ಆ ನೀಲಿ ಆಗಸದ
ಬಿಳಿ ಮೋಡಗಳ ತುಂಬೆಲ್ಲಾ
ಆವರಿಸಿದ ಕಾರ್ಗಾಲದ
ಕರ್ಮುಗಿಲಿನ ಒಳಗೂ ಮಿನುಗುವ
ಒಂಟಿ ನಕ್ಷತ್ರದ ಕುರುಹೇನು
ಗೆಳತಿ ?
ಕಪ್ಪು ಕಡಲಿನ
ಮೇಲೆ ಹಾಯುವ
ಅಂತರಂಗದ ಅಲ್ಲೋಲ ಕಲ್ಲೋಲಗಳ
ಒಳಗೂ ತಣ್ಣಗೆ
ತೇಲುವ ನೀಲಿಗಣ್ಣಿನ ಲಾಟೀನಿನ
ಬೆಳಕ ಬೆಳದಿಂಗಳಿಗೇನು ಅರ್ಥವಿದೆ
ಗೆಳತಿ ?
ಬರಿಗಂಗಳ ಕೊಳದೊಳಗೆ
ತೇಲುವ ಆ ನೀಲಿ ಬಾನು
ಈ ಕಪ್ಪು ಕಡಲು
ತುಳುಕಿಸಿದ ನೀರಿಗೂ
ಸುರಿದ ಮಳೆಗೂ ಧಾರಾಕಾರ
ಪೈಪೋಟಿಯ ನಡುವೆ ಸುಳಿವ
ನಿನ್ನ ಕಂಗಳ
ಒಳಗಿನ ನನ್ನ ಬಿಂಬದ
ಗುಟ್ಟೇನು ಗೆಳತಿ ?
- ಧನುಷ್ ಎಚ್ ಶೇಖರ್, ಬೆಂಗಳೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ