ಎಂಬುದು ಒಂದು ಅದ್ಭುತ ಪದ. ಪ್ರತಿ ಜೀವಿಗೂ ಪುಳಕ ತರುವ ಈ ಸಂಬಂಧ ಮನುಷ್ಯನಿಗಷ್ಟೆ ಅಲ್ಲದೆ ಪ್ರಾಣಿ,ಪಕ್ಷಿ ಕ್ರಿಮಿ,ಕೀಟ ಎಲ್ಲದಕ್ಕೂ ಒಂದು ರೀತಿಯ ವಿಶಿಷ್ಟ,ವಿಭಿನ್ನ ಅನುಭವ ತರುವ ಜೀವ.
ನಾವೆಷ್ಟೆ ಕಲಿತರೂ ಅಮ್ಮ ನಮ್ಮನ್ನ ಓದಿ ಬಿಡುತ್ತಾಳೆ,ನಾವೆಷ್ಟೆ ಬುದ್ದಿವಂತಿಕೆ ತೋರಿದರೂ ಅಮ್ಮನ ಸೂಕ್ಷ್ಮ ದೃಷ್ಟಿಗಿಂತ ಮಿತಿ ಮೀರಲಾಗುವುದೇ ಇಲ್ಲ.ಬಹುಷಃ ಅಮ್ಮನ್ನ ಕನ್ನಡಿ ಅನ್ನಬಹುದು ನಮ್ಮ ಎಲ್ಲಾ ವೇಷಗಳು ಅವಳೆದುರು ಸ್ಪಷ್ಟ.
ಎಷ್ಟೇ ಆಧುನಿಕ ತಂತ್ರಜ್ಞಾನ ಬರಲಿ ಅಮ್ಮನಂತೆ ಮನಸ್ಸನ್ನ ತಿಳಿದುಕೊಳ್ಳೋ ಯಾವ ತಂತ್ರವೂ ಬಂದಿಲ್ಲ.
ಅಮ್ಮನ ಬಗ್ಗೆ ಹೇಳ ಹೊರಟರೆ ಪುಸ್ತಕಗಳೇ ಸಾಲದು,ಪದಗಳಿಗೆ ನಿಲುಕದವಳವಳು.
ಪುಸ್ತಕ ಅಂದಾಕ್ಷಣ ನೆನಪಾಯ್ತು,ಈಗ ನಾನು ಬರೆಯುತ್ತಿರೋದು ಪುಸ್ತಕದ ಬಗ್ಗೆ ,*ಅಮ್ಮ* ಮಮತೆಯ ಕಡಲು,ಓದೋವಾಗಲೇ ಅಮ್ಮನ ಮಮತೆ ಮನದಲ್ಲಿ ಅಲೆ ಎಬ್ಬಿಸುತ್ತದೆ.
*ಹೆಗ್ಗದ್ದೆ ಪ್ರಕಾಶನ* ದಿಂದ ಮುದ್ದಾಗಿ ಮೂಡಿ ಬಂದಿರೋ ಒಂದು ವಾತ್ಸಲ್ಯ ಪೂರಿತ ಹೊತ್ತಿಗೆ *ಅಮ್ಮ*.ಕೆರಾಡಿ ಚಂದ್ರಶೇಖರ್ ಶೆಟ್ಟಿಯವರು ಅವರ ತಾಯಿ *ಕೃಷ್ಣಮ್ಮ* ನವರಿಗೆ ಭಕ್ತಿಪೂರ್ವಕವಾಗಿ ಅರ್ಪಣೆ ಮಾಡಿರುವ ಕೃತಿ ಇದು.
ಪ್ರತಿ ಪುಟದಲೂ ,ಪ್ರತಿ ಪದದಲ್ಲೂ,ಪ್ರತಿ ಅಕ್ಷರಗಳಲ್ಲೂ ಅಮ್ಮನೆಂಬ ಸಿಹಿಯ ಸವಿಯಿದೆ.೧೭೬ ಪುಟಗಳ ಈ ಕೃತಿಯಲ್ಲಿ ಬರಿ ಚಂದ್ರಶೇಖರ್ ಶೆಟ್ಟಿಯವರ ತಾಯಿಯ ಬಗ್ಗೆ ಬರೆದಿಲ್ಲ.ಅಲ್ಲಿ ಬರೆದಿದ್ದು ತಾಯಿ ಎಂಬ ದೇವರ ಬಗ್ಗೆ,ಪ್ರತಿಯೊಂದು ಮಗು ಓದಲೇಬೇಕಾದ ಈ ಕೃತಿಯ ಬಗ್ಗೆ ಹೇಳಲು ನಾನೇನು ವಿಮರ್ಶಕಿ ಅಲ್ಲ.ಆದರೂ ನನಗೆ ತಿಳಿದಷ್ಟು ಬರೆಯಬೇಕೆನಿಸಿದೆ,ತಪ್ಪಿದ್ದರೆ ಕ್ಷಮೆ ಇರಲಿ.
*ಅಮ್ಮ - ಮಮತೆಯ ಕಡಲು* ಕೃತಿಗೆ ಮುನ್ನುಡಿ ಬರೆದ *ಜಾನಕಿ ಬ್ರಹ್ಮಾವರ* ಅವರು ಹೇಳುವಂತೆ "ಇದನ್ನು ಓದುವವರು ಅಮ್ಮನ ಮಕ್ಕಳೆ ತಾನೇ? ಹಾಗಾಗಿ ಓದಿದವರ ಮನಮನವೂ ಅಮ್ಮಂದಿರೊಂದಿಗೆ ಬೆಸೆಯುತ್ತಾ,ಆಪ್ತತೆಯ ಎಳೆ ಎಳೆಯನ್ನು ಮೆಲುಕು ಹಾಕುತ್ತಾ ಸಾಗುತ್ತದೆ.ಅಮ್ಮ ಅವರವರ ಕಿವಿಯಲ್ಲಿ ಹಿತೋಕ್ತಿ ಉಸುರಿದಂತೆ ಭಾಸವಾಗುತ್ತದೆ."
ನಿಜ ,ಅಮ್ಮ ಎಲ್ಲರ ಜೀವನದಲ್ಲೂ ಬಹುಮುಖ್ಯ ಪಾತ್ರಧಾರಿ,ಅಮ್ಮನಿಲ್ಲದ ಮಗುವನ್ನು ಉತ್ತಮ ಗುಣಗಳೊಂದಿಗೆ ಬೆಳೆಸಿರುವ ಅದು ಅಪ್ಪನೊಬ್ಬನೆ ಬೆಳಿಸಿರುವುದು ತುಂಬಾ ವಿರಳ,
ಆದರೆ ಅಪ್ಪನಿಲ್ಲದೆ,ಮನೆಯವರೂ ಇಲ್ಲದೆ ಶಿಸ್ತಿನಿಂದ, ಸಂಸ್ಕಾರದಿಂದ ಅಮ್ಮನೊಬ್ಬಳೆ ಬೆಳೆಸಿದ ಎಷ್ಟೋ ಮಕ್ಕಳು ನಮ್ಮ ಕಣ್ಮುಂದೆ ಇರುವುದನ್ನು ನಾವು ಕಾಣಬಹುದು.
ಲೇಖಕರ ಮೊದಲ ಮಾತಲ್ಲೆ ಥಾಮಸ್ ಆಲ್ವಾ ಎಡಿಸನ್,ತೇನ್ ಸಿಂಗ್ ಅವರು ಅಮ್ಮನ ಬಗ್ಗೆ ನುಡಿದ ಹೆಮ್ಮೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ,ಜೊತೆಗೆ,ಕರ್ಣನಿಗೆ ಸಾಕು ತಾಯಿ ರಾಧೇಯಿಯ ಮೇಲಿದ್ದ ಪ್ರೀತಿ, ರಾಮನ ಮೇಲೆ ಕೌಸಲ್ಯೆಯ ಮಮತೆಯನ್ನು ಬಿಂಬಿಸಿದ್ದಾರೆ.
ಮುಂದಿನ ಪುಟ ತರೆದಾಗ ಹೆಗ್ಗದ್ದೆ ಪ್ರಕಾಶನದ ಪ್ರಕಾಶಕರಾದ *ಸಂದೀಪ್ ಶೆಟ್ಟಿ ಹೆಗ್ಗದ್ದೆ* ಇವರು ಪ್ರಕಾಶಕರ ಮಾತುಗಳಲ್ಲಿ "ಈ ಕೃತಿ ಪ್ರತಿಯೊಬ್ಬ ಹೆಣ್ಣು ಮಗಳ ಪಾಲಾಗಬೇಕು,ಪ್ರತಿ ಮನೆಯ ತಾಯಿಯ ಮಡಿಲು ಸೇರಬೇಕು ಎನಿಸಿತ್ತು.ಅಮ್ಮ ಎನ್ನುವವಳ ನಮ್ಮೆಲ್ಲರ ಜೀವದನಿ,ನಮ್ಮುಸಿರಿನ ಒಡಲು,ಅವಳು ಆತ್ಮವಿಶ್ವಾಸದ ಅನನ್ಯ ನಂಟು,ಅಷ್ಟೆ ಏಕೆ ನಮ್ಮ ವಾತ್ಸಲ್ಯದ ಒರತೆ,ಎಂದು ಲೇಖಕರು ಹೇಳುತ್ತಾರೆ" ಎನ್ನುತ್ತಾ ಅಮ್ಮನ ಬಗೆಗಿನ ತನ್ನ ಭಾವನೆಯನ್ನು ಬಿಚ್ಚಿಡುತ್ತಾರೆ,
ಈಗ ಅಮ್ಮನೆಂಬ ಮಮತೆಯ ಕಡಲಿನ ಅಲೆಗಳು ತೋಳು ಚಾಚಿ ನಮ್ಮನ್ನು ಅಪ್ಪಿಕೊಳ್ಳಲು ತಯಾರಾಗುತ್ತವೆ.
೨೧ ಶೀರ್ಷಿಕೆಯಡಿಯಲ್ಲಿ ಅಮ್ಮನ ವಾತ್ಸಲ್ಯದ ನವಿಲು ಗರಿ ಬಿಚ್ಚುತ್ತದೆ. ೧ *ನೆನಪಾಗಿ ಉಳಿದ ನನ್ನಮ್ಮ ಕೃಷ್ಣಮ್ಮ* ಎನ್ನುವ ತಲೆಬರಹದಡಿಯಲ್ಲಿ ಸಾಗುವ ಅಮ್ಮನ ಕುರಿತಾದ ಭಾವಪೂರ್ಣ ಮಾತುಗಳು ಒಮ್ಮೆ ಮಂದಹಾಸ ಮೂಡಿಸಿದರೆ,ಮತ್ತೊಮ್ಮೆ ಹುಬ್ಬೇರಿಸುವಂತೆ,ಮಗದೊಮ್ಮೆ ಕಣ್ಣಂಚು ತೇವಗೊಳ್ಳುವಂತೆ ಮಾಡುತ್ತಾ ಸಾಗುತ್ತದೆ,
*ಅಪಥ್ಯವೆನಿಸುವ ಅಮ್ಮನ ಮಾತು* (ಪುಟಸಂಖ್ಯೆ ೮೯) ಹಾಗೂ *ತುಂಟ ಮಕ್ಕಳು ಮತ್ತು ಅಮ್ಮನ ಸಹನೆ* (ಪುಟ ಸಂಖ್ಯೆ ೯೨) ವಿಷಯ ಇಟ್ಟುಕೊಂಡು ಬರೆದಿರುವ ಒಂದಷ್ಟು ವಿಷಯಗಳು ನಮ್ಮದೆ ಮಾತುಗಳಾಗಿವೆ.
ಅಮ್ಮನ ಬುದ್ದಿ ಮಾತುಗಳು ನಮಗೆ ಪಥ್ಯ ಎನಿಸುವುದೇ ಇಲ್ಲ.ಅಯ್ಯೋ ನಿಂದೇನಮ್ಮ ಯಾವಾಗ್ಲೂ ಅದೆ ಹೇಳ್ತೀಯಾ ಅನ್ನೋ ನಮಗೆ ಅವಳ ಕಾಳಜಿ ತಿಳಿಯುವುದು ಅವಳಿಂದ ದೂರ ಬಂದಾಗ ಅಥವಾ,ಅವಳೇ ದೂರಾದಾಗ.
ಇನ್ನು ತುಂಟ ಮಕ್ಕಳಿದ್ದರಂತೂ ಅಮ್ಮನ ಸಹನೆಗೂ ಪರೀಕ್ಷೆ ಎದುರಾಗತೊಡಗುತ್ತದೆ.
ಅಮ್ಮ ಒಂದು ಏಟು ಹೊಡಿತಾಳೆ,ಬೈತಾಳೆ ನಿಜ, ಆದ್ರೆ ಅದರಲ್ಲಿರೋ ಮಮತೆ ಆ ಮಗುವಿಗೂ ಗೊತ್ತಿರುತ್ತೆ,ಅಪ್ಪ ಬೈದಾಗ ಭಯದಿಂದ ದೂರ ನಿಲ್ಲೋ ಮಗು,ಅಮ್ಮ ಹೊಡೆದ್ರು ಮತ್ತೆ ಅವಳ ಬಳಿಯೇ ಹೋಗೋದು ಅವಳ ವಾತ್ಸಲ್ಯದ ಸೆಳೆತವಲ್ಲದೆ ಮತ್ತೇನು.
*ಮಕ್ಕಳ ಗ್ರಾಮದ ಮಮತೆಯ ಅಮ್ಮ* (ಪುಟ ಸಂಖ್ಯೆ ೧೩೫) ತಾಯೆಂದರೆ ಬರಿ ತಾನು ಹೊತ್ತು ಹೆತ್ತ ಮಕ್ಕಳಿಗಷ್ಟೆ ಅಲ್ಲ ,ಅವಳ ಮಮತೆಯ ಕಡಲಲ್ಲಿ ಬೇರೆ ಮಕ್ಕಳು ವಾತ್ಸಲ್ಯದ ಮುತ್ತುಗಳಾಗಿ ಇರುವುದನ್ನು ಹೇಳುತ್ತಾ, ಅಂತ ಮಹಾಮಾತೆ *ಎಸ್ ಒ ಎಸ್ ಮದರ್ ಗೀತಾ ಸಿಂಗ್* ಅವರ ಕುರಿತು ಒಂದಷ್ಟು ವಿಚಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ.
*ಮಹಾಮಾತೆಯರ ಸಾಹಸಗಾಥೆ* (ಪುಟ ಸಂಖ್ಯೆ ೧೪೧) ಇಲ್ಲಿ ಜಯಶ್ರೀ ಎಂಬಾಕೆಯ ಕಷ್ಟಕರವಾದ ಜೀವನ ಹಾಗೂ ಅವಳ ಸಾಧನೆಯನ್ನು ತಿಳಿಸಿದರೆ, ೧೪೫ ನೇ ಪುಟದಲ್ಲಿ ಜಪಾನ್ ನ ಇಶಿನೊಮಾಕಿ ಎಂಬ ನಗರದಲ್ಲಿ ನಡೆದ ಭೂಕಂಪನದಲ್ಲಿ ಕಣ್ಮರೆಯಾದ ಕೊಹೇರು ಎಂಬ ೧೨ ವರ್ಷದ ಮಗಳನ್ನು ಹುಡುಕುತ್ತ ಹೊರಟ ನವೋಮಿ ಹಿರಾತ್ಸುಕ ಎಂಬ ತಾಯಿಯೊಬ್ಬಳ ಬದುಕಿನ ಆರ್ದ್ರ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ ಲೇಖಕರು.ಓದುತ್ತಾ ಹೋದಂತೆ ಆ ತಾಯಿಯ ಸಂಕಟ,ಆ ಕರುಳಿನ ಸೆಳೆತ,ಎಲ್ಲವೂ ಕಣ್ಮುಂದೆ ಬಂದು ಕಣ್ಣಂಚಿನಿಂದ ಹನಿಯೊಂದು ಜಾರುವುದು ನಮಗೆ ತಿಳಿಯುವುದೇ ಇಲ್ಲ.
*ಮಗುವಿನ ಪೋಷಣೆಯಲ್ಲಿ ಅಮ್ಮನೊಡನೆ ಅಪ್ಪ* (ಪುಟ ಸಂಖ್ಯೆ ೧೬೦).ಮಕ್ಕಳ ಬೆಳವಣಿಗೆಯಲ್ಲಿ ಅಪ್ಪನ ಪಾತ್ರ ಮುಖ್ಯ ಎಂಬುದನ್ನು ಸಂಕ್ಷಿಪ್ತವಾಗಿ ಸುಂದರವಾಗಿ ನಮ್ಮ ಮುಂದಿಟ್ಟು ಲೇಖಕರು ಸಂಕಲನದ ಕೊನೆಯ ಹಂತಕ್ಕೆ ಬರುತ್ತಾರೆ,ಕೊನೆಯ ಪುಟಗಳಲ್ಲೂ ತಾಯಿ ದೇವತೆಗೆ ಗೀತನಮನ ಸಲ್ಲಿಸಿ ಓದಿಗೊಂದು ಪೂರ್ಣವಿರಾಮವನ್ನಿಡುತ್ತಾರೆ ಆದರೂ ನಮ್ಮೊಳಗಿನ ಅಮ್ಮನ ಮೇಲಿನ ಮಮತೆಯ ಕಡಲಿನ ಅಲೆಗಳು ಮಾತ್ರ ಹೃದಯದ ದಂಡೆಗೆ ಮೃದು ಸ್ಪರ್ಶ ನೀಡುತ್ತಲೆ ಇರುತ್ತದೆ.
ಮತ್ಯಾವುದೋ ಒಂದು ಪುಟದ ಒಂದಷ್ಟು ಸಾಲುಗಳು ಕಾಡುತ್ತದೆ.
ನನಗಂತೂ ಪ್ರತಿ ಪುಟದಲ್ಲೂ ನನ್ನಮ್ಮನೇ ಕಂಡಿದ್ದಂತೂ ಸುಳ್ಳಲ್ಲ.ಜೊತೆಗೆ ನಾನೂ ತಾಯಿ ಅದು ಒಂದು ಹೆಣ್ಣು ಮಗುವಿನ ತಾಯಿ ಎಂಬ ಹೆಮ್ಮೆಯೂ ಮೂಡುತ್ತದೆ.ಯಾಕೆ ಅಂತೀರಾ? ಗಂಡಿಗಿಂತ ಅಮ್ಮನನ್ನ ಹೆಣ್ಣು ಸ್ವಲ್ಪ ಜಾಸ್ತಿ ಅರ್ಥ ಮಾಡಿಕೊಳ್ಳ ಬಲ್ಲಳು.ಇದು ನನ್ನ ಅನಿಸಿಕೆ.ಯಾಕಂದರೆ ಅವಳು ತಾಯಿಯಾಗುವ ಸಮಯದಿ ಅಮ್ಮನ ನೋವು,ತಾಯಾದ ಮೇಲೆ ಮಗುವಿನ ಪಾಲನೆಯಲಿ ಅಮ್ಮ ಹೇಳುವ ಮಾತುಗಳು.ಪಾಪ ಆಗ ಅಮ್ಮ ಎಷ್ಟು ಕಷ್ಟ ಪಟ್ಟಿರಬಹುದು ಎಂದು ಅನ್ನಿಸದೆ ಇರದು.
ನಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಲ್ಲಿ ನಮ್ಮನ್ನು ಕಂಡುಕೊಂಡರೆ ನಮ್ಮಮ್ಮ ಪಟ್ಟ ಖುಷಿ,ಅವಳ ಪಾಡು,ಅವಳ ಜವಾಬ್ಧಾರಿಗಳು,ನಮ್ಮನ್ನೂ ಇದೇ ರೀತಿ ನೋಡಿಕೊಂಡಿದ್ರು ಎನ್ನುವ ಯೋಚನೆಗಳು ಬಂದೇ ಬರುತ್ತೆ.
ಅಮ್ಮನ ಬಗ್ಗೆ ಬರೆಯಲು ನಮ್ಮ ಇಡೀ ಜೀವನ ಸಾಲದು.ಅದಕ್ಕೆ ಇರಬೇಕು ಲೇಖಕರು ಅಮ್ಮನನ್ನು ಮಮತೆಯ ಕಡಲು ಎಂದಿರುವುದು.
ಕೊನೆಯದಾಗಿ ಓದುಗ ಮನಸಿಗೆ ಹೇಳುವುದೆಂದರೆ ಪ್ರತಿ ತಾಯಿಯೂ ಓದಬೇಕಾದ ಕೃತಿ.ಈಗೀನ ಕೆಲವು ಮಕ್ಕಳಿಗೆ ತಾಯಿ ,ತಂದೆಯ ಬಗ್ಗೆ ಗೌರವ ,ಪ್ರೀತಿ ಸ್ವಲ್ಪ ಕಡಿಮೆ ಆಗಿದೆ ಬಹುಷಃ *ಅಮ್ಮ-ಮಮತೆಯ ಕಡಲು* ಪ್ರತಿ ಮಗುವೂ ಓದಿದರೆ ತನ್ನ ತಾಯಿಯ ಮೇಲಿನ ಭಾವನೆಗಳನ್ನು ,ಅವಳ ಆಂತರ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
*......ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ,ಮೂರ್ತ ಪ್ರೇಮದೆಡೆಗೆ!*
*ಅಮ್ಮ ನಿನ್ನ ಎದೆಯಾಳದಲ್ಲಿ*
*ಗಾಳಕ್ಕೆ ಸಿಕ್ಕ ಮೀನು.....*
ಗುನುಗುತಿರಿ ಸುಮ್ಮನೆ ಹೀಗೆ ಅಮ್ಮನ ನೆನಪುಗಳೇ ಹಾಗೆ.
(ಅಮ್ಮ-ಮಮತೆಯ ಕಡಲು
ಕೃತಿಗಾಗಿ ಸಂಪರ್ಕಿಸಿ :ಸಂದೀಪ್ ಶೆಟ್ಟಿ ಹೆಗ್ಗದ್ದೆ.+91 96119 76709)
- ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ, ಮುಳ್ಳುಗುಡ್ಡೆ ಕುಂದಾಪುರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ