ಬುಧವಾರ, ಆಗಸ್ಟ್ 17, 2022

ಬುಡಕಟ್ಟು ನಕ್ಷತ್ರ (ಕವಿತೆ) - ಬಸವರಾಜ ನಾಗೂರ ಮುದ್ದೇಬಿಹಾಳ (ಬಾವೂರ).

ಬನದ ಮೊಗ್ಗು ಹೂವಾಗಿ ಅರಳಿ ನಿಂತಿತು
ಬೆಟ್ಟ ಗುಡ್ಡ ಸುಳಿದು ಸುತ್ತಿ ನಾಡ ಸೇರಿತು
ಕಲ್ಲು ಮುಳ್ಳಿನಲ್ಲೂ ಪರಿಮಳವ ಬೀರುತ
ಬೆಳೆಬೆಳೆಯುತ ಇಳೆಯ ತುಂಬ ಸೌಗಂಧ ಹರಡಿತು ॥

ಆದಿವಾಸಿ ಬುಡಕಟ್ಟು ಮನೆಗೆ ಬೆಳಕು ತಂದಳು
ನಿಷ್ಠೆಯಿಂದ ವಿದ್ಯೆ ಕಲಿತು ಗುಮಾಸ್ತೆಯಾದಳು
ತಾತ್ವಿಕ ಬದುಕಲಿ ಕಡುಕಷ್ಟದ ಕಹಿಯನುಣ್ಣುತ
ಆದಿವಾಸಿಗಳ ಬದುಕಿಗೆ ಆಸರೆಯಾಗಿ ನಿಂತಳು ॥

ಅರಳುವ ಕುಸುಮಗಳ ಮಸ್ತಕವ ತುಂಬಲು
ಗುಮಾಸ್ತೆ ಕಜ್ಜವ ತೊರೆದು ಶಿಕ್ಷಕಿಯಾದಳು
ನೂರಾರು ಮಕ್ಕಳಿಗೆ ನಿತ್ಯ ಅಕ್ಷರವನುಣಿಸುತ
ಸದ್ಗುಣಗಳ ತುಂಬಿ ಭರತಮಾತೆಯ ರಕ್ಷಣೆಗೆ ಬಿಟ್ಟಳು ॥

ವಿಧಿಯಾಟದಲಿ ಪತಿಯ ಕಳೆದುಕೊಂಡು ಒಂಟಿಯಾದಳು
 ಕರುಳಬಳ್ಳಿಗಳೆರಡನೂ ಕಳೆದುಕೊಂಡು ಕಂಗಾಲಾದಳು
ಬ್ರಹ್ಮಕುಮಾರಿ ಆಧ್ಯಾತ್ಮ ಚಳುವಳಿ ಸೇರಿ ಶೋಕ ಮರೆಯುತ
ತನ್ನ ತನು ಮನವನು ಭರತಮಾತೆ ಸೇವೆಗೆ ಮೀಸಲಿಟ್ಟಳು ॥

ಜನಸೇವೆ ಮಾಡಲೆಂದು ರಾಜಕೀಯಕೆ ದುಮುಕಿದಳು
ರಾಯರಂಗಪುರದ ಕೌನ್ಸಿಲರಾಗಿ ಯಶಸ್ಸು ಕಂಡಳು
ಓಡಿಶಾ ವಿಧಾನಸಭೆಯಲಿ ಸಚಿವೆಯಾಗಿ ಸೇವೆ ಗೈದು
ಜಾರ್ಖಂಡದ ಮೊದಲ ಪ್ರಜೆಯಾಗಿ ಕೀರ್ತಿ ಪಡೆದಳು  ॥

ಬುಡಕಟ್ಟು ನಕ್ಷತ್ರವೊಂದು ಭಾರತದ ತಾರಾಲಯ ಸೇರಿತು
ಪಳಪಳನೇ ಹೊಳೆಯುತ ಬೆಳಕು ಬೀರಲು ಮುಗಿಲ ಏರಿತು
ಕಾಡ ಹೂವ ತಲೆಗೆ ಮುಡಿದು ಭರತಮಾತೆಯು ನಲಿದಿತ್ತು
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಹರುಷ ಉಕ್ಕಿತು ॥

- ಬಸವರಾಜ ನಾಗೂರ ಮುದ್ದೇಬಿಹಾಳ (ಬಾವೂರ).


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...