ಅಂದು ಯಾರೂ ಊಹಿಸಿರದ ದಿನ. ಬಿಳಿಯರಿಂದ ಸ್ವಾತಂತ್ರ್ಯ ಸಿಕ್ಕ ದಿನ. ಮಧ್ಯರಾತ್ರಿ ಗಂಟೆ ಹೊಡೆಯುತ್ತಿದ್ದಂತೆ ಇಡೀ ಜಗತ್ತು ಮಲಗಿರುವಾಗ ನಮ್ಮ ದೇಶದ ಮಹಾನ್ ವ್ಯಕ್ತಿಗಳು ಭಾರತಕ್ಕೆ ಚಲನಶೀಲತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುತ್ತಾರೆ. ಅವರ ಸಾಹಸ, ಪೌರುಷಗಳು ಇಂದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಬಹುಕಾಲ ಬ್ರಿಟಿಷರಿಂದ ಅದುಮಿಟ್ಟ ನಮ್ಮ ದೇಶದ ಚೇತನ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ. ಪರಕೀಯರ ವಶವಾಗಿದ್ದ ಆ ದುರಾದೃಷ್ಟದ ಕಾಲವನ್ನು ಮುಗಿಸಿದ್ದೇವಾದರೂ, ಪರಿಪೂರ್ಣವಾದ ಸ್ವಾತಂತ್ರ್ಯ ಇನ್ನೂ ಲಭಿಸಿಲ್ಲ ಎನ್ನುವುದು ನನ್ನ ಭಾವನೆ. ಇದು ಅಂದು ನಮಗಾಗಿ ಹೋರಾಡಿ ಮಡಿದವರ ತಪ್ಪಲ್ಲ. ಸಿಕ್ಕಿದ ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈಗಿನ ಜನರ ತಪ್ಪು.
ನಮ್ಮಲ್ಲಿ ಹತ್ತು ಹಲವಾರು ಘಟನೆಗಳು ಪ್ರತಿದಿನವೂ ಸಂಭವಿಸುತ್ತಿರುತ್ತವೆ. ಕೊಲೆ-ದರೋಡೆ, ಅತ್ಯಾಚಾರ ಇವೆಲ್ಲವೂ ಪ್ರತೀ ದಿನವೂ ಸಹಜವಾಗಿ ನಡೆಯುತ್ತಿವೆ ಎನ್ನುವುದನ್ನು ಮಾಧ್ಯಮಗಳಲ್ಲಿ ನೋಡುತ್ತೇವೆ. ಕೇಳುತ್ತೇವೆ.
ಇಂದಿಗೂ ರಸ್ತೆಗಳಲ್ಲಿ ಒಬ್ಬ ಹೆಣ್ಣು ಒಬ್ಬಂಟಿಯಾಗಿ ನಡೆಯುವಂತಿಲ್ಲ. ಮನೆಗೆ ಬೀಗ ಹಾಕಿ ಎಲ್ಲರೂ ಮನೆಯಿಂದ ಹೊರ ಹೋಗುವಂತಿಲ್ಲ. ಸ್ವಾತಂತ್ರ್ಯ ಸಿಗುವ ಮೊದಲು ಪರಕೀಯರು ದೌರ್ಜನ್ಯ ನಡೆಸುತ್ತಿದ್ದರು. ಈಗ ನಮ್ಮವರೇ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಮಗೆ ಮುಕ್ತಿ (ಸ್ವಾತಂತ್ರ್ಯ) ಸಿಕ್ಕಿರುವುದು ಬ್ರಿಟಿಷರಿಂದ ಮಾತ್ರ. ಆದರೆ, ಕಳ್ಳ-ಖದೀಮರಿಂದ, ಕಾಮುಕರಿಂದ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಬರೀ ಹೇಳಲು, ಬರೆಯಲು ಮತ್ತು ಹಬ್ಬ ಆಚರಿಸಲು ಮಾತ್ರ ನಾವು ಸ್ವತಂತ್ರರು.
ಓದುವ ಮಕ್ಕಳು ಇನ್ಯಾರದ್ದೋ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದಾರೆ. ಅವರಿಗೆಲ್ಲಿದೆ ಸ್ವಾತಂತ್ರ್ಯ..?!
ಅಂದು ನಮ್ಮ ಸ್ವಂತಂತ್ರ್ಯ ಬಿಳಿಯರ ಕೈಯಲ್ಲಿತ್ತು. ಇಂದು ಬಿಳಿಯ ವಸ್ತ್ರ ಧರಿಸಿ ಮೆರೆಯುತ್ತಿರುವ ರಾಜಕಾರಣಿಗಳ ಕೈವಶವಾಗಿದೆ. ಅವರು ನಡೆಸಿದಂತೆ ನಾವು ನಡೆಯಬೇಕು. ರೈತ ತಾನೇ ಬೆಳೆದ ಬೆಳೆಗೆ ತೃಪ್ತಿಯಾಗುವಂತ ಬೆಲೆ ಕಾಣುವುದು ಅಸಾಧ್ಯ ಎಂದಾದರೆ, ಈ ದೇಶದ ಬೆನ್ನೆಲುಬು ಅವನು.. ಅವನಿಗೆಲ್ಲಿದೆ ಸ್ವಾತಂತ್ರ್ಯ..??
ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ದೇಶ ಬೇರೆ ದೇಶಗಳಿಂದ ಮುಕ್ತವಾಗಿದೆ, ಸ್ವಾತಂತ್ರ್ಯ ಪಡೆದುಕೊಂಡಿದೆಯೇ ಹೊರತಾಗಿ ಇಲ್ಲಿನ ಜನತೆ ಪ್ರತೀ ಕ್ಷಣವೂ ಭಯದಿಂದ ಸಾಗುತ್ತಿದ್ದಾರೆ. ತಮ್ಮಂತೆ ತಾವು ಇರಲು ಸಾಧ್ಯವಾಗುತ್ತಿಲ್ಲ. ಅವರ ಸ್ವಾತಂತ್ರ್ಯವನ್ನು ಮೇಲಿನವರು (ಆಡಳಿತ ನಡೆಸುವವರು) ಕಿತ್ತುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು "ನಾವು ಸ್ವತಂತ್ರರು." ಎಂದು ಉದ್ದುದ್ದ ಭಾಷಣ ಮಾಡುತ್ತಾರೆ. ಅವರಿಗೆ ಸಿಕ್ಕ ಸ್ವಾತಂತ್ರ್ಯ ಅವರನ್ನು ನಂಬಿದ ಜನರಿಗೆ ಸಿಗುತ್ತಿಲ್ಲ. ಹಾಗಾದರೆ, ಅವರ ಖುಷಿಯಂತೆ ನಾವಿರುವುದು ಸ್ವಾತಂತ್ರ್ಯವೇ..?
- ಭಾರತಿ ಟಿ. ಗೌಡ, ಶಿರಸಿ (ಉ. ಕ.)
ಪ್ರಥಮ ಬಿ.ಎಸ್.ಸಿ. ವಿದ್ಯಾರ್ಥಿನಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
👍👌👌
ಪ್ರತ್ಯುತ್ತರಅಳಿಸಿThank you🙏
ಅಳಿಸಿ