ಸುಮದ ಕಂಪು
ಪರಿಮಳದ ಕಂಪ ಸೂಸುತಿಹ ಸುಮವೇ
ನಿಸ್ವಾರ್ಥದ ಬದುಕಿಗೆ ನೀ ಆಗರದ ಗಣಿಯು
ಭೇದಭಾವ ತೋರದೆ ಗಂಧವ ಜಗಕೆ ಹರಡಿದೆ
ಇರುವ ಮೂರು ದಿನದಿ ನಗುನಗುತ ಬಾಳುವೆ.
ಮುಡಿದವರ ಖುಷಿಯಲಿ ತೇಲಿ ಸಾಗಿದೆ
ಸಾರ್ಥಕತೆಯ ಬದುಕ ನೀ ಆನಂದದಿ ನಡೆಸಿದೆ
ಪರರ ಉಪಕಾರಕೆ ಜೀವವ ನೀ ಸವೆಸಿದೆ
ಮನುಜಗೆ ಬದುಕ ಮಹತ್ವ ತಿಳಿಸ ಹೊರಟಿಹೆ.
ಇರುವಷ್ಟು ದಿನವು ಕುಗ್ಗಲಿಲ್ಲ ನಿನ್ನ ಸೌಗಂಧವು
ಜೀವನ ಮುದುಡಿದರೆ ಬೆಲೆ ಇಲ್ಲವೆಂಬ
ಸಾರವ ಮನುಕುಲಕೆ ಸುಲಭದಿ ಸಾರಿದೆ
ಸಂತಸದ ಕ್ಷಣಗಳ ಸೃಜಿಸುವ ಪಾಠವ ಕಲಿಸಿದೆ.
ಧರೆಯ ಸಿಂಗರಿಸಿ ನಾಕವ ಇಲ್ಲಿ ಸೃಷ್ಟಿಸಿದೆ
ಬಣ್ಣಬಣ್ಣದ ರಂಗಲ್ಲಿ ಜಗ ಬೆಳಗಿ ಮರೆಯಾದೆ
ಪರೋಪಕಾರದ ಧ್ಯೇಯ ಹೊತ್ತ ನಿನ್ನ ಗುಣವ
ಮನುಜ ಅನುಸರಿಸಿ ಕಲಿಯಬೇಕು ಒಂದು ಕ್ಷಣ.
- ಪುರುಷೋತ್ತಮ ಪೆಮ್ನಳ್ಳಿ, ಪಾವಗಡ ತಾ ತುಮಕೂರು ಜಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ