ಮನೆಯ ಅಧಾರ ಸ್ತಂಭ ಅಪ್ಪ
ಅಪ್ಪ ಎಂದಾಗ ನಮಗೆಲ್ಲ ಏನೋ ಒಂದು ತರಹದ ಕಳಮಳ ಭಯ, ಭಕ್ತಿ. ಅವರು ಮನೆಯಲ್ಲಿ ಇದ್ದಾಗ ನಮ್ಮ ಉಸಿರು ಕೂಡಾ ನಮಗೆ ಮೆಲ್ಲಗೆ ಮಾತನಾಡು ಎನ್ನುತ್ತದೆ. ತಂದೆಯವರು ಮನೆಯೊಳಗೆ ಇರುವಾಗ ನಾವು ತುಂಬಾ ಜನ ಮಾತನಾಡಲು ಅಂಜಿಕೆ ಮಾಡಿಕೊಳ್ಳುತ್ತೇವೆ. ಅದೇನೋ ಅವರನ್ನು ನೋಡಿದಾಗ ಆ ಗಾಂಭೀರ್ಯ ಘನತೆಗೆ ಸಿಗಬೇಕಾದ ಮರ್ಯಾದೆಯನ್ನು ನಾವೆಲ್ಲರೂ ನಮ್ಮ ನಮ್ಮ ತಂದೆಯವರಿಗೆ ನೀಡುವುದು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬಂದ ಪದ್ದತಿ.
ಇಷ್ಟು ಮಾತ್ರನಾ ಒಬ್ಬ ತಂದೆಗೆ ಮಾಡಲು ಸಾಧ್ಯ? ಇಲ್ಲ! ಸಾದ್ಯವೇ ಇಲ್ಲ. ತಂದೆಯವರ ಒಂದೊಂದು ಮಾತು ಕೂಡಾ ಒಂದೊಂದು ತೂಕಕ್ಕೆ ಸಮನಾದ ಪ್ರೀತಿಯ ಭಾವವನ್ನು ಹೊಂದಿರುತ್ತದೆ. ಅವರ ಮೇಲಿರುವ ಅದೇ ಭಯ ನಮಗೆ ಮುಂದೊಂದು ದಿನ ಭಕ್ತಿಯ ಪರಾಕಾಷ್ಠೆ ಯಾಗಿ ಹೊರ ಹೊಮ್ಮುವುದು. ಅವರ ಆಚಾರ ವಿಚಾರಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುವುದು. ಆತ್ಮ ವಿಶ್ವಾಸಕ್ಕೆ ಮತ್ತೊಂದು ಹೆಸರೆಂದರೆ ನನ್ನ ತಂದೆ. ನನ್ನ ತಂದೆಯ ಮಾತು ಸ್ವಲ್ಪ ಕಠೋರ ಮತ್ತು ಕಠಿಣ. ಅವರನ್ನು ಅರಿತುಕೊಂಡು ಸಾಗುವ ಕಾರ್ಯ ಸಾಮಾನ್ಯವಾಗಿ ಯಾರಿಂದಲೂ ಆಗದ ಮಾತು, ನನ್ನ ತಾಯಿಯವರು ಅವರನ್ನು ನಮ್ಮಗಿಂತ ವಿಸ್ತಾರವಾಗಿ ಅವರನ್ನು ಅರಿತುಕೊಂಡು ಸಂಸಾರ ಸಾಗಿಸಿಕೊಂಡು ಹೋಗಿದ್ದಾರೆ.
ಒಬ್ಬ ತಂದೆ ಯಾವಾಗಲೂ ಚೂರೇ ಚೂರಾದರೂ ಗಂಭೀರವಾಗಿಯೇ ಇರಬೇಕು, ಆಗಲೇ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ತನ್ನ ಮಗುವಿಗೆ ನೀಡಲು ಸಾಧ್ಯ.
ಆದರೆ ಎಲ್ಲರ ತಂದೆಯ ಹಾಗೆ ನನ್ನ ತಂದೆಯವರು ಅಲ್ಲ. ಅಷ್ಟೇನೂ ಕೋಪಿಸ್ಟರೂ ಅಲ್ಲ. ಅಷ್ಟೇನೂ ನವೀಕರಣ ಸ್ವಭಾವದವರು ಅಲ್ಲ. ನಾವು ಮನೆಯಲ್ಲಿ ತಂದೆಯವರನ್ನು ಹಿಡಿದು ಐದು ಮಂದಿ, ಅಪ್ಪ ಅಮ್ಮ ಇಬ್ಬರು ತಂಗಿಯರು. ನನ್ನ ತಾಯಿಗೆ ಕೊಡಬೇಕಾದ ಸಂಪೂರ್ಣ ಸ್ವಾತಂತ್ರ್ಯವನ್ನೂ, ತಂಗಿಯರಿಗೂ ಅವರೂ ಕೇಳಿದ ಎಲ್ಲಾ ತಿಂಡಿ ತಿನಿಸುಗಳನ್ನು ಹಿಡಿದು ಅವರ ಹಲವಾರು ಕನಸನ್ನು ಕಣ್ಣಿಗೆ ಕಾಣದ ಹಾಗೆ ನೆರವೇರಿಸಿದ್ದಾರೆ. ಇನ್ನೂ ನನಗೆ ನನ್ನ ತಂದೆಯವರೇ, ಎಲ್ಲಾ ಅವರು ತೋರಿಸಿದ ದಾರಿ ನನಗೆ ನನ್ನ ಭವಿಷ್ಯದ ನಾಂದಿ. ಪ್ರತಿ ಹಂತದಲ್ಲಿ, ಕೆಲಸದಲ್ಲಿ ನನ್ನ ಜೋತೆಗೆ ಇರಲು ಇಚ್ಛಿಸುತ್ತಾರೆ. ಇದು ನನಗೆ ಯಾವ ರೀತಿ ಭಾಸವಾಗುತ್ತದೆ ಎಂದರೆ ನಾನು ಪುಟ್ಟ ಕೂಸಾದಾಗ ಅವರ ಆ ವಿಶಾಲವಾದ ಹೆಗಲ ಮೇಲೆ ನಾನು ಕೂತು ಅವರ ಎದೆಗೆ ನನ್ನ ಪುಟ್ಟ- ಪುಟ್ಟ ಹೆಜ್ಜೆಗಳು ಮಿಟಿದಾಗ ಅವರ ಜನ್ಮವೇ ಸಾರ್ಥಕವಾಯಿತೆಂದು ಅವರು ಹೇಳುತ್ತಿದ್ದರಂತೆ ಎಂದೂ ನನ್ನ ತಾಯಿಯವರು ಹೇಳುತ್ತಾರೆ.
ನನ್ನ ಪ್ರಕಾರ ತಂದೆ ಯೆಂದರೆ ವಿಶಾಲವಾದ ಆಕಾಶದ ಹಾಗೇ, ಮತ್ತು ಆಕಾಶದಲ್ಲಿರುವ ಆ ನಕ್ಷತ್ರಗಳೇ ನಾವುಗಳು, ಎಷ್ಟೋಂದು ವಿಚಿತ್ರವಾದ ಭಾವ ಒಬ್ಬ ತಂದೆಯದು. ಆಕಾಶ ಎಷ್ಟು ವಿಶಾಲವಾಗಿದ್ದರು ಮಳೆ, ಗಾಳಿ, ಗುಡುಗು, ಮಿಂಚಿನ ಆಕ್ರಂದನದ ಸಮಯದಲ್ಲಿ ತನ್ನ ಒಡಲಿನ ಒಳಗೆ ಕಣ್ಣಿಗೆ ಕಾಣದ ಹಾಗೆ ಇರುವ ನಕ್ಷತ್ರ ಚುಕ್ಕೆಗಳನ್ನು ಆ ಆರ್ಭಟದಿಂದ ರಕ್ಷಿಸಿ, ಆ ಎಲ್ಲಾ ವಿಕೋಪಗಳನ್ನು ತಾನೇ ಸಹಿಸಿಕೊಳ್ಳುವುದು. ಹಾಗೇ ಒಬ್ಬ ತಂದೆಯು ಕೂಡಾ ತನ್ನ ಒಡಲಲ್ಲಿ ಎಷ್ಟೇ ಬೆಂಕಿಯಂತ ಜ್ವಾಲೆ ಇದ್ದರೂ, ಏನೂ ಆಗೇ ಇಲ್ಲ ಎಂಬಂತೆ ಸರಳ ಜೀವನ ನಡೆಸುವರು,. ಇದು ಪ್ರತಿಯೊಬ್ಬ ತಂದೆಯಿಂದ ಮಾತ್ರ ಸಾದ್ಯ .
ಕಷ್ಟಗಳ ಸರಮಾಲೆ ತನ್ನ ಒಳಗೆ ಇದ್ದರೂ ಕಾರಣ ಹೇಳದೆ ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡು ಹೋಗುತ್ತಾರೆ. ಇದು ಅವರಿಗೆ ಸಹಿಸಲಾರದ ನೋವು, ನೀಡುತ್ತದೆ, ಆದರೂ ಅಂಜದೇ ಅಂಬರದ ಹಾಗೇ ಪ್ರಕಾಶಿಸುತ್ತಾರೆ. ಪ್ರತಿ ತಂದೆಯಲ್ಲಿಯೂ ಶ್ರಮಜೀವಿ ಇರುತ್ತಾರೆ.
ಎಂದೂ ಸುಖ - ದುಃಖವನ್ನು ನಮ್ಮಲ್ಲಿ ಹಂಚಿಕೊಳ್ಳುವುದನ್ನು ಮರೆಯದಿರಿ. ನಿಮ್ಮ ಘನತೆ ಎಂದೂ ಹೆಚ್ಚಾಗುತ್ತಲೇ ಇರಲಿ ಎಂದೂ ನಾನು ನನ್ನ ಮನಸಾರೆ ಭಗವಂತನಲ್ಲಿ ಬೇಡಿಕೊಳ್ಳುವೆ.... ಹೀಗೆ, ಆಯುಷ್ಯ ಆರೋಗ್ಯ ಚಿರಕಾಲ ನಿಮ್ಮದಾಗಲಿ ಎಂದೂ ನಾನು ಆಶಿಸುವೆ.
- ಸೌಮ್ಯ ಗಣಪತಿ ನಾಯ್ಕ (ಉತ್ತರ ಕನ್ನಡ).
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ