ಕೃತಜ್ಞತೆ
ಭುವಿಗೆ ಬಂದೆವು ಹೇಗೆ ಎಂದು ತಿಳಿಯದಾಗಿದೆ ಇಂದಿಗೂ
ನಂಟು ಬೆಸೆಯುವ ಸೃಷ್ಟಿ ಮೂಲವ ಯಾರು ಬೇಧಿಸಬಲ್ಲರು?
ಕೂಟದೊಳಗಿನ ತೇಜದಿಂದ ಹುಟ್ಟಿ ಬೆಳೆದಿದೆ ಈ ಜಗ
ಮಾಟಗಾರನ ಆಟವರಿಯದೆ ನೋಟ ನೆಟ್ಟಿದೆ ಆ ಕಡೆ
ಮೂಳೆ ಮಾಂಸ ಚರ್ಮದೊದಿಕೆಯ ಪಡೆದು ಬಂದೆವು ಇಲ್ಲಿಗೆ
ನಲಿವು ಸುಖಗಳ ಕೀರ್ತಿ ಹೆಸರಿಗೆ ಬೆನ್ನು ಹತ್ತಿ ಹೊರಟೆವು
ದಿನವು ಕಳೆದವು ನಾವು ಬೆಳೆದೆವು ಪ್ರಾಯ ಬಂದಿತು ಚಂಗನೆ
ಉಳ್ಳ ಜನರು ಜಗವ ಸುತ್ತಲು ನಮಗೆ ಸೀಮಿತ ಈ ಮನೆ
ಬಾಲ್ಯ ಹರೆಯದಿ ಲೆಕ್ಕಕಿಲ್ಲದ ಎಷ್ಟೊ ಅನುಭವ ಕಾಣುತ
ಇಳೆಯ ವಯಸಲಿ ಅದನು ಮರೆಸುವ ಜಾಣನಾರು ಕಾಣೆವು
ಹುಟ್ಟು ಧನ್ಯವು ಆಗಬೇಕಿದೆ ಜಗದ ಜೊತೆ ನಾವು ನಿಲ್ಲಲು
ಹೊಳೆದ ಸತ್ಯವು ಮುಂದಿನವರಿಗೆ ತಿಳಿಯ ಹೇಳಲೆಬೇಕಿದೆ
ಹೆತ್ತ ತಾಯಿಗೆ ಹೊತ್ತ ತಂದೆಗೆ ಮತ್ತೆ ಭೂಮಿ ತಾಯಿಗೆ
ಸುತ್ತಲಿದ್ದು ಹಿತವ ತೋರಿದ ಎಲ್ಲಾ ಬಂಧು ಬಳಗಕೆ
ಬಳಿಯಲಿದ್ದು ಹೆಗಲ ಕೊಟ್ಟ ನನ್ನ ಜೀವದ ಗೆಳೆಯಗೆ
ವಿದ್ಯೆ ಕಲಿಸಿ ಕಣ್ಣ ತೆರೆಸಿ ತಿದ್ದಿ ನಡೆಸಿದ ಗುರುವಿಗೆ
ತನ್ನನರ್ಪಿಸಿ ಸೇವೆಗೈಯುತ ನನ್ನ ಸಹಿಸಿದ ಮಡದಿಗೆ
ಕರುಳ ಬಳ್ಳಿಗೆ ಚಾಚಿದ ಹಸ್ತಕೆ ನನ್ನ ಸಹಿಸಿದ ಎಲ್ಲಕೂ
ಸಕಲ ಜಗಕೂ ಪಂಚಭೂತಕೂ ಕೊನೆಯದಾಗಿ ನಮಿಸುತ
ಮುಕ್ತಿ ಕರುಣಿಸೊ ಲೋಕವಿರುವುದೆ ತಿಳಿಯದಂತೆ ಹೊರಟಿಹೆ
- ಶ್ರೀ ತುಳಸಿದಾಸ ಬಿ ಎಸ್
ಸಹ ಶಿಕ್ಷಕರು, ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ