ಎಲ್ಲಡೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂಬ ಅಬ್ಬರದ ಪ್ರಚಾರದ ನಡುವೆ ತುಂಬಾ ಹಿಂದುಳಿದ ಒಂದು ಹಳ್ಳಿಯ ಜನ ಕೋವಿಡ್ ವ್ಯಾಕ್ಸಿನ್ ನನ್ನು ನಿರಾಕರಿಸಿದ್ದರು. ಅದು ಎಷ್ಟೋ ತಿಂಗಳ ನಂತರ ಬೆಳಕಿಗೆ ಬಂದಾಗ ಸರ್ಕಾರವು ಆಸ್ಪತ್ರೆಯವರ ಮೇಲೆ ತಿರುಗಿ ಬಿತ್ತು. ಏಕೆಂದರೆ ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಆಸ್ಪತ್ರೆ, ಪಂಚಾಯಿತಿ, ಶಾಲೆ ಇವರಿಗೆ ಜವಾಬ್ದಾರಿಯನ್ನು ಕೊಟ್ಟಿತ್ತು. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೂಶಕೂಡಾ ಫೋನ್ ಸಂಪರ್ಕಕ್ಕೆ ಸಿಗದ ಇನ್ನೂರು ಜನರಿರುವ ಒಂದು ಕಾಡಿನೊಳಗಿನ ಹಾಡಿ ಕಣ್ತಪ್ಪಿನಿಂದಲೋ,,ಅಜಾಗರೂಕತೆಯಿಂದಲೋ ತಪ್ಪಿಸಿಕೊಂಡಿತ್ತು.
ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಲ್ಲಿನ ವೈದ್ಯರಿಗೆ ಕೇಳಲಾಗಿ ಅವರ ಕೈಕೆಳಗೆ ಅತ್ಯಂತ ಕಿರಿಯ ಸಹಾಯಕರಾದ 'ಆಶಾವರ್ಕರ್' ನ್ನು ಬೊಟ್ಟು ಮಾಡಿತ್ತು. ಆಸ್ಪತ್ರೆಯ ಒಂದು ತಂಡ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿತ್ತು. ಅದರ ಮೊದಲ ಮತ್ತು ಕೊನೆಯ ಹಂತ ' ಆಶಾಕಾರ್ಯಕರ್ತರು ' ನಿರ್ವಹಿಸುತ್ತಿದ್ದರು.. ಅದರಲ್ಲಿ ಸೀತಾ ಎನ್ನುವ ಕಾರ್ಯಕರ್ತೆ ಆ ಹಾಡಿಗೆ ನಿಯೋಜನೆಗೆ ಒಳಪಟ್ಟ ತಂಡದ ಮುಖ್ಯಸ್ಥೆ . ವಾಹನಗಳ ಸೌಲಭ್ಯ ಇಲ್ಲದ ಹಾಡಿಯೊಳಗೆ ಹೊಕ್ಕುವುದೆಂದರೆ ಸುಲಭದ ಮಾತೇ...?! ಒಳಬಂದ ಸೀತಾ ಅಧಿಕಾರಿಗಳ ಮೊಗವನ್ನು ನೋಡುತ್ತಾ ತಲೆತಗ್ಗಿಸಿ ನಿಂತಳು. ಅಧಿಕಾರಿಗಳು ಅವಳನ್ನು ದುರುಗುಟ್ಟಿ ನೋಡುತ್ತಾ,,ರೇಗಲು ಶುರುಮಾಡಿದರು. ಸೀತಾ ಭಯದಿಂದ ನಡೆದ ಘಟನೆಯನ್ನು ಹೇಳಲು ಪ್ರಾರಂಭಿಸಿದಳು.
ದೇಶದಾದ್ಯಂತ ವ್ಯಾಕ್ಸಿನ್ ಹಾಕಲು ತರಾತುರಿಯಿಂದ ಸರ್ಕಾರ ಒಪ್ಪಿಗೆ ಕೊಟ್ಟಮೇಲೆ ಆಸ್ಪತ್ರೆಯವರು ಎಲ್ಲಾ ಕೆಲಸಗಳನ್ನು ತಮಗೆ ಸಂಬಂಧಪಟ್ಟವರಿಗೆಲ್ಲಾ ಹಂಚಿತ್ತು. ಮೊದಲು ನಲವತ್ತರ ಮೇಲ್ಪಟ್ಟ ಜನರನ್ನು ಪಟ್ಟಿಮಾಡಬೇಕಾಗಿದ್ದುದರಿಂದ ಎಲ್ಲಾ ಕಡೆ ಮಳೆ,ಬಿಸಿಲು,ಚಳಿಯೆನ್ನದೆ ತಿರುಗಿ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲೇ ಬೇಕಿತ್ತು. ಸೀತಾ ಮತ್ತು ಅವಳ ಗೆಳತಿಯಿಬ್ಬರೂ ಕಾಡಿನ ಹಾದಿಯ ಹಾಡಿಯಕಡೆಗೆ ಹೆಜ್ಜೆಹಾಕಿದರು. ಮೊದಲೇ ಹೇಳಿ ಕೇಳಿ ಹಾಡಿಯ ಹಾದಿ ಎಂದರೆ ಸ್ವಲ್ಪ ಭಯವೇ. ಆದರೂ ಧೈರ್ಯ ಮಾಡಿಕೊಂಡು ಹೋಗುತ್ತಿದ್ದ ಇವರ ಮುಂದೆ ' ದೊಪ್ಪೆಂದು ' ನಾಲ್ಕು ಜನ ಜಿಗಿದು ನಿಂತರು. ಸ್ನಾನ ಕಾಣದ, ಒರಟುಮೈಯ, ಚಿತ್ರ ವಿಚಿತ್ರ ಅವತಾರಗಳ, ಬಲಿಷ್ಠ ಪುರುಷಸಿಂಹಗಳನ್ನು ನೋಡಿ ಸೀತಾ ಮತ್ತು ಅವಳ ಗೆಳತಿ ಅವಕ್ಕಾದರು..ಎದೆಹಿಡಿದುಕೊಂಡು, ಭಯದಿಂದ ನಡುಗುತ್ತಾ ನಿಂತೇ ಬಿಟ್ಟರು.
ಹಾಡಿಯ ಜನ ಒರಟರಿರಬಹುದು. ಆದರೆ ವಿಚಾರಗಳನ್ನು ಸ್ವಲ್ಪ ಸ್ವಲ್ಪ ಹಾಗೇ ತಿಳಿಯುತ್ತಿದ್ದರು. ನಗರಪ್ರದೇಶಗಳಿಂದ ನೂರಾರು ಕಿ.ಮೀ.ಗಳ ಅಂತರವಿದ್ದರೂ, ಟಿ.ವಿ.ಅಲ್ಲಿನ ಅವರ ವಿಚಾರ ವಿನಿಮಯಕ್ಕೆ ಸಾರಥ್ಯವಹಿಸಿತ್ತು. ಶರವೇಗದಿಂದ ನುಗ್ಗುತ್ತಿದ್ದ ಕೋವಿಡ್ ನ ವಿಷಯ ದಂಗಪಡಿಸಿತ್ತಾದರೂ...ಯಾರನ್ನೂ ಹತ್ತಿರ ಬಿಟ್ಟುಕೊಳ್ಳಬಾರದು. ಅದೂ ನಗರವಾಸಿಗಳನ್ನಂತೂ ಸಮೀಪಕ್ಕೆ ಬಿಟ್ಟುಕೊಳ್ಳಬಾರದೆಂದೂ..ಯಾರೂ ಇಲ್ಲಿಂದ ನಗರ ಪ್ರದೇಶಗಳನ್ನು ಮುಟ್ಟವಂತಿಲ್ಲವೆಂಬ ನಿರ್ಧಾರಕ್ಕೆ ಬದ್ಧರಾಗಿ ನಡೆದುಕೊಳ್ಳೋಣ..ನಮ್ಮ ಹಾಡಿಗೆ ಯಾವ ದುರ್ಗತಿಯೂ ಬಾರದಿರಲೆಂದು ಬೇಡುತ್ತಾ ವನದೇವಿಯನ್ನು ಪೂಜಿಸುತ್ತಿದ್ದರು. ವಿಷಯ ಹೀಗಿರುವಾಗ ಇವರು ಬಂದಿದ್ದು ನೋಡಿ.."ನಮ್ಮೂರಿಗೆ ಯಾವುದೇ ನಗರ ಪ್ರದೇಶದವರ ಸಂಪರ್ಕ ಇಲ್ಲ. ಯಾರೂ ಬರುವಂತಿಲ್ಲ. ಹಾಗೊಂದು ವೇಳೆ ಬಂದರೂ ನಾವು ಯಾವ ಔಷಧ, ಇಂಜೆಕ್ಷನ್ ತಗೊಳೋದಿಲ್ಲ. ನಮಗೆ ನಮ್ಮ ಪಾಡಿಗೆ ಇರಲು ಬಿಟ್ಟು ಬಿಡು. ಇಲ್ಲವಾದರೆ ಜೀವ ಸಹಿತ ಹೋಗುವುದಿಲ್ಲ " ಎಂದು ಭಲ್ಲೆಯಿಂದ ನೆಲಕುಟ್ಟಿ ನಿಂತ ಬಿರುಸಿಗೆ ಹೆದರಿ ಜಾಗ ಕಾಲಿಮಾಡಿದ ಸೀತ ಅಂದು ಆಸ್ಪತ್ರೆಗೆ ಸುಳ್ಳು ಮಾಹಿತಿಯನ್ನು ದಾಖಲಿಸಬೇಕಾಗಿತ್ತು. ನಗರದ ರೋಗವನ್ನೇ ಕಾಣದ ಹಾಡಿಯ ಜನ ಹಾಯಾಗಿ ಹಾಡಿಕೊಂಡು ಇದ್ದವರಿಗೆ , ಒಂದು ಗರಬಡಿದಂತೆ ಬಂದೆರಗಿದ ಸುದ್ದಿ ಎಂದರೆ ಆ ಹಾಡಿಯ ಮಗನೊಬ್ಬ ದೂರದ ಊರಲ್ಲಿ ಕೊರೋನಗೆ ಬಲಿಯಾದ ಸುದ್ದಿ. ಸತ್ತು ಹೋದ ಮಗನ ಹೆಣ ಪಡೆಯಲು ಹೋದಾಗ, ಸಂಬಂಧಿಕರಿಗೆ ಕೋವಿಡ್ ಲಸಿಕೆಯ ವಿಚಾರಣೆ ಸಮಯದಲ್ಲಿ "ತಾವು ಯಾವುದೇ ಲಸಿಕೆ ಪಡೆದಿಲ್ಲ,,,ನಮ್ಮೂರಿಗೆ ಯಾರೂ ಬಂದಿಲ್ಲ...ವಿಷಯ ಗೊತ್ತಿಲ್ಲ "ಎಂಬ ಮುಗ್ಧಜನರ ಉತ್ತರ ಕೇಳಿ ಹೌ ಹಾರುವ ಸರದಿ ವಿಚಾರಕರದ್ದು. ಫೋಟೋ, ಸಂಭಾಷಣೆ ಸಮೇತ ಎಲ್ಲಾ ಕಡೆ ವೈರಲ್ ಆದ ಸುದ್ಧಿ ...ಎಲ್ಲಾ ಅಧಿಕಾರಿಗಳ ಕುತ್ತಿಗೆಗೆ ಬಂದು ಇಲ್ಲೀವರೆಗೆ ಎಳೆತಂದಿತ್ತು.
ಸೀತಾ ಮಾಡಿದ ಒಂದು ಸಣ್ಣ ಕೆಲಸ ದೇಶದಾದ್ಯಂತ ಹರಿದಾಡಿ ತಾನಿಷ್ಟು ಕೆಟ್ಟದಾಗಿ ಬಿಂಬಿತಳಾಗುವೆ ಎನ್ನುವ ವಿಷಯ ಅಂದು ಗೊತ್ತಾಗಿದ್ದರೆ ಇಷ್ಟು ರದ್ಧಾಂತ ಆಗುತ್ತಿರಲಿಲ್ಲ. ಹಾಡಿ ಹೈದರ ಮೇಲೆ ಎಲ್ಲಿಲ್ಲದ ರೋಷ ಉಕ್ಕಿ ಹರಿಯಿತು. ಸೀತಾ ಅಂದೇ ಈ ಸುದ್ದಿಯನ್ನು ಅಧಿಕಾರಿಗಳಿಗೆ ಮುಟ್ಟಿಸಿದ್ದರೂ ಇಷ್ಟು ಆಗುತ್ತಿರಲಿಲ್ಲ..ಆದರೀಗ...?
ಕೆಲವು ಪ್ರಾಣಿಗಳು,,,ರಕ್ಕಸರೂ,,,ಎಂಟೆದೆ ಬಂಟರೂ ಕಾಲಿಡಲು ನಡುಗುವ ಕಡುಗಪ್ಪು ಕತ್ತಲೊಳಗಿನ ಕಾಡಿನ ಹಾದಿ ಅತೀ ಭಯಂಕರ ಎಂದು ಎಲ್ಲಾ ಅಧಿಕಾರಿಗಳಿಗೂ ತಿಳಿದದ್ದು ಅಂದೇ...ಇನ್ನೂ ಹೆಣ್ಣು ಮಗಳು ಸೀತಾಳ ಕಥೆ ಏನಾಗಿರಬೇಡವೆಂದು ಎಲ್ಲರ ಹೃದಯ ಮರುಗಿತು...' ಆಶಾ ಕಾರ್ಯ ಕರ್ತೆ'ಯ ಕೆಲಸವೇನಿದ್ದರೂ ನಗರದ ಸುತ್ತಮುತ್ತಲಿನ ಹಳ್ಳಿಗಳಿಗೆ ಸೀಮಿತಗೊಳಿಸುವಂತೆಯೂ,,,ಮತ್ತೆಂದೂ ಇಂತಹ ದುರ್ಗಹಾದಿಯೊಳಗೆ ಇಂತಹ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಬಳಸದಂತೆಯೂ ಆದೇಶ ನೀಡಿದ ಅಧಿಕಾರಿಗಳು,,,,ಸೀತಾಳ ಬಳಿ ಕ್ಷಮೆ ಕೋರಿದರು. ತಾವು ತಿಳಿದ ತಪ್ಪಿಗೆ ಪ್ರಮಾಣೀಕರಣದ ಸಾಕ್ಷಿ ಅವರ ಕಣ್ಣು ತೆರೆಸಿತ್ತು..ಕೈ ಕೆಳಗೆ ಕೆಲಸಮಾಡುವ ಇಂತಹ ಸಹಾಯಕರ ಬಗ್ಗೆ ಸರ್ಕಾರ ಎಚ್ಚೆತ್ತು ಕೊಂಡು ಆಶಾಕಿರಣದಂತಿರುವ ' ಆಶಾಕಾರ್ಯ ಕರ್ತೆ' ಯರ ಬಗ್ಗೆ , ಅವರ ಜೀವನದ ಸಂಘರ್ಷಗಳ ಬಗ್ಗೆ ಒಂದು ದೊಡ್ಡ ಸವಲತ್ತುಗಳ ಮಾರ್ಗಸೂಚಿಯನ್ನು ಹೊರತರುವ ಆಶಾವಾದಿಯ ಭರವಸೆಯನ್ನು ನೀಡುತ್ತಾ ಮುನ್ನಡೆದರು.
ಅಧಿಕಾರಿಗಳ ದಂಡು ಆ ಹಾಡಿಗೆ ಮುತ್ತಿಗೆ ಹಾಕಿ....ಸಾಯುತ್ತಿರುವವರ ಚಿತ್ರಣ ತೋರಿಸಿ ಇಡೀ ಹಾಡಿಗೆ ಮುನ್ನೆಚ್ಚರಿಕೆಗಾಗಿ ಕೋವಿಡ್ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಯಿತು..
ಸೀತಾ ತನ್ನ ತಲೆಯ ಮೇಲೆ ಬಂದಿದ್ದ ದೊಡ್ಡ ಗಂಡಾಂತರ ಕಳೆಯಿತೆಂದು..ಅಧಿಕಾರಿಗಳ ಮಾತಿಗೆ ಖುಷಿಪಡುತ್ತಾ ..ಕಣ್ಣಂಚಿನ ನೀರನ್ನು ತುಸು ಮೆಲ್ಲಗೆ ಒರೆಸಿಕೊಂಡಳು.
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ