ಭಾನುವಾರ, ಏಪ್ರಿಲ್ 17, 2022

ಕನ್ನಡದಲ್ಲಿ ಅರ್ಥಾಲಂಕಾರಗಳು (ಲೇಖನ) - ಎಸ್. ಸುದರ್ಶನ್. ಸಾಹಿತಿಗಳು.

ಕನ್ನಡ ಭಾಷೆಯ ಬಂಗಾರದ ಬೆಡಗಿನ ಬಗ್ಗೆ ಯಾರು ಎಷ್ಟು ಬರೆದರೂ ಮುಗಿಯೋದೇ ಇಲ್ಲ. ಅಷ್ಟಿದೆ ಬರೆಯೋಕೆ! ಕನ್ನಡಮ್ಮನ ಸೌಂದರ್ಯವಂತೂ ವರ್ಣಿಸಲಸದಳ.ಅಂತರಂಗದಷ್ಟೇ ಬಹಿರಂಗವೂ ಅಷ್ಟೇ ಹೆಮ್ಮೆ ಪಡಬಹುದಾದ ಮನೋಹರತೆ.  ಅದಕ್ಕೇ ಏನೋ ಕನ್ನಡಿಗರೆಂಬ  ಹೆಮ್ಮೆ ಎಲ್ಲ ಕನ್ನಡಿಗರಿಗೆ! ಅದೇ ಭಾಷೆಯ ಹಿರಿಮೆ. ಯಾವುದೇ ಭಾಷೆ ಇರಲಿ.ಭಾಷೆಯೆಂದರೇನೇ ಹಾಗೆ.ಅಭಿವ್ಯಕ್ತಿ ಮಾಧ್ಯಮದ ಜತೆಗೆ ವಾಗ್ಸಂಪತ್ತಿನ ಅದ್ಭುತ ಆಗರವೆಂದೇ ಹೇಳಬೇಕಾಗುವುದು. ನಮ್ಮ ಮುದ್ದು ಕನ್ನಡ ಭಾಷೆಯಂತೂ ಕಾಲಕಾಲಕ್ಕೆ ಸಾಹಿತ್ಯ ಜಂಗಮರ,ಸೃಜನಶಾಲೀ ಸಾಹಿತ್ಯ ಸೃಷ್ಟಿಕರ್ತರ, ಕಾಲಕಾಲದ ಪದಪ್ರಸಾದನಪ್ರಿಯರ ಪದಪೋಷಣಾ ಮೋಹದಿಂದಾಗಿ ಕಸ್ತೂರಿ ಕನ್ನಡವು ತುಷ್ಟಿ,ಪುಷ್ಟಿ ಪಡೆದುಕೊಂಡಿದ್ದು ಕನ್ನಡಿಗರ ಹೆಮ್ಮೆಯ ವಿಷಯವೇ. ಯಾವ ಆಭರಣದ ಅಲಂಕಾರವೂ ಇಲ್ಲದೆಯೂ ಮನೋಹರ ರೂಪದಿಂದ ಕಂಗೊಳಿಸಿಬಿಡುವ ಕನ್ನಡ ನುಡಿಗಳಿಗೆ ಪದವಿಶೇಷಗಳೂ ಅರ್ಥವಿಶೇಷಗಳೂ ಅಲಂಕಾರದ ವಸ್ತುಗಳಾಗಿ ಆಲಂಗಿಸಿಕೊಂಡುಬಿಟ್ಟರೆ  ಇನ್ನದರ ಸೌಂದರ್ಯ ಇನ್ನೆಷ್ಟು ಹೆಚ್ಚಿಬಿಡಬಹುದು ಊಹೆ ಮಾಡಿಕೊಳ್ಳಿ‌! ಅಂಥಾ ಊಹಾಪ್ರಕ್ರಿಯೆಯಲ್ಲೂ ಸುಖವಿರುವುದನ್ನು ಗುರ್ತಿಸಬಹುದು. ಅಂಥಾ ಸುಖವನ್ನೇ ಅವರ್ಣನೀಯ ಸುಖದ ವ್ಯಾಖ್ಯೆಗೆ ಪ್ರಾಜ್ಞರು ಸೇರಿಸಿದ್ದು‌.ವಾಸ್ತವದಲ್ಲಿ ಯಾವುದೇ ಒಂದು ಭಾಷೆಯ ಸರ್ವತೋಮುಖ  ವಿಕಾಸವಾಗಬೇಕಾದರೆ ಹೊಸ ಪದಗಳ ಆವಿಷ್ಕಾರದ ಜತೆಗೆ ಲಭ್ಯವಿರುವ ಪದಗಳಿಗೆ ಅರ್ಥವಿಶೇಷಗಳೂ ಹೆಚ್ಚಾಗಬೇಕು. ಜತೆಗದು ಅನರ್ಥಹೇತುವೆನಿಸಬಾರದು. ಕೆಲವೊಮ್ಮೆ ಹಾಸ್ಯಕ್ಕೆ ಹೇಳಿದ ಮಾತುಗಳೂ ಅರ್ಥಗರ್ಭಿತ ಅನ್ನಿಸಿಕೊಂಡು ಸಹಜವಾಗಿಯೇ ಬಳಕೆಯನ್ನು ಪಡೆದುಕೊಂಡು ಜನಪ್ರಿಯವಾಗಿಬಿಡಬಹುದು. ಒಟ್ಟಿನಲ್ಲಿ ಭಾಷಿಗರು ಹೆಚ್ಚಾದಂತೆ ಭಾಷಾಪ್ರಯೋಗಗಳೂ ಹೆಚ್ಚಾಗುವುದು ಸಹಜವೇ ತಾನೇ? ಭಿನ್ನ ಭಾಗಗಳಲ್ಲಿ  ಭಿನ್ನ ಜನರ ವಿಭಿನ್ನ ಅಭ್ಯಾಸಗಳು, ತನ್ಮೂಲಕ ಭಿನ್ನ ಭಾವವಿಶೇಷಗಳು ಭಾಷಾಪ್ರಯೋಗಗಳಿಂದಾಗಿ  ಭಿನ್ನ ಪದಗಳಿಗೆ ವಿಭಿನ್ನವೆನಿಸುವ  ಅರ್ಥವಿಶೇಷಗಳನ್ನು ನೀಡುವ ಚಮತ್ಕಾರೀ ವಿಶೇಷವು ಎಲ್ಲ ಭಾಷೆಗಳಲ್ಲಿದ್ದಂತೆ ಕನ್ನಡ ಭಾಷೆಯಲ್ಲೂ ಅಪಾರವಾಗಿಯೇ ಇದ್ದು ಅರ್ಥಶ್ರೀಮಂತಿಕೆಯಲ್ಲೂ        ಹಿಂದೆಬಿದ್ದಿಲ್ಲ. ಹೀಗಾಗಿ ಮಾತಿಗನು ಮನಬಿಚ್ಚಿ ಮುದದಿಂದ ತೆರೆದಿಟ್ಟ ಮನದ ಮಾತುಗಳು ನವನವಾರ್ಥಗಳನ್ನು ನೀಡುವ ನವನೀತವಾದಾಗ ಅಂಥಾ ಪದ ಪ್ರಯೋಗಗಳು ಸಂತಸದ ಸೃಷ್ಟಿಕರ್ತವೆನಿಸಿ ಪುನರ್ಪ್ರಯೋಗಗಳನ್ನು ಪಡೆದುಕೊಳ್ಳುತ್ತಾ ಜನಜನಿತವೂ ಜನಪ್ರಿಯವೂ ಆಗಿಬಿಡುತ್ತವೆ. ಅಂಥಾ ಕೆಲವು ನವನೀತಗಳನ್ನು ಮಥಿಸಿ ಮುದ್ದಿಸಲು ಕೆಲವು ಜನಪ್ರಿಯ ಕನ್ನಡ ಪದಗಳನ್ನು ಅವುಗಳ ಅಂತರಂಗದ ಅರ್ಥವಿಶೇಷಗಳನ್ನು ಚರ್ವಣ ಮಾಡಿ ,ಮತ್ತೆ ಮತ್ತೆ ಕನ್ನಡದ ಮನಗಳನ್ನು ಮುದಗೊಳಿಸುವುದರಲ್ಲಿ ಯಶಸ್ವಿಯಾಗಿವೆ. 
ಕನ್ನಡದ ಸಾಮಾನ್ಯ ಭಾಷಾಬಳಕೆಯಲ್ಲಿ ಕೆಲವು ಪದಗಳಂತೂ ಜನಪದರ ಮಾತಿನ ವರಸೆಯಿಂದಲೇ ಕಾಲಕಾಲದ ವಿಶೇಷಗಳಾಗಿ ಜನ್ಮ ತಳೆದಿದ್ದು ತಮ್ಮ ವಾಸ್ತವಾರ್ಥವನ್ನು ತ್ಯಜಿಸಿ ಹೊಸ ಹೊಳಪಿನಿಂದ ಹೊಳಯಿಸಿ ಫಲಗೊಂಡ ಹೊಸ ಹೊಳಪಿನಿಂದ ಇಚ್ಛಿತ ನವಾರ್ಥದಿಂದ ವಿಶೇಷ ಸಂದರ್ಭಗಳಲ್ಲಿನ ಬಳಕೆಗಾಗಿಯೇ ಸೃಷ್ಟಿಯಾಗಿರುವ 'ವಿಶ್ವಾಮಿತ್ರ' ಸೃಷ್ಟಿಗಳವು. ಇಚ್ಛಿತಾರ್ಥಗಳನ್ನು ನೇರವಾಗಿ ಗುರಿ ಮುಟ್ಟಿಸಿಬಿಡುವ ಸತ್ಪದಾಂಬುಗಳವು. ಹರಿತಾರ್ಥಗಳ ಹೂರಣವೆನಿಸಿದರೂ ಕ್ಷಣಮಾತ್ರದಲ್ಲಿ ಆಡಿದವನಿಗೂ ಆಡಿಸಿಕೊಂಡವನಿಗೂ ಮುದನೀಡಿ ನಗೆ ಮೂಡಿಸುವುದರ ಜತೆಗೆ ಅಂಥಾ ಸರಳ ಪದಗಳ ಸೃಷ್ಟಿಯ ಬಗ್ಗೆ ಕ್ಷಣಕಾಲವಾದರೂ ಚಿಂತನೆ ಮಾಡಬೇಕೆನಿಸುವ ಚತುರ ಸೃಷ್ಟಿಗಳವು.ಎಷ್ಟೋ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಈಡಿಯಂ(Idiom) ಅಥವಾ ಪ್ರೇಸ್(Phrase)ಗಳ ಸ್ಥಾನವನ್ನು ತುಂಬಿಬಿಡುವ ಜತೆಗೆ ನಗೆಚೂರ್ಣವನ್ನೇ ತೂರಿಬಿಡುವ ಶಕ್ತಿಶಾಲಿ ಪದಗಳು ಕನ್ನಡಭಾಷಾ ವಿಕಸನದಲ್ಲಿ ಹಿರಿಯ ಪಾತ್ರವನ್ನೇ ವಹಿಸಿವೆಯೆಂದರೆ  ತಪ್ಪಾಗಲಾರದು. ಕೆಲವೊಮ್ಮೆ ಕನ್ನಡದ ಅಂಥ ಪದಗಳು ಆಂಗ್ಲರ ಪದಚಮತ್ಕಾರೀ ಪನ್(Pun)ಗಳಿಗೂ ಪರ್ಯಾಯ ಪದಗಳೆನಿದ ಸಂದರ್ಭಗಳೂ ಇಲ್ಲದಿಲ್ಲ.ಜತೆಗೆ ವಿಚಾರಗಳ ಸಮರ್ಥನೆ ಹಾಗೂ ಸಾರ್ಥಕತೆಗೆ ಅಂಥಾ ವಿಚಾರಗಳನ್ನು ಪುಷ್ಟೀಕರಿಸುವ ಉದಾಹರಣೆಗಳ ಅವಶ್ಯಕತೆಯಂತೂ ಇದ್ದೇಯಿರುತ್ತದೆ. ಅಂಥಾ  ವಿಶಿಷ್ಟಾರ್ಥವನ್ನು ಗರ್ಭೀಕರಿಸಿಕೊಂಡು ಅವುಗಳ ದೈನಂದಿನ ಬಳಕೆಯಿಂದ ಮುದದ ಜತೆಗೆ ಅರ್ಥಪೂರ್ಣ ಸಾರ್ಥಕತೆಯನ್ನು ಸಾಧಿಸಿರುವ ಕೆಲವು ಪದಗಳನ್ನು ಈಗ ಗಮನಿಸೋಣ. 
ಕೆಲವು ಮಾತುಗಳಿಗೆ ತೂಕವೇ ಇರುವುದಿಲ್ಲವೆಂಬ ಸತ್ಯವನ್ನು ಪದವೊಂದು ಸಾರಿದೆ. ಸತ್ಯವಿರದ,ನಂಬಿಕೆಗೆ ಅರ್ಹವೆನಿಸದ ಗಾಳಿಯಲ್ಲಿ ತೂರಿಬಂದುಬಿಡುವ ಸ್ವಾರ್ಥ ಸಾಧನೆಯ ಧ್ಯೇಯೋದ್ದೇಶವನ್ನು ಹೊಂದಿರುವ ವದಂತಿ ಅಥವಾ ಪುಕಾರಿಗೆ ಪರ್ಯಾಯ ಪದವನ್ನಾಗಿ ನಾವು ಬಳಸುವ ಪದವೆಂದರೆ 'ಗಾಳಿಮಾತು'. ತೂಕವಿಲ್ಲದೇ ಗಾಳಿಯಲ್ಲಿ ತೇಲಿಬಂದ ಗುಣಹೀನರ 'ಗುಸುಗುಸು' ತಾನೇ ಇದು?ತನ್ನ ಹಗುರತ್ವದಿಂದ ಸತ್ವಹೀನವೆನಿಸಿದ, ಸಲ್ಲದ ಮಾತಿಗೆ ಸಾರ್ಥಕಾರ್ಥ ನೀಡಿ ಜನಪ್ರಿಯವೆನಿಸಿದ ಪದಪ್ರಯೋಗವಿದು. ಇಲ್ಲಿ ವಾಸ್ತವಾರ್ಥದ ಬದಲಿಗೆ ಅಂತರಂಗಾರ್ಥವನ್ನಷ್ಟೇ ಗುರ್ತಿಸಬೇಕು. ಸತ್ಯಾಂಶವಿರುವ ಸಾರ್ಥಕಾರ್ಥದ ಮಾತು ತಾನೇ ಇದು? 
 ನರಲೋಕದಲ್ಲಿ ಪ್ರತಿಷ್ಠೆಗೆ ದೊಡ್ಡ ಸ್ಥಾನವಿದೆ. ಅದರಲ್ಲೂ ಸ್ವಪ್ರತಿಷ್ಠೆಯ ದಾಸರಾದ ನಮಗೆ ನಮ್ಮ ಮಾತೇ ನಡೆಯಬೇಕು, ನಾವಾಡುವ ಮಾತಿನಲ್ಲಷ್ಟೇ ಸತ್ಯವಿರುವುದು,  ನಮ್ಮದು ವೇದವಾಕ್ಯಕ್ಕೆ ನಮಾನವಾದ ಸತ್ಯವಾಣಿ ಎಂಬ ದುರಭಿಮಾನದ, ಬಡಿವಾರವೆನಿಸುವ ಜತೆಗೆ  ಮಿಥ್ಯಾಭ್ರಮೆಯಿರುತ್ತದೆ.  ಅದನ್ನೇ ನಮ್ಮ ಭಾಷಾಬ್ರಹ್ಮರು 'ಮೂಗಿನ ನೇರದ' ಮಾತು ಅಂದಿದ್ದು! ಮೂಗಿನ ತುದಿಯಿಂದ ನೋಡುವ ದೃಶ್ಯಗಳು ಎಂದಿಗೂ ವಕ್ರವೇ. ಅತ್ತಿತ್ತ ವಿಷಯದ ಬಗ್ಗೆ ಚಿಂತಿಸದ ಏಕರೂಪೀ ಸ್ವಾರ್ಥ ಚಿಂತನೆಯ ಗೂಢಾರ್ಥವಿರುವ ನೇರಾರ್ಥದ ಮಾತಿದು. ಎಷ್ಟು ಚಂದದ ಪ್ರಯೋಗವಿದೆಂದು ಅನ್ನಿಸದಿರದು. ಒಮ್ಮೆ ನನ್ನೊಡನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ನನ್ನ ಇನ್ನೊಬ್ಬ ಮಿತ್ರರ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು. " ಅವನ ಬಗ್ಗೆ ನೀನು ಜಾಗ್ರತೆಯಾಗಿರಬೇಕು. ಕಾಣ ಅವನಿಗೆ 'ಕಿವಿ ಕಚ್ಚುವ' ಕೆಟ್ಟ ಚಾಳಿಯಿದೆ. ಇದನ್ನು ಕೇಳಿದ ನನಗೆ 'ಕಿವಿ ನೆಟ್ಟಗಾಯಿತು'. ಕನ್ನಡದ ಅದ್ಭುತ ಪ್ರಯೋಗಗಳಿವು. ಚಾಡಿ ಹೇಳುವ ಚಾಳಿಗೆ 'ಕಿವಿ ಕಚ್ಚುವ' ಪದಪ್ರಯೋಗವು  ನಿಜಕ್ಕೂ ನಗು ತರಿಸುವ ಜತೆಗೆ  'ಕರ್ಣಾನಂದ'ವೆನಿಸುವುದರಲ್ಲಿ ಆಶ್ಚರ್ಯವೇನಿಲ್ಲ ಅಲ್ಲವೇ? ಬೇರೆ ಭಾಷೆಗಳಲ್ಲಿರುವಂತೆ ನಮ್ಮ ಕನ್ನಡದಲ್ಲೂ ವಾಗಾಲಂಕಾರಗಳ ಪ್ರಯೋಗವಿದೆ. ಇಲ್ಲಿ ವಾಚ್ಯಾರ್ಥಕ್ಕಿಂತಾ ಸೂಚ್ಯಾರ್ಥವೇ ವಿಶೇಷಾರ್ಥ! 'ಕಣ್ಣಲ್ಲಿ ಕಣ್ಣಿಟ್ಟು ನೋಡು' ಎಂಬ ಪ್ರಯೋಗದಲ್ಲಿ ವಾಚ್ಯಾರ್ಥವು ಅರ್ಥಹೀನವೆನಿಸಿದರೂ ಸೂಚ್ಯಾರ್ಥವೇ ವಿಶೇಶಾರ್ಥವಾಗಿ ಮೆರೆದರೂ ಅರ್ಥ ಜಿಜ್ಞಾಸೆಗೆಂದೂ ಎಡೆಮಾಡಿಕೊಡುವುದಿಲ್ಲ. ಇದೇ ಅಲ್ಲವೇ ಭಾಷಾ ಸೊಗಸು! ಹಾಗೆಯೇ ನಮ್ಮ ಜನಜನಿತ ಪ್ರಯೋಗಗಳೆಂದೇ ಪ್ರಿಯವೆನಿಸಿರುವ 'ಕುಂಟುನೆವ' ''ಹೊಟ್ಟೆಯುರಿ' 'ಮನೆಮಾತು' ಮೊದಲಾದ ಪದಪ್ರಯೋಗಗಳ ಅಂತರಾರ್ಥವನ್ನು ಅರಿತಾಗಲೇ ಪದ ಪ್ರಯೋಗದ ಉದ್ದೇಶಿತ ಸಾರ್ಥಕತೆಯು ಸಾಧಿತವಾಗುವುದು. ಇನ್ನೊಂದು ಅತಿ ಹೆಚ್ಚು ಪ್ರಯೋಗದ ಪದವೊಂದು ಕನ್ನಡದಲ್ಲಿದೆ. ಅದೇ 'ಹೊಟ್ಟೆಯ ಮೇಲೆ ಹೊಡೆಯುವುದು'. ಇಲ್ಲಿ 'ಹೊಡೆ' ಎಂಬ ಕ್ರಿಯಾಪದದ ವಿಶೇಷ ಪ್ರಯೋಗವಿದ್ದರೂ ವಾಸ್ತವಾರ್ಥದಲ್ಲಿ ಯಾವ ಹೊಡೆತದ ಪ್ರತ್ಯಕ್ಷ ಪ್ರಕ್ರಿಯೆಯ ದರ್ಶನವೂ ಆಗುವುದಿಲ್ಲ. ಆದರಲ್ಲಿ ಹೊಟ್ಟೆಪಾಡಿನ ಸಂಪಾದನೆಯನ್ನು ಕಸಿದುಕೊಳ್ಳುವ ಅಂತರ್ಭಾವದ ಪ್ರಕಟವಿರುತ್ತಷ್ಟೇ! ಕಡೆಯದಾಗಿ ಇನ್ನೊಂದು ವಿಶೇಷ ಪದದ ಪದವಿಶೇಷವನ್ನು ಗಮನಿಸಿ ಈ ವಿಶೇಷಗಳ ಬರಹಕ್ಕೆ 'ಮಂಗಳ ಹಾಡಿ'ಬಿಡೋಣ. ಸಂಗೀತ ಕಚೇರಿಗಳಲ್ಲಿ ಹಾಡುವ ಅಂತ್ಯಗೀತೆಯೇ  ಸರ್ವರಿಗೂ ಶುಭ ಕೋರುವ ಮಂಗಳದ ಹಾಡು. 'ಅಂತ್ಯ' ಶಬ್ಧಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿರುವ ಶುಭಪ್ರದ  ಪದವಿದು. ಹೀಗೆ ಎಷ್ಟೋ ಪದಪ್ರಯೋಗಗಳು ಸೂಚ್ಯಾರ್ಥ ಪ್ರಧಾನತೆಯನ್ನು ಸಾಧಿಸಿ ಭಾಷಾಪ್ರಿಯರ ಹೃನ್ಮನಗಳನ್ನು ತಣಿಸುವುದರ ಜತೆಗೆ ನಮ್ಮ ಹೆಮ್ಮೆಯ ಭಾಷಾಕೋಶವನ್ನು ಉಬ್ಬಿಸುತ್ತಿರುವ ಇಂಥಾ ಜಾಣ ಪದಪ್ರಯೋಗಗಳು ನೂರ್ಮಡಿಯಾಗಲಿ. ಅಂಥಾ‌  ಪದಪ್ರಯೋಗಬ್ರಹ್ಮರ  ಸಂತತಿ ಸಾವಿರವಾಗಲಿ.
- ಎಸ್. ಸುದರ್ಶನ್. ಸಾಹಿತಿಗಳು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...