ದೀಪಾವಳಿಯ ಬಲಿಪಾಡ್ಯದೊಂದಿನ
ಹೋಗಿದ್ದೆವು ಸ್ನೇಹಿತರೆಲ್ಲಾ ಕೂಡಿ ಅಡವಿಗೆ
ಕಂಕುಳಲ್ಲಿ ದಾರ ಬಿಗಿದ ಚೀಲ
ಕೈಯಲ್ಲೊಂದು ನೀರು ತುಂಬಿದ ಪ್ಲಾಸ್ಟಿಕ್ ಬಾಟ್ಲಿ
ಕಳ್ಳರಂತೆ ಲೂಟಿಗೆಂದು ನುಗ್ಗುತ್ತಿದ್ದೆವು ಸಿಗುವ ದಾರಿಗಿ
ಅಂಟ್ರಿ ಕಂಟ್ರಿ ಮೈಗೆ ತರಚುತ್ತ ಕೈಯಿಂದ ಅದನ್ನೆಲ್ಲಾ ಸರಿಸುತ್ತ
ಕಣ್ಣಾಯಿಸಿದ ಜಾಗವನ್ನು ಕಾಲಿಂದ ಆಕ್ರಮಿಸುತ್ತ
ಒಳಹೊಕ್ಕು ಹರಿಬಿದ್ದೆವು ಸೀತಾಫಲ ಬನದ ಸುತ್ತ
ಗಿಡದೊಟ್ಟಿಗೆ ಗಟ್ಟಿ ಸ್ನೇಹ ಬೆಳೆಸಿದ ಕಾಯಿ
ಅಂತಿತ್ತೇನೋ ಕಟಕರು ಬಂದರೆಂದು
ತನ್ನ ರಕ್ಷಣೆಗೆ ಮುಳ್ಳುಕಂಟಿಗೆ ಕಾಯ್ದಿರಿಸಿ
ಮರೆಯಲ್ಲಿ ಅವಿತಿದ್ದರೂ,
ಬಿಡಲಿಲ್ಲ ನಮ್ಕಣ್ಣು
ಕಣ್ಣು ಬಿತ್ತೆಂದು ಕೈ ಸುಮ್ಮನಿರದೇ,
ಅದರ ಕವಚವನ್ನೆಲ್ಲ ತಳ್ಳುತ್ತಾ
ಗಿಡದಿಂದ ಅದರ ಸ್ನೇಹ ಮುರಿಯುತ್ತಾ
ಕೈ ಚಾಚಿ ಹರಿಯುತ್ತಾ
ದೂರ ಮಾಡಿದೆವು ಅದರ ಬಂಧ
ನಮ್ಮ ಖುಷಿಯೊಳಗೆ ನಾವು ತುಂಬಿದರೆ
ಅದರ ನೋವು ನಮಗೆಲ್ಲಿ ತಿಳಿವುದು
ಅದು ತನ್ನ ಜೀವನದ ಅರಿವು ಅರಿತಿರುವುದು
ನಾನು ಬದುಕಿರುವುದೇ ಮತ್ತೊಬ್ಬರಿಗೆ ಆಸರೆಯಾಗಲು
ನನ್ನನ್ನು ಬಳಸಿದವರಿಗೆ ಸಿಗುವುದು ಆರೋಗ್ಯದ ಭಾಗ್ಯ
ನನ್ನಂತೆಯೇ ಆಗುವರು ಕೊನೆಗೆಲ್ಲರೂ ಒಂದಿನ
ಹೋಗುವುದರೊಳಗೆ ಕಿಂಚಿತ್ತಾದರೂ ಮಾಡಿ ಕೈಯಿಂದ ದಾನ
ಜಾರಿ ಹೋಗದಂತೆ ಕಾಯ್ದುಕೊಳ್ಳಿ ನಿಮ್ಮಿಂದ ಮಾನ
ಮುಗಿವಿರಿ ಪ್ರಾಣ ಹೋಗುವಾಗ ದೇವರಿಗೆ ನಮನ
ತನ್ನನ್ನು ತಾನರಿತು ಬಾಳಿತು ಆ ಹಣ್ಣು
ನಾವರಿತು ಬಾಳಿದರೆ ಜಗ ಬಿಡುವುದು ಕಣ್ಣು
ಹಮ್ಮಿಲೆ ಮೆರೆದಾಡಿದರೆ ಆದಿತು ಮನಸ್ಸಿಗೆ ಹುಣ್ಣು
ಕಣ್ಣು ಮುಚ್ಚಿ ಕುಣಿಯೊಳಗೆ ಕುಂತಾಗ ಹಾಕುವರೆಲ್ಲರೂ ಬಂದು ಹಿಡಿಮಣ್ಣು
- ಬಿ.ಹೆಚ್.ತಿಮ್ಮಣ್ಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ