ಗುರುವಾರ, ಜನವರಿ 12, 2023

ಯುವ ಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ವಿಶ್ವವನ್ನೇ ಜಾಗೃತ ಗೊಳಿಸಿದವರು ಸ್ವಾಮಿ ವಿವೇಕಾನಂದರು - ಶ್ರೀಮತಿ‌ ಕಲಾವತಿ ಮಧುಸೂದನ.

ದಿ: 12.01.2023
ವಿಚಾರ ಮಂಟಪ ಸಾಹಿತ್ಯ ಬಳಗ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯದ ಕುರಿತ ಆನ್ಲೈನ್ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬರಹಗಾರರು, ಉಪನ್ಯಾಸಕರು ಆದ ಶ್ರೀ ಲಕ್ಷ್ಮೀ ಕಿಶೋರ್ ಅರಸ್ ರವರು ಮಾತನಾಡುತ್ತಾ, 
ಭಾರತೀಯರ ಕುರಿತು ಪಾಶ್ಚಾತ್ಯರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸುವಲ್ಲಿ ವಿವೇಕಾನಂದರ ಕೊಡುಗೆ ಬಹಳ ಮಹತ್ವದ್ದು. ಪ್ರತಿ ಸೂರ್ಯನ ಹಾಗೇ ಭಾರತದ ಜ್ಞಾನದ ಬೆಳಕನ್ನು ವಿಶ್ವಕ್ಕೆ ಸಾರಿದವರು ವಿವೇಕಾನಂದರು. ವಿವೇಕಾನಂದರ ಮತ್ತು ಅವರ ಪ್ರಾಮಾಣಿಕತೆಯ ಮೂಲಕ ಸಾವಿರಾರು ಜನರು ಸಾಧನೆಯ ಹಾದಿ ಹಿಡಿದರು. ಭಗವಂತನ ಅಪರಾವತಾರ ಎನ್ನುವಂತೆ ಇಲ್ಲಿನ ಜಾತಿಯತೆ, ಮೌಢ್ಯತೆ, ಮತ್ತು ಅನಾಚಾರಗಳನ್ನು ನಿರ್ಮೂಲನೆ ಮಾಡಿ ಜ್ಞಾನ, ಸಮಾನತೆಯ ಭಾರತವನ್ನು ನಿರ್ಮಿಸುವ ಕನಸು ಕಂಡವರು, ಆ ಕನಸನ್ನು ಸಾಕಾರಗೊಳಿಸಲು ಯುವ ಶಕ್ತಿಯನ್ನು ಒಟ್ಟಾಗಿಸಲು ಶ್ರಮಿಸಿದವರು ಸ್ವಾಮಿ ವಿವೇಕಾನಂದರು.

ವಿವೇಕಾನಂದರನ್ನು ರೂಪಿಸಿದ, ವಿದ್ಯೆ, ಬುದ್ಧಿ, ವಿವೇಕಗಳನ್ನು ಕಲಿಸುತ್ತಾ, ನರೇಂದ್ರನನ್ನು ವಿವೇಕಾನಂದನನ್ನಾಗಿಸಿದವರು ಪರಮಹಂಸ ರಾಮಕೃಷ್ಣರು. ಪ್ರತಿ ಶಿಷ್ಯನ ಯಶಸ್ಸು ಒಬ್ಬ ಉತ್ತಮ ಗುರುವನ್ನು, ಮತ್ತವನ ಮಾರ್ಗದರ್ಶನವನ್ನು ಅವಲಂಭಿಸಿದೆ ಎಂಬುದಕ್ಕೆ ರಾಮಕೃಷ್ಣ ಪರಮಹಂಸರೇ ನಿದರ್ಶನ. ಆಧ್ಯಾತ್ಮದ ಕುರಿತು ಅತೀವ ಆಸಕ್ತಿಯುಳ್ಳ ನರೇಂದ್ರನು ಶಿಖರ ಸೂರ್ಯನಾಗಿ ಮಿಂಚಿದ್ದು, ಮಿಂಚಿ ಜಗತ್ತಿಗೆ ಬೆಳಕಾದದ್ದು ಶ್ರೀ ಗುರುವಿನ ಕೃಪಾದೃಷ್ಠಿಯಿಂದಲೇ.

ಟಾಗೂರರು ವಿವೇಕಾನಂದರ ಕುರಿತು ಹೇಳುತ್ತಾ, ನಾವು ಭಾರತದ ಇತಿಹಾಸವನ್ನು ಅರಿಯಬೇಕಾದರೆ ಮೊದಲು ವಿವೇಕಾನಂದರನ್ನು ಅರಿಯಬೇಕೆನ್ನುತ್ತಾರೆ. ಏಕೆಂದರೆ, ವಿವೇಕಾನಂದರು ಮತ್ತವರ ಚಿಂತನೆಗಳೇ ಭಾರತದ ಇತಿಹಾಸ ಮತ್ತು ಭವಿಷ್ಯ. ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ ಸಾವಿರಾರು ಮಂದಿ ಅವರ ಶಿಷ್ಯರಾಗುತ್ತಾರೆ. ವಿಶೇಷವೇನೆಂದರೆ ವಿವೇಕಾನಂದರ ಶಿಷ್ಯರಲ್ಲಿ ಹಲವು ವಿದೇಶಿಯರು ಇದ್ದದ್ದು. ಐರ್ಲೆಂಡಿನ ಮಾರ್ಗರೆಟ್‌ ವಿವೇಕಾನಂದರ ಶಿಷ್ಯೆಯಾಗಿ ಸಿಸ್ಟರ್‌ ನಿವೇದಿತಾ ಎಂಬ ಹೆಸರಿನಿಂದ ಭಾರತದಲ್ಲೇ ಉಳಿದು ಸಾಧನೆ ಮಾಡಿದರು.

೧೮ ನೇ ಶತಮಾನ ಬ್ರಿಟೀಷರ ದುರಾಡಳಿತ, ಜಾತಿಯ ಅಂಧಕಾರ ಹಾಗೂ ಮೌಢ್ಯತೆಗಳಿಂದ ಭಾರತವು ನಲುಗಿ ಹೋಗಿದ್ದ ಕಾಲ. ಇಂತಹ ವಿಷಮ ಕಾಲಘಟ್ಟದಲ್ಲಿ ವಿವೇಕಾನಂದರು ಯುವ ಶಕ್ತಿಗಳನ್ನು ಒಟ್ಟುಗೂಡಿಸುವ ಮೂಲಕ ಎಲ್ಲಾ ದುಷ್ಟ ಶಕ್ತಿಗಳನ್ನು ನಿರ್ನಾಮ ಮಾಡುವ ಸಂಕಲ್ಪವನ್ನು ಕೈಗೊಂಡರು. ಇದಕ್ಕಾಗಿ ದೇಶದಾದ್ಯಂತ ಪರ್ಯಟನೆ ಮಾಡುತ್ತಾ, ಯುವ ಜನತೆಯನ್ನು ಎಚ್ಚರಿಸುತ್ತಾ ಮುನ್ನಡೆದರು.

ಇದೇ ಸಂದರ್ಭ ಅಂದರೆ ೧೮೯೨ ರಲ್ಲಿ ವಿವೇಕಾನಂದರು ಮೈಸೂರಿಗೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ವಿವೇಕಾನಂದರು ಎಲ್ಲಿಗೆ ಹೋದರೂ ಅಲ್ಲಿ ಅವರನ್ನು ಕಾಣಲು ಸಾವಿರಾರು ಜನರ ಯುವಕರ ದಂಡೇ ಇರುತ್ತಿತ್ತು. ಆಗಿನ ಮೈಸೂರು ಒಡೆಯರಾದ ೧೦ ನೇ ಚಾಮರಾಜೇಂದ್ರ ಒಡೆಯರು ವಿವೇಕಾನಂದರನ್ನು ಅರಮನೆಗೆ ಕರೆಸಿಕೊಂಡು ಚಿಕಾಗೋನಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನಕ್ಕಾಗಿ ವಿವೇಕಾನಂದರು ಹೋಗಲಿರುವ ಸಮಾಚಾರವನ್ನು ತಿಳಿದು ಆ ಪ್ರಯಾಣಕ್ಕೆ ತಾವೂ ಸಹ ಪ್ರಾಯೋಜಕತ್ವವನ್ನು ನೀಡಿದ್ದರು. ಸರ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾಷಣ ಮಾಡುವಾಗ ತೊಟ್ಟಿದ್ದ ಕೋಟ್‌ಅನ್ನು ವಿವೇಕಾನಂದರಿಗೆ ಬಹುಮಾನವಾಗಿ ನೀಡಿದ್ದವರು ಮಹರಾಜರೇ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಚಿಕಾಗೂ ಸರ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ವಿವೇಕಾನಂದರು ತಮ್ಮಗಿದ್ದ ಅಲ್ಪ ಸಮಯದಲ್ಲಿಯೇ ಭಾರತೀಯ ಧರ್ಮದ ಮಹತ್ವ, ಭಾರತೀಯರ ಭಾತೃತ್ವ ಮನೋಭಾವ, ಸರ್ವ ಧರ್ಮಗಳನ್ನು ಗೌರವಿಸುವ ಆಧರಿಸುವ ಗುಣಗಳನ್ನು ಜಗತ್ತಿಗೇ ಪರಿಚಯಿಸುವ ಮೂಲಕ ಭಾರತೀಯ ಧರ್ಮದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುವರು.

ಚಿಕಾಗೋದಿಂದ ವಾಪಸ್ಸಾದ ಮೇಲೂ ದೇಶ ಪರ್ಯಟನೆ ಮಾಡುತ್ತಾ ದೇಶದ ಮೂಲೆ ಮೂಲೆಗಳಲ್ಲಿ ರಾಮಕೃಷ್ಣ ಮಿಷನಿನ್ನ ಆಶ್ರಮ ಶಾಖೆಗಳನ್ನು ತೆರೆಯುತ್ತಾ ಯುವ ಜನರನ್ನು ಎಚ್ಚರಿಸುತ್ತಾ ಮುನ್ನಡೆದರು. ದೇಶದ ಯುವ ಜನತೆಯ ಮೇಲೆ ಅತೀವ ವಿಶ್ವಾಸ ಮತ್ತು ಭರವಸೆಯನ್ನು ಇಟ್ಟಿದ ವಿವೇಕಾನಂದರು ಯುವ ಶಕ್ತಿಯನ್ನು ಒಗ್ಗೂಡಿಸುವ ಮೂಲಕವೇ ನಮ್ಮ ನಾಳಿನ ಭಾರತವನ್ನು ಸಮೃದ್ಧಗೊಳಿಸುವುದು, ಸದೃಡಗೊಳಿಸುವುದು ಸಾಧ್ಯವೆಂದು ನಂಬಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ, ಭಾರತೀಯ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಉದ್ದೀಪಿಸುಲ್ಲಿಯೂ ವಿವೇಕಾನಂದರ ಕೊಡುಗೆ ಬಹಳ ಮಹತ್ವದ್ದಾಗಿದೆ.
(ಶ್ರೀ ಲಕ್ಷ್ಮೀ ಕಿಶೋರ ಅರಸ್, ಬರಹಗಾರರು, ಉಪನ್ಯಾಸಕರು, ಶೃಂಗೇರಿ)

ಕೇವಲ ಭಾರತೀಯ ಧರ್ಮ ಸಂಸ್ಕೃತಿಗಳನ್ನು ಅವುಗಳ ಮಹತ್ವವನ್ನು ಹೊಗಳುವುದಷ್ಟೇ ಅಲ್ಲದೇ ತಮ್ಮಗೆ ಕಂಡ ಲೋಪಗಳನ್ನು ಹಾಗೂ ಸಮಸ್ಯೆಗಳನ್ನು ಸಹ ಧೈರ್ಯವಾಗಿ ವಿವೇಕಾನಂದರು ವಿಡಂಬಿಸುತ್ತಿದ್ದರು. ಇಂದಿನ ಯುವ ಜನತೆಯು ತಮ್ಮ ಭವಿಷ್ಯದ ಯೋಚನೆ ಇಲ್ಲದೆ ಪೋನ್‌, ಇಂಟರ್ನೆಟ್‌, ಮತ್ತು ಮನರಂಜನೆಯಲ್ಲಿ ಕಾಲಕಳೆಯುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಚಿಂತನೆಗಳು ನಮಗೆ ಅತ್ಯಂತ ಪ್ರಸ್ತುತವಾಗುತ್ತವೆ. ದೇಶ ವಿದೇಶಗಳ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳು ಇಂದು ವಿವೇಕಾನಂದರನ್ನು ಅಧ್ಯಾಯನ ಮಾಡುತ್ತಿವೆ. ಹೀಗಿರುವಾಗ ಅವರು ಬಹುವಾಗಿ ನಂಬಿದ್ದ ಭಾರತದ ಯುವ ಜನರಾದ ನಾವು ಮೌಢ್ಯಗಳಲ್ಲಿ ಬಿದ್ದು ಹೊರಳಾಡುವುದು ಎಷ್ಟು ಸರಿ?.

ನಮ್ಮ ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ಸಮಾಜವನ್ನು ಇಂದಿಗೂ ಬೆಂಬಿಡದೇ ಕಾಡುತ್ತಿರುವ ಜಾತೀಯತೆ, ಸ್ತ್ರೀ ಶೋಷಣೆ, ಮೌಢ್ಯಗಳು, ಅನಕ್ಷರತೆ, ಬಡತನ ಮುಂತಾದ ಸಮಸ್ಯೆಗಳನ್ನು ನಾವು ವಿವೇಕಾನಂದರನ್ನು ಓದುವ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಖಂಡಿತ ಪರಿಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಈ ಕ್ಷಣದಿಂದಲೇ ಕಾರ್ಯೋನ್ಮುಖರಾಗಬೇಕಿದೆ ಎಂದು ಹೇಳಿದರು.

ಉಪನ್ಯಾಸದ ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಜು ಸೂಲೇನಹಳ್ಳಿ ಇವರು ಮಾತನಾಡುತ್ತಾ, ವಿವೇಕಾನಂದರ ಜನ್ಮಜಯಂತಿಯಂದು ಅವರನ್ನು ಓದಿ ನಂತರ ಮರೆಯಬಾರದು. ವಿವೇಕಾನಂದರ ಓದು – ಚಿಂತನ – ಮಂಥನಗಳು ಅನುದಿನವೂ ನಡೆಯಬೇಕು ಆಗ ಮಾತ್ರ ವಿವೇಕಾನಂದರು ಕನಸು ಕಂಡ ಭಾರತವು ನನಸಾಗುವುದು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸ್ಪಂದನ ಸಿರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರು, ಕವಿಗಳು ಆದ ಶ್ರೀಮತಿ ಕಲಾವತಿ ಮಧುಸೂಧನ ಅವರು ಮಾತನಾಡುತ್ತಾ, ಇಂದಿನ ಯುವ ಜನರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ, ತಮಗಿರುವ ಅಪಾರ ಶಕ್ತಿಯನ್ನು ಅರಿಯದೇ ಹೋಗಿದ್ದಾರೆ ಈ ನಿಟ್ಟಿನಲ್ಲಿ ನಮ್ಮ ಯುವಕ ಯುವತಿಯರನ್ನು ಎಚ್ಚರಿಸುವ ಸಲುವಾಗಿ ಈ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ವಿವೇಕಾನಂದರ ಚಿಂತನೆಗಳನ್ನು ನಾವೆಲ್ಲರೂ ಬಹಳ ಗಂಭೀರವಾಗಿ ಓದಿಗೆ ಒಳಪಡಿಸಬೇಕು. ಅವರನ್ನು ಅನುಸರಿಸಬೇಕು. ಕೃಷ್ಣನನ್ನು ಅರಿಯಬೇಕಾದರೆ ಗೀತೆಯನ್ನು, ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ಓದಬೇಕೆಂಬ ಗಾಂಧಿಯವರ ಮಾತು ಈ ನಿಟ್ಟಿನಲ್ಲಿ ೧೦೦ ಕ್ಕೆ ೧೦೦ ಸತ್ಯವಾದದ್ದು. ಕೇವಲ ೭ ವರ್ಷಗಳ ಅವಧಿಯಲ್ಲಿ ವಿವೇಕಾನಂದರ ಕೀರ್ತಿ ಜಗತ್ತಿನಾದ್ಯಂತ ಪಸರಿಸಿತು. ಯುವ ಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ವಿಶ್ವವನ್ನೇ ಜಾಗೃತ ಗೊಳಿಸುವ ಪ್ರಯತ್ನವನ್ನು ವಿವೇಕಾನಂದರು ಮಾಡಿದರು. ಶ್ರದ್ಧೆ, ಸಹನೆ ಮತ್ತು ಸತತ ಪ್ರಯತ್ನ ಈ ಮೂರು ನಮ್ಮಲ್ಲಿದ್ದರೆ ನಾವೆಲ್ಲರೂ ಖಂಡಿತ ಗೆಲ್ಲುತ್ತೇವೆ ಎಂಬುದನ್ನು ವಿವೇಕಾನಂದರು ನಮಗೆ ತಿಳಿಸಿದರು. ನಾವು ವಿವೇಕಾನಂದರನ್ನು ಓದುವುದರಿಂದ ಅವುಗಳನ್ನು ಅನುಸರಿಸುವುದರಿಂದ ಮತ್ತು ಅವರನ್ನು ನಮ್ಮ ಬದುಕುಗಳ ಮೂಲಕ ಜೀವಿಸುವುದರಿಂದ ವಿವೇಕಾನಂದರ ಮತ್ತವರ ಚಿಂತನೆಗಳಿಗೆ ಜೀವಕೊಡಬಹುದು ಮತ್ತು ಅವರು ಕಂಡ ಭವ್ಯ ಭಾರತದ, ಸದೃಡ ಭಾರತದ ಕನಸನ್ನು ನನಸು ಮಾಡಬಹುದು ಎಂದು ಹೇಳಿದರು.

ಉಪನ್ಯಾಸದ ನಂತರ ವಿವೇಕಾನಂದರ ಚಿಂತನೆಯ ಪ್ರಸ್ತುತತೆಯ ಕುರಿತು ಸಂವಾದವನ್ನು ನಡೆಸಲಾಯಿತು. ಶ್ರೀ ಗೌತಂ ಗೌಡ, ಉದಯ್‌ ಕಿರಣ್‌, ನೇತ್ರಾವತಿ ಜಿಎನ್.‌ ರಂಗ ಸ್ವಾಮಿ, ಹೆಚ್‌ ಮೈಲಾರಿ, ಮುತ್ತು ವಡ್ಡರ್‌ ಮುಂತಾದವರು ಉಪಸ್ಥಿತರಿದ್ದರು.
ವರದಿ – ಶ್ರೀ ವರುಣ್‌ ರಾಜ್‌ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ.

1 ಕಾಮೆಂಟ್‌:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...