ಬೆಳಿಗ್ಗೆಯೇ ಬೇಗನೆ ಎದ್ದು, ತನ್ನ ನೆರೆತ ಕೂದಲುಗಳಿಗೆ ಕಪ್ಪು ಬಣ್ಣ ಬಳಿದುಕೊಂಡು, ಸ್ನಾನ ಮಾಡಿ ಸ್ಲೀವ್ ಲೆಸ್ ಬ್ಲೌಸ್, ಪಾರದರ್ಶಕ ಸೀರೆ ಉಟ್ಟು, ಮುಖಕ್ಕೆ ಅರ್ಧ ಇಂಚು ಮೇಕಪ್ ಮಾಡಿಕೊಂಡು, ಪುನುಗಿನ ಬೆಕ್ಕಿನಂತೆ ಘಮಿಸುತ್ತಾ, ವಿಶ್ವ ಮಹಿಳಾ ದಿನಾಚರಣೆಗೆ ಹೋಗಲು ತಯಾರಾಗಿ ನಿಂತಿದ್ದಳು ೫೦ ವರ್ಷದ ಜಲಜಾಕ್ಷಿ.. ಅವಳೀಗ ಮಹಿಳಾ ಸಂಘದ ಅಧ್ಯಕ್ಷೆ.. ಒಮ್ಮೆ ಸಮಯ ನೋಡಿಕೊಂಡಳು, ಗಂಟೆ ಹತ್ತಾಗುತ್ತಿದೆ.. ಆಗಲೇ ಸಮಯವಾಯಿತು, ಬೇಗ ತಿಂಡಿ ತಿಂದು ತೆರಳಬೇಕು ಎಂದು ಗಡಬಡಿಸಿ, ಕೆಲಸದವಳನ್ನು ಕೂಗಿದಳು.. "ಲೇ ಕಮಲಿ ಎಲ್ಲಿ ಹಾಳಾಗಿ ಹೋಗಿದಿಯಾ, ಬೇಗ ತಿಂಡಿ ತಗೊಂಡು ಬಾ, ನನಗೆ ಪಾರ್ಟಿಗೆ ಹೊತ್ತಾಗುತ್ತಿದೆ..." ಎಂದಳು ಕೋಪದಲಿ ಉರಿಯುತ್ತಾ..
"ಬಂದೇ ಅಮ್ಮಾವ್ರೇ" ಅನ್ನುತ್ತಾ ಕಮಲಿ.ತಿಂಡಿಯನ್ನು ತಂದು ಡೈನಿಂಗ್ ಟೇಬಲ್ ಮೇಲೆ ಇಟ್ಟಳು.. ಅವಳನ್ನೊಮ್ಮೆ ಕೋಪದ ಕಣ್ಣಲ್ಲಿ ಗುರಾಯಿಸುತ್ತಾ ಜಲಜಾಕ್ಷಿ ತಿಂಡಿ ತಿನ್ನತೊಡಗಿದಳು.. "ರೇಸ್ಕಲ್ ಇಷ್ಟೊತ್ತಿಗೆ ತಿಂಡಿ ತಂದು ಇಟ್ಟಿರಬೇಕೆಂದು ಗೊತ್ತಿಲ್ವಾ ನಿನಗೆ" ಇದೀಗ ಅಮ್ಮಾವ್ರ ಗರ್ಜನೆ ಜೋರಾಗೇ ಇತ್ತು.. ಕಮಲಿ ಅಮ್ಮಾವ್ರ ಕೆಂಗಣ್ಣು ನೋಡಲಾಗದೇ ಹಾಗೇ ತಲೆ ತಗ್ಗಿಸಿ ನಿಂತಿದ್ದಳು.. ಒಂದೆರಡು ನಿಮಿಷಗಳ ತರುವಾಯ ಹಾಗೇ ತಲೆ ತಗ್ಗಿಸಿಕೊಂಡು, ಹೆದರುತ್ತಲೇ ತನ್ನ ಮನವಿಯನ್ನು ಇಟ್ಟಳು ಅಮ್ಮಾವ್ರ ಮುಂದೆ, "ಅಮ್ಮಾವ್ರೇ ಇವತ್ತು ಮಹಿಳಾ ದಿನಾಚರಣೆ ಅಲ್ವಾ, ನಮ್ಮ ಸಂಘದವರು ಚಿಕ್ಕದಾಗಿ ಒಂದು ಕಾರ್ಯಕ್ರಮ ಮಡಿಕ್ಕಂಡವ್ರೆ, ನನ್ನನ್ನೂ ಬನ್ನಿ.ಅಂತ ಹೇಳವ್ರೆ, ನೀವು ಒಪ್ಪಿಕಂಡ್ರೆ, ಇವತ್ತು ಕೆಲಸಕ್ಕೆ ರಜಾ ಮಾಡಿ ಹೋಗಿ ಬತ್ತೀನಿ.." ಎಂದು ತೊದಲುತ್ತಲೇ ನುಡಿದಳು..
ಇದೀಗ ಅಮ್ಮಾವ್ರ ಪಿತ್ತ ನೆತ್ತಿಗೇರಿತ್ತು.."ಏನು ನಿನ್ನಂತ ಕೆಲಸಗಾರರಿಗೆ ಮಹಿಳಾ ದಿನಾಚರಣೆಯಾ, ಅದು ನಮ್ಮಂತ ಶ್ರೀಮಂತರಿಗೆ ಮಾತ್ರ, ನಿನ್ನಂತ ಹೆಣ್ಣು ಮಕ್ಕಳು ಹೇಗಿರಬೇಕೋ ಹಾಗಿದ್ದರೆ ಚೆಂದ..ಅದೆಲ್ಲಾ ಏನೂ ಬೇಕಾಗಿಲ್ಲ, ನೀನು ಹೋದರೆ ಇಲ್ಲಿ ಕೆಲಸ ಮಾಡುವವರು ಯಾರು..? ಬೇಡ, ಇಲ್ಲೆ ಬಿದ್ದಿರು, ಬೀದಿ ನಾಯಿ ಉಪ್ಪರಿಗೆಯ ಕನಸು ಕಾಣಬಾರದು.." ಎಂದು ಅಹಂಕಾರದ ಗತ್ತಿನಲಿ ಹೇಳಿ, ಅಲ್ಲಿಂದ ಎದ್ದು ನಡೆದುಬಿಟ್ಟಳು ಜಲಜಾಕ್ಷಿ..
ಕಮಲಿ ಏನೂ ಹೇಳಲು ತೋಚದೆ ಬೇಸರದಲಿ ತಲೆ ತಗ್ಗಿಸಿ ನಿಂತಿದ್ದಳು.. ಅದೇ ಸಮಯಕ್ಕೆ ಜಲಜಾಕ್ಷಿಯ ಒಬ್ಬಳೇ ಮಗಳು ಛಾಯಾ ಫ್ರೆಂಡ್ಸ ಜೊತೆ ಪಬ್ ಗೆ ಹೋಗಲು ತಯಾರಾಗುತ್ತಿದ್ದಳು..
ವೇದಿಕೆ ಬಹಳ ಸುಂದರವಾಗಿ ಅಲಂಕೃತಗೊಂಡಿತ್ತು.. ಜಲಜಾಕ್ಷಿ ಗತ್ತಿನಲೇ ವೇದಿಕೆ ಹತ್ತಿ, ಅಧ್ಯಕ್ಷ ಸ್ಥಾನದಲಿ ಕುಳಿತಳು ಅಹಂಕಾರದಲಿ.. ಆ ಹಾಲ್ ಮಹಿಳೆಯರಿಂದ ಕಿಕ್ಕಿರಿದು ತುಂಬಿತ್ತು.. ಕಾರ್ಯಕ್ರಮ ಶುರುವಾಯಿತು.. ಬಂದ ಅತಿಥಿಗಳು ಮಹಿಳೆಯರಿಗೆ ಇನ್ನೂ ಸಂಪೂರ್ಣ ಸಮಾನತೆ ಸಿಕ್ಕಿಲ್ಲ, ಸಿಗುವವರೆಗೂ ನಮ್ಮ ಹೋರಾಟ ನಡೆಯುತ್ತಿರಬೇಕು, ಪುರುಷರ ಹುಟ್ಟಡಗಿಸಬೇಕು, ಎಂದೆಲ್ಲಾ ಭೀಕರ ಭಾಷಣ ಮಾಡಿ, ಚಪ್ಪಾಳೆ ಗಿಟ್ಟಿಸಿ ಬಾಯಿ ಒರೆಸಿಕೊಂಡು ಕೂತರು.. ಕೊನೆಯಲ್ಲಿ ಅಧ್ಯಕ್ಷರ ಭಾಷಣ.. ವೃದ್ಧಾಪ್ಯದ ಅಂಚಿನ ಯುವತಿ ಜಲಜಾಕ್ಷಿ ಮೈಕ್ ಮುಂದೆ ಬಂದು ನಿಂತು ಒಮ್ಮೆ ಕೆಮ್ಮಿ ತನ್ನ ಅಧ್ಯಕ್ಷೀಯ ಮಾತನ್ನು ಶುರುಮಾಡಿದಳು..
"ಪುರುಷರ ಹುಟ್ಟಡಗಿಸುವ ಕೆಲಸ ಒಂದೆಡೆಯಾದರೆ, ನಾವು ಮಹಿಳೆಯರು ಇನ್ನೊಂದು ಕೆಲಸ ಮುಖ್ಯವಾಗಿ ಮಾಡಲೇಬೇಕು. ಅದೇನೆಂದರೆ ಮಹಿಳೆಯರು ಮಹಿಳೆಯರಲ್ಲಿ ಸಮಾನತೆ ಕಾಣಬೇಕು, ಅಂದರೆ ಕೆಲಸದ ಮಹಿಳೆಯರಿಂದ ಹಿಡಿದು ಶ್ರೀಮಂತ ಮಹಿಳೆಯರವರೆಗೂ ಸಮಾನವಾಗಿ ಕಾಣಬೇಕು ನಾವು.. ಈಗಾಗಲೇ ನಾವು ಪುರುಷರ ಸಮಾನಕ್ಕೆ ಸರಿಸುಮಾರು ಬಂದಾಗಿದೆ.. ಇನ್ನು ನಮಗಿರುವ ಕೆಲಸವೆಂದರೆ ಅವರನ್ನು ಗುಲಾಮರನ್ನಾಗಿ ಮಾಡಿ, ಮನೆಯ ಆಡಳಿತವನ್ನು ನಾವೇ ನೋಡಿಕೊಳ್ಳುವುದು.." ಭಾಷಣ ಮುಗಿಯಿತು.. ಕರತಾಡನ ಕಿವಿಗಡಕಿಚ್ಚುವಂತೆ ಮಾರ್ಧನಿಸಿತು..
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಲ್ಲಿ ಬಂದವರಿಗೆ ಪಾರ್ಟಿ ಇತ್ತು.. ಮಹಿಳಾ ಮಂಡಲದ ಎಲ್ಲ ಮಹಿಳೆಯರೂ ಪಾರ್ಟಿಯ ಮೋಜು ಮಸ್ತಿಯಲ್ಲಿ ಬೆರೆಯುತ್ತಾ ಖುಷಿಯ ಲೋಕದಲ್ಲಿ ತೇಲಾಡುತ್ತಿದ್ದರು.. ಮಹಿಳಾ ಸಂಘದ ಕಾರ್ಯದರ್ಶಿ ಮೀನಾಕ್ಷಿ, ಜಲಜಾಕ್ಷಿಯ ಹತ್ತಿರ ಅಲ್ಲೇ.ಪಿಸುಗುಟ್ಟಿದಳು.."ನಮ್ಮ ಪಕ್ಕದ ಮನೆಯ ಪದ್ಮಿನಿ.ಇದ್ದಾಳಲ್ಲ, ಅವಳಿಗೇನೋ ಮಂಕು, ಅಷ್ಟೊಂದು ಓದಿಕೊಂಡರೂ, ಪತಿಯೇ ಪರದೈವ ಅನ್ನುತ್ತಾಳೆ, ಅವಳೇ ಅಡಿಗೆ ಮಾಡಿ ಬಡಿಸುತ್ತಾಳೆ.. ಇಂತಹ ಯಾವ ಪಾರ್ಟಿಗೂ ತಾಗಿಸಿಕೊಳ್ಳುವುದೇ ಇಲ್ಲ.. ಗಂಡನ ಮಾತೇ ವೇದವಾಕ್ಯ ಎನ್ನುತ್ತಾಳೆ, ಅವಳಿಗೇನು ಗೊತ್ತು ಸಮಾನತೆಯ ಅರ್ಥ, ಮೂರ್ಖ ಮುಂಡೇದು.." ಎನ್ನುತ್ತಾ ನಕ್ಕಳು.. ಜಲಜಾಕ್ಷಿಯೂ ಅವಳ ಜೊತೆ ಸೇರಿ ಹೂ ಗುಟ್ಟುತ್ತಾ ನಕ್ಕಳು.. ಅಲ್ಲಿ ಸೇರಿದ್ದ ಎಲ್ಲ ಮಹಿಳೆಯರೂ, ಅಲ್ಲಿ ಬರದೇ ಇದ್ದ ಮತ್ತೊಬ್ಬ ಮಹಿಳೆಯರ ಬಗ್ಗೆ ಅಸೂಯೆಯಿಂದ ಮಾತಾಡುವವರೇ..
ಸಮಾನತೆ ಎಂಬ ಪದದ ನಿಜವಾದ ಅರ್ಥ ಆ ಪಾರ್ಟಿಯ ಮಧ್ಯದಲ್ಲಿ ಕರಗಿ, ದೂರದಲ್ಲೆಲ್ಲೋ ಅಣಕದ ನಗೆ ಬೀರುತ್ತಾ ನಿಂತಿತ್ತು....
- ಮನು ವೈದ್ಯ, ಶಿರಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ