ಉಗಿಯುಗುಳುತ್ತ ಕೂಗು ಹಾಕುತ್ತ
ಎಚ್ಚರಿಕೆಯ ಗಂಟೆ ಬಾರಿಸುತ್ತ
ಬರುತಿದೆ ಮಲಗಿದ್ದವರ ಎಚ್ಚರಿಸುತ್ತ
ನಾ ಬರುತಿರುವೆ ಬಿಡಿ ದಾರಿ ಎನ್ನುತ್ತ
ಕಾಯುತಿರುವವರ ಎಚ್ಚರಿಸುತ್ತ
ಮತ್ತೇ ಉಗುಳುತಿದೆ ಕೂಗುತ್ತ
ಚುಕು ಬುಕು ಚುಕು ಬುಕು ಎನ್ನುತ್ತ
ಮನೆಯ ತೆರದಿ ವಾಸದ ನೆಲೆ
ಇರುವುದಿಲ್ಲ ಧಡಕ್ ಧಡಕ್ ಎನ್ನುವ ಸೆಲೆ
ರೋಗಿ ಪಯಣಿಸಲು ಹೇಳಿಮಾಡಿಸಿದ ನೆಲೆ
ಶೌಚಕೂ ಮೂತ್ರ ವಿಸರ್ಜನೆಗೂ ಇಲ್ಲಿದೆ ಬೆಲೆ
ಕುಳಿತುಂಡರೆ ಕುಟುಂಬಕ್ಕೊಂದು ನೆಲೆ
ಹಂಚಿ ತಿನ್ನುವರಿಲ್ಲಿ ಸೌಹಾರ್ದತೆಗೆ ಬೆಲೆ
ಮತ್ತೇ ಚುಕು ಬುಕು ಚುಕು ಬುಕು ಎನ್ನುವ ಅಲೆ
ನಿತ್ಯ ಶ್ರಮಿಕರಿಗೆ ಮಿತ ಬೆಲೆಯ ಆಶ್ರಯ
ದುಡಿವ ಕೈಗಳಿಗೆ ಆದಾಯದ ಆಲಯ
ನಿರ್ಗತಿಕರಿಗೆ ಉಚಿತ ಪಯಣದ ನಿಲಯ
ಭಿಕ್ಷುಕರಿಗೆಲ್ಲ ನಿತ್ಯ ಸ್ವರ್ಗದ ಆಶ್ರಯ
ತ್ರಿಲಿಂಗಿಗಳಿಗೊಂದು ಪುಣ್ಯದಾಶ್ರಯ
ಮೈಮರೆತು ಪಯಣಿಸಿದರೆ ಕಳ್ಳಕಾಕರಿಗಾಶ್ರಯ
ಆವ ಅರಿವಿಲ್ಲದೇ ತಿರುಗುತಿವೆ ರೈಲಿನ ಗಾಲಿಯ
ರೈಲಿನ ಬಂಡಿಯಂತೆ ಪಯಣಿಗರು ನಾವೆಲ್ಲ
ಹತ್ತಿಹೆವು ಬಾಳಪಯಣದಿ ಗುರಿ ಮುಟ್ಟಲು ಎಲ್ಲ
ಇರಿಸು ಮುರಿಸುಗಳ ಸುರುಳಿ ಸುತ್ತುತ ನಾವೆಲ್ಲ
ಎಲ್ಲಿ ಅಂತ್ಯವೋ ಅಲ್ಲಿ ಇಳಿಯುವೆವೆಲ್ಲ
ಉಳಿಯುವದೊಂದೇ ವಿನಿಮಯದ ಸವಿಬೆಲ್ಲ
ತೆರೆದುಕೊಳ್ಳುವುದು ನಮ್ಮ ಬಾಳಪುಟವೆಲ್ಲ
ಶಾಂತವಾಗುವುದು ಚುಕು ಬುಕು ಚುಕು ಬುಕು ಎಲ್ಲ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ