ಹಾರಾಡುತ್ತಿತ್ತು ಜಯದ ಬಾವುಟ
ಕಂಡೆ ನಾ ದಿಗ್ವಿಜಯದ ಬಾವುಟ
ಮೇಲಕ್ಕೆತ್ತಿ ನೂಲಿನ ಹಗ್ಗ ಕಟ್ಟಿ
ಹಾರಾಟ ನಡೆಸಿತ್ತು ಆ ಬಾವುಟ
ಸಾಸಿರ ದಿಕ್ಕುಗಳಲ್ಲಿ ಹಾರುತಿದೆ
ಗಲ್ಲಿಗಲ್ಲಿಗೂ ಏರುತಿದೆ ಬಾವುಟ
ಜೀವಗಳನು ಗಲ್ಲಿಗೇರಿಸಿದ ಲಾಠಿ
ಏಟುಗಳ ಮುಚ್ಚಿದ ದಿಗ್ವಿಜಯಿ
ಸಾವಿರ ಮನಗಳ ಒಗ್ಗೂಡಿಸಿ
ತಂತ್ರ ಕುತಂತ್ರಕೆ ಅಂತ್ಯ ಹಾಡಿ
ಗಗನದೆತ್ತರಕೆ ಹಾರಿದ ಬಾವುಟ
ಅತಿರಥ ಮಹಾರಥರ ಬಾವುಟ
ಭಾರತಾಂಬೆಯ ದಾಸ್ಯ ಸಂಕೋಲೆಯ
ಕಳಚಿದ ಸ್ವಾತಂತ್ರ್ಯ ವಸ್ತ್ರ ಈ ಬಾವುಟ
ಹಗಲಿರುಳು ಶ್ರಮಿಸಿದ ಜೀವಿಗಳ
ಅದೆಷ್ಟೋ ಬೆವರಿಳಿಸಿದ ಬಾವುಟ
ಗಡಿಯಲಿದ್ದು ಜೀವ ಕೊಟ್ಟ ಜೀವಕೆ
ಹೊದಿಸಿದ ಕೊನೆಯ ದಿವ್ಯ ವಸ್ತ್ರ
ಸರ್ವಧರ್ಮಗಳ ಸಾರವನು ಜಗಕೆ
ಸಾರುತಿರುವ ಭಾರತದ ಬಾವುಟ
ತಲೆ ಎತ್ತಿ ನೋಡಿ ನಮಿಸುವ ಬಾವುಟ
ಅದೊಮ್ಮೆ ನೋಡಿದೆ ಈ ಬಾವುಟವ
ನನಗೇಕೋ ಕಂಡವು ಐದು ವರ್ಣಗಳು
ಓದಿದಾಗ ತ್ರಿವರ್ಣ ಎಂದು ಚಕ್ರವನ್ಹಿಡಿದು
ನಾಲ್ಕು ಎಂದಾಗ ಹೌದೆನಿಸಿತ್ತು
ಮತ್ತದೇಕೋ ಇನ್ನೊಂದು ವರ್ಣ ಕಂಡೆ
ಏಕೆ ಬದಲಾಯಿತಾ ನನ್ನ ತ್ರಿವರ್ಣ ಎಂದೆ
ಪುಟ್ಟ ಮಗುವೊಂದು ಬಂದು ಎನ್ನೆಚ್ಚರಿಸಿ
ಹೇಳಿತು ಅಣ್ಣ ಅದು ನನ್ನಪ್ಪನ ರಕುತ ಎಂದು
ಅಂದು ಆಂಗ್ಲರೊಂದಿಗೆ ಗೆದ್ದು ವಿಜಯಿಸಿತು
ಇಂದು ವೈರಿಗಳೊಡನೆ ವಿಜಯಿಸುತಿದೆ ತನ್ನ
ನಿಜ ಬಣ್ಣಗಳ ಜೊತೆಗೆ ರುಧೀರ ತಿಲಕ ಹಚ್ಚಿ
ಸುತ್ತಿಕೊಂಡು ಬಂದ ಆ ಸೋದರನ ಶವ ಹೇಳಿತ್ತು
ಕುಸಿದು ಕುಳಿತೆ ಮತ್ತದೆ ಧ್ಯಾನ ಬದಲಾಯಿಸಲೇ
ತ್ರಿವರ್ಣ ಧ್ವಜವನು ಪಂಚವರ್ಣವೆಂದು
ಅದೋಕೋ ಒಪ್ಪುತಿಲ್ಲ ಈ ಮನಸು
ಅದರೂ ಇದು ನನ್ನ ದೇಶದ ಹೆಮ್ಮೆ.
- ಶ್ರೀ ಇಂಗಳಗಿ ದಾವಲಮಲೀಕ,
ಹತ್ತಿಮತ್ತೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ