ಗುರುವಾರ, ಜನವರಿ 27, 2022

ಕೊಡಗಿನ ಗೌರಮ್ಮ (ಲೇಖನ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ

ಗೌರವಸ್ತ ಗೌರವಸ್ಮಿತ ಗೌರವದಿ ಗೌರಿ| ಮಿಂಚಿದಳೊ ಬಾನಂಚಿಗೆ ಕಾವೇರಿಯ ಕುವರಿ–ದಾ.ರಾ.ಬೇಂದ್ರ
ಜಲದೇವತೆ ವನದೇವತೆ ಒಂದೆಡೆಯಲಿ ಸೇರಿ
ಬಿನದಿಸುತಿಹ ಹೊಳೆಮಡುವಿಗೆ ನೀನೀಸಲು ಹಾರಿ
ತಾಯೊಡಲನು ಕೂಸಾಟಕೆ ತಾಯ್ಮಡಲಿಗೆ ಬೀರಿ
ತೀರಲು, ಜಡವಾಗಳೆ ಕಾವೇರಿಯೆ ತಂಪೇರಿ?
ನೆನೆದರೆಯೇ ನಾ ನಡುಗುವೆ ಇದು ಆದುದೆಂತೋ?
ಎಲ್ಲಿಂದೀ ಎಳೆ ಜೀವಕೆ ಸಾವೆಂಬುದು ಬಂತೋ?
ಈ ಸುಂದರ ಸಾಲುಗಳನ್ನು ಖಂಡಿತಾ ನೀವೆಲ್ಲಾ ಕೇಳಿಯೇ ಇರುತ್ತೀರಿ. ಈ ಮನ ಮಿಡಿಯುವ ಸಾಲುಗಳನ್ನು ಬರೆದವರು ನಮ್ಮೆಲ್ಲರ ನೆಚ್ಚಿನ ಶಬ್ಧ ಗಾರುಡಿಗ ದಾ.ರಾ ಬೇಂದ್ರೆಯವರು. ಅವರಿಂದ ಮನಮಿಡಿಯುವ ಈ ಸುಂದರ ಸಾಲುಗಳು ಹೊರಹೊಮ್ಮಿದ್ದು ಚಿಕ್ಕ ವಯಸ್ಸಿಗೆ ಕೊಡಗಿನ ಗೌರಮ್ಮನವರು ದುರಂತ ಸಾವನಪ್ಪಿದ್ದರಿಂದ. ನಿಜ ಗೌರಮ್ಮನವರ ನೆಚ್ಚಿನ ಹವ್ಯಾಸಗಳಲ್ಲಿ ಟೆನಿಸ್ ಆಡುವುದು ಹಾಗೂ ಈಜುವುದಾಗಿತ್ತು. ಇವರು ತಮ್ಮ ೨೭ ನೇ ವಯಸ್ಸಿನಲ್ಲಿ ಮನೆಯ ಹತ್ತಿರದ ಹೊಳೆಯ ಬಳಿ ಈಜಲು ಹೋದಾಗ ಸುಳಿಗೆ ಸಿಕ್ಕು ಅಕಾಲಿಕ ಮರಣವನ್ನಪ್ಪಿದರು. ಆಗ ಈ ಕವಿತೆಯನ್ನು ರಚಿಸಿದ ದಾ.ರಾ.ಬೇಂದ್ರೆಯವರು ‘ಕಂಬನಿ’ ಸಂಕಲನದಲ್ಲಿ ಇದನ್ನು ದಾಖಲಿಸಿದ್ದಾರೆ.
ಕನ್ನ್ನಡದ ಪ್ರಥಮ ಕತೆಗಾರ್ತಿಯಾದ ಇವರು ಜನಿಸಿದ್ದು ೧೯೧೨ ರಲ್ಲಿ ಮಡಿಕೇರಿಯಲ್ಲಿ. ಗೌರಮ್ಮನವರು ವಕೀಲ ಎನ್.ಎಸ್.ರಾಮಯ್ಯ ಹಾಗೂ ಶ್ರೀಮತಿ ನಂಜಕ್ಕನವರ ಕೊನೆಯ ಮಗಳು. ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದರು. ೧೯೨೮ ರಲ್ಲಿ ಬಿ.ಟಿ. ಗೋಪಾಲಕೃಷ್ಣ ಜೊತೆ ಇವರ ವಿವಾಹವಾಗಿ ಶ್ರೀಮತಿ ಬಿ.ಟಿ.ಕೃಷ್ಣ ಎಂದು ಬದಲಾದರು. ಉತ್ತಮ ವಾಗ್ಮಿಗಳಾದ ಕೊಡಗಿನ ಗೌರಮ್ಮನವರು ರಾಜಕೀಯ ಹಿನ್ನಲೆಯ ಕುಟುಂಬದವರಾಗಿದ್ದರಿAದ ಆಗ ನ್ಯಾಷನಲ್ ಕಾಂಗ್ರೇಸ್ ಪರ ಕೆಲಸ ಮಾಡಿದ್ದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡ ಹರಿಜನೋದ್ದಾರಕ್ಕಾಗಿ ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಆಗ ಗೌರಮ್ಮನವರಿಗೆ ಕೇವಲ ೨೧ ವರ್ಷ ವಯಸ್ಸು. ಅತ್ಯಂತ ಚಿಕ್ಕ ವಯಸ್ಸಿಗೆ ಇವರಲ್ಲಿ ಉತ್ತಮ ವ್ಯಕ್ತಿತ್ವ ರೂಪಗೊಂಡಿತ್ತು. ಇದರೊಂದಿಗೆ ಅನೇಕ ಸಾಹಿತ್ಯ ವ್ಯಕ್ತಿಗಳ ಒಡನಾಟವೂ ಇವರಿಗಿತ್ತು. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಕೃತಿ ರಚಿಸುತ್ತಿದ್ದ ಪದ್ಮಾವತಿ ರಸ್ತೋಗಿ ಇವರ ಆತ್ಮೀಯರಾಗಿದ್ದರು. ಆರ್ ಕಲ್ಯಾಣಮ್ಮನವ ಒಡನಾಡಿಯಾದ ಇವರು ಬೇಂದ್ರೆ, ಮಾಸ್ತಿ, ರಾಜರತ್ನಂ, ದ.ಬಾ.ಕುಲಕರ್ಣಿ ಮದಲಾದವರೊಂದಿಗೆ ಸಾಹಿತ್ಯದ ಕುರಿತು ಸಂವಾದ ನಡೆಸುತ್ತಿದ್ದರು. ಇವರೆಲ್ಲ ಇವರ ಮನೆಗೆ ಬಂದು ಹೋಗುತ್ತಿದ್ದ ಆತ್ಮೀಯರೂ ಆಗಿದ್ದರು. ಯಕ್ಷಗಾನ ತಾಳೆಮದ್ದಳೆಯ ಜೊತೆಗೆ ಕುಮಾರವ್ಯಾಸ ಮತ್ತು ಉಮರ್ ಖಯಾಂ ಕಾವ್ಯದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡ ಇವರು ಜನಪದ ಗೀತೆಗಳನ್ನು ಸಂಗ್ರಹಿಸುತ್ತಿದ್ದರು. 
ಮದುವೆಯ ನಂತರ ಇವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ೧೯೨೧ ರಿಂದ ೧೯೩೯ ರವರೆಗೆ ಇವರು ರಚಿಸಿದ ಸಣ್ಣ ಕತೆಗಳು ಸ್ತ್ರೀ ಸಂವೇದನೆಗಳ ಪ್ರತಿಬಿಂಬದಂತೆ ಮೂಡಿಬಂದಿವೆ ಇವರ ಪ್ರತಿಯೊಂದು ಕತೆಯೂ ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಉದಾಹರಣೆಗೆ “ವಾಣಿಯ ಸಮಸ್ಯೆ”ಯಲ್ಲಿ ವಿದವೆಯೊಬ್ಬಳು ಪುರುಷ ಸಮಾಜದಿಂದ ಅನುಭವಿಸುವ ಮುಜುಗರ ಸಂಕಟಗಳನ್ನು ತುಂಬಾ ಚನ್ನಾಗಿ ಹಿಡಿದಿಟ್ಟಿದ್ದಾರೆ. “ಅವಳ ಭಾಗ್ಯ” ಕಥೆಯಲ್ಲಿ ಗುಮಾಸ್ತರ ಮಗಳು ಪಾರೂಗೆ ಖರ್ಚಿಲ್ಲದ ಮದುವೆ ಕ್ಷಯರೋಗಿಯೊಂದಿಗೆ ಆಗುತ್ತದೆ. ಅವನ ರೋಗ ತಿಳಿಯದ ಇತರ ಹೆಂಗಸರಿಗೆ ಪಾರುವಿನದು ಬಾಗ್ಯ ಎನಿಸುತ್ತದೆ. “ಅಪರಾದಿ ಯಾರು?” ಇದರಲ್ಲಿ ಪುಟ್ಟ ಹುಡುಗಿ ಪಾರ್ವತಿ ತಾನು ಮನೆಗೆಲಸ ಮಾಡುತ್ತಿರುವ ಒಡೆಯನಿಂದಲೆ ಅತ್ಯಾಚಾರಕ್ಕೊಳಗಾಗಿ ಅವನಿಂದಲೇ ಹೊರದೂಡಲ್ಪಡುತ್ತಾಳೆ ತನ್ನವರು ತನ್ನ ಧರ್ಮ ತನಗೆ ಬಹಿಷ್ಕಾರ ಹಾಕಿದಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ ಆಗ ತನನ್ನು ರಕ್ಷಿಸಿ ಬಾಳುಕೊಡಲು ಮುಂದಾದ ಇಸ್ಲಾಂ ಧರ್ಮವನ್ನು ಆಕೆ ಸ್ವೀಕರಿಸುತ್ತಾಳೆ. “ಒಂದು ಪುಟ್ಟ ಚಿತ್ರ” ಇದರಲ್ಲಿ ಬಾಲ ವಿದವೆ ಶಾಂತ ಮೋಸಗಾರ ಅತ್ತಿಗೆಯ ಅಣ್ಣನ ಬಲೆಗೆ ಬಿದ್ದು ಅವನ ಕಾಮದಾಟದಲ್ಲಿ ಗರ್ಭಧರಿಸಿ ಅವನು ಕೈಬಿಟ್ಟಾಗ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ‘ಕೆಲವು ಕಾಗದಗಳು’ ಈ ಕಥೆಯಲ್ಲಿ ಕಾನ್ವೆಂಟಿನಲ್ಲಿ ಓದುತ್ತಿದ್ದ ಬಾಲಕಿ ಪ್ರಭಾ ಕುಮಾರಿ ತನ್ನ ಪ್ರಣಯಿಯ ಸಾವಿನಿಂದ ಹತಾಶಳಾಗಿ ಯಾರಿಗೂ ಹೇಳದೆ ಶಾಲೆ ಬಿಟ್ಟು ಹೋಗುತ್ತಾಳೆ.’ ಆಹುತಿ’ ಕತೆಯಲ್ಲಿ ಬಡ ತಂದೆಯ ಮಗಳು ಶಾಂತಿ ಮುದುಕನೊಬ್ಬನ ಮೂರನೇ ಹೆಂಡತಿಯಾಗಬೇಕಾದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಹಾಗೆ ಇವರ ಇನ್ನೊಂದು ಕತೆ ಪುನರ್ವಿವಾಹದಲ್ಲಿ ವಿಧುರನೊಬ್ಬನ ಮಡದಿ ಸತ್ತು ಆರು ತಿಂಗಳಾಗಿರುವುದಿಲ್ಲ ತಾನು ಮೋಹಿಸಿದ ಹುಡುಗಿಯನ್ನು ಮದುವೆಯಾಗಲು ಹತೊರೆಯುತ್ತಾನೆ. ಆ ಹುಡುಗಿಯೂ ವಿದವೆ ಅಂತ ತಿಳಿದಾಗ ಮದುವೆಯಾಗಲು ನಿರಾಕರಿಸುತ್ತಾನೆ. “ಒಂದು ಚಿತ್ರ” ಇದರಲ್ಲಿ ಪ್ರೇಮದ ಅಗತ್ಯತೆಯನ್ನು ರೋಹಿಣಿ ಪಾತ್ರದ ಮೂಲಕ ಚಿತ್ರಿಸಿದ್ದಾರೆ, ‘ಮರದ ಬೊಂಬೆ’ಯಲ್ಲಿ ಬೋಂರ್ಡಿಂಗ್ ಸ್ಕೂಲಿನ ಹುಡುಗಿ ಮೇಷ್ಟನ್ನು ಮದುವೆಯಾಗುವ ಶೈಲಾ ಪಾತ್ರ. ‘ಪ್ರಾಯಶ್ಚಿತ’ ದಲ್ಲಿ ತನ್ನ ತಂದೆಯ ಮನಸ್ಸಿಗೆ ವಿರುದ್ದವಾಗಿ ಮದುವೆಯಾಗುವ ಮೂರ್ತಿ, ನಂತರ ಇವರ ‘ಯಾರು?’ ಸಣ್ಣ ಕತೆಯಲ್ಲಿ ಗಂಡನಿಂದ ತಿರಸ್ಕಾರಕ್ಕೆ ಒಳಗಾದ ಹುಡಿಗಿಯೊಬ್ಬಳು ಅಳುತ್ತಾ ಕೂರದೆ ಕಲಾವಿದೆಯಾಗಿ ಜೀವನವನ್ನು ಕಟ್ಟಿಕೊಳ್ಳುತ್ತಾಳೆ. ಹಾಗೆ ಇವರ ಮುನ್ನ ದಿನ,ಹೋಗಿಯೇ ಬಿಟ್ಟಿದ್ದ, ಕಂಬನಿ, ಚಿಗುರು, ಸಂನ್ಯಸಿ ರತ್ನ ಇವೆಲ್ಲ ಇವರ ಅಧ್ಭುತ ಕತೆಗಾರಿಕೆಗೆ ಹಿಡಿದ ಕನ್ನಡಿಯಾಗಿವೆ. ಸಾಹಿತ್ಯದಲ್ಲಿ ಹೆಚ್ಚಾಗಿ ಅಂದಿನ ಕಾಲಗಟ್ಟದ ಒಟ್ಟಾರೆಯಾಗಿ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳಾದ ವೈದವ್ಯ, ವರದಕ್ಷಣೆ, ಪ್ರೇಮ, ವಿರಹ, ಪ್ರೇಮ ವೈಫಲ್ಯ, ಸ್ತಿçà ಶೋಷಣೆಯ ಹಲವು ಮುಖಗಳು, ಕೌಟುಂಬಿಕ ವ್ಯವಸ್ಥೆ, ಮಾನವೀಯ ಸಂಬಂಧ, ಅನಕ್ಷರತೆ, ಜಾತಿಸಂಘರ್ಷ ಹೀಗೆ ಹಲವಾರು ಸಮಾಜಮುಖಿಯಾದ ವಿಷಯಗಳ ಕಡೆಗೆ ಬೆಳಕು ಚೆಲ್ಲುತ್ತಾ ಹೊರಡುತ್ತಾರೆ. ತುಂಬಾ ಗೌರವಯುತವಾದ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ತಮ್ಮ ಬದುಕಿನ ಗಟ್ಟಿ ಅನುಭವಗಳನ್ನೆ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಬೇಂದ್ರೆಯವರು ಮೇಲ್ಕಾಣಿಸಿದ ಕವಿತೆಯಲ್ಲಿ ಮುಂದುವರೆದು ಇವರ ಬಗ್ಗೆ ಈ ರೀತಿ ಹೇಳಿದ್ದಾರೆ. “ಗೌರವಸ್ತ ಗೌರವ ಸ್ಮಿತ ಗೌರವದಿ ಗೌರಿ| ಮಿಂಚಿದಳೊ ಬಾನಂಚಿಗೆ ಕಾವೇರಿಯ ಕುವರಿ” ಎಂದು ಹೊಗಳಿದ್ದಾರೆ. ಅಲ್ಲದೆ ಗೌರಮ್ಮನವರ ಕಂಬನಿ ಮತ್ತು ಚಿಗುರು ಎನ್ನುವ ಕೃತಿಗಳಿಗೆ ಇವರೇ ಮುನ್ನುಡಿಯನ್ನೂ ಬರೆದಿದ್ದರೆ. ಕೊಡಗಿನ ಗೌರಮ್ಮನವರು ಜಮಖಂಡಿಯಲ್ಲಿ ಹಾಗೂ ಮಡಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ
 ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...