ಶುಕ್ರವಾರ, ಜನವರಿ 13, 2023

ಮಕರ ಸಂಕ್ರಾಂತಿ (ಕವಿತೆ) - ಕಲ್ಪನಾ ಡಿ. ಎನ್.

ಉತ್ತರಾಭಿಮುಖವಾಗಿ ಸೂರ್ಯನ ಪಥ ಸಂಚಲನ
ಸಂಕ್ರಾಂತಿ ಸುಗ್ಗಿಯ ಹುಗ್ಗಿ ಹಬ್ಬಕ್ಕೆ ಆಹ್ವಾನ
ಸಂಸ್ಕೃತಿ,ಸ್ನೇಹ ಬಂಧಗಳ ಬೆಸೆದ ಆಗರವು
ಸಾಮರಸ್ಯ,ಸಮೃದ್ಧಿಯ ಪ್ರತೀಕ ನವಕಾವ್ಯವು

ಭೀಷ್ಮರು ಇಚ್ಛೆಯಿಂದ ದೇಹ ತ್ಯಜಿಸಿದ ದಿನವು
ಮಾತೆ ಗಂಗಾ ಧರೆಗಿಳಿದ ಪುಣ್ಯ ಕಾಲವು
ಶ್ರೀರಾಮನು ಗಾಳಿಪಟ ಹಾರಿಸಿದ ದಿವ್ಯ ಸಂಕೇತವು
ತೀರ್ಥಯಾತ್ರೆಯಲಿ ಆತ್ಮ ಶುದ್ಧಿಯ ಧೃಗ್ಗೋಚರವು 

ಮಾಗಿಯ ಚಳಿಯಲಿ ಎಣ್ಣೆಯ ಸ್ನಾನವು
ಸಜ್ಜೆಯ ರೊಟ್ಟಿ ಹೋಳಿಗೆಯ ಹೂರಣವು
ಮುತ್ತೈದೆಯರಿಗೆ ಬಾಗಿನ ಕೊಡುವ ಸಂಭ್ರಮವು
ಎತ್ತುಗಳ ಸಿಂಗರಿಸಿ ಕಿಚ್ಚನ್ನಾಯಿಸುವ ಸಡಗರವು

ಸಂಕ್ರಮಣವು, ಸರ್ವರ ಬಾಳಿಗೆ ನೆಮ್ಮದಿ ತರಲಿ
ಹೊಸ ಕಾಂತಿಯ ಹೊಂಬೆಳಕು ಪ್ರಜ್ವಲಿಸಲಿ
ದ್ವೇಷ, ಅಸೂಯೆ,ಅಹಂ ಮನದಿ ನಶಿಸಲಿ
ಭ್ರಾತೃ ಪ್ರೇಮದ ಸಮ್ಮಿಲನ ಹೃದಯದಿ ರಾರಾಜಿಸಲಿ

ಸರ್ವರಿಗೂ ಎಳ್ಳು ಬೆಲ್ಲವನ್ನು ಹಂಚೋಣ
ಜೇನಿನಂತೆ ಬೆರೆತು ಸವಿಯಾಗಿ ಮಾತಾಡೋಣ
ಎಲ್ಲರ ಬದುಕಲಿ ನವೋಲಾಸ ತುಂಬಿರಲಿ
ಸಂಕ್ರಮಣದ ಸಂತಸ ಸ್ಥಿರವಾಗಿ  ನೆಲೆಸಲಿ
 - ಕಲ್ಪನಾ ಡಿ. ಎನ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...