ಭಾನುವಾರ, ಜನವರಿ 16, 2022

ಯಶಸ್ವಿಯಾಗಿ ನಡೆದ ಪುಸ್ತಕ ಓದು - ಸಂವಾದ ಸರಣಿ ೦೧ ಕಾರ್ಯಕ್ರಮ : ವಿಚಾರ ಮಂಟಪ ಸಾಹಿತ್ಯ ಬಳಗ

ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ವಿವೇಕಾನಂದರ ಚಿಂತನೆಗಳ ಓದು - ಸಂವಾದ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿತ್ತು. 
ಇದೇ ಸಂದರ್ಭದಲ್ಲಿ ವಿಚಾರ ಮಂಟಪ ಬಳಗದ ಪುಸ್ತಕ ಓದು - ಸಂವಾದ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಕಲಾವತಿ ಮಧುಸೂದನ ರವರು ವಿವೇಕಾನಂದರ ಚಿಂತನೆಗಳು ಮತ್ತು ಅವರು ಕಲಿಸಿದ ಮೌಲ್ಯಗಳು ಸರ್ವಕಾಲಕ್ಕೂ ಆದರ್ಶಪ್ರಾಯ ಮತ್ತು ಅನುಕರಣೀಯವಾದವು. ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ವಿವೇಕಾನಂದರನ್ನು ನೆನೆಸಿಕೊಳ್ಳುವ ಅವರ ಚಿಂತನೆಗಳನ್ನು ಓದುವ ಸಂವಾದಿಸುವ ಚರ್ಚಿಸುವ ಇಂತಹಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು. ಕೇವಲ ಚರ್ಚೆ ಸಂವಾದಕ್ಕೆ ನಿಲ್ಲದೆ ವಿವೇಕಾನಂದರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂತಹಾ ಕಾರ್ಯಕ್ರಮಗಳನ್ನು ಸಾರ್ಥಕಗೊಳಿಸಬೇಕು.

 ವಿವೇಕಾನಂದರ ಆತ್ಮವಿಶ್ವಾಸದ, ಯುವ ಜಾಗೃತಿಯ, ಶೋಧಕ ಪ್ರವೃತ್ತಿಯ, ಸತ್ಯಾನ್ವೇಷಣೆಯ ಮಾರ್ಗ ನಮ್ಮೆಲ್ಲರದ್ದು ಆಗಲಿ ಎಂದು ಹೇಳಿದರು. ಆಶಯ ನುಡಿಗಳನ್ನು ಆಡಿದ ಶ್ರೀ ರಾಕೇಶ್ ಎಂ. ರವರು ವಿಚಾರ ಮಂಟಪ ಸಾಹಿತ್ಯ ಬಳಗದ ಉದ್ದೇಶ ಮತ್ತು ಪುಸ್ತಕ ಓದಿನ ಮಹತ್ವವನ್ನು ವಿವರಿಸಿದರು. 

ಮುಖ್ಯ ಅತಿಥಿಗಳಾದ ಶ್ರೀ ರಾಜು ಸೂಲೇನಹಳ್ಳಿಯವರು ಮಾತನಾಡುತ್ತಾ ವಿವೇಕಾನಂದರು ತಮ್ಮ ಬಾಲ್ಯದಿಂದಲೇ ಹಲವಾರು ಪುಸ್ತಕಗಳನ್ನು ಓದಿ ಮನನ ಮಾಡುತ್ತಾ ಅವುಗಳ ಮಹತ್ವವನ್ನು ತಿಳಿದು, ಅವುಗಳ ಜ್ಞಾನ ಮತ್ತು ಅನುಭವದ ಮೂಲಕ ಅವರು ಬೆಳೆದು ಜಗತ್ತಿಗೇ ಬೆಳಕನ್ನು ನೀಡುವ, ಬೆಳಕಿನತ್ತ ಕರೆದೊಯ್ಯುವ ಕೆಲಸವನ್ನು ಮಾಡಿರುವರು. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದರದ್ದು. ಅವರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಸಂಸ್ಥೆಯು ಇಂದು ಹಲವು ರೀತಿಯ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಂತಹವರ ನೆನಪಿನಲ್ಲಿ ಈ ಕಾರ್ಯಕ್ರಮ ಮತ್ತು ಓದು - ಸಂವಾದ ಸರಣಿಯ ಉದ್ಘಾಟನೆ ನಿಜಕ್ಕೂ ಬಹಳ ಹೆಮ್ಮೆಯ ಕೆಲಸ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ವಾಮಿಯವರ ವೇದಾಂತ ಉಪನ್ಯಾಸ ಮಾಲೆ ಎಂಬ ಪುಸ್ತಕದ ಆಯ್ದ ಭಾಗಗಳನ್ನು  ಬೆಂಗಳೂರಿನ ಶ್ರೀಮತಿ ಅಂಬಿಕಾ, ಯಾದಗಿರಿಯ ಸೋಮೇಶ್ ಪ್ರಚಂಡಿ, ಹಾಸನದ ಭರತ್ ಕೆ.ಆರ್, ಚಿತ್ರದುರ್ಗದ ಶ್ರೀ ಶಿವಮೂರ್ತಿ ಟಿ.,  ಉತ್ತರ ಕನ್ನಡ ಜಿಲ್ಲೆಯ ಶ್ರೀಮತಿ ಸುಮಾ ಹಡಪದ, ರಾಮನಗರದ ಗೌತಮ್ ಗೌಡ ಮುಂತಾದವರು ಓದಿ ಚರ್ಚೆಗೆ ಒಳಪಡಿಸಿದ್ದು ವಿಶೇಷವಾಗಿತ್ತು. ವಿವೇಕಾನಂದರ ಚಿಂತನೆಗಳ ಮಹತ್ವ ಮತ್ತು ಪ್ರಸ್ತುತತೆಯನ್ನು  ಅರಿಯುವ ಪ್ರಯತ್ನ ಮಾಡಲಾಯಿತು.

ಶ್ರೀ ವರುಣ್ ರಾಜ್ ಜಿ. ವಿಚಾರ ಮಂಟಪ ಸಾಹಿತ್ಯ ವೇದಿಕೆ ಸಂಸ್ಥಾಪಕರು, ಇವರು ಮಾತನಾಡುತ್ತಾ ಒಂದು ವರ್ಷದ ಅವಧಿಯಲ್ಲಿ ಒಟ್ಟು ೨೫ ಸರಣಿ ಪುಸ್ತಕ ಓದು - ಸಂವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವ ಜನರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವ, ಪುಸ್ತಕ ಓದಿಗೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರುತ್ತಾ ಓದು ಅಭಿಯಾನದ ಸಂಚಾಲಕರಾದ ಶ್ರೀ ಗೌತಮ್ ಗೌಡ ಸೇರಿದಂತೆ ಸಹಕರಿಸಿದ  ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಫಯಾಜ್ ಅಹಮದ್ ಖಾನ್ ಅಧ್ಯಕ್ಷರು ಕರುನಾಡ ಸಾಹಿತ್ಯ ಪರಿಷತ್ತು ಇವರು ಮಾತನಾಡುತ್ತಾ ವಿವೇಕಾನಂದರ ಚಿಂತನೆಗಳ ಮಹತ್ವ, ಯುವ ಜನತೆಗೆ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ, ವಿವೇಕಾನಂದರ ಚಿಂತನೆಗಳ ಚರ್ಚೆ ಸಂವಾದ ಮತ್ತು ಅನುಸರಣೆಯ ಮಹತ್ವ ಮುಂತಾದವನ್ನು ವಿವರಿಸುತ್ತಾ ಭಾರತ ಹಲವು ಸಂತರ ಪಕೀರರ ಅವಧೂತರ ವೀರ ಸನ್ಯಾಸಿಗಳ ಪುಣ್ಯಭೂಮಿ. ವಿವೇಕಾನಂದರು ಇಡೀ ವಿಶ್ವದಾದ್ಯಂತ  ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಮಾಡಿದವರು. 
ಯಾವುದೇ ಭೇಧ ಭಾವ ವಿಲ್ಲದೇ ದೀನರ ದಲಿತರ ಬಡವರ ಹಸಿದವರ ಸೇವೆಗಾಗಿ ತಮ್ಮ ಜೀವನವನ್ನು ಸವೆಸಿದವರು. ನಮಗೆ ನಮ್ಮ ಧರ್ಮ, ನಮ್ಮ ಜಾತಿ ಎಂಬ ಶ್ರೇಷ್ಠತೆಯ ವ್ಯಸನ ಇರಬಾರದು. ಸನಾತನವೆಂದರೆ ಸರ್ವವನ್ನು ಒಳಗೊಳ್ಳುವುದು. ಹೀಗೆ ಎಲ್ಲರನ್ನೂ ಒಳಗೊಳ್ಳುವ ಎಲ್ಲರನ್ನೂ ಪ್ರೀತಿಸುವ ಆಧರಿಸುವ ಧರ್ಮ ನಮ್ಮದಾಗಬೇಕಿದೆ. ಆದರ್ಶ ಸಮಾಜ ಮತ್ತು ಆದರ್ಶ ಬದುಕಿಗೆ ವಿವೇಕಾನಂದರ ಚಿಂತನೆಗಳು ಮತ್ತು ಅವರ ಜೀವನ ಇಂದಿಗೂ ಮಾದರಿ. ಸಮಾನತೆ,  ಸ್ವಾತಂತ್ರ್ಯ, ಪ್ರೀತಿ, ಶುದ್ಧಭಕ್ತಿ, ರಾಷ್ಟ್ರಪ್ರೇಮಗಳಿಗೆ ಮತ್ತೊಂದು ರೂಪವೇ ಸ್ವಾಮಿ ವಿವೇಕಾನಂದರು. ಇಂತಹವರನ್ನು ಕೇವಲ ಒಂದು ಚಿಹ್ನೆಯಾಗಿ ಅಥವಾ ಒಂದು ಧರ್ಮಕ್ಕೆ ಸೀಮಿತವಾಗಿಸಿದ್ದು ದುರಂತ. 

ವಿವೇಕಾನಂದರು ಮತ್ತು ಅವರ ಚಿಂತನೆಗಳು ವಿಶ್ವದ ಆಸ್ತಿ. ವಿಶ್ವಮಾನವತೆಯೇ ಅವರ ಚಿಂತನೆಗಳ ಸತ್ವ. ಇಂತಹಾ ಮಹಾತ್ಮರ ಚಿಂತನೆಗಳ ಓದು ಸಂವಾದ ಪ್ರಸ್ತುತ ಸಂಧರ್ಭಕ್ಕೆ ಅತ್ಯವಶ್ಯಕವಾದದ್ದು ಎಂದು ಹೇಳುತ್ತಾ  
ಒಟ್ಟು ಕಾರ್ಯಕ್ರಮದ ಮಹತ್ವವನ್ನು ವಿವರಿಸಿ ಕಾರ್ಯಕ್ರಮದ ಸಾರ್ಥಕತೆಯನ್ನು ಸ್ಪಷ್ಟಪಡಿಸಿದರು. 

ಡಾ.ನಾಡಶ್ರೀ ಬಾ.ನಂ.ಲೋಕೇಶ್, ಶ್ರೀಮತಿ ಭಾಗ್ಯಮ್ಮ, ಹರೀಶ ಪಿ.ಎ., ಲಕ್ಷ್ಮೀ ಕೆ.ಬಿ.,  ರಾಜ್ ಕುಮಾರ್.ವಿ, ಶ್ರೀ ಶ್ರೀರಾಮ ದಿವಾಣ, ಶ್ರೀಮತಿ ರಾಧ ಸಿ.ಪಿ, ಶ್ರೀಮತಿ ಶಾಂತಾ ಜಯಾನಂದ, ಶಿಲ್ಪ ಜಗದೀಶ್, ಆದರ್ಶ ಕೆ.ಎಸ್. ರಜನಿಕಾಂತ ಎಚ್.ಪಟಗಾರ, ಸುಧಾಮ ಎಸ್, ವಿಕಾಸ್ ಕನ್ನಸಂದ್ರ,  ಮುಂತಾದ ೩೦ ಕ್ಕೂ ಹೆಚ್ಚು ಜನ  ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

- ವರದಿ : ಗೌತಮ್ ಗೌಡ.

(ಪುಸ್ತಕ ಓದು ಚರ್ಚೆಯಲ್ಲಿ ಭಾಗವಹಿಸುವ, ಪುಸ್ತಕ ಓದುವ ಆಸಕ್ತಿ ಉಳ್ಳವರು ದಯಮಾಡಿ ವಾಟ್ಸಪ್ ಮೂಲಕ 9902649766 ಸಂಪರ್ಕಿಸಿ ಅಭಿಯಾನಕ್ಕೆ ನೊಂದಣಿ ಮಾಡಿಕೊಳ್ಳಿ)


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

3 ಕಾಮೆಂಟ್‌ಗಳು:

  1. ಪ್ರಸ್ತುತಕ್ಜೆ ಅಗತ್ಯವಿರುವ ಕಾರ್ಯಕ್ರಮವಿದು.ಯುವಜನತೆ ತಮ್ಮ ಗುರಿಬಿಟ್ಟು ರಾಜಕೀಯ ಲಾಲಸೆಗಳಿಗೆ ಧರ್ಮದ ಸಂಮೋಹನಕ್ಕೆಬಲಿಯಾಗುತ್ತಾ ಮನುಷ್ಯತ್ವದಿಂದ ಬಹುದೂರಕ್ಕೆ ಪೈಣಿಸುತ್ತಿದ್ದಾರೆ.ದೇಶದ ಬೆನ್ನೆಲುಬಾಗ ಬೇಕಿದ್ದ ಯುವಜನತೆಯ ಬೆನ್ನೇ ಬಾಗಿಹೋಗಿದೆ.ಇಂತಹ ಸ್ಥಿತಿಯೊಳಗೆ ಅವರನ್ನು ಪ್ರಜ್ಞಾವಂತ ನಾಗರಿಕನಾಗಿ ಮಾಡಬೇಕಾದ ಸ್ವಾಮಿ ವಿವೇಕಾನಂದರ ಚಿಂತನೆಗಳ ಓದು ಚರ್ಚೆ ಸಂವಾದ ಈ ನಿಟ್ಟಿನಲ್ಲಿ ಪ್ರಸ್ತುತವೇ ಸರಿ.

    ಪ್ರತ್ಯುತ್ತರಅಳಿಸಿ
  2. ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್, ಇತ್ತೀಚಿನ ದಿನಗಳಲ್ಲಿ ಓದು ಎಂಬುದು ಕಡಿಮೆ ಆಗಿದೆ ಅದರಲ್ಲು ಬಿಡುವಿಲ್ಲದ ಸಮಯದಿ ಓದಿಗಾಗಿಯೇ ಸಮಯ ಮೀಸಲಿಡುವುದು ಅತೀ ವಿರಳ. ಅದರಲ್ಲೂ ಇಂತಹ ಕಾರ್ಯಕ್ರಮ ಮಾಡಲು ಮುಂದಾಗಿರುವುದು ತುಂಬಾ ಸಂತಸ ತಂದಿದೆ "ಪುಸ್ತಕ ಓದು ಸಂವಾದ ಕಾರ್ಯಕ್ರಮ" ಬರಿ ಕಾರ್ಯಕ್ರಮ ಅಲ್ಲ ಓದಿ ವಿಚಾರ ಧಾರೆಯನ್ನು ತಿಳಿಯಲು ಒಂದೊಳ್ಳೆ ಅದ್ಭುತ ಕಲ್ಪನೆಯಾಗಿದೆ ಇದರಿಂದ ನಾವು ಸ್ವಲ್ಪ ಸಮಯವನ್ನು ಓದಲು ಮೀಸಲಿಟ್ಟು ಕಲಿಯಲು ಒಂದೊಳ್ಳೆ ಸುವರ್ಣಾವಕಾಶ ಎಂಬುದು ನನ್ನ ಅಭಿಪ್ರಾಯ ಆಗಿದೆ.

    ✍️ಭರತ್ ಕೆ.ಆರ್.
    ನೀಲ ರಂಗಸ್ವಾಮಿ.
    ಎಂಜಿನಿಯರಿಂಗ್ ವಿದ್ಯಾರ್ಥಿ.
    ಕಾರೇಕೆರೆ,ಹಾಸನ ಜಿಲ್ಲೆ.

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...