ಬುಧವಾರ, ಸೆಪ್ಟೆಂಬರ್ 8, 2021

ಜ್ಯೋತಿರ್ಲಿಂಗ ಕ್ಷೇತ್ರ ರಾಮೇಶ್ವರಂ (ಪ್ರವಾಸದ ನೆನಪು) - ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ, ಶಿಕ್ಷಕಿ - ಇಲಕಲ್ಲ.

ಜ್ಯೋತಿರ್ಲಿಂಗ ಕ್ಷೇತ್ರ ರಾಮೇಶ್ವರಂ

ಭಾರತದ ಪ್ರಮುಖ ಹನ್ನೆರಡು ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಪವಿತ್ರ ಕ್ಷೇತ್ರ ತಮಿಳುನಾಡಿನ ರಾಜ್ಯದಲ್ಲಿ ಬರುವ ರಾಮೇಶ್ವರಂ .ಇದು ಭಾರತದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ದ್ವೀಪದಲ್ಲಿದೆ.ಭಾರತದ ಚಾರ್ ಧಾಮ್ ಎಂದು ಕರೆಯಲಾಗುವ ಪವಿತ್ರ ಕ್ಷೇತ್ರಗಳಾದ ಉತ್ತರದ ಬದರೀನಾಥ, ಪೂರ್ವದ ಪುರಿ ಜಗನ್ನಾಥ ,ಪಶ್ಚಿಮದ ದ್ವಾರಕಾನಾಥ ಹಾಗೂ ದಕ್ಷಿಣದ ರಾಮೇಶ್ವರಂ .ರಾಮೇಶ್ವರಂ ಕಾಶಿ ಯಾತ್ರೆಯ ಪ್ರಮುಖ ತಾಣವಾಗಿದೆ. ರಾಮೇಶ್ವರಮ್ ಯಾತ್ರೆಯು ಇಲ್ಲದೆ ಕಾಶಿಯಾತ್ರೆ ಅಪೂರ್ಣ ಎಂಬ ನಂಬಿಕೆ ಹಿಂದೂಗಳದ್ದು. 
ಪ್ರತಿಯೊಬ್ಬ ಪ್ರವಾಸಿಯೂ ಇಲ್ಲಿರುವ ಪವಿತ್ರ ಜಲದ ತೀರ್ಥದ ಗಿಂಡಿಯನ್ನು ಕಾಶೀ ಕ್ಷೇತ್ರದ ವಿಶ್ವನಾಥನಿಗೂ ಹಾಗೂ ಕಾಶಿಯಿಂದ ತಂದಂತಹ ಪವಿತ್ರ ಜಲದ ತೀರ್ಥದ ಗಿಂಡಿಯನ್ನು ರಾಮೇಶ್ವರದ ರಾಮನಾಥನಿಗೂ ಅರ್ಪಿಸುವುದರ ಮೂಲಕ ತಮ್ಮ ತೀರ್ಥಯಾತ್ರೆಯನ್ನು ಮುಗಿಸುವುದು ವಾಡಿಕೆ.
             ೨೦೧೪ ರಲ್ಲಿ ನಮ್ಮ ಕುಟುಂಬ ಪರಿವಾರದವರೊಂದಿಗೆ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಬರುವ ಪ್ರಮುಖ ತಾಣಗಳಾದ ಮಧುರೈ ಕನ್ಯಾಕುಮಾರಿಯನ್ನು ನೋಡಿಕೊಂಡು ನಾವು ರಾಮೇಶ್ವರಕೆ ಹೋಗಿದ್ದೆವು .ಕನ್ಯಾಕುಮಾರಿಯಿಂದ ರಾತ್ರಿ ರೈಲು  ಪ್ರಯಾಣ ಬೆಳೆಸಿದ ನಾವು ರಾಮೇಶ್ವರಕ್ಕೆ ಬೆಳಗಿನ ಜಾವ ತಲುಪಿದೆವು.ಪ್ರಯಾಣದ ಆಯಾಸವಾಗಿದ್ದರಿಂದ ಅಲ್ಲಿಯೇ ಲಾಡ್ಜ್ ನಲ್ಲಿ ತಂಗಿದೆವು.ನನ್ನ ಪತಿ ಕೃಷ್ಣ, ನನ್ನ ಸಹೋದರನ ಮಕ್ಕಳಾದ ಮಧುಗೌಡ, ಆಕಾಶ್, ಶಶಾಂಕ್, ಅಕ್ಕನ ಮಕ್ಕಳಾದ ಸಂತೋಷ್ ಮತ್ತು ಸವಿತಾ ಜಯಸುಧಾ, ಅನಿತಾ ಲಾಡ್ಜ್ ನಲ್ಲಿ ತಂಗಿದ್ದು ಬೆಳಿಗ್ಗೆ ದೇವಾಲಯದ  ದರ್ಶನಕ್ಕೆ ಹೊರಡುವ ಸಿದ್ಧತೆಯಲ್ಲಿದ್ದೆವು. ನಮ್ಮೆಲ್ಲರ ಬಹುದಿನದ ಕನಸು ರಾಮೇಶ್ವರಂ ದೇವಾಲಯದಲ್ಲಿರುವ ಇಪ್ಪತ್ತೆರಡು ಬಾವಿಗಳ  ಪುಣ್ಯತೀರ್ಥವನು  ಹಾಕಿಸಿಕೊಳ್ಳುವ ಹಂಬಲ. ದೇವಾಲಯದ ಆವರಣವನ್ನು ಪ್ರವೇಶಿಸುವದಕ್ಕಿಂತ ಮುನ್ನ ಮೊದಲು ಸಮುದ್ರ ಸ್ನಾನಗಬೇಕು.ಅದಕ್ಕಾಗಿ ಎಲ್ಲರೂ ದೇವಾಲಯದ ಮುಖ್ಯದ್ವಾರದ ಎದುರಿಗೆ ಅನತಿ ದೂರದಲ್ಲಿರುವ   ಸಮುದ್ರ ತೀರಕೆ ಬಂದೆವು.ಇಲ್ಲಿ ಬರೋದು ಬಂಗಾಳಕೊಲ್ಲಿ ಸಮುದ್ರ.ತೀರ ಪ್ರದೇಶದಲ್ಲಿ ಭಕ್ತ ಸಮುದಾಯಕ್ಕೆ ಅನುಕೂಲವಾಗಲಿ ಮತ್ತು ಯಾವುದೇ ರೀತಿಯ ಅಪಾಯಕ್ಕೆ ಪ್ರವಾಸಿಗರು ಒಳಗಾಗಬಾರದು ಎನ್ನುವ ದೃಷ್ಠಿಕೋನದಿಂದ ಪಾವಟಿಗೆಗಳನು ನಿರ್ಮಿಸಿ ರಕ್ಷಣಾ ಗೋಡೆಯನ್ನು ಕಟ್ಟಿದ್ದಾರೆ.


ನಾವೆಲ್ಲರೂ ಸಮುದ್ರ ತೀರ ಪ್ರದೇಶದಲ್ಲಿ ಸ್ನಾನಮಾಡಿ ಮರಳಿನ ಲಿಂಗವನ್ನು ಮಾಡಿ ಅದಕ್ಕೆ ಪೂಜೆಯನ್ನು ಸಲ್ಲಿಸಿ ,ಸರ್ವರಿಗೂ ಒಳಿತನ್ನುಂಟುಮಾಡು ಭಗವಂತ ಎಂದು ಪ್ರದರ್ಶಿಸುವುದರ ಜೊತೆಗೆ, ನಮ್ಮ ಕುಟುಂಬದಲ್ಲಿ ಮಡಿದ, ಹಿರಿಯರ ಮತ್ತು ಕಿರಿಯರ ಆತ್ಮಕ್ಕೆ ಶಾಂತಿಯನ್ನು ಕರುಣಿಸು ರಾಮನಾಥ ಎಂದು ಬೇಡಿಕೊಳ್ಳುತ್ತಾ ದೇವಾಲಯದತ್ತ ಹೊರಟೆವು. ದೇವಾಲಯದ ಗೋಪುರ ಆ ಅವಧಿಯಲ್ಲಿ ಯಾವುದೋ ದುರಸ್ತಿ ಕಾರ್ಯಗಳು ನಡೆದಿರಬಹುದೇನೋ  ನಿರ್ಮಾಣದ ಹಂತದಲ್ಲಿರುವ  ಗೋಪುರಕ್ಕೆ ಹಸಿರು ಹೊದಿಕೆಯನ್ನು  ಹೊದಿಸಿದ್ದರು. ದೇವಾಲಯ ಪ್ರವೇಶಿಸುತ್ತಿದ್ದಂತೆ ಮಂಗನ ಬಾಲದಂತೆ ಸರತಿ ಸಾಲು ಇತ್ತು. 

ಮುಖ್ಯ ದ್ವಾರದ ಪಕ್ಕದಲ್ಲಿ ನಾವು ಒಯ್ಯದಂತಹ ಮೊಬೈಲ್ ಕ್ಯಾಮೆರಾಗಳನ್ನು ಸುರಕ್ಷಿತವಾಗಿ ಕೌಂಟರಿನಲ್ಲಿ ಕೊಟ್ಟು ಒಳಗಡೆ ಪ್ರವೇಶಿಸಬೇಕಾಗಿತ್ತು ಏಕೆಂದರೆ ದೇವಾಲಯದ ಆವರಣದಲ್ಲಿ ಮೊಬೈಲ್ ಮತ್ತು ಕ್ಯಾಮೆರಾ ಗಳನ್ನು ಬಳಸುವುದಕ್ಕೆ ನಿಷೇಧಿಸಲಾಗಿತ್ತು. ಅಲ್ಲಿಂದ  ಇಪ್ಪತ್ತೆರಡು ಪುಣ್ಯ ತೀರ್ಥಬಾವಿಗಳ ನೀರನ್ನು ಹಾಕಿಸಿಕೊಳ್ಳಲು ನಾವು ಆ ಸಾಲಿನಲ್ಲಿ ನಿಂತು ಮುಂದೆ ನಡೆದೆವು .ಅವುಗಳಲ್ಲಿ ಇಪ್ಪತ್ತೆರಡು  ಬಾವಿಗಳೂ ಒಂದೊಂದು ಹೆಸರಿನಿಂದ ಗುರುತಿಸಲ್ಪಟ್ಟಿತು. ಮಹಾಲಕ್ಷ್ಮಿ, ಸಾವಿತ್ರಿ, ಗಾಯತ್ರಿ ,ಸರಸ್ವತಿ,ಸೇತು ,ಗಂಧಮಾಧವ ,ಕವಚ, ಗವಯ ,ಸಳ, ನೀಲ ,ಶಂಕರ ,ಚಕ್ರ ಬ್ರಹ್ಮಹತ್ಯೆಯದೋಷ ನಿವಾರಕ , ಸೂರ್ಯ, ಚಂದ್ರ, ಯಮುನಾ ,ಗಯಾ, ಶಿವ ,ಸತ್ಯ, ಮೃತಾ ಸರ್ವ ಮತ್ತು ಕೋಟಿತೀರ್ಥಗಳೆಂಬ ಇಪ್ಪತ್ತೆರಡು ಬಾವಿಗಳ ಪವಿತ್ರ ಜಲವನ್ನು ಸರತಿ ಸಾಲಿನಲ್ಲೇ ಹಾಕಿಸಿಕೊಳ್ಳುವ ಅಂತಹ ಅನುಭವ ಅತ್ಯದ್ಭುತ .ಎಲ್ರೂ ಈ ರೀತಿಯ ಪುಣ್ಯತೀರ್ಥ ಸ್ನಾನ ಮಾಡಿಯೇ ದರ್ಶನ ಪಡೆಯಬೇಕೆಂಬ ನಿಯಮವಿಲ್ಲ. ಅದು ಅವರವರ ಭಕ್ತಿಗೆ ಬಿಟ್ಟ ವಿಚಾರವಾಗಿತ್ತು. ಸಮುದ್ರದಿಂದ ಒದ್ದೆ ಬಟ್ಟೆಯ ಮೂಲಕವೇ ದೇವಾಲಯ ಪ್ರವೇಶಿಸಿ ಪ್ರತಿಯೊಂದು ಬಾವಿಯ ನೀರನ್ನು ಅಲ್ಲಿರುವಂತಹ ಅರ್ಚಕರು ಬಕೇಟಿನಿಂದ ಎಲ್ಲ ಭಕ್ತರಿಗೆ ಪ್ರೋಕ್ಷಿಸುವ ಅಂತಹ ದೃಶ್ಯ ಮನಮೋಹಕ .ಎಲ್ಲರೂ ಪ್ರತಿಯೊಂದು ಬಾವಿಯ ನೀರನ್ನು ಹಾಕಿಸಿಕೊಳ್ಳುತ್ತಾ, ನಡುಗುತ್ತಾ, ಮುಂದಿನ ಬಾವಿಗೆ ತೆರಳುತ್ತಿದ್ದೆವು .
ಪ್ರತಿಯೊಂದು ತೀರ್ಥಬಾವಿಯು ಒಂದೊಂದು ವಿಶೇಷ ಅರ್ಥವನ್ನು ಹೊಂದಿರುವಂತೆ ಕೊನೆಯ ದಾದಂತಹ ಕೋಟಿತೀರ್ಥಬಾವಿಯು, ಶ್ರೀಕೃಷ್ಣ ಪರಮಾತ್ಮ ಕಂಸನ ಸಂಹಾರದಿಂದ ಉಂಟಾದ ಪಾಪವನ್ನು ಕಳೆದುಕೊಂಡ ಪುಣ್ಯಸ್ಥಳ ಎಂದು ಹೇಳುತ್ತಾರೆ. 

ಎಲ್ಲ ಪವಿತ್ರ ಜಲಗಳ ಸ್ನಾನವನ್ನು ಮಾಡಿದ ನಂತರ ಅದೇ ಮಡಿ ಉಡುಗೆಯಲ್ಲಿ ವಿಶ್ವಲಿಂಗದ ದರ್ಶನ ಮೊದಲು ಮಾಡಿ ನಂತರ  ರಾಮನಾಥ ಜ್ಯೋತಿರ್ಲಿಂಗದ  ದರ್ಶನ ಭಾಗ್ಯ ಸಿಗುತ್ತದೆ .ಶಿವನಿಗೆ ಅಭಿಮುಖವಾಗಿ ಬೃಹತ್ ಪ್ರಮಾಣದ ನಂದಿಯ ಮೂರ್ತಿಯನ್ನು ಕಾಣುತ್ತೇವೆ.ಈ ಮೊದಲೇ ನಾನು ಕಾಶಿ ವಿಶ್ವನಾಥನ ದರ್ಶನವನ್ನು ಮಾಡಿದ್ದರಿಂದ ಅಲ್ಲಿಂದ ತಂದ ಪವಿತ್ರ ಗಂಗಾಜಲವನ್ನು ರಾಮನಾಥ ದೇವರಿಗೆ ಸಮರ್ಪಿಸಲು ಕೊಟ್ಟೇನು. ದೇವಾಲಯದ ಆವರಣದಲ್ಲಿರುವ ವಿವಿಧ ದೇವರುಗಳ ದರ್ಶನ ಭಾಗ್ಯವನ್ನು ಪಡೆದ ನಂತರ ಆ ದೇವಾಲಯದ ಬಗ್ಗೆ ಮಾತಾಡಲು ಪ್ರಾರಂಭಿಸಿದೆವು .     
                 ರಾಮೇಶ್ವರಂ ಇರುವ ಈ ಪಂಬನ್ ದ್ವೀಪ ಶಂಖದ ಆಕಾರದಲ್ಲಿದೆ. ಇದರ ಸ್ಪಷ್ಟ ಚಿತ್ರಣವನ್ನು ನಾವು ಗೂಗಲ್ ಮ್ಯಾಪ್ ನಲ್ಲಿ ನೋಡ್ಬಹುದು . ವಿಷ್ಣುವಿಗೆ ಪ್ರಿಯವಾದ ತಾಣ ಇದಾಗಿತ್ತು ಎಂಬ ನಂಬಿಕೆ.  ಹಿಂದೂಗಳಿಗೆ ಇದೊಂದು ಪವಿತ್ರ ದ್ವೀಪ .ರಾಮಾಯಣದ ಪ್ರಕಾರ ಶ್ರೀರಾಮಚಂದ್ರನು ಸೀತೆಯನ್ನು ಅಪಹರಿಸಿದ ರಾವಣನನ್ನು ಸಂಹರಿಸಿದ ಮೇಲೆ ಸೀತೆಯೊಂದಿಗೆ ರಾಮೇಶ್ವರಕ್ಕೆ ಬರುತ್ತಾನೆ. ರಾವಣ ಲಂಕೆಯ ರಾಜಮಾತ್ರನಲ್ಲ, ಬ್ರಾಹ್ಮಣನಾಗಿದ್ದುದರಿಂದ ಆತನನ್ನು ಕೊಂದು ತಾನೂ ಪಾಪ ಮಾಡಿದೆನೆಂಬ ಪಾಪಪ್ರಜ್ಞೆಯೂ ಶ್ರೀರಾಮನನ್ನು ಕಾಡುತ್ತಿತ್ತು. ಪಾಪ ಕಳೆಯಲು ಶಿವನನ್ನು ಪ್ರಾರ್ಥಿಸಿದನು .ಅಗಸ್ತ್ಯ ಮಹರ್ಷಿಗಳ ಸಲಹೆಯಂತೆ ರಾಮನು ರಾಮೇಶ್ವರದಲ್ಲಿ ಶಿವಲಿಂಗ ಸ್ಥಾಪಿಸಲು ನಿರ್ಧರಿಸಿದನು .ಕೈಲಾಸದಿಂದ ಶಿವಲಿಂಗವನ್ನು ತರಿಸಲು ಹನುಮಂತನನ್ನು ಕಳುಹಿಸಿದನು. ದೋಷಗಳ ಪರಿಹಾರಕ್ಕಾಗಿ ಎಲ್ಲಾ ವಿಧಿವಿಧಾನಗಳನ್ನು ನಿರ್ದಿಷ್ಟ ಸಮಯದೊಳಗೆ ಮಾಡಬೇಕಾಗಿತ್ತು .ಆದರೆ ಹನುಮಂತನು ಶಿವಲಿಂಗವನ್ನು ತರುವಲ್ಲಿ ವಿಳಂಬ ಮಾಡಿದನು .ಸೀತಾದೇವಿಯು ಸಮುದ್ರ ತೀರದಲ್ಲಿದ್ದ ಮರಳಿನಿಂದ ಲಿಂಗವನ್ನು ರಚಿಸಿದಳು . ಸೀತಾಮಾತೆಯ ಪವಿತ್ರ ಹಸ್ತಸ್ಪರ್ಶದಿಂದ ಮರುಳು ಲಿಂಗವು ಗಟ್ಟಿಯಾಗಿ ಅಲ್ಲಿಯೇ ನೆಲೆಸಿತ್ತು ಈ ಲಿಂಗ ಪ್ರತಿಷ್ಠೆ ನಡೆದ ನಂತರ ಆಂಜನೇಯನು ಆತುರಾತುರವಾಗಿ ಕೈಲಾಸ ಪರ್ವತದಿಂದ ಲಿಂಗದೊಂದಿಗೆ ಹಿಂದಿರುಗಿದನು. ಅಷ್ಟರಲ್ಲಿಯೇ ಒಂದು ಲಿಂಗದ ಪ್ರತಿಷ್ಠಾಪನೆ ಆಗಿರುವುದನ್ನು ಕಂಡು ಕೋಪ ಮತ್ತು ಉದ್ರೇಕಗಳಿಂದ ಆ ಲಿಂಗವನ್ನು ಛಿದ್ರಗೊಳಿಸಲು ಪ್ರಯತ್ನಿಸಿ ವಿಫಲನಾದನು.  ಅಷ್ಟರಲ್ಲಿ ಶ್ರೀರಾಮನು ಹನುಮಂತನಿಗೆ ತಿಳಿಹೇಳಿ ,ಸೀತಾದೇವಿ ಸೃಷ್ಟಿಸಿದ ಲಿಂಗದ ಪಕ್ಕದಲ್ಲಿಯೇ ನೀನು ತಂದ ಲಿಂಗವನ್ನು ಪ್ರತಿಷ್ಠಾಪಿಸುವೆ  ಮತ್ತು ನೀನು ತಂದ ಲಿಂಗಕ್ಕೆ ಮೊದಲ ಪೂಜೆ ಪುರಸ್ಕಾರಗಳು ನಡೆದ ನಂತರ ರಾಮನಾಥಲಿಂಗಕ್ಕೆ ಪೂಜೆ ನಡೆಯುತ್ತದೆ ಎಂದು ಆಶೀರ್ವದಿಸಿದನು .ಆಂಜನೇಯ ತಂದ ಲಿಂಗಕ್ಕೆ ವಿಶ್ವಲಿಂಗವೆಂದೂ, ಸೀತಾಮಾತೆ ಪ್ರತಿಷ್ಠಾಪಿಸಿದ ಲಿಂಗಕ್ಕೆ ರಾಮಲಿಂಗವೆಂದೂ ಕರೆಯುತ್ತಾರೆ .ಇಂದಿಗೂ ಹನುಮಂತ ತಂದ ವಿಶ್ವಲಿಂಗಕ್ಕೆ ಮೊದಲ ಪೂಜೆ. ಪೂಜೆಯ ನಂತರವೇ ಜ್ಯೋತಿರ್ಲಿಂಗವಾದ ರಾಮನಾಥ ಲಿಂಗದ ಪೂಜೆ ನಡೆಯುತ್ತದೆ .
              ದೇವಾಲಯದಲ್ಲಿ ಲಭ್ಯವಿರುವ ಶಾಸನದ ಪ್ರಕಾರ ಹನ್ನೆರಡನೇ ಶತಮಾನದಲ್ಲಿ ಶ್ರೀಲಂಕಾದ ರಾಜನಾದ ಪರಾಕ್ರಮಬಾಹು ಈ ಒಂದು ಪ್ರಾಚೀನ ದೇವಾಲಯವನ್ನು ದೊಡ್ಡದಾಗಿ ನಿರ್ಮಿಸಿದನೆಂದು ಹೇಳಲಾಗುತ್ತದೆ. ತದನಂತರ ಮಧುರೈನ ನಾಯಕ ಅರಸರಾದ ಪಾಂಡ್ಯರು ಮತ್ತಷ್ಟು ಉನ್ನತಿ ಗೊಳಿಸಿದರು .ಅನೇಕ ರಾಜವಂಶಗಳು ಆಳ್ವಿಕೆ ಮಾಡಿ ದೇವಾಲಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ನಮ್ಮ ಕನ್ನಡ ನಾಡಿನ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲದಲ್ಲಿಯೂ ಈ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದು ತಿಳಿದುಬರುತ್ತದೆ. ದ್ರಾವಿಡ ವಾಸ್ತುಶಿಲ್ಪ ಶೈಲಿಯ ಈ ಅದ್ಭುತ ದೇವಾಲಯವನ್ನು ನೋಡಲು ಕಣ್ಣುಗಳೆರಡು ಸಾಲದು .ಈ ರಾಮನಾಥ ಸ್ವಾಮದೇವಾಲಯ ಹದಿನೈದು ಎಕರೆ ವಿಸ್ತೀರ್ಣದಲ್ಲಿ ಕಟ್ಟಲಾಗಿದ್ದು, ಎತ್ತರವಾದ ಗೋಪುರವನ್ನುಹೊಂದಿದೆ. ದೇವಾಲಯದ ಪಶ್ಚಿಮಕೆ  ೫ ಹಂತ ೭೮ ಅಡಿ ಎತ್ತರದ ಗೋಪುರ, ಪೂರ್ವಕ್ಕೆ ೯ಹಂತ ೧೨೬ ಅಡಿ ಎತ್ತರದ ಗೋಪುರ  ಹೊಂದಿದೆ.ಇದನ್ನು ರಾಜಗೋಪುರ ಎಂದೇ ಕರೆಯುತ್ತಾರೆ .ಆ ಎತ್ತರದ ಗೋಪುರಗಳನ್ನು ನೋಡುತ್ತಾ ನಮ್ಮ ಜೀವನ ಸಾರ್ಥಕವೆನಿಸಿತು . ಅಲ್ಲಿರುವ ಗೈಡ್ಸ್ ಗಳುಕೊಟ್ಟ ಮಾಹಿತಿಯ ಪ್ರಕಾರ ರಾಮೇಶ್ವರ ದೇವಾಲಯ ಒಟ್ಟು ೩೮೫೦ ಅಡಿ ಉದ್ದ,  ೩ ವಿವಿಧ ಬಗೆಯ ಪ್ರವೇಶಾಂಗಣ ಹೊಂದಿದೆ.೩ ಮಂಟಪಗಳು, ೪ಸಾವಿರ ಅಡಿಗಳ ಉದ್ದ ಹೊಂದಿರುವುದರಿಂದ ಪ್ರಪಂಚದ ಅದ್ಭುತಗಳ ಪಟ್ಟಿಗೆ ಸೇರಿದೆ. ಮಂಟಪಕ್ಕೆ ೫ ಅಡಿಗಳ ಎತ್ತರದ ವೇದಿಕೆ ಇದೆ. ಅದರ ಮೇಲಿನ ಸ್ತಂಭಗಳ ಎತ್ತರ ೨೫ ಅಡಿಗಳು. ದೇವಾಲಯದ ಮಂಟಪವು ೧೨೦೦ ಸ್ತಂಭಗಳ ಭಾರವನ್ನು ಭರಿಸಿದೆ .ಆ ಅದ್ಭುತವಾದ ಶಿಲ್ಪಕಲಾ ಸ್ತಂಭಗಳ ವೈಭವವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ .ದೇವಾಲಯದ ಪ್ರಾಂಗಣವನ್ನೆಲ್ಲ ಪ್ರದಕ್ಷಿಣೆ ಹಾಕಿ ನಂತರ ನಾವು ರಾಮೇಶ್ವರದಲ್ಲಿರುವ ಇತರ ಸ್ಥಳಗಳನ್ನು ನೋಡಲು ಉತ್ಸುಕರಾದೆವು.ಭಾರತದ ಶ್ರೇಷ್ಠ ವಿಜ್ಞಾನಿ,  ರಾಷ್ಟ್ರಪತಿಗಳಾಗಿದ್ದಂತಹ ಡಾ।ಎ.ಪಿ.ಜೆ. ಅಬ್ದುಲ್ ಕಲಾಮ್ ರವರ ಜನ್ಮಸ್ಥಳ ನಿವಾಸವನ್ನು ನೋಡಿ ಸಂತಸಪಟ್ಟೆವು. ಈಗ ಅದು  ಮ್ಯೂಸಿಯಂ ಆಗಿ ಪರಿವರ್ತಿತವಾಗಿದೆ. ಅವರು ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಜೀವನದುದ್ದಕ್ಕೂ ಮಾಡಿದ ಸಾಧನೆಗಳನ್ನು  ಹಲವಾರು ವಸ್ತು ಸಂಗ್ರಹಗಳು, ಚಿತ್ರಪಟಗಳು ,ಪ್ರಶಸ್ತಿ ಪುರಸ್ಕಾರಗಳು,    ಅವರು ಓದುತ್ತಿದ್ದಂತಹ ವಿಭಿನ್ನ ಬಗೆಯ ಪುಸ್ತಕಗಳ ಸಂಗ್ರಹ ಇವೆಲ್ಲವುಗಳನ್ನು ನಾವು ಅವರ ನಿವಾಸ ಸ್ಥಳದಲ್ಲಿ ನೋಡಿ ಆನಂದಿತರಾದೆವು. ಆಗ ಡಾ। ಎಪಿಜೆ ಅಬ್ದುಲ್ ಕಲಾಂರವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿದಾರೆ ಎಂದು ಅಲ್ಲಿ ಇರುವವರು ಮಾಹಿತಿ ಕೊಟ್ಟರು.

        ಅನಂತರ ರಾಮೇಶ್ವರದಲ್ಲಿರುವ ಜೋಸೆಫ್ ಚರ್ಚ್ ಗೆ ಭೇಟಿ ನೀಡಿ ಚರ್ಚಿನ ಸೊಬಗನ್ನ ವೀಕ್ಷಿಸಿದೆವು .ಹಾಗೆಯೇ ಅಲ್ಲಿಯೇ ಇರುವ ಪಂಚಮುಖಿ ಆಂಜನೇಯನ ದರ್ಶನ ವನ್ನುಸಹ ಪಡೆದುಕೊಂಡೆವು .ಅಲ್ಲಿಂದ ರಾಮೇಶ್ವರದಿಂದ ೫ ಮೈಲಿ ದೂರದಲ್ಲಿರುವ ಕೋದಂಡರಾಮ ದೇವಾಲಯಕ್ಕೆ ತೆರಳಿದೆವು. ಇದು ವಿಭೀಷಣನು ಶರಣಾಗತಿಯನ್ನು ಸ್ವೀಕರಿಸಿದ ಸ್ಥಳ ಎಂದು ತಿಳಿಯಿತು .ಅದಲ್ಲದೆ ವಿಭೀಷಣನ ತಾತ್ಕಾಲಿಕ ಪಟ್ಟಾಭಿಷೇಕವು ಕೂಡ ಇಲ್ಲಿಯೇ ಲಕ್ಷ್ಮಣನಿಂದ ನೆರವೇರಿಸಲ್ಪಟ್ಟಿತು ಎಂದು ಅಲ್ಲಿರುವ ಅರ್ಚಕರು ನಮಗೆ ಮಾಹಿತಿ ನೀಡಿದರು .
              ನಾವೆಲ್ಲರೂ ನೋಡಬೇಕೆಂದುಕೊಂಡಿದ್ದ ಮತ್ತೊಂದು ಪವಿತ್ರ ಸ್ಥಳ ಧನುಷ್ಕೋಟಿ. ಬಂಗಾಳಕೊಲ್ಲಿ ಅಥವಾ ಮಹೋದಧಿ ಮತ್ತು ಹಿಂದೂ ಮಹಾಸಾಗರ ಅಥವಾ ರತ್ನಹಾರ ಈ ಎರಡೂ ಸಮುದ್ರಗಳು ಸೇರುವಂತಹ ಸ್ಥಳವನ್ನು ಸೇತು ಎಂದು ಕರೆಯುತ್ತಾರೆ .ಶ್ರೀರಾಮಚಂದ್ರನು ಲಂಕೆಯನ್ನು ಸೇರುವುದಕ್ಕೆ ಸಮುದ್ರದ ಮೇಲೆ ಕಟ್ಟಿದ ಈ ಮಾರ್ಗವು ಪ್ರಖ್ಯಾತವಾಗಿದೆ .ಶ್ರೀರಾಮಚಂದ್ರನು ಧನಸ್ಸಿನಿಂದ (ಬಿಲ್ಲು )ಬಾಣ ಬಿಟ್ಟಾಗ ಬಾಣದ ತುದಿಯ(ಕೋಟಿ ) ಗುರುತಿನಿಂದ ಸೇತುವೆ ಬಂಧಿಸಲ್ಪಟ್ಟಿದೆ.ಆ ಸ್ಥಳವೇ ಧನುಷ್ಕೋಟಿ ಎಂದು ಪ್ರಸಿದ್ಧವಾಗಿದೆ . ರಾಮೇಶ್ವರದಿಂದ ೧೮ ಕಿ.ಮೀ.ದೂರವಿರುವ  ಧನುಷ್ಕೋಟಿಯನ್ನು ತಲುಪಬೇಕಾದರೆ ವಾಹನಗಳ ಸಹಾಯದಿಂದ ಧನುಷ್ಕೋಟಿಯವರೆಗೂ ಹೋಗಬಹುದು. ರಸ್ತೆಯ ಎರಡೂ ಬದಿಗೆ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳ ವಿಹಂಗಮ ನೋಟವನ್ನು ನೋಡುತ್ತಲೇ ನಾವು ಧನುಷ್ಕೋಟಿಯನ್ನು ತಲುಪುವಂತಹ ದೃಶ್ಯ ಮನಮೋಹಕ.ರಾಮೇಶ್ವರ ಪುಣ್ಯಕ್ಷೇತ್ರಕ್ಕೆ ಆಗಮಿಸಿದವರು ೨ ಸಮುದ್ರಗಳ ಸಂಗಮ ತಾಣದಲ್ಲಿ ಸ್ನಾನವನ್ನು ಮಾಡಿ ಹೋಗುವುದು  ಶ್ರೇಷ್ಠವೆಂಬ ನಂಬಿಕೆಯಿಂದ , ಜೊತೆಗೆ ಶ್ರೀರಾಮಚಂದ್ರನು ಆಂಜನೇಯನ ಕಪಿಸೈನ್ಯದ ಸಹಾಯದಿಂದ ರಾಮಸೇತು ನಿರ್ಮಾಣಮಾಡಿದ ಸ್ಥಳ ವೀಕ್ಷಣೆಗಾಗಿಯು ಭಕ್ತಾದಿಗಳು ಆಗಮಿಸುತ್ತಾರೆ.ಇದನ್ನು ಆಡಮ್ ಸೇತುವೆ ಎಂದೂ ಸಹ ಕರೆಯುತ್ತಾರೆ ಆ ಪ್ರದೇಶದಿಂದ ಶ್ರೀಲಂಕಾ ದೇಶ ಕೇವಲ ಐವತ್ತು ಕಿಲೋಮೀಟರ್ಗಳ ಅಂತರದಲ್ಲಿದೆ. ಅಯ್ಯೋ ನಾವು ಶ್ರೀಲಂಕಾ ದೇಶಕ್ಕೂ ಹೋಗೋದಕ್ಕೆ ಪರ್ಮಿಷನ್ ತಗೊಂಡಿದ್ರೆ ಚೆನ್ನಾಗಿರ್ತಿತ್ತು.ಹಡಗುಗಳ ಮುಖಾಂತರ ಶ್ರೀಲಂಕಾ ದೇಶವನ್ನು ನೋಡ್ಕೊಂಡ್ ಬರ್ಬೋದಾಗಿತ್ತು ಎಂದು ನಗೆಗಡಲಿನಲ್ಲಿ  ಎಲ್ರೂ  ಮಾತನಾಡುತ್ತಾ  ತೀರ ಪ್ರದೇಶದಲ್ಲಿ ನಿಂತು ಸಮುದ್ರದ ತೆರೆಗಳ ಅಪ್ಪಳಿಸುವಿಕೆಯ ಆನಂದದ ಸವಿಯನ್ನು ಎಲ್ಲರೂ ಸವಿದೆವು .ಆ ಸುಂದರ ನಿಸರ್ಗ ರಮಣೀಯ ದೃಶ್ಯವನ್ನು ನೋಡಿದ ನಂತರ, ಅಲ್ಲಿಯೇ ಒಂದು ಪುಟ್ಟ ದೇವಾಲಯದ ಎದುರಿಗೆ ರಾಮಸೇತು ನಿರ್ಮಾಣ ಮಾಡಲು ಬಳಸಿದಂತಹ ನೀರಿನ ಮೇಲೆ ತೇಲುವ ಕಲ್ಲುಗಳನ್ನು  ನೋಡಲು ನೂರಾರು ಜನ ನಿಂತಿರುವುದನ್ನು ಗಮನಿಸಿ ನಾವು ಸಹ ರಾಮಸೇತು ನಿರ್ಮಾಣಕ್ಕೆ ಬಳಸಿದಂತಹ ಆ ಕಲ್ಲುಗಳನ್ನು ನೋಡಿ ಆಶ್ಚರ್ಯ ಪಟ್ಟೆವು .ರಾಮಾಯಣದ ಘಟನಾಧಾರಿತ ಸಂದರ್ಭ ಆಂಜನೇಯ ಶ್ರೀರಾಮನ ನಾಮವನ್ನು ಬರೆದು ಕಪಿಸೈನ್ಯದ ಸಹಾಯದಿಂದ ರಾಮಸೇತು ನಿರ್ಮಾಣ ಮಾಡಿದ್ದು, ಪುಟ್ಟ ಅಳಿಲುಗಳು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ ಕಥೆಗಳು ನೆನಪಾದವು. ನೀರಿನ ಮೇಲೆ ತೇಲುತ್ತಿರುವ  ಆ ಕಲ್ಲುಗಳ  ವೈಜ್ಞಾನಿಕ ರಚನೆಯ ಬಗ್ಗೆ ಮಾತನಾಡುತ್ತಾ ಹಾಗೆ ನಾವು ನಮ್ಮ ಪ್ರಯಾಣವನ್ನು ಪುನಃ ಧನುಷ್ಕೋಟಿಯಿಂದ ರಾಮೇಶ್ವರದತ್ತ ಮರಳಿ ತೆರಳಿದೆವು. ಅಲ್ಲಿಂದ ನಮ್ಮ ಪ್ರಯಾಣ ಪಂಬನ್ ಬ್ರಿಡ್ಜ್ ನೋಡುವ ಕಾತುರದಲ್ಲಿತ್ತು .ತಮಿಳುನಾಡಿಗೆ ಸೇರಿದಂತಹ ಜಿಲ್ಲೆಗಳಾದ ಮಂಡಪಂ ಮತ್ತು ಪಂಬನ್ ಈ ಎರಡೂ ಪ್ರದೇಶಗಳ ಮಧ್ಯೆ ಬರುವಂತಹ ಸಮುದ್ರದಲ್ಲಿ  ರೈಲು ಮಾರ್ಗ ಮತ್ತು ರಸ್ತೆ ಮಾರ್ಗಗಳನ್ನುನಿರ್ಮಿಸಿರುವುದು ವಿಶೇಷ. ನಾವು ಬ್ರಿಡ್ಜ್ ಮೇಲೆ ನಿಂತು ಸಮುದ್ರಮಾರ್ಗದಲ್ಲಿ ನಿರ್ಮಿಸಿದ ರೈಲು ಸೇತುವೆಯನ್ನು ನೋಡುತ್ತಾ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟೆವು .ಸಮುದ್ರ ಮಾರ್ಗದಲ್ಲಿ ನಿರ್ಮಿಸಿದ ಬ್ರಿಡ್ಜ್ ನ ಮತ್ತೊಂದು ವಿಶೇಷತೆಯೆಂದರೆ ಹಡಗುಗಳ ಸಂಚಾರಕ್ಕಾಗಿ ಅನುಕೂಲವಾಗುವಂತೆ ಬ್ರಿಡ್ಜಿನ ನಿರ್ಮಾಣ ಮಾಡಿರುವುದು ವಿಶೇಷವಾಗಿತ್ತು .ಸರಕುಗಳು ಅಥವಾ ಜನರನ್ನ ಹೊಂದಿದಂತಹ ಹಡಗುಗಳು ಬಂದ ತಕ್ಷಣವೇ ನಿಗದಿತ ಸಮಯಕ್ಕೆ ತನ್ನಿಂದ ತಾನೇ ಬ್ರಿಡ್ಜ್ ಎರಡೂ ಬದಿಯಲ್ಲಿ ಮೇಲೆ ಹೋಗಿ ಹಡಗು ಸಾಗಲು ಅನುಕೂಲ ವಾಗುವಂತೆ ಸ್ವಯಂಚಾಲಿತ ಯಂತ್ರವನ್ನು  ಅಳವಡಿಸಿ    ನಿರ್ಮಿಸಿರುವುದು ವಿಶೇಷವಾಗಿತ್ತು .ನಾವು ನೋಡುವ ಸಂದರ್ಭದಲ್ಲಿ ಸಾಕಷ್ಟು ಹಡಗುಗಳು ಬಂದಾಗ ಆ ಬ್ರಿಡ್ಜ್ ಓಪನ್ನಾಗಿ ಹಡಗುಗಳು ಸಾಗುವುದನ್ನು  ವೀಕ್ಷಣೆ ಮಾಡುತ್ತಾ ಸಂತಸ ಪಟ್ಟೆವು .ಸುತ್ತಲೂ ಸಮುದ್ರದಿಂದಾವೃತವಾದ ಈ ಪಂಬನ್ ದ್ವೀಪದಲ್ಲಿ ವಿಶೇಷವಾದಂತಹ ತೆಂಗಿನಮರಗಳು ನಾವು ಹೆಚ್ಚಾಗಿ ಕಾಣುತ್ತೇವೆ ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಸುತ್ತಲೂ ಸಮುದ್ರದಿಂದಾವೃತವಾದ  ಈ ಪ್ರದೇಶದಲ್ಲಿ ರಾಮೇಶ್ವರದ ದೇವಾಲಯವೊಂದರ ಆವರಣದಲ್ಲಿಯೇ ಸಾಕಷ್ಟು ಸಿಹಿನೀರಿನ ಬಾವಿಗಳಿರುವುದು ವಿಶೇಷವೆನಿಸಿತು .ಮತ್ತೊಮ್ಮೆ ಮತ್ತೊಮ್ಮೆ ರಾಮೇಶ್ವರದಲ್ಲಿ ನೋಡಿದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳ ಸವಿಯನ್ನು ಮೆಲುಕುಹಾಕುತ್ತಾ ನಾವು ನಮ್ಮ ಪ್ರಯಾಣವನ್ನು ಪುನಃ ಮರಳಿ ಗೂಡಿಗೆ ಎಂಬಂತೆ ನಮ್ಮ ಹುಟ್ಟೂರಿನತ್ತ ಬೆಳಸಿದೆವು..ರಾಮೇಶ್ವರದಿಂದ ಮಧುರೈವರೆಗೆ ಬಸ್ಸಿನ ಮೂಲಕ ಪ್ರಯಾಣ ಬೆಳೆಸಿ ಮಧುರೈಯಿಂದ ಪಳನಿ ಸುಬ್ರಹ್ಮಣ್ಯ ದೇವಸ್ಥಾನ ಕ್ಕೆ ಹೊರಟೆವು .ಯಂತ್ರ ಚಾಲಿತ ರೈಲು ಮತ್ತು ತೂಗುಸೇತುವೆಯ ಮೂಲಕ ತೆರಳಿ ಸುಬ್ರಹ್ಮಣ್ಯನ ದರ್ಶನ ಭಾಗ್ಯ ಪಡೆದುಪುನಃ ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಕೊಪ್ಪಳ ಜಿಲ್ಲೆಯಲ್ಲಿರುವ ನಮ್ಮ ಗ್ರಾಮಕ್ಕೆ ಮರಳಿದೆವು.ದೇಶ ಸುತ್ತು ಕೋಶ ಓದು ಎನ್ನುವಂತಹ ಮಾತು ಎಷ್ಟೊಂದು ಅರ್ಥಗರ್ಭಿತ ಎಂಬುದು ಈ ಪ್ರವಾಸದ ಅನುಭವದ ಮೂಲಕ ಅರಿತುಕೊಂಡೆವು.
  
     
- ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ,  ಶಿಕ್ಷಕಿ -  ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...