ಪುಟ್ಟ ಚಿಟ್ಟೆ ಏಕೆ ಹಾರಿ ಬಿಟ್ಟೆ
ಹೂದೋಟ ಕಾಟವಾಯಿತೆ,
ಸಿಟ್ಟ ಬಿಟ್ಟು ಬೀಡು ಕಟ್ಟು
ಮಧುವಿರದ ಬಾಳು ಸಾಗಿತೇ..?
ಅಡಗಿ ಕುಳಿತ ಮಧುರ ಮೈತ್ರಿ
ಮಿಡುಕಾಡುತಿಹುದು ಅಧರದಿ,
ಬಿಡದ ಕೋಪ ಬಿಗಿಹಿಡಿದರೂನು
ಕುಸುಮ ಚುಂಬಿಸುತಿಹುದು ಸದರದಿ...
ಆಟವಿನ್ನು ಮುಗಿಯಲಿಲ್ಲ
ಸೋತು ಓಡುವೆಯೇತಕೆ,
ನೋಟದಲ್ಲೆ ಗೆಲ್ಲಬಲ್ಲ
ನಿನ್ನೀ ಮೈಮಾಟಕಿಲ್ಲಿ ಬೇಡಿಕೆ...
ಹಾರಿಬಂದು ಸೇರೊ ಅಂದ
ನಿನ್ನಿಂದ ತಾನೆ ಸಂದಿತು,
ಜಾರಿ ಹೊರಟ ನಿನ್ನ ಹಿಂದೆ
ಸಾಲು ಗಟ್ಟಿ ಹೃದಯ ಬಂದಿತು...
ಕೊಡುವೆ ಚಿನ್ನದoಚಿನ ಚಿಗುರೆಲೆಯ
ಕಟ್ಟಿಕೊ ಅರಮನೆಯೊಂದ...
ಬಿಟ್ಟು ಕೊಟ್ಟರೀ ಒಲುಮೆಯ
ಬಾಡುವುದು ಬಂಧ, ಬೆಲೆಕಟ್ಟಲಾರದ ಮಕರಂದ...
- ಸೌಜನ್ಯ ದಾಸನಕೊಡಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ