ಶತ-ಶತಮಾನದ ಸರಹದ್ದು ರಣಹದ್ದೊಂದು
ಪುಡಿ-ಪುಡಿಗಟ್ಟಿ ಎಲ್ಲೆ ಮೀರಿ ಬೆಳೆದಿದೆ ಪುಗಸೆಟ್ಟೆ
ಪ್ರಾಚೀನ ಅಜ್ಜನಿಂದ ಕಣ್ಣೀರು ಕೊಡಿ ಹರಿದಿದ್ದು
ಮೊಮ್ಮಗನ ಆತ್ಮಬಲದಲೊಂಚುರು ಸಂಭ್ರಮ
ದಾಖಲೆ ಆಧಾರ ಸ್ಥರವಿನ್ಯಾಸ ಇಲ್ಲದ ಬದುಕು //
ದುರ್ಗಮ್ಮನ ಹೇಳಿಕೆಗೂ ಕೋನಮ್ಮನ ಬ್ಯಾಟಿಗೂ
ವೀರಭದ್ರನ ಅಗ್ನಿಕುಂಡಕ್ಕೂ ದಾಖಲೆ ಇಟ್ಟವರ್ಯಾರು
ತೊಗಲುಗೊಂಬೆ ದೊಡ್ಡಾಟ ಬಯಲಾಟ ನೋಡಿ
ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಮ್ಮನಾಗುತ್ತಾರೆ
ಉಳ್ಳವರ ಲಂಫಟತನಕ್ಕೆ ಬಲಿಯಾದ ಮುಗ್ಧರೆಲ್ಲರೂ //
ಎಲುಬು ಕಡಿದು ತುಪ್ಪವನ್ನು ತಿಂದು ಕೊಬ್ಬಿದವರು
ಎಲುಬು ತೊಗಲು ಬಡಿಕಿಟ್ಟ ಜೀವ ತೆಗೆದವರು
ಕೌರ್ಯ ದೌರ್ಜನ್ಯ ಅಂತಸ್ತಿನ ಹಮ್ಮಿನೊಳಗೆ
ಬಾಯಿಗೆ ಮೊಸರು ಒರೆಸಿದವರ ಯಾದಿಯೂ ಇದೆ
ಪಥ ಬದಲಾದರೂ ಪಂಥ ಪರಿವರ್ತನೆ ಆಗದು //
ಲೆಕ್ಕ ಸಿಗದ ಶೋಷಣೆ ಮುನಿಸು ಮರೆತಿವೆ
ಹಲವು ಮುಖವಾಡ ಕತ್ತಲದಾರಿಯಲ್ಲಿ ನಿತ್ಯ
ಕಣ್ಣು ಕಿವಿ ನಾಲಿಗೆಗೆ ಗ್ರಹಣ ತಾಗಿ ಸೋತಿವೆ
ಅಂತರಂಗದ ವಂಚನೆ ವರಸೆ ನೆಡೆಸೆ ಇದೆ
ಪ್ರಚಂಡ ಗೆಲುವಿನ ಬೆಳಕು ಸಾಕ್ಷಿಯಾಗಲು ಗೆದ್ದಿದೆ //
ಅಳಿಸಲಾಗದ ಗಾಯಗಳಿಗೆ ಉಪ್ಪು ಸುರಿದು
ಜಿಡ್ಡು ಮೌಡ್ಯ ಕೆಳ ಪಂಕ್ತಿಯ ಆಚರಣೆಗಳೆಂದು
ಸರ್ವವ್ಯಾಪಿ ಸದಾಶಿವನ ಮರೆತು ಗತಿಗೆಟ್ಟು
ಅಲ್ಪ ತೃಪ್ತಿಗೆ ಆಸೆ ಹೊತ್ತು ತಿರುಗುತ್ತ ಮತಿಗೆಟ್ಟು
ಹಸುವಿನ ವೇಷದಡಿ ವ್ಯಾಘ್ರತೆ ತಾಂಡವಾಡಿದೆ //
- ಸದಾಶಿವ ಎಂ. ಮರಡಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ