ಚಿಂತಾಮಣಿ ನಗರದ ನಿವಾಸಿಯಾಗಿರುವ ಕೆ.ಎನ್.ಅಕ್ರಂಪಾಷ ರವರು ಉದಯೋನ್ಮುಖ ಬರಹಗಾರರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ಶಾಲೆಯಲ್ಲಿ ನಡೆಯುವ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ತನ್ನ ಮಾತೃಭಾಷೆ ಉರ್ದು ಆಗಿದ್ದರೂ ಸಹ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೂ ,ಪ್ರೌಢ ಶಾಲಾ ಶಿಕ್ಷಣ ಹಾಗು ಪದವಿ ಪೂರ್ವ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲೂ ಪಡೆದರೂ ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿದವರಾಗಿದ್ದರು.ಶಾಲಾ-ಕಾಲೇಜುಗಳಲ್ಲಿ ಕನ್ನಡ ವಿಷಯವನ್ನು ಪ್ರಥಮಭಾಷೆಯಾಗಿ ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ಸೈ ಎನಿಸಿಕೊಂಡರು.
ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಇವರಿಗೆ ಸೂಕ್ತ ಅವಕಾಶಗಳು ಸಿಕ್ಕಿರಲಿಲ್ಲ.ಹೀಗಿರುವಾಗ ಚಿಂತಾಮಣಿಯ ಕನ್ನಡ ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಬಳಿಗೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಂಪರ್ಕ ಸಿಕ್ಕಿತು.ಅಲ್ಲಿ ಇವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಹಾಗು ಅವಕಾಶಗಳು ದೊರೆತವು. ಇದರಿಂದಾಗಿ ಅಕ್ರಂಪಾಷರವರು ಕನ್ನಡದಲ್ಲಿ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಲು ಸಾಧ್ಯವಾಯಿತು.
ಈಗಾಗಲೇ ಅವರು ರಚಿಸಿರುವ ಮಕ್ಕಳಕಥೆ,ಕವನ,ಲೇಖನ,ಚುಟುಕುಗಳು ರಾಜ್ಯದ ಹಲವು ದಿನಪತ್ರಿಕೆ,ಮಾಸಪತ್ರಿಕೆ,ಸ್ಮರಣ ಸಂಚಿಕೆ ಹಾಗು ಕವನ ಮತ್ತು ಚುಟುಕು ಸಂಕಲನಗಳಲ್ಲಿ ಪ್ರಕಟಗೊಂಡಿವೆ.ಅದರಲ್ಲೂ ಮುಖ್ಯವಾಗಿ ಅವರು ಬರೆದಿರುವ ಮಕ್ಕಳ ಕಥೆಗಳು ಜನಪ್ರಿಯವಾಗಿವೆ.
ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕವಿಗೋಷ್ಠಿ ಹಾಗು ಇನ್ನಿತರೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವರಚಿತ ಚುಟುಕು ಹಾಗು ಕವನಗಳನ್ನು ವಾಚಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅವರು ಹಾಸ್ಯ ಕಲೆಯನ್ನು ರೂಢಿಸಿಕೊಂಡಿದ್ದಾರಲ್ಲದೆ ಚಿತ್ರ ಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಥೆ,ಲೇಖನ,ಕವನಗಳಿಗೆ ಸಂಬಂಧಿಸಿದಂತೆ ರೇಖಾ ಚಿತ್ರಗಳನ್ನು ತಾವೇ ರಚಿಸಿಸುವುದು ಇವರ ಮತ್ತೊಂದು ವೈಶಿಷ್ಟ್ಯವಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈಗಾಗಲೇ ಇವರ ಲೇಖನಿಯಿಂದ ಮೂಡಿಬಂದ ಇಪ್ಪತ್ತಕ್ಕೂ ಹೆಚ್ಚು ಕಥೆಗಳನ್ನು ಒಳಗೊಂಡ "ಚಂದ್ರನ ಮಗಳು" ಎಂಬ ಕಥಾ ಸಂಕಲನ ಹೊರಬಂದು ಜನಪ್ರಿಯವಾಗಿದೆ. ಹಿರಿಯ ವಯಸ್ಸಿನಲ್ಲಿ ಇವರು ಹೊರ ತಂದ ಕನ್ನಡ ಕವಿವಾಣಿ ಎಂಬ ಮಾಸಪತ್ರಿಕೆಯು ಕನ್ನಡಿಗರ ಮೆಚ್ಚುಗೆಯನ್ನ ಗಳಿಸಿತ್ತು ಎಂಬುದು ಗಮನಾರ್ಹ ಅಂಶವಾಗಿದೆ. ಈ ಪತ್ರಿಕೆಯನ್ನು ಉಚಿತವಾಗಿ ರಾಜ್ಯಾದ್ಯಂತ ಸಾಹಿತ್ಯಾಸಕ್ತರಿಗೆ ವಿತರಿಸುವ ಮೂಲಕ ದಾಖಲೆ ಸಾಧನೆಯನ್ನು ಇವರು ಮಾಡಿದ್ದರು.
ಇವರ ಕನ್ನಡ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ರಂಗ ಶ್ರೀ ಕಾವ್ಯ ಸೌರಭ ಪ್ರಶಸ್ತಿ, ಉತ್ತಮ ಚುಟುಕು ಕವಿ ಪ್ರಶಸ್ತಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪ್ರತಿಭಾರತ್ನ ಪ್ರಶಸ್ತಿ ,ಯುವ ಸಾಧಕ ರತ್ನ ಪ್ರಶಸ್ತಿ ,ವಿಶ್ವ ಮಾನವ ಪ್ರಶಸ್ತಿ, ಕನ್ನಡ ಸಿರಿ ಪ್ರಶಸ್ತಿ , ಜವಾಹರ್ ಲಾಲ್ ನೆಹರು ಸದ್ಭಾವನಾ ಪ್ರಶಸ್ತಿ, ಕರುನಾಡು ಪದ್ಮಶ್ರೀ ಪ್ರಶಸ್ತಿ, ಅನಿಕೇತನ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಯುವ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ರಾಜ್ಯ ,ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಇವರು ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರಸ್ತುತ ಚಿಂತಾಮಣಿ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಿರಿಯ ವಯಸ್ಸಿಗೆ ಹಿರಿಯ ಸಾಧನೆ ಮಾಡುತ್ತಿರುವ ಯುವ ಸಾಹಿತಿ ಅಕ್ರಂಪಾಷರವರಿಗೆ ಮತ್ತಷ್ಟು ಕನ್ನಡಮ್ಮನ ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಇವರಿಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬರಲೆಂದು ತುಂಬು ಮನಸ್ಸಿನಿಂದ ಎಲ್ಲರೂ ಆಶಿಸೋಣ.
- ಎನ್ ಮಸ್ತಾನ್ ವಲಿ, ಯನುಮಲಪಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ