ಶುಕ್ರವಾರ, ಡಿಸೆಂಬರ್ 30, 2022

ಒಮ್ಮೆ ಹಿಂದಿರುಗು (ಕವಿತೆ) - ರಂಜಿತಾ ಹೆಗಡೆ.

ದೇವನಿಲ್ಲದ ಜಗವಿದು!
ಕರುಣೆಯಿಲ್ಲದ ಯುಗವಿದು!

ಕೈ ಬೀಸಿ ಹೊರಟಿದ್ದೆ ನೀನು 
ಶಾಲೆಗೆಂದು!
ನನಗೇಕೆ ತಿಳಿಯಲಿಲ್ಲ
ಕಾಣದ ದೈವ ನಿನ್ನ ಹೊತ್ತೊಯ್ಯುವುದೆಂದು!
ಒಮ್ಮೆ ಹಿಂದಿರುಗುವೆಯಾ ಕಂದ,
ದೇವನಿಲ್ಲದ ಈ ಜಗಕೆ...!

ಕರುಳ ಬಳ್ಳಿಯು ಕಳಚಿ
ಹೋಯ್ತು!
ಹೂ ಬಿಡುವ ಮುನ್ನ!
ಕನಸ ನಾವೆಯು ಮಗುಚಿ
ಹೋಯ್ತು!
ದಡ ಸೇರುವ ಮುನ್ನ!

ಕೂಗಿ ಕೂಗಿ ಕರೆದರೂ
ಕೇಳದೇ ಹೊರಟೆಯೇಕೆ?
ಒಮ್ಮೆ ಹಿಂದಿರುಗಲಾರೆಯಾ ಕಂದ,
ದೇವನಿಲ್ಲದ ಈ ಜಗಕೆ!

ಅಂಗಳದ ಮಣ್ಣ ಕಣ
ಸದ್ದಿಲ್ಲದೇ ಕಾಯುತಿದೆ.
ನಿನ್ನ ಪುಟ್ಟ ಹೆಜ್ಜೆಗಳಿಗೆ....
ಹೂದೋಟದ ಹೂವು
ಬಾಡದೆ ನಿಂತಿದೆ....
ನಿನ್ನ ಮೃದು ಸ್ಪರ್ಶಗಳಿಗೆ...!
ಒಮ್ಮೆ ಹಿಂದಿರುಗಲಾರೆಯಾ ಕಂದ,
ದೇವನಿಲ್ಲದ ಈ ಜಗಕೆ!

ನೀ ಜೀಕುವ ಜೋಕಾಲಿ
ಬೇಸರದಿ ತೂಕಡಿಸಿದೆ!
ಕೆಂಪು ಕರಡಿಯ ಗೊಂಬೆ
ನಿರ್ಜೀವದಿ ಕುಳಿತಿದೆ! 
ನಿನ್ನಂತೆಯೇ....!
ಹಿಂದಿರುಗಿ ಬರಲಾರೆಯಾ ಕಂದ
ದೇವನಿಲ್ಲದ ಈ ಜಗಕೆ!

ನಿನ್ನ ಕಾಲ ಗೆಜ್ಜೆ  ಉಸಿರೆತ್ತದೇ
ಮೌನ ತಾಳಿದೆ.
ಕೈ ಬಳೆಗಳು ಉತ್ತರಿಸದೇ
ಮುನಿಸಿ ಕುಳಿತಿದೆ.
ಒಡತಿಯ ವಿಯೋಗದಿಂದ!
ಒಮ್ಮೆ ಹಿಂದಿರುಗಲಾರೆಯಾ ಕಂದ
ದೇವನಿಲ್ಲದ ಈ ಜಗಕೆ.

ಕಾದು ಕುಳಿತರೇನು ಬಂತು...?
ಕರಗೀತೆ ಮನದ ನೋವು?
ಕೂಗಿ ಕರೆದರೇನು ತಂತು?
ಸರಿಯಾದೀತೇ ಕಂದನ ಸಾವು?
ಒಮ್ಮೆ ಹಿಂದಿರುಗಿಬಿಡು ಕಂದ...
ದೇವನಿಲ್ಲದ  ಈ ಜಗಕೆ!

ನೀಡಿ ಹೋದೆಯಾ ಕಂದ 
ಈ ಅಮ್ಮನಿಗೆ ಕಂಬನಿಯ 
ಬಳುವಳಿ...!
ಇಲ್ಲದ ದೈವದ ಎದುರು 
ಹೇಗೆ ಸಾರಲಿ ನಾ ಚಳುವಳಿ?
ಹಿಂದಿರುಗಿ ಬಾ ಕಂದ ಎಂದರಚಿದರೂ
ವ್ಯರ್ಥ ಆ ವಿಧಿಯಾಟದ ಮುಂದೆ!
ಉಳಿದಿದ್ದು ದಾರಿಯು ಒಂದೇ...!
ನಿನ್ನ ನೆನಪಿನ ಹೆಜ್ಜೆಗೆ
ಗೆಜ್ಜೆ ಕಟ್ಟುವುದೊಂದೇ...!
- ರಂಜಿತಾ ಹೆಗಡೆ.






    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...