ಮನುಷ್ಯನಿಗೆ ಜ್ಞಾನ ಸಂಪಾದನೆ ಎಷ್ಟು ಮುಖ್ಯವೋ, ಅನುಭವಗಳಿಂದ ಅರಿವು ಮೂಡಿಸಿ ಕೊಳ್ಳುವುದು ಅಷ್ಟೇ ಮುಖ್ಯ. ಜೀವನದಲ್ಲಿ ಕಹಿ ಅನುಭವಗಳು ಆಗದಿದ್ದರೆ ಸಿಹಿಯ ಸವಿ ತಿಳಿಯುವುದಿಲ್ಲ. ಕಷ್ಟಗಳಲ್ಲಿ ಮುಳಿಗಿ ಎದ್ದಷ್ಟು ಸುಖದ ಅನುಭವ ದೊರೆಯುತ್ತವೆ. ಅದಕೆ ಹಿರಿಯರ, ಗುರುಗಳ, ನೆರೆಹೊರೆಯವರ ಅನುಭವದ ಮಾತು ಕೇಳುತ್ತಲಿರಬೇಕು.
ಅನುಭವಗಳ ಸಂತೆ ಕಂತೆಯೊಂದಿಗೆ ನಿಮ್ಮ ಮುಂದೆ ಸಾಕಮ್ಮಜ್ಜಿಯ ಕಥೆ ತಿಳಿಸುತ್ತಿದ್ದೆನೆ.
ಬೆಂಗಳೂರಿನ ಕೆ. ಆರ್. ಮಾರ್ಕೆಟದಲ್ಲಿ ನೂರು ವರ್ಷದ ಗಟ್ಟಿಮುಟ್ಟಾದ ಸಾಕಮ್ಮಜ್ಜಿ ಹಣ್ಣುಹಂಪಲುಗಳನ್ನು ಮಾರಾಟಮಾಡುವ ಕಾಯಕ ಕೈಗೊಂಡಿದ್ದಳು. ದಿನಾಲು ನಾಲ್ಕು ಗಂಟೆಗೆ ಮಗನ ಜೊತೆ ಬಂದು ಮಂಡಿಯಲ್ಲಿ (ಹರಾಜದಲ್ಲಿ) ತನಗೆ ಬೇಕಾದ ಡೊಳ್ಳೆ ತುಂಬಿದ ಹಣ್ಣುಗಳನ್ನು
ಖರಿದಿ ತಂದು ಮುಸ್ಸಂಜೆಯ ಐದುವರೆ ಸಮಯದ ತನಕ ವ್ಯಾಪಾರ ಮಾಡುತ್ತಿದ್ದಳು. ವಯಸ್ಸಿದ್ದಾಗ ಗಂಡ ಬಳೆಗಳ ವ್ಯಾಪಾರ ಮಾಡಿ ನಂತರ ಮನೆಯಲ್ಲಿ ಕಂಬಳಿ ನೆಯುತ್ತಿದ್ದ. ಇಬ್ಬರೂ ಮೈ ತುಂಬಿ ದುಡಿದರು ದಿನದ ದುಡಿಮೆ ದಿನದ ಉಪಜೀವನಕ್ಕಷ್ಟೆ ಸಾಲುತ್ತಿತ್ತು. ಮಕ್ಕಳಿಗೆ ಹೆಚ್ಚಿಗೆ ಶಾಲೆ ಕಲಿಸುವುದಾಗಲಿಲ್ಲ. ಹತ್ತನೆ ತರಗತಿಯವರೆಗೆ ಬಂದು ಓದು ನಿಲ್ಲಿಸಿ ವ್ಯಾಪರಕ್ಕಿಳಿದಿದ್ದರು.
ನಮ್ಮ ತಂದೆ ತಾಯಿಗೆ ನಾನು ಹನ್ನೆರಡನೆಯ ಮಗುವಾಗಿದ್ದೆ. ಇನ್ನು ಮುಂದೆ ನಮಗೆ ಮಕ್ಕಳು ಸಾಕಪ್ಪಾ ದೇವರೆಯಂತ ನನಗೆ ಸಾಕಮ್ಮಾ ಎಂದು ಹೆಸರಿಟ್ಟರು ಅಂತ ಹಲ್ಲಿಲ್ಲದ ಬಾಯಿಯಿಂದ ಮುಗ್ಧ ನಗು ನಗತಾ ಎಲ್ಲರಿಗೂ ಹೇಳ್ತಾಳೆ.
ಎಂಭತ್ತು ವರ್ಷಗಳಿಂದ ವ್ಯಾಪಾರ ಮಾಡ್ತಾಯಿದ್ದಿನಿ. ನನ್ನ ವಾರಗೆಯವರೆಲ್ಲ ಸತ್ತಹೋದರು. ನಾಲ್ಕಾರು ಜನ ಉಳ್ಕೊಂಡವರು ಈ ಕರೋನಾ ಹೊತ್ಗೊಂಡ ಹೊಯ್ತಂತ ಹೇಳುವಳು. ಈವಾಗೆಲ್ಲ ಹಳೆಗಿರಾಕಿಗಳ ಮಕ್ಕಳು ಬಂದು ನನ್ನ ಯೋಗಕ್ಷೇಮ ಕೇಳತಾ ಹಣ್ಣುಹಂಪಲು ಖರಿದಿಮಾಡ್ಕೊಂಡು ಹೊತವರೆ ಅನ್ನೊಳು. ನಿಜ ಕಣಪ್ಪ ಹಳೆದಿನಗಳು ಬಹು ಚೆನ್ನಾಗಿದ್ದವು. ಜಾತಿ ಕುಲ ಅನ್ನೊದಿದ್ದಿತ್ತಿಲ್ಲ. ಒಟ್ಟಾಗೆ ಎಲ್ಲರೂ ದುಡಿಯೋರು. ಮನೆಯೊಳಗೆ ಏನಾದರೂ ತಾಪತ್ರಯ ಬಂದರೆ ಅವರು ಬಿಟ್ಟೋದ ವ್ಯಾಪಾರ ನಾವು ಮಾಡಿ ದುಡ್ಡ ಅವರ ಮನಿಗೆ ಒಪ್ಪಿಸ್ತಿದ್ವಿ. ಒಬ್ಬರಿಗೊಬ್ಬರು ಆಸ್ರಾ ಆಗಿ ಬದುಕತಿದ್ವಿ. ಅದಕ್ಕನ್ರಿ ಯಾವ ಜಡ್ಡ ಜಾಪತ್ರಿಯಿಲ್ಲದ ಆ ದೇವರ ಚೆನ್ನಾಗಿ ಇಟ್ಟವ್ನೆ.
ಅವಳ ಒಂದೊಂದು ಮಾತೂ ಕೇಳಿದ್ರೆ ಹುರುಳು ಹುರದಂಗೆ ಮಾತಾಡವಳು. ವಿದ್ಯೆಯಿಂದಲೆ ಜ್ಞಾನ ಸಂಪಾದನೆ ಅನ್ನೊದು ತಪ್ಪು. ಜೀವನದಲ್ಲಿ ಅನುಭವಗಳಿಂದಲೂ ಜ್ಞಾನ ಸಿಗುತ್ತೆ ಅನ್ನೊ ಮಾತಿಗೆ ಈ ಅಜ್ಜಯೇ ಸಾಕ್ಷಿ. ಅವಳಿಗೆ ಮನೆಯಿಂದ ಊಟ, ತಿಂಡಿ ಬರಲು ತಡವಾದರೆ ಸುತ್ತಲಿನ ವ್ಯಾಪಾರಸ್ಥರು ಅವಳನ್ನ ಕರೆದುಕೊಂಡು ಉಂಬವರಂತೆ ಹೇಳ್ತಾಳೆ. ನಮ್ಮದು ಹರಿದು ಹಂಚಿಕೊಂಡು ತಿಂದು ಬದುಕುವ ಜೀವನ. ನೋಡಪ್ಪ ನಾನೇನು ದುಡ್ಡುಗಳಿಸಿ ದೊಡ್ಡವಳಾದವಳಲ್ಲ (ಶ್ರೀಮಂತಿಕೆ) ಎಲ್ಲರ ಜೊತೆ ಸವಿಮಾತ, ನಂಬಿಕೆ, ನಡೆ ನುಡಿ ಪ್ರಾಮಾಣಿಕತೆ ಇಟ್ಟುಕೊಂಡು ದೊಡ್ಡವಳಾದವಳು. ಆವಾಗಿನ ಜನಬೀಡ ಕಡಿಮಿ ಇರ್ತಿತ್ತು. ಆದ್ರೆ ಜನ ಜೀವಕ್ಕ ಜೀವ ಕೊಡತಿದ್ರು. ಅದಕ ದಿನಮಾನಗಳು ಚೆನ್ನಾಗಿದ್ದವು. ಈವಾಗ ಎಲ್ಲಾ ಸ್ವಾರ್ಧಿಗಳು. ತಮ್ಮ ಹೊಟ್ಟೆ ತುಂಬಿಸ್ಗೊಳದಲ್ದೆ ಮುಂದಿನ ಪಿಳಿಗಿಗೆ ಆಸ್ತಿ ಮಾಡುವವರಿದ್ದಾರೆ. ಏನಕೇಳ್ತಿ ಕರೋನಾದಂತಹ ಗಾಳಿ ಬೀಸಿದ್ರದಿಂದಲೆ ಪೊಳ್ಳಿದ್ದದ್ದೆಲ್ಲ ಕೊಚಗೊಂಡ ಹೊಯ್ತು. ನಮ್ಮಂತ ಗಟ್ಟಿ ಇರೋದು ಉಳ್ಕಂಡಯ್ತಿ. ಈಗಿನ ಬದುಕ್ನಾಗೆ ನೆಮ್ಮದಿ ಸಂತೋಷ ಕಡಮಿನೆ, ಬರೀ ಜಗಳ, ದುಡ್ಡಿನ ಅಹಂಕಾರ, ದ್ವೇಷ ತುಂಬಕೊಂಡೈಯ್ತಿ. ನಮ್ಮ ಬದುಕ ಛಂದ ಇತ್ತಕಣಪ್ಪ. ಸಾಕಷ್ಟು ಕಷ್ಟ ನೋವು ಅನುಭವಿಸಿದ್ದಿನಿ. ಆದ್ರ ತಿಂದ ಅನ್ನಾ ಬರೀ ಚಟ್ನಿ ಭಕ್ಕರಿನೆ ಹೊಟ್ಟಿಗಹತ್ತಿತ್ತು. ಈಗಿನವ್ರಿಗ ಚಿನ್ನಾಕ ಎಲ್ಲಾ ಸೌಕರ್ಯ ಕೊಟ್ಟವ್ನೆ ದೇವ್ರು, ಆದ್ರೆ ಬಾಯಿ ಕೊಟ್ಟಿಲ್ಲ. ರೋಗಿನ ತವರಮನಿ ಆಗೈತಿ ದೇಹ. ಇನ್ನೂ ಏನೇನು ಕಾಣದೈತೊ ಗೊತ್ತಿಲ್ಲ. ನನಗಂತೂ ಮನಿತುಂಬ ಮೊಮ್ಮಕ್ಕಳು ಮರಿಮೊಮ್ಮಕ್ಕಳ ನಂದ ಗೋಕುಲ ಐತಿ ನೋಡು ಅನ್ನೋಳು ಅಜ್ಜಿ. ಮೊಮ್ಮಕ್ಕಳು ಎಷ್ಟು ಜನ, ಅವರ ಹೆಸರ ಕೆಳಿದ್ರೆ, ಎಣಸಕ್ಕಿಲ್ಲಪ್ಪ, ಒಟ್ಟಾರೆ ಎಲ್ರುನೂ ಪುಟ್ಟಾ, ಕಿಟ್ಟಾ, ಚಿಟ್ಟಾಂತ ಕರಿಯೋದು.
ಇನ್ನು ಏನು ಆಸೆ ಐತಿ ನಿನಗೆ ಅಜ್ಜಿಯಂತ ಕೇಳಿದ್ರೆ. ಇನ್ನೆನು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಕಂಡಿವ್ನಿ, ಇನ್ನೊಪ್ಪತ್ತ ಕಾಲ ಬದುಕಿದ್ದರೆ ಮರಿಮೊಮ್ಮಕ್ಕಳ ಜೊತೆ ಮಗುವಾಗಿ ಬದುಕ್ತಿವ್ನಿ. ಆ ಯಮರಾಜ ಬರೋತನಕ ಕುಸಗೊಳ ಜೊತೆ ಆಡ್ತಿವ್ನಿ, ಅವ್ರ ತೊದಲು ಮಾತ ನಾ ಕೇಳ್ತಿನಿ ನನ್ನ ತೊದಲ ಮಾತು ಮಕ್ಕಳು ಕೇಳ್ತಾವೆ. ಎಲ್ಲರೂ ನಗ್ತಾನಗ್ತಾ ಚನ್ನಾಗಿದ್ದಿವಿ ಅನ್ನೊ ಮಾತು ಅಜ್ಜಿಯದಾಗಿತ್ತು.
ಹೇಗಿದೆ ಸಾಕಮ್ಮಜ್ಜಿಯ ಕಥೆ. ಇನ್ನೂ ಸಾಕಷ್ಟು ಅವಳ ಅನುಭವಗಳ ಬುತ್ತಿ ನಮ್ಮುಂದೆ ಬಿಚ್ಚಿಟ್ಟಿದ್ದಾಳೆ. ಅದರಲ್ಲಿಯೂ ಸ್ವಲ್ಪ ಪ್ರಮಾಣ ಕಥೆಯ ಮೂಲಕ ತಮ್ಮ ಮುಂದೆ ಇಟ್ಟಿರುವೆ.
- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ