ಮಾಳಿಗೆ ಮನೆ ಮುಂದೆ ಮುತ್ತು ಕೇರುವ ಹೆಣ್ಣು
ತವರುಮನೆ ಗಂಡನ ಮನೆಗೂ ನೀನೇ ಕಣ್ಣು
ನಿನ್ನನು ನಿಂದಿಸುವರ ಬಾಯಲ್ಲಿ ಬರೀ ಮಣ್ಣು
ಅಣ್ಣ ತಮ್ಮರಿಗೆ ಹಾರೈಸುತ ಸರಿಯಾಗಿ ಉಣ್ಣು
ಮರಿಬ್ಯಾಡ ನವಮಾಸ ಒಡಲೊಳು ಹೊತ್ತವಳನ್ನ
ನೆನಪುಹಾರ ಬ್ಯಾಡವ್ವ ಮಗಳೆ ಒಡಹುಟ್ಟಿದವರನ್ನ
ನೆನಸಿಕೊಳ್ಳವ್ವ ಅರೆಹೊಟ್ಟೆ ಉಂಡು ಬೆಳಸಿದ ಅಪ್ಪನ್ನ
ಅವ್ರುಕಷ್ಟದಲ್ಲೆ ಸಿರಿವಂತ ಮನಿಗಿ ಧಾರೆಯೆರೆದರು ನಿನ್ನ
ಸಿರಿಯು ಬಂದಾಗ ನೀನು ಹಿಗ್ಗಲೂ ಬ್ಯಾಡವ್ವ
ಸಂಕಷ್ಟಗಳ ಸರಪಳಿ ಸುತ್ತಿದರು ಕುಗ್ಗ ಬೇಡವ್ವ
ನಡು ಓಣ್ಯಾಗ ನಿಂತು ಎಂದು ನಾಗಬಾರದವ್ವ
ಚಿತ್ತಿಟ್ಟು ಕೇಳು ಕರಿಸೀರಿ ಯಾವತ್ತು ಉಡಬ್ಯಾಡವ್ವ
ಅತ್ತೆ ಮಾವರನ್ನು ಅಪ್ಪ ಅವ್ವನಂತೆ ನೋಡಿಕೊಳ್ಳವ್ವ
ನಾದಿನಿ ಮೈದುನರನ್ನ ಅಣ್ಣ ತಂಗಿಯಂತೆ ಕಾಣವ್ವ
ಪತಿಯೆ ಪರದೈವವಂತ ಹಿರ್ಯಾರು ಹೇಳ್ಯಾರವ್ವ
ಅವನ ಅಣತಿಯಂತೆ ಸಾಗಿದರೆ ಬಾಳು ಬಂಗಾರವ್ವ
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಅಂದರೆ ಗಂಡನೇ ಪರದೈವವೆಂದು ನಂಬಿಕೊಂಡು ಅವನೇಳಿದ್ದನ್ನೇ ಪಾರಮಾರ್ಥಿಕ ಸತ್ಯವೆಂದು ಅನುಸರಿಸಿ, ಅವನಡಿಯಾಳಾಗಿ ಜೀವಿಸುವುದೇ ಹೆಣ್ಣಿಗೆ ಶೋಭೆ ಎನ್ನುವುದು ನಿಮ್ಮ ಕವಿತೆಯ ಕೊನೆಯ ಸಾಲುಗಳ ಸಾರಾಂಶವೇ?? ಹೌದಾದರೆ ನಾ ಆ ಹಿರಿಯರ ಮಾತನ್ನು ಖಂಡಿತ ಒಪ್ಪುವುದಿಲ್ಲ. ಕಾರಣ ನಿಮಗರ್ಥವಾಗಿದೆ ಅಂತ ಭಾವಿಸ್ತೇನೆ.
ಪ್ರತ್ಯುತ್ತರಅಳಿಸಿ