ಬುಧವಾರ, ಜನವರಿ 4, 2023

ಸೌಗಂಧಿನಿ ಕಥಾ (ಸಣ್ಣ ಕತೆ) - ರಂಜಿತಾ ಹೆಗಡೆ.

'ಸೌಗಂಧಿಕಾ ನಗರಿ' ರಾಜ್ಯವನ್ನು ರಾಜ ಸುಧನ್ವ ಧರ್ಮನು ಆಳುತ್ತಿದ್ದ. ರಾಣಿ ಭಾನುಮತಿ ಅವನ ಪಟ್ಟದರಸಿ. ನಾಟ್ಯ ಶಾಸ್ತ್ರ ಪ್ರವಿಣೆ...! ಇನ್ನು ಮಗಳು ಸೌಗಂಧಿನಿ.ತಾಯಿ ಕಲಿತ ವಿದ್ಯೆ ಅವಳಿಗೆ ವರವಾಗಿ ಬಂದಿತ್ತು. ತ್ರಿಪುರ ಸುಂದರಿ... 'ಸೌಗಂಧಿಕಾ ನಗರಿ'ಯಲ್ಲಿ ಒಂದು ಸೌಗಂಧಿಕಾ ಪುಷ್ಪದ ಹೂದೋಟ. ಅದರ ಪಕ್ಕದಲ್ಲಿ ದುರ್ಗಾ ಪರಮೇಶ್ವರಿಯ ಗುಡಿ.ಸದಾ ಸೌಗಂಧಿಕಾ ಪುಷ್ಪ ಅರಳಿ ಸುಗಂಧ ಹರಡುತ್ತಿದ್ದರಿಂದ 'ಸೌಗಂಧಿಕಾ ನಗರಿ'ಎಂಬ ಹೆಸರು ಬಂದಿತು.ದುರ್ಗಾ ಪರಮೇಶ್ವರಿಯ ಕೃಪೆಯೋ, ರಾಜ ಸುಧನ್ವನ ದಕ್ಷ ಆಡಳಿತವೋ ರಾಜ್ಯ ಸುಭಿಕ್ಷವಾಗಿತ್ತು.

        ರಾಜಕುಮಾರಿ ಸೌಗಂಧಿನಿಯ ಗೆಳತಿ ಶಾಂಭವಿ. ಅವಳಿಗೆ ನಾಟ್ಯ ಸಂಗೀತ ಚಿತ್ರಕಲೆ ಕರತಲಾಮಲಕವಾಗಿತ್ತು...!ಬಾಲ್ಯದಿಂದಲೂ ಸೌಗಂಧಿನಿಯ ಜೊತೆಗೇ ಕತ್ತಿ ವರಸೆ ಬಿಲ್ವಿದ್ಯೆ ಕಲಿತಿದ್ದಳು. ಅದೂ ಸೌಗಂಧಿನಿಯ ಒತ್ತಾಯದ ಮೇರೆಗೆ. ಅವರಿಬ್ಬರಿಗೂ ಸೌಗಂಧಿಕಾ ಪುಷ್ಪದ ಹೂದೋಟ ಇಷ್ಟದ ಸ್ಥಳ.ಹೀಗೆ ಇಬ್ಬರೂ ಹೂದೋಟಕ್ಕೆ ಹೋಗಿದ್ದರು.ಅಲ್ಲಿ 'ಸುಜಲಾ ಪುರ'ದ ರಾಜಕುಮಾರ ಸೋಮನಾಥ ತನ್ನ ಸ್ನೇಹಿತರೊಡನೆ ಬಂದಿದ್ದನು.ಹೀಗೆ ಸಂಜೆಯ ಸಮಯವಾದಾಗ ಇಬ್ಬರೂ ಅರಮನೆಯೆಡೆಗೆ ಹೊರಟರು.

           ಮಾರನೆಯದಿನ ರಾಜಸಭೆಯಲ್ಲಿ ಒಬ್ಬ ಸೇವಕ ರಾಜ ಸುಧನ್ವ ಧರ್ಮನಿಗೆ ನಮಿಸಿ "ಮಹಾರಾಜರೇ, ಸುಜಲಾಪುರದಿಂದ ಪತ್ರ ಬಂದಿದೆ" ಎಂದವನಿಗೆ ಓದಲು ಹೇಳಿದನು. " ನಿಮ್ಮೊಂದಿಗಿನ ವೈರತ್ವಕ್ಕೆ ಕ್ಷಮೆಯಾಚಿಸುತ್ತೇನೆ. ನನ್ನ ಪುತ್ರ ಸೋಮನಾಥ ನಿಮ್ಮ ಪುತ್ರಿಯನ್ನು ಮೆಚ್ಚಿದ್ದಾನೆ.ಹಾಗಾಗಿ ಈ ವೈರತ್ವವನ್ನು ಕೊನೆಗೊಳಿಸಿ ಬಂಧುತ್ವ ಬೆಳೆಸುವ ನಿರೀಕ್ಷೆಯಲ್ಲಿ..." ಎಂದು ಓದಿ ರಾಜನ ಮುಖ ನೋಡಿದನು ಸೇವಕ. ರಾಜನಿಗೆ ಸಂತೋಷ . ಏಕೆಂದರೆ ಅವನು ನೆರೆ ರಾಜ್ಯದಿಂದ ಬಯಸಿದ್ದು ಸೌಹಾರ್ದತೆಯನ್ನು. 
         ಶೀಘ್ರವೇ ರಾಜನು ಸೌಗಂಧಿನಿಯ ಸ್ವಯಂವರ ಮಾಡುವುದಾಗಿ ಯೋಚಿಸುತ್ತಾನೆ.ಆದರೆ ವಿಧಿಲಿಖಿತವೇನಿತ್ತೋ.. ಆ ರಾತ್ರಿ ರಾಜಕುಮಾರಿ ಕಾಣೆಯಾಗುತ್ತಾಳೆ. ರಾಜ ಬಹಳ ಆತಂಕಕ್ಕೊಳಗಾಗುತ್ತಾನೆ.
ಆಗ ಶಾಂಭವಿಯು " ಮಹಾರಾಜರೇ ದಯವಿಟ್ಟು ಆತಂಕಗೊಳ್ಳದಿರಿ.. ನೀವು ಒಪ್ಪುವುದಾದರೆ ಒಂದು ಉಪಾಯವನ್ನು ಹೇಳುತ್ತೇನೆ" ಎಂದಳು. ರಾಜನು ಶಾಂಭವಿಯ ಉಪಾಯವನ್ನು ಕೇಳಿದನು. ಅವನಿಗೆ ಅವಳ ಉಪಾಯ ಸೂಕ್ತವೆನಿಸಿತು. ರಾಜನು " ಸೌಗಂಧಿನಿಯನ್ನು ಒಂದೆಡೆ ಬಚ್ಚಿಟ್ಟಿದ್ದಾಗಿಯೂ, ನಮ್ಮೊಡನೆ ಪಂಥ ಕಟ್ಟಿ ಗೆದ್ದವರುಅವಳನ್ನು ಹುಡುಕಬೇಕು.  ಅವಳನ್ನು ಹುಡುಕಿದವರನ್ನು ಸೌಗಂಧಿನಿ ವರಿಸುವಳು...!" ಎಂದು ಡಂಗುರ ಸಾರಿದ..!ಆದರೇ ಈ ಸಮಯದಲ್ಲಿ ರಾಜ ಸುಧನ್ವನು ಅನಾರೋಗ್ಯದಿಂದ ಹಾಸಿಗೆ ಹಿಡಿದ. ಹಾಗಾಗಿ ಶಾಂಭವಿಯೇ ಈ ಎಲ್ಲ ಪಂಥವನ್ನು ಬುದ್ಧಿವಂತಿಕೆಯಿಂದ ಎದುರಿಸಿ ಜಯಶಾಲಿಯಾಗುತ್ತಾಳೆ.ಆದರೆ ಸುಜಲಾ ಪುರದ ರಾಜನ ಜೊತೆ ಯುದ್ಧವೇ ನಡೆಯುತ್ತದೆ..! ಈ ಭೀಕರವಾದ ಯುದ್ಧದಲ್ಲಿ ಶಾಂಭವಿಗೆ ಚಿಕ್ಕ ಗಾಯವಾಗುತ್ತದೆ.ಇದನ್ನು ನೋಡಿ ಸೋಮನಾಥ ಗಹಗಹಿಸಿ ನಗತೊಡಗಿದನು.ಎಲ್ಲಿಂದಲೋ ಬಂದ ಬಾಣವು ಅವನೆದೆಗೆ ನಾಟಿತ್ತು..! ನೋಡಿದರೆ ಶಾಂಭವಿಯೇ ಹೇಗೋ ಎದ್ದು ಬಾಣ ಹೂಡಿದ್ದಳು..! ಅಂತು ಸೋಮನಾಥನು ಸೋತುಹೋಗುತ್ತಾನೆ.ಆದರೆ ಮುಂದಿನ ಪಂಥದಲ್ಲಿ ಕುಶಲ ದೇಶದ ರಾಜಕುಮಾರ ಕಿಶೋರ ವರ್ಮನ ಜೊತೆಗಿನ ಪಂಥದಲ್ಲಿ ಸೋಲುತ್ತಾಳೆ.ಮಹಾರಾಜನ ಹೇಳಿಕೆಯಂತೆ ಕಿಶೋರ ವರ್ಮ ಸೌಗಂಧಿನಿಯನ್ನು ಅರಸುತ್ತಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದನು.  ಆಗ ಗುಡಿಯೊಳಗೆ ಒಂದು ಚಿಕ್ಕ ಮಂಟಪ.ಅದರಲ್ಲೊಂದು ನೆಲಮಾಳಿಗೆ.. ಮಂಟಪದ ಕಂಬದ ಮೆಲಿರೀವ ಚಿಕ್ಕ ಕೀಲಿಯನ್ನು ತಿರುಗಿಸುತ್ತಾರೆ.ಕೂಡಲೇ ನೆಲಮಾಳಿಗೆ ಕಾಣಿಸುತ್ತದೆ.ಅಲ್ಲಿಂದ ಸೌಗಂಧಿನಿ ಎದ್ದು ಬರುತ್ತಾಳೆ...!ಶಾಂಭವಿ " ನಿನಗೆ ಹೇಗೆ ತಿಳಿಯಿತು ಈ ಸ್ಥಳ?"ಎಂದು ಕೇಳಿದಳು . ಅದಕ್ಕೆ ಕಿಶೋರ ವರ್ಮನು ಈ ರಾಜ್ಯದಲ್ಲಿ ಇರುವ ರಹಸ್ಯ ಸ್ಥಳ ಇದೊಂದೇ. ಚಿಕ್ಕಂದಿನಿಂದಲೂ ಇಲ್ಲಿ ಓಡಾಡಿದವನು ನಾನು" ಎಂದನು.ಶಾಂಭವಿಯ ಬಳಿ" "ನೀನು ಬೇಕೆಂದು ಪಂಥವನ್ನು ಸೋಲಲು ಕಾರಣವೇನು?" ಎಂದು ಕೇಳಿದನು‌ ಆಗ ಶಾಂಭವಿ ಕೊಂಚ ಗಾಬರಿಯಾದರೂ "ನಿಮ್ಮ ಪ್ರೀತಿಯ ವಿಷಯ ನನಗೆ ತಿಳಿದಿದೆ . ಸೌಗಂಧಿನಿ ಎಲ್ಲವನ್ನೂ ಹೇಳಿದ್ದಾಳೆ" ಎಂದವಳಿಗೆ "ಸೌಗಂಧಿನಿಯನ್ನು ಇಲ್ಲಿ ಬಂಧಿಸಿದ್ದು ನೀನೆ ಅಲ್ಲವೇ?"ಎಂಬ ಪ್ರಶ್ನೆ ಕಿಶೋರ ವರ್ಮನಿಂದ ಎದುರಾಯಿತು.
ಅದಕ್ಕೆ ಅವಳು ಹಿಂದಿನ ಕಥೆಯನ್ನು ಹೇಳಿದಳು. 

          " ಅಂದು ರಾಜಕುಮಾರಿ ಸೌಗಂಧಿನಿಯೋಡನೆ ಈ ಜಾಗಕ್ಕೆ ಬಂದಿದ್ದೆ. ಆಗ ಸೋಮನಾಥನೂ ಬಂದಿದ್ದನು. ನಾವಿಬ್ಬರೂ ಮಾತು ಮುಗಿಸಿ ಹೊರಟಿದ್ದೆವು. ನಾನು ಕಟ್ಟಿದ ಹೂಮಾಲೆ ಇಲ್ಲಿಯೇ ಬಿಟ್ಟು ಬಂದಿದ್ದರಿಂತ ಮರಳಿ ತರಲು ಗುಡಿಯೆಡೆಗೆ ಬಂದಾಗ ಸೋಮನಾಥನ ಮಾತುಗಳು ಕಿವಿಗೆ ಬಿದ್ದವು. ಸೌಗಂಧಿನಿಯನ್ನು ವರಿಸಿ ಅವಳಿಗೆ ನಾ ನಾ ಹಿಂಸೆ ಕೊಡಬೇಕೆಂದು ಮಾತನಾಡುತ್ತಿದ್ದರು. ಅವಳನ್ನು ಅಪಹರಿಸಿ ಸ್ವಲ್ಪ ಸಮಯದ ನಂತರ ನಾವೆ ಅವಳನ್ನು ಕರೆದು ತಂದು ರಾಜ ಸುಧನ್ವ ಧರ್ಮನೆದುರು ಒಳ್ಳೆಯವರೆನಿಸಿಕೊಳ್ಳಬೇಕು ಎಂದು ಮಾತನಾಡುತ್ತಿದ್ದರು.ಹಾಗಾಗಿ ಅವರು ಅಪಹರಿಸುವ ಮುನ್ನವೇ ನಾನು ಇಲ್ಲಿ ಬಂಧಿಸಿಟ್ಟೆನು. ಇದರಿಂದ ಅವರ ಉಪಾಯ ತಲೆಕೆಳಗಾಗಿ ಸಂಧಾನ ಪತ್ರ ಕಳುಹಿಸಿದರು..!ಈ ವಿಷಯ ಮಹಾರಾಜರಿಗೆ ತಿಳಿಸಿದ್ದೇನೆ" ಎಂದಳು. 
ನಿನ್ನಂತಹ ಸ್ನೇಹಿತೆ ಸಿಕ್ಕಿದ್ದು ನನ್ನ ಪುಣ್ಯ. ಎಂದು ಶಾಂಭವಿಯನ್ನು ಆಲಂಗಿಸಿದಳು.ನಂತರ ಮೂವರೂ ಅರಮನೆಯೆಡೆಗೆ ತೆರಳಿದರು. ಸುಧನ್ವ ಧರ್ಮನ ಆರೋಗ್ಯವೂ ಸುಧಾರಿಸಿತ್ತು..!
ಇದಾದ ಸ್ವಲ್ಪ ದಿನಗಳ ನಂತರ ಕಿಶೋರ ವರ್ಮನ ಜೊತೆ ಸೌಗಂಧಿನಿ ಹಾಗು ಕಿಶೋರ್ ವರ್ಮನ ಸಹೋದರ ಅಭಿನವ ವರ್ಮನ ಜೊತೆ ಶಾಂಭವಿಯ ಕಲ್ಯಾಣ ವಿಜೃಂಭಣೆಯಿಂದ ನಡೆಯಿತು..

- ರಂಜಿತಾ ಹೆಗಡೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...