ಗೆಳತಿ ಹೇಳಿದಳು,
ಬರೆಯಿರೇನಾದರೊಂದು.
ಬರೆಯಲೇನೂಯಿಲ್ಲೆಂದೆನಾದರೂ,
ಕುಳಿತೆ ಲೇಖನಿ ಹಿಡಿದು
ಏನಾದರೊಂದು ಬರೆಯಲೆಂದು.
ಬರವಣಿಗೆಯ ಬರೆ- ಇಡಲೆಂದು.
ಶಿರವ ಕೆರೆಕೆರೆದು
ಬರೀ ತುರಿತುರಿಯಾಗಿ
ಆತುರದಿ ಇದ್ದೆರೆಡು
ಗರಿ ಗರೀ ತುರುಬೂ
ಉದುರಿ ಹಾರಿಹೋಯಿತು.
ಆದರೂ, ಮತ್ತೇನೂ ಬರಲೇಯಿಲ್ಲ ಮಂಡೆಯೊಳಗೆ.
ಹೌದೇ, ಖಾಲಿಯಾಯಿತೇ?
ಬರಿದಾಯಿತೇ? ಎಲ್ಲ ಬರಡಾಯಿತೇ?
ಬೆಟ್ಟದಂತಿದ್ದ ತಲೆಯು
ಬಟ್ಟ ಬಯಲಾಯಿತೇ?
ಬೊಕ್ಕ ಬೋಳಾಯಿತೇ?
ಹಾಳಾದ ಹಂಪೆಯಂತಾಯಿತೇ?
ಬರೆದದ್ದೇ ಬರೆ- ಬರೆದು
ಆ ಬ್ರಹ್ಮನಿಗೂ ಈಗೇನೂ
ತೋಚುತಿಲ್ಲವಂತೇ
ಅದಕೇನೋ, ಈಗವನು ಬರೆಯುವುದ ಬಿಟ್ಟನಂತೆ
ನೋಡಿ ನೋಡಿ, ಎಲ್ಲ
ಹಣೆಗಳೂ ಖಾಲಿ-ಖಾಲಿ
(ಇಲ್ಲಿ ಕೆಲವರದ್ದುಳಿದು)
ಬರೆ ಹಾಕಿದಂತೆ
ಮತ್ತದನೇ ಬರೆಬರೆದು
ಸಾಕಾಗಿ, ಬೋರಾಗಿ
ಬರಿದಾಗಿ ಕೈಚೆಲ್ಲಿ
ಸುಮ್ಮನಾಗಿಹನಂತೆ
ಆ ವಿಶ್ವ ಕರ್ತ.
ಬರೆದರೂ ಬರೆಯಬೇಕು,
ಭುವಿಯಲ್ಲಿ ಹುದುಗಿರುವ
ಲಾವಾಗ್ನಿ ಹೊರಬಂದು ಹರಿದು
ಸಾಗರದ ನೀರನ್ನೆ
ಕುದಿಸಿ, ಕೆಂಡವಾಗಿಸಿ,
ದಾವಾನಲವ ಚಿಮ್ಮಿಸಿ, ಚದುರಿಸಿ,
ಎರಚಾಡಿಬಿಡುವಂತೆ.
ಹುದುಗಿಟ್ಟ ಸಿಡಿಮದ್ದು
ಹೆಬ್ಬಂಡೆಯನೆ ಸೀಳಿ
ಒಡೆದು ಹೊರಬಂದು
ಘೋರತರದಾಸ್ಫೋಟಗೊಂಡಂತೆ.
ಅಂತರಂಗದ ಭಾವಾಗ್ನಿ
ನರನಾಡಿಗಳನೆಲ್ಲ
ಹಿಂಡಿ- ಹಿಸುಕಿ
ಹೊರಚೆಲ್ಲಿ
ಬೆಚ್ಚಿ ಬೀಳಿಸಬೇಕು
ನಿದ್ದೆಯಲ್ಲಿದ್ದವರೂ
ಎದ್ದುಬಿಡಬೇಕು.
ಸದ್ದುಮಾಡುತ ಸುತ್ತೆಲ್ಲ
ಸಡಗರದ ಸಂಭ್ರಮದ
ಗದ್ದಲದ ಸಂತೆಕೂಡುವಂತೆ.
ಈಗೆಲ್ಲಿಹುದು
ಆ ಆಗ್ನಿಗೋಳಗಳು
ಆ ಜ್ವಾಲಾ ಶಿಖರಗಳು
ಪಾತಾಳದಾಳದ ಕಾವೇ
ಕರಗಿ ತಣ್ಣಗಾಗಿಹುದು.
ಅಂತರಾಳದ ರಸದೂಟೆಗಳು
ಒಣಗಿ ಬತ್ತಿ ಬಂಜರಾಗಿಹುದು.
ಬರೆಯಲೇನೂಯಿಲ್ಲ
ಗೆಳತೀ, ಎಲ್ಲಾ
ಖಾಲಿ ಖಾಲೀ.
- ಖಾದ್ರಿ ವೆಂಕಟ ಶ್ರೀನಿವಾಸನ್, ಮೇಲುಕೋಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ