಿದನು
ಆಗ ಕಂಡನು ಸುಂದರ ಸರೋವರವನ್ನು
ಮಕರದ ರೂಪದಲ್ಲಿ ಸರೋವರದಲ್ಲಿದ್ದನು.
ಶಾಪಗ್ರಸ್ತ ಹುಹು ಗಂಧರ್ವನು
ಮಹರ್ಷಿ ದೇವಲರು ಇತ್ತರವನಿಗೆ ಶಾಪವನ್ನು
ಮಹರ್ಷಿಗೆ ತೋರಿದನವನು ಅನುಚಿತ ವರ್ತನೆಯನ್ನು
ಅದರ ಪಾಪದ ಫಲವಾಗಿ ಪಡೆದನು ಮಕರ ಜನ್ಮವನ್ನು.
ಸಂತಾನ ದೊಂದಿಗೆ ಸೇರಿ ಕರಿ ರಾಜ ಕಲಕಿದನು
ಗಂಧರ್ವ ಕಿನ್ನರರು ಜಲ ಕ್ರೀಡೆಯಾಡುವ ಸರೋವರವನ್ನು
ಇದ ಕಂಡು ಸಿಟ್ಟಿಗೆದ್ದನ್ನು ಮಕರನ್ನು
ಹಿಡಿಯಿತು ಬಲವಾಗಿ ಕುಂಜರದ ಕಾಲನ್ನು.
ಸತಿ ಸುತರೆಲ್ಲ ಸೇರಿ ಎಳೆದರೂ ಗಜ ರಾಜನನ್ನು
ಆಗದೆಂದು ದುಃಖದಲಿ ದೂರದಲ್ಲಿ ನಿಂತರು ನೋಡುತ್ತಾ ಕುಂಜರವನ್ನು
ನನ್ನ ಪಾಪದಲ್ಲಿ ಪಾಲೇಕೆ ದೂರದಲ್ಲಿರಿ ನೀವು ಎಂದನು
ಮತ್ತೊಮ್ಮೆ ಎಳೆದನು ಬಲದಿಂದ ತನ್ನ ಕಾಲನ್ನು.
ಕೋಪದಲ್ಲಿ ಕಚ್ಚುತಲಿದ್ದನು ಮಕರ ರೂಪದ ಗಂಧರ್ವನು
ತುಂಬಿತು ಕೊಳದ ನೀರಲ್ಲಿ ನೆತ್ತರು ನಾಚುವಂತೆ ನೇಸರನು
ಗಜರಾಜನು ಹಿಂದಿನ ಜನ್ಮದಂತೆ ಶ್ರೀಹರಿಯ ಕಂಡನು
ಹತ್ತು ಅವತಾರಗಳ ಎತ್ತಿ ಕಾಪಾಡಿದಂತೆ ಎಲ್ಲರನ್ನು.
ಕಾಪಾಡು ತಂದೆ ಶ್ರೀಹರಿ ನೀ ಬಂದು ನನ್ನನ್ನು
ಎಂದು ಶ್ರೀಹರಿಯ ಕೂಗಿ ಕರೆದನು ಕುಂಜರನ್ನು
ಓಡಿ ಬಂದನು ಗಜರಾಜ ನಿದ್ದಲ್ಲಿಗೆ ಮಾಧವನು
ಬಿಟ್ಟು ಕ್ಷಿರಾಬ್ದಿಯಲ್ಲೇ ಲಕ್ಷ್ಮಿಯನು.
ಹೊಡೆದನು ಮಕರದ ದಂತಕ್ಕೆ ತನ್ನ ಚಕ್ರವನ್ನು
ಗಂಧರ್ವನಾಗಿ ನಿಂತನು ಮಕರನು
ಶ್ರೀ ಹರಿಯು ವೈಕುಂಠಕ್ಕೆ ತೆರಳಿದನು
ನೃಪನಿಗೆ ಹುಹುವಿಗೆ ಕೊಟ್ಟು ಮುಕ್ತಿಯನ್ನು.
- ಎಂ ಆಶಾ ಕಿರಣ್.
ಶಿಕ್ಷಕಿ ಹಾಗೂಸಾಹಿತಿ ಬೇಲೂರು
ಹಾಸನ ಜಿಲ್ಲೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ