ಶುಕ್ರವಾರ, ಡಿಸೆಂಬರ್ 9, 2022

ಹೊಂಬೆಳಕು (ಸಣ್ಣ ಕತೆ) - - ಶ್ರೀಮತಿ ಪರಿಮಳಾ ದೇಶಪಾಂಡೆ.

 "ಇದೇನ್ರೀ ಇಷ್ಟು ಬೇಗ ಮನೆಗೆ ಬಂದ್ರಿ?, ಆಫೀಸಿಗೆ ರಜೆಯಾ?" ಮಧ್ಯಾಹ್ನವೇ ತರಾತುರಿಯಿಂದ ಮನೆಗೆ ಬಂದ ಪತಿ ರಾಜೀವನನ್ನು ಕೇಳಿದ ಅಮೂಲ್ಯಳಿಗೆ, " ಅರ್ಜೆಂಟ್ ಊರಿಗೆ ಹೋಗ್ಬೇಕು ಅಮೂಲ್ಯ . ಅಪ್ಪನಿಗೆ ಹುಶಾರಿಲ್ಲವಂತೆ.ಅಣ್ಣ ಫೋನ್ ಮಾಡಿದ್ದ. ಆಫೀಸಿಗೆ ರಜೆ ಹಾಕಿ ಬಂದುಬಿಟ್ಟೆ. " ತುಸು ಗಾಬರಿಯಿಂದಲೇ ಹೇಳಿದವನು ,ಸೀದಾ ರೂಮಿಗೆ ಹೋಗಿ ಬಟ್ಟೆ ಪ್ಯಾಕ್ ಮಾಡತೊಡಗಿದ್ದ. 
"ನಾನು ಬರ್ತಿರೀ ನಿಮ್ಮ ಜೊತೆ. ಮಾವನ್ನ ನನಗೂ ನೋಡೋ ಮನಸ್ಸಾಗುತ್ತಿದೆ." ಅಮೂಲ್ಯ ಹೇಳುತ್ತಿದ್ದಂತೆ,ಸದ್ಯ ಏನು ಬೇಡ ಅಷ್ಟೇನು ಅವಶ್ಯಕತೆ ಈಗಿಲ್ಲ ಅಮ್ಮತೀರಿದ ಮೇಲೆ ಬಹಳೇ ಮೌನವಾಗಿ ಬಿಟ್ಟಿದ್ರಲ್ಲ. ಈಗಂತೂ ಕೋಣೆ ಬಿಟ್ಟು ಹೊರಗೆ ಬರಲ್ವಂತೆ.ಒಬ್ರೇ ಏನೇನೋ ಮಾತಾಡ್ತರಂತೆ.ನಾನು ಹೋಗಿ ಕಂಡೀಷನ್ ಹೇಗಿದೆ ಅಂತ ನೋಡಿ ಫೋನ್ ಮಾಡ್ತೇನೆ.
ಆಗ ಪಾಪು ಪುಟ್ಟುನ್ನ ಕರ್ಕೊಂಡು ಬರುವಂತಿ ಓಕೆನಾ
ಅವಸರವಸರದಲ್ಲಿ ಅವಳ ಕಡೆ ನೋಡದೇ ಬಟ್ಟೆ ಜೋಡಿಸುವುದರಲ್ಲಿ  ಮಗ್ನನಾದ ರಾಜೀವ. 
" ಮಕ್ಕಳನ್ನ ಅಮ್ಮನ ಮನೇಲಿ ಬಿಟ್ಟು ಇಬ್ಬರೂ ಜೊತೆಗೆ ಹೋಗೋಣರೀ ." ಎಂದ ಅಮೂಲ್ಯಗೆ
" ಅಲ್ಲಾ ಅಮೂಲ್ಯ, ಅಮ್ಮನ ಮರಣರಣಿಸಿದ ಸಮಯದಲ್ಲಿ ನಿನ್ನ ಅಲ್ಲಿ ಯಾವ ರೀತಿ ನಡೆಸಿಕೊಂಡ್ರು ಅವರು ಅನ್ನೋದನ್ನ ಮರ್ತು ಬಿಟ್ಟೆಯಾ.?.
ಅಲ್ಲಿಗೆ ಬಂದು ಅಪಮಾನಿತಳಾಗುವುದಕ್ಕಿಂತ ಇಲ್ಲೇ ಇರೋದು ಒಳ್ಳೆಯದಲ್ವಾ.?" ಅವಳನ್ನು ನೋಡ್ತಾ ಹೇಳಿದ ರಾಜೀವ 
ಹೌದ್ರಿ " ಅವರ ಮನಸ್ಸಿಗೆ ನೋವು ಕೊಟ್ಟ ಕಾರಣ ಅವ್ರು ಹಾಗೆ ನಡೆದುಕೊಂಡದಲ್ವಾ.?. ಅದಕ್ಕೆ ಹಿರಿಯರು ಒಂದೊಂದು ಮಾತು ಆಶೀರ್ವಾದ ಅಂತ ತಿಳ್ಕೊತ್ತೇನೆ." ಆಯ್ತಾ  ಮಾವನವರನ್ನು ನೋಡಲು ನಾನೂ ಬರ್ತಿನಿ ಎಂದು  ಅಮೂಲ್ಯ ಹಠ ಹಿಡಿದಾಗ  ರಾಜೀವನಿಗೆ ಗಂಟಲು ಕಟ್ಟಿತು ಕಣ್ಣಲ್ಲಿ ನೀರು ಜಿನಿಗಿತು ಹೆಂಡತಿಯ ಒಳ್ಳೆ ಮನಸ್ಸಿಗೆ ಸೋತ ರಾಜೀವ. " ನಿನ್ನಿಷ್ಟ" ಅಂದವನು ಮತ್ತೆ ಬಟ್ಟೆ ಜೋಡಿಸುವುದರಲ್ಲಿ ಮಗ್ನನಾದ.

       "ಅಪ್ಪ ಹೇಗಿದ್ದೀರಿ?" ನಿಂತರೆ ಆರಡಿ ಆಳಾಗುವ ಅಪ್ಪ ಮಂಚದ ತುದಿಯಲ್ಲಿ ಮೂರಡಿಯಲ್ಲಿ ಮುದುರಿ ಮಲಗಿದ್ದು ಕಂಡು ರಾಜೀವನಿಗೆ ದುಃಖ ಉಮ್ಮಳಿಸಿತು ಇದಕ್ಕೆ ಅಮೂಲ್ಯಳು ಹೊರತಾಗಿರಲಿಲ್ಲ. ತನ್ನ ಕಂಡರೆ ತಿರಸ್ಕಾರಭಾವ ಬೀರುತ್ತಿದ್ದ ಮಾವನೇ ನೆನಪಾದರವಳಿಗೆ. 
"ಇದೆಲ್ಲ ಏನಣ್ಣ.?. ಅಪ್ಪ ಇಷ್ಟು ಕುಗ್ಗಿ ಹೋದದ್ದು ನಾನು ಕಂಡಿರಲಿಲ್ಲ. ಇದ್ಯಾಕೆ ಹೀಗಾಯ್ತು.?" ಇವರಗಳು 
ಬಂದ ಸೂಚನೆ ತಿಳಿದು  ತೋಟದಿಂದ ಮನೆಗೆ ಬಂದಿದ್ದ ಅಣ್ಣನಲ್ಲಿ ಕೇಳಿದ ರಾಜೀವ. 

"ನನಗೇನು ಗೊತ್ತು.?. ಅಮ್ಮ ಹೋದ ಮೇಲೆ ಹೀಗೆ ಮಂಕಾಗಿ ಹೋದದ್ದು ನಿನ್ಗೆ ಗೊತ್ತೇ ಇದೆಯಲ್ಲ. ಈಗ ನಾಲ್ಕರು ದಿನದಿಂದ ಹೀಗೆ ಏನೇನೋ ಮಾತಾಡ್ತಾರೆ
ಊಟ ಮಾಡಿದ್ರೆ ಮಾಡಿದ್ರು, ಇಲ್ಲದ್ರೆ ಇಲ್ಲ. ನಮಗಂತೂ ಅವರ ನೋಡ್ಕೊಂಡು ಸಾಕಾಗಿದೆ. ನೀನೋ ದೂರ ಇದ್ದು ಜವಾಬ್ದಾರಿಯಿಂದ ತಪ್ಪಿಸಿಕೊಂಡೆ." ನನಗೆ ತಪ್ಪದ ಖರ್ಮ ಎಂದು ಹಣೆ ಬಡಿದುಕೊಂಡ ಅಣ್ಣನ ಕಟುನುಡಿ  ಕಹಿಮಾತುಗಳು ರಾಜೀವನಿಗೆ ಯಾಕೋ ಹಿಡಿಸಲಿಲ್ಲ. ಅಪ್ಪನನ್ನು ನೋಡಿಕೊಳ್ಳಲಾಗುತ್ತಿಲ್ಲ, ಕರ್ಕೊಂಡು ಹೋಗು ಅನ್ನೋ ಸೂಚ್ಯಭಾವನೆ ಅವನಲ್ಲಿತ್ತು ಅನ್ನೋದನ್ನ ರಾಜೀವ ಕಂಡುಕೊಂಡ. 
"ಡಾಕ್ಟರ್ ಗೆ ತೋರಿಸಿದ್ದೀಯಾ?. ಏನಂದ್ರು.?. " ಕೇಳಿದವನಿಗೆ, " ವಟವಟಗುಟ್ಟುವವರನ್ನ ಏನಂತ ತೋರಿಸಲಿ?. ಕರ್ಕೊಂಡು ಹೋಗ್ಲಿಲ್ಲ. " 
ಅಣ್ಣನ  ಒರಟು ಸ್ವಭಾವ ಬಲ್ಲವನಾದ್ದರಿಂದ ರಾಜೀವ ತಾನೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸನೆ ಮಾಡಿಸಿದ ರಾಜೀವ್ 

          "ನಂಥಿಂಗ್ ಟು ವರ್ರೀ ಮಿಸ್ಟರ್ ರಾಜೀವ. ಇವರಿಗೆ ದೈಹಿಕವಾಗಿ ಯಾವುದೇ ತೊಂದರೆ ಇಲ್ಲ. ಮಾನಸಿಕವಾಗಿ ಬಳಲುತ್ತಿದ್ದಾರಷ್ಟೇ. ಐ ಮೀನ್ ಅವರ ಜೊತೆ ಮಿಂಗಲ್ ಆಗ್ಬೇಕು, ಅವರ ಸುಖದುಃಖ ವಿಚಾರಿಸ್ಬೇಕು. ನಾಲ್ಕು ಒಳ್ಳೆ ಮಾತಾಡ್ಬೇಕು , ಹಾಗಿದ್ರೆ ಮಾತ್ರ ಸರಿ ಹೋಗ್ತಾರೆ. ಮುಖ್ಯವಾಗಿ ಸ್ಥಳ ಬದಲಾವಣೆ ಆದ್ರೆ ಒಳ್ಳೆದು ಅನಿಸುತ್ತೆ. ನೀವು ಹೇಗೋ ದೂರದಲ್ಲಿರೋರು ಅಲ್ವಾ?. ಅಲ್ಲಿಗೆ ಸ್ವಲ್ಪ ದಿನ ನಿಮ್ಮಲ್ಲಿಗೆ ಕರ್ಕೊಂಡು ಹೋಗಿ ನೋಡಿ ಆರಾಮಾಗ್ತಾರೆ ಬಿಡಿ "ಎಂದ ಡಾಕ್ಟರ್ ಸಲಹೆಗೆ ಮುಖ ಮುಖ ನೋಡಿಕೊಂಡರು ರಾಜೀವ ಅಮೂಲ್ಯ.

       'ಅಪ್ಪ ಅಮೂಲ್ಯ ನಮ್ಮ ಜಾತಿಯವಳಲ್ಲ ಅನ್ನೋ ಕಾರಣಕ್ಕೆ ದ್ವೇಷಿಸುವುದಲ್ಲದೇ, ಅವಳ ಮುಖ ನೋಡೋಕ್ಕೂ ಇಷ್ಟ ಪಡದವರು, ಅಂಥದ್ರಲ್ಲಿ ನಾವಿರುವಲ್ಲಿಗೆ ಕರ್ಕೊಂಡು ಹೋದ್ರೆ ಅಪ್ಪ ಬರುವರಾ??.. ಎಂದುಕೊಳ್ಳುವ ರಾಜೀವನ  ಮನದ ಮಾತು ಅಮೂಲ್ಯಳಿಗೆ ಕೇಳಿಸಿತು ಎಂಬಂತೆ, ' ಡೋಂಟ್ ವರ್ರಿ
ಐ ವಿಲ್ ಮ್ಯಾನೇಜ್' ' ಎಂದು ಕಣ್ಣಲ್ಲೇ ಉತ್ತರಿಸಿದ ಅಮೂಲ್ಯ ಮೃದುವಾಗಿ ಅವನ ಕೈ ಅದುಮಿದಳು..

    ರಾಜೀವನಿಗೆ ಅವಳನ್ನು ನೋಡುತ್ತಾ ತನ್ನ ಮುಂಚಿನ ದಿನಗಳತ್ತ ಮನ ಧಾವಿಸಿತು
ರಾಜೀವ್ ಮನೆಯಲ್ಲಿ ಇದ್ದುದಕ್ಕಿಂತ ಹೊರಗೆ ಇದ್ದುದ್ದೇ ಹೆಚ್ಚು. ವಿದ್ಯಾ ತರಬೇತಿ ಸಮಯದಲ್ಲಿ ಹಾಸ್ಟೆಲ್ ವಾಸ ಅಂತಾದರೆ, ಕೆಲಸ ಸಿಕ್ಕು  ಮನೆಗೆ ಮತ್ತಷ್ಟು ದೂರವಾಗಿದ್ದ. ಕಿರಿ ಮಗ ರಾಜೀವ ಅಂದ್ರೆ ಅಪ್ಪ ಅಮ್ಮನಿಗೆ ತುಸು ಪ್ರೀತಿ ಹೆಚ್ಚು. ಇದೇ ಕಾರಣ ಇರಬಹುದು ದೊಡ್ಡ ಮಗನಿಗೆ ರಾಜೀವ್ ಎಂದ್ರೆ ‌ ಈರ್ಷ್ಯೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ರಾಜೀವ್ ಅವನ ಸಹಪಾಠಿ ಆದ ಅವರ ಜಾತಿಯಲ್ಲದ ಅಮೂಲ್ಯಳನ್ನು  ಪ್ರೀತಿಸಿ ಮದುವೆಯಾದದ್ದು  ರಾಜೀವ್ ಅಣ್ಣನಿಗೆ ಇನ್ನಷ್ಟು ಅಸಹನೆಗೆ ಗುರಿ ಮಾಡಿತ್ತು. 

"ಯಾಕೆ ನಿನಗೆ ನಮ್ಮ ಜಾತಿಯಲ್ಲಿ ಹುಡುಗಿ ಸಿಗುತ್ತಿರಲಿಲ್ವಾ.?. ಈ ಹುಡುಗಿಯೇ ಆಗಬೇಕಿತ್ತಾ?.ನಿನಗೆ ಮನೆ ಮರ್ಯಾದೆಗೆ ಮಸಿ ಬಳಿದೆಯಲ್ಲೋ ಮಾರಾಯ." ಹೀನಾಯವಾಗಿ ಅಮೂಲ್ಯಳ ಎದುರಿನಲ್ಲೇ ರಾಜೀವನಿಗೆ ಬೈಯ್ದಿದ್ದದವನು ಅಪ್ಪ ಅಮ್ಮನನ್ನು ತನ್ನೊಂದಿಗೆ ಇರುವರೆಂದು ಜೋರು ಮಾಡಿದ್ದ
ಅಂದು ಅಮ್ಮಅಸಹಯಕಾಳಗಿ ಏನು ಹೇಳದೇ ಹೋದರೂ, ' ಯಾಕೋ ನಮ್ಮ ಹೊಟ್ಟೆ ಉರಿಸ್ತಿ?'  ಎಂದು  ಬಿಕ್ಕಿದ್ದು ರಾಜೀವನಿಗೂ ಅರ್ಥವಾಗಿತ್ತು.ಆಶೀರ್ವಾದ ಬೇಡಲು ಹೋದವನು , ಅವರ ಆಶೀರ್ವಾದದ ಬದಲು ರೋಷದ ಮಾತುಗಳನ್ನು  ಕೇಳಿಸಿಕೊಂಡು  ಬಂದವನು ಮತ್ತೆ ಹೋದದ್ದು ಅಮ್ಮನ ಅಕಾಲಿಕ ಮರಣದ ಸಮಯದಲ್ಲೇ . ಇನ್ನೂ ಆ ಮನೆ ಮೆಟ್ಟಲು ಹತ್ತಬೇಡದು ಎಂದು ತೀರ್ಮಾನಿಸಿಕೊಂಡ ಬಂದ ರಾಜೀವ್ನಿಗೆ ಅಮ್ಮನ
ಅಮ್ಮ ದಿನವಾರಗಳಲ್ಲಿ ಹೋಗಲೇ ಬೇಕಾಯಿತು ಅಂದು 
'ಏನಾದರಾಗಲಿ ಅತ್ತೆಯ ಶ್ರಾದ್ಧಕರ್ಮ ಗಳಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಬಂದ ಅಮೂಲ್ಯನಿಗೆ ಎಲ್ಲರ ಅವಕೃಪೆಗೆ ಪಾತ್ರವಾದದ್ದು ಮಾತ್ರ ವಿಪರ್ಯಾಸವಾಗಿತ್ತು. ಅಮೂಲ್ಯಳನ್ನು ಯಾರು ತಮ್ಮ ಕುಟುಂಬದ ಸದಸ್ಯರಲ್ಲಿ ಸೇರಿಸಿಕೊಳ್ಳಲಿಲ್ಲ  ತನ್ನ ಪತ್ನಿಯ ಯಾವ  ಕೆಲಸದಲ್ಲೂ ಅಮೂಲ್ಯನನ್ನು  ಸೇರಿಸಿಕೊಳ್ಳಬಾರದೆಂಬ ಮಾವನ ಕಟು ಮಾತು ಅಮೂಲ್ಯಳ ಕಿವಿಗೆ ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು ಅವಳು ಹಿಂದುಳಿದ ಅಸ್ಪೃಶ್ಯಳಂತೆ ದೂರವೇ ಇದ್ದವಳು, ಈಗ ಅದೆಲ್ಲವನ್ನೂ ಮರೆತು ಮಾವನನ್ನು ನಾನು ನೋಡಿಕೊಳ್ಳುವೆ ಅನ್ನೋ  ಅವಳ ಮಾತಿಗೆ ಏನೆನ್ನಬೇಕೋ  ರಾಜೀವನಿಗೆ ಅರ್ಥವಾಗದೇ ಸ್ತಬ್ದತೆ ಅವನದಾಗಿತ್ತು 

     "ಅಪ್ಪ ಇಷ್ಟು ಸಂತೋಷವಾಗಿರೋದನ್ನ ಹುಟ್ಟಿದಾಗಿನಿಂದ ನಾನು ನೋಡಿರಲೇ ಇಲ್ಲ ಅಮೂಲ್ಯ..ಅಪ್ಪನನ್ನ ಅಣ್ಣನಲ್ಲೇ ಬಿಟ್ಟಿದ್ದರೆ ಏನಾಗುತ್ತಿತ್ತೋ ಏನೋ.?. ಅಪ್ಪ ಇಲ್ಲಿ ಬಂದಲ್ಲಿನಿಂದ ನಿನಗೊಂದು ರೀತಿಯ ಸವಾಲೇ ಆಗಿಬಿಟ್ಟಿದ್ರಲ್ವಾ.?. ಬೈಯೋದು, ಊಟ ಬಿಸಾಕೋದು,ಅವರ ಉರಿನೋಟ ಬೀರೋದು, ಏಟು ಕೊಟ್ಟಿದ್ದೂ ಇದೆಯಲ್ಲ ಅಮೂಲ್ಯ, ಅದನ್ನೆಲ್ಲ ಹೇಗೆ ಸಹಿಸಿಕೊಂಡೆ. ಅಮೂಲ್ಯ ಅಷ್ಟು ದ್ವೇಷಿಸೋ ವ್ಯಕ್ತಿಯನ್ನ  ಅದ್ಯಾಹ್ಯಾಗೆ ಬದಲಾಯಿಸಿದೆ ನಾನಂತೂ ಕಾಣೆ. ನಿಜಕ್ಕೂ ನಿನ್ನ ಬಗ್ಗೆ ಹೆಮ್ಮೆ ಅನಿಸುತ್ತೆ, ಅಮೂಲ್ಯ.ಮಕ್ಕಳು ಕೂಡ ನೋಡು ತಾತ.. ತಾತ..ಅಂತ ಎಷ್ಟು ಪ್ರೀತಿಯಿಂದ ಮಾತ್ ಆಡ್ತಿವೆ. ಅಪ್ಪನು ಮಕ್ಕಳ ಜೊತೆ ಮಗುವಾಗಿ ಬಿಟ್ಟಿದ್ದಾರೆ..ನೋಡು " ಪಾರ್ಕಿನಲ್ಲಿ ಮಕ್ಕಳೊಂದಿಗೆ ತಮ್ಮದೇ ಲೋಕದಲ್ಲಿ ಮೈಮರೆತ ಅಪ್ಪನನ್ನು ನೋಡುತ್ತಾ ನುಡಿದ ರಾಜೀವ. 

   "ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ  ರ್ರೀ. ಅತ್ತೆಯ ಜೊತೆ ಒಡನಾಡಿಯಾಗಿದ್ದವರು, ಅವರ ಅಕಾಲಿಕ ಮರಣ ಅವರನ್ನು ಘಾಸಿಗೊಳಿಸಿತ್ತು ಅವರು ಮೌನಿಯಾದದ್ದು ಒಂದಡೆ ಆದರೆ , ಅವರನ್ನು ಮನೆಯಲ್ಲಿ ಗಮನಿಸದೇ ಹೋದದ್ದು ಮತ್ತೊಂದಡೆ ಅದು ಅವರಲ್ಲಿ ಒಂದು ರೀತಿಯ ಕೀಳರಿಮೆ ಬೆಳಯುತ್ತಾ  ಹೋಗಿ, ಮತ್ತಷ್ಟು ಒಂಟಿಯಾದರು, ಮಾನಸಿಕವಾಗಿ ನೊಂದರು, ತನ್ನ ಜೊತೆ ಯಾರಿಲ್ಲ ಅಂದಾಕ್ಷಣ ತಮ್ಮಲ್ಲೇ ತಾವೇ ಮಾತಾಡೋಕೆ ಶುರು ಮಾಡಿದ್ರು. ಒಂಟಿತನ ಖಿನ್ನತೆ ಅವರನ್ನು ಮಾನಸಿಕ ರೋಗಿಯಾಗಿಸಿತ್ತು. ಪ್ರತಿಯಬ್ಬರಿಗೂ ವಯಸ್ಸಾದಂತೆ ಬಂಧತ್ವ ಬಾಂದವ್ಯ ತನ್ನವರು ಎನ್ನುವುದು ಬೇಕಾಗುತ್ತೆ ಅದರ ಕೊರತೆ ಹೆಚ್ಚಿದಂತೆ ಮನುಷ್ಯನಿಗೆ ಪರರಲ್ಲಿ ಕೋಪ ಅಸಹ್ಯ ವೃದ್ಧಿ ಆಗುತ್ತೆ ಎಲ್ಲರಿಂದಲೂ ದೂರವಿದ್ದು ಒಂಟಿತನಕ್ಕೆ ತನಗೆ ಅರಿಯದಂತೆ ಅವನು ಹತ್ತಿರ ಆಗುತ್ತಾನೆ ಎಂದು ಹೇಳುತ್ತಾ ವೃದ್ಧರು ಮಕ್ಕಳಂತೆ ಅಲ್ಲವೇನ್ರೀ. ಅವರ ಬೇಕು ಬೇಡಗಳನ್ನು ಗಮನಿಸೋಕೆ, ಅವರ ಜೊತೆ ಮಾತನಾಡೋಕೆ ಯಾರು ಇಲ್ಲ ಅಂತಾದಾಗ ಇಂಥಹ ಮಾನಸಿಕ ಸ್ಥಿತಿ ತಲುಪ್ತಾರೆ. ನಾವು ಆದಷ್ಟು ಅವರ ಕಡೆ ಗಮನ ಕೊಡುತ್ತಾ, ಅವರನ್ನ ಪ್ರೀತಿಯಿಂದ ಮಾತನಾಡಿಸುತ್ತಾ ಇದ್ರೆ, ಅವರಿಗೆ ಇಂಥಹ ಸ್ಥಿತಿ ಬರಲ್ಲ ಅಲ್ವಾ?. ನಾನು ಅದೇ ಕೆಲಸವನ್ನು ತಾಳ್ಮೆಯಿಂದ ಮಾಡಿದೆ ಅಷ್ಟೇ.."ಎಂದು ಹೇಳಿ ನಸು ನಕ್ಕುಳು ಅಮೂಲ್ಯ 

"ಜಾತಿ, ಮತ ಕುಲ  ಎಂದು ಇವಳನ್ನು ದೂರವಿಟ್ಟೆ. ಆದ್ರೆ ಇವಳೇ ನೋಡು ನನ್ನ ಈಗಿನ ಸ್ಥಿತಿಗೆ ಕಾರಣವಾದದ್ದು. ನಾನೆಷ್ಟೇ ಉಪದ್ರವ ಕೊಟ್ರು , ಎಲ್ಲವನ್ನೂ ಎಷ್ಟು ಸಹನೆಯಿಂದ ಸಹಿಸಿಕೊಂಡು ನೋಡಿಕೊಂಡಳು ನೋಡು. ಬಹುಶಃ ಯಾರಿಂದಲೂ ಇದು ಸಾಧ್ಯವಾಗುತ್ತಿರಲಿಲ್ಲ ಅನಿಸುತ್ತೆ. ಇವಳು ನನಗೆ ಸೊಸೆಯಲ್ಲಪ್ಪ ಮಗಳು, ನನ್ನ ಮಗಳು.." ಅದ್ಯಾವ ಗಳಿಗೆಯಲ್ಲಿ ಅಪ್ಪ ಅವರಿಬ್ಬರ ಬಳಿ ಬಂದಿದ್ದರೋ ಇಬ್ಬರಿಗೂ ಗೊತ್ತಾಗಿರಲಿಲ್ಲ. 

"ಅಪ್ಪಾ, ಏನು ಹೇಳ್ತಾ ಇದ್ದೀರಾ ನೀವು..? " ರಾಜೀವ ಕೇಳಿದ.
"ಹೌದು ರಾಜೀವ. ನಿನ್ನ ಅಮ್ಮ ಇದ್ದಿದ್ದರೂ ಇಷ್ಟು ಚಂದ ನೋಡ್ತಿದ್ಳೋ ಇಲ್ವೋ?. ಇನ್ನು ಆ ಹಿರೇ ಸೊಸೆ ಮಕ್ಕಳ ಜೊತೆ ಮಾತಾಡೋಕು ಬಿಡದೇ, ಒಂದು ರೀತಿಯಲ್ಲಿ ಒಬ್ಬಂಟಿ ಮಾಡಿಬಿಟ್ಳು. ಮಾನಸಿಕವಾಗಿ ಕುಸಿದು
ಹೋಗಿನಪ್ಪ. ಮೊದಲ ಬಾರಿ ನಿನ್ನ ಮನೆಗೆ ಕಾಲಿಟ್ಟಾಗ ಅದೇನೋ ಧೈರ್ಯ ಬಂತು.ಅಮೂಲ್ಯಳ ಪ್ರತಿಯೊಂದು ಸಂಸ್ಕಾರವೂ ನಮ್ಮ ಕುಟುಂಬಕ್ಕೆ ಹೇಳಿ ಮಾಡಿಸಿದಂತೆ ಇದ್ದದ್ದು ಕಂಡು ಏನೋ ತೃಪ್ತ ಭಾವ ತುಂಬಿತು. ಆದ್ರೂ ನಾನು ಒಂಟಿ ಅನ್ನೋ ಭಾವನೆ ನನ್ನ ಬಿಟ್ಟು ಹೋಗಿರಲಿಲ್ಲ. ತುಸು ಹೆಚ್ಚೇ ಉಪದ್ರವ ಕೊಟ್ಟೇ ಅಂತ ಕಾಣುತ್ತೆ ಈ ಮಗುವಿಗೆ. ಕ್ಷಮಿಸು  ತಾಯಿ ಈ ಪಾಪಿ ಮಾವನನ್ನು.." ಕೈಗಳೆರಡನ್ನು ಜೋಡಿಸಿ, ಅಮೂಲ್ಯಳ ಎದುರು ತಲೆತಗ್ಗಿಸಿ ನಿಂತಾಗ, 
"ಛೆ!. ಇದೇನಿದು ಅಪ್ಪ. ಈಗ ತಾನೇ ಸೊಸೆಯಲ್ಲ ಮಗಳು ಅಂದ್ರಿ.ಅಪ್ಪ ಮಾಡಿದ್ದು ಉಪದ್ರವ ಅನಿಸಿಲ್ಲ ನನಗೆ. ಆ ಸಮಯದಲ್ಲಿ ನಿಮ್ಗೆ ಏನು ತಿಳಿಯುತ್ತಿರಲಿಲ್ಲಪ್ಪ, ಮತ್ಯಾಕೆ ಕ್ಷಮೆ.?. ನೀವು ಯಾವ ಕ್ಷಣದಲ್ಲಿ ನನ್ನನ್ನು ಮಗಳಾಗಿ ಕಂಡ್ರೋ ಆ ಕ್ಷಣದಲ್ಲಿ ನಾ ನಿಮ್ಮ ಮಗಳೇ. ಆವತ್ತು ಬಂದಾಗ ನಮಗಿಬ್ಬರಿಗೂ ನಿಮ್ಮ ಆಶೀರ್ವಾದ ಸಿಗಲೇ ಇಲ್ಲ. ಈಗಲಾದ್ರೂ ಆಶೀರ್ವಾದ ಮಾಡ್ತೀರಾ ಅಪ್ಪ..?. " ಪಾರ್ಕ್ ಅನ್ನೋದನ್ನ ಕೂಡ ನೋಡದೇ , ರಾಜೀವ , ಅಮೂಲ್ಯ ಇಬ್ಬರೂ. ಅವರ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದಾಗ, 
"ನೂರು ವರ್ಷ ಗಂಡ ಹೆಂಡಿರಿಬ್ಬರೂ ಸುಖವಾಗಿ ಬಾಳಿ " ಇಬ್ಬರ ತಲೆಯ ಮೇಲೂ ಕೈಯನ್ನಿಟ್ಟು ತುಂಬು ಮನದಿಂದ  ಆಶೀರ್ವದಿಸಿದವರನ್ನು ನೋಡಿ
ಅಂದು ಈ ಆಶೀರ್ವಾದ ಲಭಿಸಿದ್ದರೂ, ಇಂಥಹ ಸಂತಸ ಇರುತ್ತಿರಲಿಲ್ಲವೇನೋ ಅನಿಸಿತು ರಾಜೀವ್ ಆಮ್ಯಾಲರಿಗೆ ಈ ಆಪ್ತ ಆಶೀರ್ವಾದ  ಹಳೆಯ ವಿಚಾರಗಳನ್ನು ಒಂದೇ ಕ್ಷಣದಲ್ಲಿ ಮರೆಸಿ , ರಾಜೀವ, ಅಮೂಲ್ಯರ ಮುಖದಲ್ಲಿ  ಸುಂದರ ಭರವಸೆ ನಗು ಅರಳಿಸುವಲ್ಲಿ ಸಫಲವಾಗಿತ್ತು
ಕಷ್ಟದ ಕತ್ತಲು ನೀಗಿ ಮನಗಳಲ್ಲಿ ಹೊಂಬೆಳಕು ಮೂಡಿಸಿತ್ತು 

- ಶ್ರೀಮತಿ ಪರಿಮಳಾ ದೇಶಪಾಂಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...