ಗಣೇಶ ಮೂರ್ತಿ (ವಿಚಾರ ಲೇಖನ)
ಸಕಲ ಗಣಕೂ ಅಧಿಪತಿಯಾದ ಗಣಪತಿಯ ಹಬ್ಬವು ಭಾವೈಕ್ಯತೆ ಹಾಗೂ ಸಂತಸದಾಯಕ ವಾತವರಣ ಉಂಟು ಮಾಡುವ ಮಹತ್ತರ ಹಬ್ಬವಾಗಿದೆ.
ಹಿಂದೆ ಗಣಪತಿಯ ಮೂರ್ತಿಯನ್ನು ಜೇಡಿ ಮಣ್ಣಿನಿಂದ ಮಾಡಿ ಬಣ್ಣ ಹಚ್ಚಿ ಕೆಲವು ಸಂಧರ್ಭದಲ್ಲಿ ಬಣ್ಣ ಹಚ್ಚದೆ ನಿಸರ್ಗದತ್ತವಾಗಿ ಪೂಜಿಸಿ ಭಕ್ತಿಗೀತೆಗಳನ್ನು ಹಾಡಿ ಭಜನೆ ವಿವಿಧ ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸುತ್ತ ಗ್ರಾಮದ ಎಲ್ಲರೂ ಸಹ ಭಾಗವಹಿಸಿ ಭಕ್ತಿಭಾವವನ್ನು ಮೆರೆಯುತ್ತಿದ್ದರು.
ನಾವು ಬಾಲ್ಯದಿ ಆಚರಿಸಿದ ಗಣೇಶ ಹಬ್ಬದ ಆಚರಣೆಯನ್ನ ಸ್ಮರಿಸಿದರೆ ಮನಸ್ಸಿಗೆ ಆನಂದದ ಕ್ಷಣಗಳು ಮುದ ನೀಡುವವು ಮಣ್ಣಿನ ಗಣಪತಿ ಮೂರ್ತಿಯಿಟ್ಟು ಒಂಭತ್ತು ದಿನಗಳವರೆಗೂ ನಾಟಕ ನೃತ್ಯ ಭಜನೆ ಹರಿಕಥೆ ಏಕಾಪಾತ್ರಭಿನಯಗಳು ಎಲ್ಲರಲೂ ಮೆಚ್ಚುಗೆಯ ವಾತವರಣವನ್ನುಂಟು ಮಾಡಿ ಗಣಪತಿಯ ವಿಸರ್ಜನೆಯವರೆಗೂ ಗಣೇಶನ ಕೂರಿಸಿದ ಜಾಗವೇ ನಮ್ಮ ಮನೆಯಾಗಿ ಮಾಡಿಕೊಂಡ ಸಂದರ್ಭಗಳು ಮತ್ತೊಮ್ಮೆ ಕಾಣಸಿಗಲಾರದು.
ಆದರೆ ಪ್ರಸ್ತುತ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿಸುತ್ತಿದ್ದು ಅವುಗಳ ವಿಸರ್ಜನೆಯಿಂದ ಹಲವಾರು ತ್ಯಾಜ್ಯಗಳು ನದಿ ಕೆರೆ ಕಟ್ಟೆ ಬಯಲುಗಳಲ್ಲಿ ಕಾಣಬಹುದು ಜೊತೆಯಲ್ಲಿ ಆಧುನಿಕತೆಯ ಸೋಗಿನಲ್ಲಿ ಗಣೇಶನ ಮೂರ್ತಿಯಲಿ ವಿಭಿನ್ನತೆ ತಂದು ಭಕ್ತಿಭಾವ ಮನದಿಂದ ದೂರಮಾಡಿಕೊಳ್ಳುವ ಗೊಂದಲದಲಿ ನಾವಿಂದು ಮುಳುಗಿದ್ದೆವೆ.
ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜಿಸೋಣ ಇದರಿಂದ ಪರಿಸರವು ಸ್ವಚ್ಛವಾಗಿರುತ್ತದೆ ಭಕ್ತಿ ಪರಂಪರೆಯನ್ನು ಉಳಿಸಿ ಬೆಳೆಸಿದಂತಾಗುವುದು ಮಕ್ಕಳಲ್ಲಿ ಮಣ್ಣಿನಿಂದ ಗಣೇಶನ ಮೂರ್ತಿ ಮಾಡುವ ಕೌಶಲ್ಯ ಬೆಳೆಸಿ ಸಾಂಸ್ಕೃತಿಕ ಪರಂಪರೆಯ ಉಳಿಸುವುದು ನಮ್ಮೇಲ್ಲರ ಜವಾಬ್ಧಾರಿಯಾಗಿದೆ.
ಪ್ರಸ್ತುತ ದಿನಗಳಲ್ಲಿ ನಾವು ಶಾಲೆ ಮನೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಹಬ್ಬಗಳ ಮಹತ್ವವನ್ನು ತಿಳಿಸುವುದು ಅಗತ್ಯವಾಗಿದೆ ಹಿಂದಿನ ಕಾಲದಲ್ಲಿ ಅಜ್ಜ ಅಜ್ಜಿಯರ ಒಡನಾಟದಲ್ಲಿ ಮಕ್ಕಳು ಬೆಳೆಯತ್ತಿದ್ದರು ಕಥೆಗಳ ಮೂಲಕ ತಿಳಿಸುತ್ತಿದ್ದರು ಆದರೆ ನಾವಿಂದು ತಂತ್ರಜ್ಞಾನ ಸುಳಿಯಲ್ಲಿ ಸಿಲುಕಿದ್ದು ಹಬ್ಬದ ಸಂಭ್ರಮ ಸಂತಸ ಮಹತ್ವಗಳನ್ನು ತಿಳಿಯುವಲ್ಲಿ ಹಿಂದೆ ಸರಿಯುತ್ತಿದ್ದೆವೆ.
ಗೌರಿ ಗಣೇಶನ ಹಬ್ಬದ ದಿನ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಂಟಪ ಸಿದ್ದಗೊಳಿಸಿ ಗೌರಿ ಗಣೇಶರಿಗೆ ಮಂತ್ರ ಪುಷ್ಪ ಅಕ್ಷತೆ ಪತ್ರೆಗಳೊಂದಿಗೆ ಕಡುಬು ಸಿಹಿ ತಿಂಡಿಗಳ ನೈವೇದ್ಯವಾಗಿರಿಸಿ ದೀಪಾಲಂಕಾರಗಳಿಂದ ಪೂಜಿಸಿ ತಮಗೆ ಅನುಕೂಲವಾದಷ್ಟು ದಿನಗಳ ಕಾಲ ನಿತ್ಯ ನೈವೇದ್ಯಗಳನ್ನು ಮಾಡಿ ಭಕ್ತಿಯಿಂದ ಪೂಜೆಮಾಡಿ ಮನೆಯ ಚಿಕ್ಕ ಗಣಪತಿಗಳನ್ನು ಬಕೇಟ್ಗಳಲ್ಲಿ ನೀರು ಹಾಕಿ ಅದರಲ್ಲಿ ವಿಸರ್ಜನೆ ಮಾಡಿ ನೀರನ್ನು ಕರಗಿದ ಮಣ್ಣನ್ನು ಗಿಡಗಳಿಗೆ ಹಾಕುವುದರ ಮೂಲಕ ಗಣೇಶನ ಗುರುತಾಗಿ ಗಿಡ ಬೆಳೆಸಿ ಪರಿಸರ ಉಳಿಸಿ ಸಂರಕ್ಷಿಸುವ ಕೆಲಸದಲ್ಲಿ ಯಶಸ್ಸು ಕಾಣಬಹುದಾಗಿದೆ.
ಗಣೇಶ ದೇವರ ಉಗಮದ ಬಗ್ಗೆ ಕೆಳಗಿನ ಕಥೆಯ ಮೂಲಕ ಸಂಕ್ಷಿಪ್ತವಾಗಿ ತಿಳಿಯೋಣ
ಗಣೇಶ ಹಬ್ಬವನ್ನು ಭಾದ್ರಪದ ಶುಕ್ಲದ ಚೌತಿಯಂದು ಗಣೇಶನ ಮಣ್ಣಿನ ಮೂರ್ತಿ ಮಾಡಿ ಮೂರು,ಐದು,ಏಳು ಎಂಬುದಾಗಿ ಹಲವು ದಿನಗಳವರೆಗೆ ಪೂಜಿಸಿ ,ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಗುತ್ತದೆ,ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಯ ಕೊಳೆಯಿಂದ ಆಕೃತಿಯನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.
ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿಯಾಗಿ ಅಗ್ರಪೂಜೆಗೆ ಅರ್ಹನಾಗುತ್ತಾನೆ.
ಚೌತಿಗೆ ಹಲವು ದಿನಗಳ ಮೊದಲೇ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸಲು ಪ್ರಾರಂಭಿಸುತ್ತಾರೆ ಹಾಗು ಅದನ್ನು ಪೂಜೆ ಮಾಡಿ ಭಕ್ತಿಯಿಂದ ಬೇಕಾದವರಿಗೆ ಹಸ್ತಾಂತರಿಸುತ್ತಾರೆ.ಭಕ್ತ ಜನರು ಭಕ್ತಿಯಿಂದ ಪ್ರತಿಷ್ಠಾಪಿಸಿ,ನಿರ್ದಿಷ್ಟ ದಿನಗಳ ಪೂಜೆಯ ನಂತರ
ಮೆರವಣಿಗೆಯ ಮಾಡಿ ಹತ್ತಿರದ ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವರು.
ಗಣೇಶ ಚತುರ್ಥಿಯು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರು ಖುಷಿಯಿಂದ ಆಚರಿಸುವ ಹಬ್ಬವಾಗಿದೆ .
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ