ಮೂರುವರೆ ವರುಷದ ನನ್ನ ಪುಟ್ಟು ಹಾಸಿಗೆಯ ಮೇಲೆ ಕಾಲ್ಚಾಚಿ ಮಲಗಿದ್ದರೆ , ನಾನು ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತು ಅವನನ್ನೇ ಎವೆಇಕ್ಕಿ ನೋಡುತ್ತಿರುತ್ತಿದ್ದೆ . ನನಗೆ ನನ್ನ ಪುಟ್ಟುವೆ ಸರ್ವಸ್ವ. ಹಸಿವು ಬಾಯಾರಿಕೆಗಳೆ ಕಾಡದಷ್ಟು ನಾನು ಪುಟ್ಟನಲ್ಲಿ ಬಂಧಿಯಾಗಿ ಬಿಟ್ಟಿದ್ದೇನೆ. ಮೊದಲೆಲ್ಲ ಎಲ್ಲೆಂದರಲ್ಲಿ ಪುಟ್ಟುವನ್ನು ಎತ್ತಿಕೊಂಡು ಓಡಾಡುತ್ತಿದ್ದೆ, ನಾನು ಪುಟ್ಟು ಆಟವಾಡುತ್ತಿದ್ದೆವು, ಆದರೆ ಈಗ ಹಾಗಾಗುತ್ತಿರಲಿಲ್ಲ . ಪುಟ್ಟನನ್ನು ಎತ್ತಿಕೊಂಡು ಆಡಿಸುವ ಬಲ ನನ್ನಲ್ಲಿಲ್ಲ . ನನ್ನ ಕೈಕಾಲುಗಳಲ್ಲಿ ತ್ರಾಣವಿಲ್ಲ.
ಅವನಿರುವ ಈ ಕೋಣೆಯನ್ನು ಬಿಟ್ಟು ನಾನೊಬ್ಬಳೆ ಆಗಾಗ ಹೊರಹೋಗಿ ಬರುತ್ತಿದ್ದೆ ಆದರೆ ಮೊನ್ನೆ ಜಗುಲಿಯಲಿ ಅದೆಂತದೋ ಹೋಮವನ್ನು ಮಾಡಿಸಿ ಬಿಟ್ಟರು ಅಲ್ಲಿ ನಾನು ಹೋಗಬಾರದಂತೆ ನನಗೂ ಅಲ್ಲೆಲ್ಲ ಸುಳಿಯುವ ಮನಸ್ಸಿಲ್ಲ ಹಾಗಾಗಿ ನಾನತ್ತ ಹೋಗುತ್ತಲು ಇಲ್ಲ . ಆಗೆಲ್ಲ ಅಪರೂಪಕ್ಕೆ ದೇವರ ಕೋಣೆಯತ್ತ ಹೋಗುತ್ತಿದ್ದೆ ಈಗ ಕೆಲವು ತಿಂಗಳಿಂದೀಚೆಗೆ ಆ ದೇವರ ಕೋಣೆಯಲ್ಲಿರುವ ಕಾಳಿಯ ಕಣ್ಗಳು ನನ್ನನ್ನು ಇರಿದಂತೆ ಭಾಸವಾಗುತ್ತದೆ ಹಾಗಾಗಿ ಅವಳನ್ನು ನೋಡಲು ಸಹ ಭಯ ಆದ್ದರಿಂದ ಪುಟ್ಟನ ಕೋಣೆಯಷ್ಟೇ ನನ್ನ ಹಗಲು ಇರುಳುಗಳಾಗಿವೆ.
ಇನ್ನೊಂದು ವಿಚಾರವೆಂದರೆ ನನಗೀಗ ನನ್ನ ಬಟ್ಟೆ ಬರಿ ಬಂಗಾರಗಳ ಮೇಲೇನು ಆಗಿನಷ್ಟು ವ್ಯಾಮೋಹವಿಲ್ಲ. ಏಕೆoದರೆ ಅವುಗಳನ್ನು ನನ್ನಿಂದ ಧರಿಸಲು ಸಾಧ್ಯವಾಗುತ್ತಿಲ್ಲವಲ್ಲ.ಆದರೂ ಒಮ್ಮೊಮ್ಮೆ ಬಟ್ಟೆ ಬಂಗಾರವನ್ನೂ ನನ್ನ ಮೇಕಪ್ ಐಟೆಮ್ಗಳನ್ನು ಬಾಚಿ ತಡವುತ್ತಿರುತ್ತೇನೆ ಆಗೆಲ್ಲ ನಾನು ಆವೇಶದಲ್ಲೊ, ಆನಂದದಲ್ಲೋ, ಉನ್ಮಾದದಲ್ಲೋ ಮೈ ಮರೆತು ಬಿಟ್ಟಿರುತ್ತೇನೆಂದು ಕಾಣುತ್ತದೆ ಹಾಗಾಗಿ ಜೋಡಿಸಿದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದು ಬಿಡುತ್ತವೆ. ಮತ್ತೆ ಅವುಗಳನ್ನು ಮೊದಲಿನಂತೆ ಕೂಡಿಡಲು ನನ್ನ ಯಜಮಾನರೋ ಅಥವಾ ಅವರ ತಾಯಿ ಎಂದರೆ ನನ್ನ ಅತ್ತೆಯೋ ಕೋಣೆಗೆ ಬರಬೇಕು. ಪಾಪ ಅವರ್ಯಾರು ನನ್ನ ಈ ಎಡವಟ್ಟಿಗೆ ಸಿಟ್ಟಾಗುವುದಿಲ್ಲ, ದುರುಗುಡುತ್ತ ನನ್ನತ್ತ ನೋಡುವುದು ಇಲ್ಲ. ಆದರೆ ಅವರ ಮುಖಗಳಲ್ಲಿ ವ್ಯಥೆಯ, ದುಃಖ್ಖದ ಭಾವವೊಂದು ಆವರಿಸಿ ಬಿಟ್ಟಿರುತ್ತದೆ .ಅದು ನನ್ನಿಂದ ಸಹಿಸಲಸಾಧ್ಯ.
ಕನ್ನಡಿಯನ್ನು ನೋಡುವುದನ್ನoತು ಸಂಪೂರ್ಣವಾಗಿ ತೊರೆದು ಬಿಟ್ಟಿದ್ದೇನೆ. ಏಕೆನ್ನುತ್ತೀರಾ..? ನಾನೇ ಅದೊಂದು ದಿನ ಬಹಳ ಇಷ್ಟ ಪಟ್ಟು ಕೊಂಡು ತಂದ ಆ ಕನ್ನಡಿ ಆಗೆಲ್ಲ ಬಹಳ ಚೆನ್ನಾಗಿತ್ತು ಆದರೆ ಈಗೇಕೋ ಕನ್ನಡಿ ಸರಿ ಇಲ್ಲ ಎನ್ನಿಸುತ್ತಿದೆ,ಸಂಪೂರ್ಣವಾಗಿ ಕದಡಿದ ಛಾಯೆ ಕಾಣುತ್ತದೆ. ನನ್ನ ಯಜಮಾನರು ಮಾತ್ರ ಆಗಾಗ ಕನ್ನಡಿಯ ಎದುರು ಸಪ್ಪೆ ಮೊಗಮಾಡಿಕೊಂಡು ನಿಲ್ಲುತ್ತಾರೆ ಅವರಿಗೆ ಹೇಗೆ ಈ ಕನ್ನಡಿ ಹಿಡಿಸಿದೆಯೊ ನಾಕಾಣೆ.
ಅವರನ್ನು ಬಹಳ ಸಲ ಪ್ರಶ್ನಿಸಿದೆ, ಅವರೇನು ಉತ್ತರಿಸುವುದಿಲ್ಲ, ಸಪ್ಪೆ ಮೊಗದಲ್ಲಿ ಎದ್ದು ಹೊರನಡೆಯುತ್ತಾರೆ. ಹಾ ಹೇಳಬೇಕೆಂದರೆ ಅವರಿಗೆ ಈಗೀಗ ಅದೆಂತದೋ ಕಾಯಿಲೆ ಅಂಟಿದಂತೆ ತೋರುತ್ತದೆ ಏಕೆನ್ದರೆ ನಾನು ಮಾತನಾಡಿಸಿದಾಗ ಅವರು ಮಾತನಾಡುವುದಿಲ್ಲ, ಕೆಲವೊಮ್ಮೆ ಸುಮ್ಮ ಸುಮ್ಮನೆ "ಪಾವನೀ..."ಯೆಂದು ನನ್ನ ಹೆಸರನ್ನು ಗಟ್ಟಿಯಾಗಿ ಕರೆಯುತ್ತಾರೆ, ನಾನು ಓಗುಟ್ಟರೆ ಮುಂದೇನು ಮಾತನಾಡದೆ ಸುಮ್ಮನಿದ್ದು ಬಿಡುತ್ತಾರೆ. ಈ ರೀತಿಯ ವರ್ತನೆಯನ್ನು ಕಾಯಿಲೆ ಎನ್ನದೆ ಮತ್ತೇನೆಂದು ಕರೆಯಲಿ ಹೇಳಿ. ಈಗೀಗ ಬಹಳ ಸೊರಗಿ ಹೋಗಿದ್ದಾರೆ,ಒಮ್ಮೆ ಆಸ್ಪತ್ರೆಗೆ ಹೋಗಿ ಬರೋಣ ಎಂದರೆ ನನ್ನ ಮಾತೆಲ್ಲಿ ಕೇಳುತ್ತಾರೆ ಅವರು .?
ನನಗೆ ಅವರೆಂದರೆ ತುಂಬಾ ಪ್ರೀತಿ,ಗೌರವ ಸಲುಗೆಯು ಸಹ, ಮದುವೆಯಾದಲಿಂದ ಇಲ್ಲಿಯವರೆಗು ನನ್ನನ್ನು ಸಹ ಪುಟ್ಟ ಮಗುವಂತೆಯೆ ಕಂಡಿದ್ದಾರೆ, ಪ್ರೀತಿಸಿದ್ದಾರೆ, ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರನ್ನು ತೊರೆದಿರಲು ನನಗೆ ಸಾಧ್ಯವೆ ಇಲ್ಲ ಬಿಡಿ.
ಅವರ ಸೇವೆ ಮಾಡುವ ಆಸೆ ನನಗೆ,ಆದರೆ ನನಗೀಗ ಅವರ ಸೇವೆ ಇರಲಿ ಅವರ ಕೂದಲನ್ನು ಅಂದಿನಂತೆ ಪ್ರೀತಿಯಿಂದ ಬಾಚಲೂ ಸಹ ಆಗುವುದಿಲ್ಲ ಹೇಳಿದೆನಲ್ಲ ನನ್ನ ಕೈಗಳಲ್ಲಿ ಮುಂಚಿನಂತೆ ತ್ರಾಣವಿಲ್ಲವೆಂದು.
ಪುಟ್ಟನ ಚಾಕರಿಯನ್ನು ಅತ್ತೆಯವರೆ ಮಾಡುತ್ತಾರೆ. ಸ್ನಾನ ಮಾಡಿಸುವುದು, ಬಟ್ಟೆ ತೊಳೆಯುವುದು, ಊಟ, ತಿಂಡಿ ಎಲ್ಲವು ಅವರ ಮೇಲೆ ಹೇರಿಕೆಯಾಗಿದೆ.ಅವರು ಒಳ್ಳೆಯವರೇ ಆದರೆ ಈಗೀಗ ಅತ್ತೆಯವರು ನನ್ನ ಕೋಪಕ್ಕೆ ಕಾರಣರಾಗುತ್ತಿದ್ದಾರೆ ಏಕೆಂದು ಕೇಳುತ್ತೀರಾ..? ನಾನು ಪುಟ್ಟನೊಂದಿಗೆ ಆಟವಾಡುತ್ತಲಿರುವಾಗಲೇ ನಮ್ಮ ಆಟವನ್ನು ನಿರ್ಲಕ್ಕ್ಷಿಸಿ ಅವನನ್ನು ಎತ್ತಿಕೊಂಡು ಹೊರ ಹೊರಟು ಬಿಡುತ್ತಾರೆ. ಪುಟ್ಟು ಅಳುವಾಗ ನಾನೊಂದು ಲಾಲಿಯನ್ನು ಹಾಡುತ್ತಾ ಅವನನ್ನು ಸಮಾಧಾನ ಪಡಿಸುತ್ತಿರುತ್ತೇನೆ ಅಷ್ಟರಲ್ಲಿ ಅವರು ಇನ್ನೊಂದು ರಾಗ ಏರಿಸಿ ಬಿಡುತ್ತಾರೆ. ಪಾಪ ಪುಟ್ಟನಿಗೆ ಎರಡೆರಡು ರಾಗಗಳು ಕರ್ಕಶವೆನಿಸಿ ಮತ್ತೆ ಚೀಕರಿಸಿ ಅಳುತ್ತಾನೆ.
ಪುಟ್ಟನ ಬಳಿಯೆ ಕುಳಿತು ಅವನನ್ನು ಮುದ್ದಾಡುತ್ತ ಹೊತ್ತು ಕಳೆಯುವ ಆಸೆ ನನಗೆ ಆದರೆ ಒಮ್ಮೊಮ್ಮೆ ಅದೆಂತದೋ ಬಿಳಿಯ ವಿಭೂತಿಯಂತೆ ಅದನ್ನು ತಂದು ಪುಟ್ಟನಿಗೆ ಹಚ್ಚಿ ಬಿಡುತ್ತಾರೆ ನನಗದು ಆಗುವುದೇ ಇಲ್ಲ. ಅದು ಒಂದು ತೆರನಾದ ವಾಸನೆ, ನನ್ನನ್ನು ಉಸಿರುಗಟ್ಟಿಸಿದಂತಾಗುತ್ತದೆ, ಅಲ್ಲದೆ ಕಣ್ಗಳು ಉರಿ ಬರುತ್ತವೆ ಆ ವಿಭೂತಿಯ ಕಣಗಳು ನಾಟಿದರೆ.ಹಾಗಾಗಿ ನಾನು ಕೊಂಚ ದೂರಕ್ಕೆ ನಿಲ್ಲುವಂತಾಗುತ್ತದೆ. ಈ ಪುಟ್ಟನು ಸಹ ಹಾಗೆ ಮಾಡುತ್ತಾನೆ ನನ್ನ ಜೊತೆಗೆ ಆಡುತ್ತ ಆಡುತ್ತ ಒಮ್ಮೊಮ್ಮೆ ನಾನು ಮುದ್ದಿನಿಂದ ಅವನ ಕೆನ್ನೆ ಹಿಂಡಿದ ತಕ್ಷಣ ಜೋರಾಗಿ ಅಳಲು ಪ್ರಾರಂಭಿಸುತ್ತಾನೆ. ತಕ್ಷಣ ನನ್ನ ಗಂಡನು ಅತ್ತೆಯು ಓಡಿ ಬಂದಾಯಿತು ವಿಭೂತಿಯ ಜೊತೆಗೆ.
ಇದೆಲ್ಲ ನನಗೇಕೋ ಹಿಡಿಸುತ್ತಿಲ್ಲ.ನನ್ನ ಕಂದನನ್ನು ನಾನು ಅಳಿಸುತ್ತೇನೆ ನಗಿಸುತ್ತೇನೆ ಮತ್ತೆ ಸಮಾಧಾನ ಮಾಡುತ್ತೇನೆ ಏನು ಮಾಡಬೇಕು ಮಾಡಬಾರದು ಯೆಂದು ನನಗೆ ತಿಳಿದಿಲ್ಲವೇ ಇವರ ವಿಭೂತಿ ಬೇಕೇ..?
ಬಿಡಿ ಇಂತಹ ಬಹಳ ತಾತ್ಸರಗಳು ಈಗೀಗ ನಡೆಯುತ್ತಿದೆ. ನಾನು ಯಾವುದನ್ನೂ ಪರಿಗಣಿಸುತ್ತಿಲ್ಲ ಅಷ್ಟೇ.
ಆದರೆ ಇಂದು ಅದ್ಯಾರೋ ನಾಲ್ಕರು ಜನ ಪಂಚೆ ಶಾಲನ್ನುಟ್ಟ ಹಿರಿಯರು ಬಂದಿದ್ದರು ಅದೆಂತದೋ ಹೋಮ ಪೂಜೆಯಂತೆ. ಮಾಡುವವರಿಗೆ ಬೇರೆ ಕೆಲಸವಿಲ್ಲ ಮಾಡಿಸುವ ಇವರಿಗೆ ಬುದ್ದಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಆದರೆ ಆ ಹೋಮದ ಹೊಗೆಯನ್ನು ಮನೆಗೆಲ್ಲ ಹಾಯಿಸಿದರು,ಕೊನೆಗೆ ನಾನು ಪುಟ್ಟು ಇರುವ ಕೋಣೆಗೂ ತಂದು ಬಿಡುವುದೇ . ಅಯ್ಯೋ..!! ಅದೊಂದು ರೀತಿಯ ಕೆಟ್ಟ ಘಾಟು, ನನಗೆ ತಡೆಯಲು ಆಗಲೇ ಇಲ್ಲ ಅಯ್ಯೋ... ಹೊರಹೋಗಿ ಎಂದರೆ ಅವರು ನನ್ನ ಮಾತ ಆಲಿಸಲು ಇಲ್ಲ. ಮೈಯೆಲ್ಲಾ ಉರಿಯುತ್ತಿತ್ತು, ಕಿರುಚಿದೆ,ನನ್ನ ಗಂಡ ಹಾಗು ಅತ್ತೆಯು ಸಹ ಕಿವುಡರಂತೆ ಕೈಮುಗಿದುಕೊಂಡು ಅವರೊಡನೆ ನಿಂತು ಬಿಟ್ಟಿದ್ದರು.
ನಾನು ಎದ್ದು ಹೊರ ಓಡಿದೆ, ಹೋರಾoಗಳದತ್ತ ಅಲ್ಲಿಯೂ ನನಗೆ ಸ್ವಲ್ಪ ಹಿಂಸೆ ಎಂದೆನಿಸಿತು, ಗೇಟ್ ನಿಂದಲೇ ಹೊರ ಓಡಿ ನಿಂತೆ . ಸ್ವಲ್ಪ ಹೊತ್ತು ಮನೆಯೊಳಗೆ ಹೋಗಲಿಲ್ಲ, ಅಲ್ಲಿ ಅದೇನೋ ಮಂತ್ರ ಪೂಜೆ ಪುನಸ್ಕಾರ ಎಂದೆಲ್ಲ ನಡೆಯಿತು. ಕೊನೆಗೆ ಅವರೆಲ್ಲ ಕಾಣಿಕೆಯೊಂದಿಗೆ ಸಂಪ್ರೀತರಾಗಿ, "ಇನ್ನೇನು ತೊಂದರೆಯಿಲ್ಲ... ಹೆದರಬೇಡಿ. ಎಲ್ಲಾ ಸರಿಯಾಗುತ್ತೆ.ದಿಗ್ಬಂಧನ ಹಾಗಿದ್ದೇನೆ "ಯೆಂದು ಭರವಸೆ ನೀಡುವುದು ನನಗೆ ಕೇಳಿಸಿತು. ಅದೇನು ಸರಿ ಇರಲಿಲ್ಲವೋ... ಅದ್ಯಾರಿಗೆ ದಿಗ್ಬಂಧನ ಹಾಕಿದರೋ.. ನನಗಂತೂ ಒಂದೂ ತಿಳಿಯಲಿಲ್ಲ.
ಪುಟ್ಟು ಜೋರಾಗಿ ಕೋಣೆಯಲ್ಲಿ ಅಳುತ್ತಿದ್ದದ್ದು ಕೇಳಿತು, ಪಾಪ ಅವನಿಗೂ ಹೊಗೆ ಹಿಂಸೆ ಕೊಟ್ಟಿತ್ತೆನ್ನಿಸುತ್ತದೆ. ನನ್ನ ಕರಳು ಹಿಸುಕಿದಂತಾಯಿತು." ಬಂದೇ.. ಪುಟ್ಟು" ಯೆಂದು ಅವನತ್ತ ಹೊರಟೆ . ನಮ್ಮ ಮನೆಯ ಬಾಗಿಲ ಬಳಿ ಓಡಿದೆ, ಬಾಗಿಲು ತೆರೆದೆ ಇತ್ತು, ಆದರೂ ನನ್ನನ್ನು ತಡೆದು ತಳ್ಳಿದಂತಾಗಿ ಬಿದ್ದು ಬಿಟ್ಟೆ. ಕಿಟಕಿಯ ಬಳಿ ಹೋದೆ ಅಲ್ಲಿಯು ನನ್ನನ್ನು ಹೊರ ಮೈ ನೂಕಿದಂತಾಯಿತು. ಹಿಂದಿನ ಬಾಗಿಲು ಸಹ ನನ್ನನ್ನು ಒಳ ಬಿಡಲಿಲ್ಲ. ಪುಟ್ಟು ಕೂಗುವುದು ಕೇಳುತ್ತಲೇ ಇತ್ತು ನನಗೆ, ಆದರೆ ಒಳಹೋಗಲು ಮಾತ್ರ ನನ್ನಿಂದಾಗಲಿಲ್ಲ.
ನನ್ನ ಮನೆಯವರನ್ನೆಲ್ಲ ಸಹಾಯಕ್ಕಾಗಿ ಕರೆದು ಕರೆದು ಸೋತೆ.
ಈಗ ಅರ್ಥ ವಾಯಿತು ದಿಗ್ಬಂಧನ ಹಾಕಿರುವುದು ಯಾರಿಗಾಗಿ ಯೆಂದು ..
ಕೆಲವು ತಿಂಗಳುಗಳ ಹಿಂದೆ ನಾನು ಸತ್ತು ಹೋಗಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ನನ್ನ ಪುಟ್ಟುವಿನಿಂದ ನನ್ನ ಗಂಡನಿಂದ ಕೊನೆಗೆ ನನ್ನ ಮನೆಯಿಂದ ಹೊರ ಇಟ್ಟು ದಿಗ್ಬಂಧನ ಹಾಕಿದ್ದಾರೆ.
ಹೇಳಿ.. ಸತ್ತೆನೆಂದ ಕಾರಣಕ್ಕೆ ನಾನು ಅವನಮ್ಮ ಅಲ್ಲವೇ..?ಪುಟ್ಟು ನನ್ನ ಕಂದನಲ್ಲವೇ...? ಅವನ ಕೂಗು ನನಗೆ ಕೇಳದಿರುವುದೆ...?.ದಿಗ್ಬಂಧನ ನಮ್ಮ ನಡುವಿನ ಬಂಧವನ್ನು ಬಿಡಿಸುವುದೇ..?
- ಸೌಜನ್ಯ ದಾಸನಕೊಡಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ