ಭಾನುವಾರ, ಫೆಬ್ರವರಿ 19, 2023

ಕಲ್ಲಿನ ಕ್ವಾರೆ (ಸಣ್ಣ ಕತೆ) - ಸುನಿಲ್ ಐ. ಎಸ್.

ನಾಗೇನಹಳ್ಳಿ ಹೇಳಿಕೊಳ್ಳದಷ್ಟು ಪ್ರಗತಿಯನ್ನು ಕಾಣದ ಮಧ್ಯ ಕರ್ನಾಟಕದ ಗುಡ್ಡಗಳ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ, ಪ್ರಗತಿಯನ್ನು ಪಟ್ಟಣವನ್ನು ಬಹುದೂರದಿಂದ ನೋಡುವ ಅಲ್ಲಿನ ಜನರು ಮುಕ್ಕಾಲು ಪಾಲು ಕೃಷಿಕರು, ಕಾಲು ಪಾಲು ಅರೇ  ಕೃಷಿಕರು. ಪ್ರತಿನಿತ್ಯವೂ ಕಲ್ಲು ಬಂಡೆಗಳ ಜೊತೆ ಹೋರಾಡುವುದೇ ಅವರ ಬದುಕು.
      ಆ ಊರಿನಲ್ಲೊಂದು ಬಡಕುಟುಂಬ ವಾಸವಾಗಿತ್ತು. ಪ್ರಕೃತಿಗೆ ಅಂಟಿಕೊಂಡು ಬದುಕಿದರು ಕಿಡಿಗೇಡಿಗಳ ಸಹವಾಸದಿಂದ ಬದುಕು ಕಟ್ಟಿಕೊಳ್ಳಲು ಸೆಣೆಸಿದ ಕ್ವಾರೆಯ ತಡಿಯ ಕುಟುಂಬದ ಬದುಕಿನ ಚಿತ್ರಣವಿದು. ಮಾದಪ್ಪ ಆ ಊರಿನ ಬಲವಾದ ಆಳು, ಅವನು ಕಲ್ಲು ಹೊಡೆಯಲು ಹೊರಟನೆಂದರೆ ಅವನ ಹಿಂದೆಯೇ ಮಾದಮ್ಮ ಬುತ್ತಿ ಕಟ್ಟಿಕೊಂಡು ಹೊರಡುವಳು. ಆತ  ಓದಿದ್ದು ಆರನೇ ತರಗತಿಯಾದರು, ಕಲ್ಲಿನ ಕೆಲಸದಲ್ಲಿ ಬಲು ಚಾಣಾಕ್ಷ, ತಂದೆಯಿಂದ ಬಂದ ಬಳವಳಿಯನ್ನು ಚಾಚೂತಪ್ಪದೆ ಪಾಲಿಸಿದ ನಿಷ್ಠಾವಂತ ಪ್ರಾಣಿಯದು. ಮಳೆಯೂ ಜೋರಾಗಿ ಬಂದು ಬಂಡೆಯು ತುಂಬಿದಾಗಲೇ ಆತನಿಗೆ  ರಜಾ ಹಾಗೂ ಬಟವಾಡೆಯ ದಿನದಂದು ರಜವೂ ಹೌದು, ಮಜವೂ ಹೌದು. ಸರಾಬು ಕುಡಿಯುವುದು, ಮಾತನಾಡುವುದು, ಕುಣಿಯುವುದು, ರಾತ್ರಿಯೆಲ್ಲ ನಡೆಯುತ್ತಾ ಇರುತ್ತಿತ್ತು. ಯಾರಾದರೂ ಬೈದರೆ ಇಬ್ಬರು ಸುಮ್ಮನಿರುತ್ತಿದ್ದರು, ಇಲ್ಲ ಸುಸ್ತಾಗಿ ತೆಪ್ಪಗೆ ಮಲಗುತ್ತಿದ್ದರು.
     ಮಾದಪ್ಪ ವಾರದ ತುಂಬೆಲ್ಲ ಬಿಗಿಯಾಗಿ ಕಲ್ಲು ಹೊಡೆಯುತ್ತಾನೆ. ಕಲ್ಲಿನಲ್ಲಿ ಸೈಜು, ಬೊಡ್ರಸ್ಸು,ದುಂಡಿ, ಜಲ್ಲಿ ಮುಂತಾದ ವೆರೈಟಿ ಇರುತ್ತದೆ. ಮಾರಿದಷ್ಟು ಕೂಲಿ ಇರುತ್ತಿದ್ದರಿಂದ ವಿಶ್ರಾಂತಿಯಿಲ್ಲದೆ ಕೆಲಸ ಮಾಡುವನು. ಬಂಡೆಯ ಕೆಲಸದ ಬಗ್ಗೆ ಬಹು ಚಾಣಾಕ್ಷನಾಗಿದುದರಿಂದ ಅಪಾಯಕ್ಕೆ ತಕ್ಕಷ್ಟು ಕೊರತೆಯಿರಲಿಲ್ಲ.
     ಆದರೂ ಈಗೊಮ್ಮೆ-ಆಗೊಮ್ಮೆ ಬರುವ ಅಧಿಕಾರಿಗಳ ಬಾಯಿಗೆ ಒಂದಿಷ್ಟು ಸುರಿಯಬೇಕಿತ್ತು. " ಈ ಸುಡುವ ಬಿಸಿಲಿನಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನೆಲ್ಲ ಯಾವುದೇ ಮುಲಾಜಿಲ್ಲದೆ ಬಂದು ದೋಚುತ್ತಾರೆ ಮುಂಡೇ ಮಕ್ಳು ಇವ್ರಿಗೆ ಕರುಣೇನೇ ಇಲ್ವಾ?" ಎಂದು   ಹಿಡಿಶಾಪ ಹಾಕುತ್ತಲೇ ಕಾಸು ಕೊಡುತ್ತಿದ್ದ. ಅದು ಅವನನಿಗೆ ಅನಿವಾರ್ಯವೂ ಆಗಿತ್ತು,ಕಾರಣ ಕೊಡಲಿಲ್ಲವೆಂದರೆ ಮುಂದೆ ತನಗೆ ತೊಂದರೆ ತಪ್ಪಿದ್ದಲ್ಲ ಎಂದು ತನಗೆ ಗೊತ್ತೇ ಇತ್ತು. ವ್ಯವಸ್ಥೆಯನ್ನು  ಚೆನ್ನಾಗಿ ಬಲ್ಲವನಾಗಿದ್ದನು, ಹಳ್ಳಿಯ ರಾಜಕೀಯ ಆತನಿಗೆ ತಿಳಿದಿತ್ತು. ರಾಜಕೀಯಕಿಂಥ ಹೊಲಸು ಕೆಲಸ ಮತ್ತೊಂದಿಲ್ಲ ಎಂಬ ಭಾವನೆ ಅವನದು. ಹಳ್ಳಿಯ ಪರಿಸ್ಥಿತಿಯು       ಹಾಗೆಯೇ ಇತ್ತು.
     ಇತ್ತ ಮಾದಿಯೂ ಗಂಡನಿಗೆ ಸಹಾಯವಾದ ಕೆಲಸಗಳನ್ನು ಮಾಡುತ್ತಿದಳು ಇಲ್ಲೊಂದಿಷ್ಟು- ಅಲ್ಲೊಂದಿಷ್ಟು ಸಿಡಿದಿರುವ ಚೂರುಗಳನ್ನು ಆಯುವ, ಗುಡಿಸುವ  ಕೆಲಸ ಅವಳದು, ಪ್ರತಿನಿತ್ಯವೂ ಬಿರುಗಾಳಿಯ ಜೊತೆ ಸೆಣಸಾಡಬೇಕಿತ್ತು.
     ಇ ಕುಟುಂಬ  ಸ್ವಂತ   ಜಮೀನನ್ನು ಹೊಂದಿರಲಿಲ್ಲ ಮದುವೆಯ ನಂತರ ಅವರಿಬ್ಬರು ಬೇರೆಯವರ ಜಮೀನನ್ನು ಬಾಡಿಗೆಗೆ ಪಡೆದು  ಮನೆಗೆ  ಬೇಕಾಗುವಷ್ಟು  ಕಾಳು -ಕಡ್ಡಿಗಳನ್ನು ಬೆಳೆದು ಸಂಸಾರ ಸಾಗಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು, ಒಬ್ಬನು ಹಿರಿಯಮಗ ಲೋಕ  ಮತ್ತೊಬ್ಬ ಜೇಮ್ಲ. ಚಿಕ್ಕ ಮಕ್ಕಳಿಗೆ ಕರೆದುಕೊಂಡೇ ಗಂಡ-ಹೆಂಡಿರು ವ್ಯವಸಾಯ ಮಾಡಿ ಒಂದಿಷ್ಟು ಸೂರು ಮಾಡಿಕೊಂಡರು. ತಕ್ಕಮಟ್ಟಿಗೆ ಕಡಿಮೆಯೇನೂ ಇಲ್ಲದಂತೆ ಅವರ ಜೀವನ ಸಾಗುತ್ತಿತ್ತು. ಮಕ್ಕಳು ದೊಡ್ಡವರಾದಮೇಲೆ ಅವರ ಅವಶ್ಯಕತೆಗಳು ಹೆಚ್ಚಾದವು. ಬಾಡಿಗೆ ಹೊಲವೂ ಹೋದ ಮೇಲೆ ಮಾದ ತಮ್ಮ ಊರಿನ ಸರ್ಕಾರಿ ಗೋಮಾಳವನ್ನು ಹೊಡೆಯಲು ಶುರುಮಾಡಿದ್ದ ರಜಾದಿನಗಳಲ್ಲಿ ಉಳುಮೆ ಬಿತ್ತನೆ ಕಾರ್ಯಗಳು ನಡೆಯುತ್ತಿದ್ದವು. ಎರಡು ಎಕರೆ ಜಮೀನು ಅಲ್ಲಿ ಸಿಕ್ಕಿದ್ದು ಸಾಕಾಗುವಷ್ಟು ಬೆಳೆಯನ್ನು ಅಲ್ಲಿಯೇ ಬೆಳೆಯತೊಡಗಿದರು. ಮಾದಿ ಕುಟುಂಬದ ಏಳಿಗೆಯಲ್ಲಿ ತನ್ನ ನಗುವನ್ನು ಕಂಡಳು.
     ಈಗ ಹಿರಿಯ ಮಗ ಲೋಕ ಹತ್ತನೇ ತರಗತಿ, ಜೆಮ್ಲ ಎಂಟನೇ ತರಗತಿ ಓದುತ್ತಿದ್ದಾರೆ. ಪಕ್ಕದೂರಿನಿಂದ ಹೊಳಗುಂದಿಗೆ  ನಡೆದೇ ಶಾಲೆಗೆ ಬರಬೇಕು. ತಾವಿಬ್ಬರು  ದುಡಿದರು ಮಕ್ಕಳಿಗೆ ಸರಿಯಾದ ಶಾಲೆಗೆ ಸೇರಿಸದ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಡುಗೆ ಮನೆಯ ರಾಮಾಯಣ ಶುರುಮಾಡಿದಳು. ಗಂಡನ ಹತ್ತಿರ ಪ್ರಸ್ತಾಪಿಸಿದರು ಮಾದಿನ ಬಿಟ್ಟು ಅವನಿಲ್ಲ ಎಂಬುದು ಆಕೆಗೆ  ಚೆನ್ನಾಗಿ ತಿಳಿದಿತ್ತು. ಈಗೀಗ ಕಲ್ಲನ್ನು ಕೊಳ್ಳುವವರಿಲ್ಲದೆ ಜನ ಬೇರೆ ಮಾರ್ಗವನ್ನು ಕಂಡು ಕೊಂಡಿದ್ದಾರೆ, ದೊಡ್ಡ ದೊಡ್ಡ ಮಶೀನ್ಗಳು ಅಳತೆಯ ಕಲ್ಲನ್ನು ಒಡೆಯುತ್ತವೆ. ನಮ್ಮ ಕೆಲಸಕ್ಕೆ ಬೆಲೆ  ಎಲ್ಲಿದೆ, ಎನ್ನುತ್ತಲೇ ಬಂದಷ್ಟು ಬರಲಿ ಹೋದಷ್ಟು ಹೋಗಲಿ ಎಂದು  ಹೋಗುವ   ಪರಿಸ್ಥಿ ತಿ. ಒಂದೆರೆಡು ದಿನ ರಜವಾದರೆ, ಎಣ್ಣೆಗೂ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇನ್ನೆಲ್ಲಿಯ  ಓದು ಇನ್ನೆಲ್ಲಿಯ         ಒಳ್ಳೆ ಬಟ್ಟೆ.? ಆದರೂ ಮನೆಯಲ್ಲಿ ಎರಡೊತ್ತು ಓಲೆ ಉರಿಯಲೇಬೇಕು ಜನ ಏನಂದಾರು ಎಂಬುದು ಮಾಡಿಯ ಗೋಳು. ಇಬ್ಬರು ಪರಸ್ಪರ ಅರ್ಥಮಾಡಿಕೊಂಡಿದ್ದರು ಎಂತಹ   ಪರಿಸ್ಥಿತಿಯಲ್ಲೂ ವಿಚಲಿತರಾಗದ ಮನಸ್ಥಿತಿ ಅವರದು. ಬಡತನ ನಮಗಿರಲಿ ಬಾಳು ಮಕ್ಕಳಿಗಿರಲಿ ಎಂಬುದು ಅವರ ಬದುಕಿನ ತತ್ವ ಅದಕ್ಕಾಗಿ ಎಂಥಹ ಕಾರ್ಯವನ್ನಾದರೂ ಮಾಡುತ್ತಾರೆ. ಆ ಒಂದು ರೊಕ್ಕ ಭಗವಂತ ತುತ್ತು ಅಣ್ಣ ಕರುಣಿಸಿದ್ದ. ಆದರೆ ಬಂಡೆಗಳನ್ನು ಒಡೆಯುವುದು ಪ್ರಕೃತಿಯ ನಾಶಮಾಡಿದಂತೆ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ.
     ಒಂದು ದಿನ ಮಾದಿಗೆ ವಿಪರೀತ ಜ್ವರ ಬಂದಿದ್ದು ಮಾದ ಲೋಕನಿಗೆ ಕಾಸುಕೊಟ್ಟು ದವಾಖಾನೆಗೆ ತೂರಿಸಲು ಹೇಳಿ ಹೋಗಿದ್ದ. ಕೆಲಸ ಮುಗಿಸಿ ಬರುವುದಾಗಿ ಹೇಳಿದ್ದ ಅದರಂತೆಯೇ ಮಧ್ಯಾನ ಮನೆಗೆ ಹೋದನು. ಮನೆಗೆ ಬೀಗ ಹಾಕಿರುವುದನ್ನು ನೋಡಿ ಅಲ್ಲಿದ್ದವರಿಗೆ ವಿಚಾರಿಸಿದ. ಕಮಲಿ ಎನ್ನುವವಳು "ಇಲ್ಲೊ ಯಣ್ಣ ಮಾದಕ್ಕ ಕಾಣಲೇ ಇಲ್ಲ ನೋಡು ನಾನು ಇವಾಗ್  ಬಂದೀನಿ ಎಂದಳು. ಬಹುಷಃ ಹಾಗೆಯೇ ಮಲಗಿರಬೇಕೆಂದು ಮನೆಗೆ ಬಂದನು.ಎಲ್ಹೋಗಿರಬಹುದು.? ಗುಮಾನಿಯಿಂದ ಬರುತ್ತಿದ, ಆಗ ನಿಂಗಣ್ಣ "ಮಾದ ಮಾಡಿನ  ಪಟ್ಣದ  
ಹೈದರು ಕಾರಲ್ಲಿ ಕರ್ಕೊಂಡ್ ಹೋದ್ರು ಕಣಣ್ಣ" ಎಂದ.  ಮಾದ       ತಬ್ಬಿಬ್ಬಾದ ಅದೇ ಮಾದಪ್ಪ " ನಿಮ್ ಹೊಲತಾವ್ ಹೋಗ್ತಾ ಇದ್ರು " ಎಂದನು. ಮಾದನಿಗೆ ಹೆದರಿಕೆ ಶುರುವಾಯಿತು. "ಮೊದಲೇ ಸರ್ಕಾರಿ ಗೋಮಾಳ ಯಾರಾದರೂ ತಕರಾರು ತೆಗೆದರೋ ಶಿವ!" ಎಂದು ಓಡಲು ಶುರುಮಾಡಿದ,  ಆತನ ಓಟಕ್ಕೆ ಕಲ್ಲು-ಮುಳ್ಳುಗಳೇ ಹೂವಾಗಿ ಪರಿವರ್ತನೆಯಾದವು, ಹಿಂದೆ ಧೂಳು ಬಿರುಗಾಳಿಯನ್ನೇ ಮೀರಿಸುವಂತಿತ್ತು, ಎಂಬಂತೆ ಕ್ಷಣಮಾತ್ರದಲ್ಲಿಯೇ ಮೈಲುದೂರದ ಹೊಲ ತಲುಪಿದ. ಮಾದಿಯನ್ನು ಕಂಡೊಡನೆ ಸಮಾಧಾನವಾಯ್ತು ಕೇಳಿ ವಿಚಾರಿಸಿದ, " ಹೊಲವನ್ನು ನಮ್ಮ ಹೆಸ್ರಿಗೆ ಮಾಡಿ ಕೊಡ್ತಾರಂತೆ ಅದಕ್ಕೆ ಸೈನು-ಗೀನು ಮಾಡುಸ್ತಾವ್ರೆ " ಎಂದಳು ಮಾದಿ. ಮಾದಪ್ಪನಿಗೆ ಎಲ್ಲಿಲ್ಲದ ಸಂತೋಷ, ಅವರು ಕೇಳುವ ಮೊದಲೇ ನೂರು ರೂಪಾಯಿ ಕೊಟ್ಟನು. " 'ಬುದ್ದಿ ಈರೋದಿಸ್ಟು ಹೊಲ ಹೊಟ್ಟೆಗೆ ಬಟ್ಟೆಗೆ ಇದೇ ಗತಿ  ಯಂಗಾರ ಮಾಡಿ ವಸಿ ಲಗೂನ ನಂಹೆಸ್ರಿಗೆ ಮಾಡ್ಸಿ ಕೊಡಿ ಬುದ್ದಿ " ಎಂದನು. ಮಾದಿ ಮಾದನಿಗೆ ಸಾತ್ ಕೊಡುವವಳಂತೆ " ಹೂಂ ಬುದ್ಯರ" ಎಂದಳು. ಸರಿ ಸರಿ ಎಂದು ಅವರು ಸರಸರನೆ  ಹೊರಟೇ ಹೋದರು. ಇ ಸುದ್ದಿಯನ್ನು ಕೇಳಿದ ಮಾದಿಯ ಜ್ವರವೂ ಕ್ಷಣಮಾತ್ರದಲ್ಲಿ ಹೊರಟೆ ಹೋಗಿತು. ಮನೆಗೆ ಹೋಗಿ ದೇವರಿಗೆ ದೀಪ ಹಚ್ಚಿದಳು, ಮಕ್ಕಳು ಶಾಲೆಯಿಂದ ಬಂದಿದ್ದರು. ಮನೆಯಲ್ಲಿ ಆವತ್ತು ಸಿಹಿ, ಮಾದನಿಗೆ ಒಂದು ಕ್ವಾಟ್ರು ಹೆಚ್ಚಿಗೆ ಸಿಕ್ಕಿತು.
       ಹೀಗೆ ಹಲವಾರು ದಿನಗಳು ಕಳೆದಿದ್ದವು 'ಉಳುವವನೇ ಭೂಮಿಯ ಒಡೆಯ ' ಎಂಬ ಕಾನೂನು ಜಾರಿಗೆ ಬಂದು ಬಹಳ ದಿನಗಳು ಕಳೆದು
ಉಳುವವರಿಗೆ ಭೂಮಿಯು ಬಂದಿತ್ತು. ಆಗಲು ಮಾದ ಮಾದಿಯರಿಗೆ ಜಮೀನಿನ ಹಕ್ಕುಪತ್ರ ಬಂದಿರಲಿಲ್ಲ. ಬರುತ್ತದೆ ಕಾಯಿರಿ ಎಂಬುದು  ಆ ಊರಿನ ಸೆಕ್ರೆಟರಿ ಆದ ಮಂಜಣ್ಣನ ಮಾತು. ಭೂ ರಹಿತ ರೈತರ ಯೋಜನೆಗೆ ಅರ್ಜಿಯನ್ನು ಹಾಕಿ  ಮಂಜೂರು ಮಾಡಿಸಲು 50,000 ರೂಪಾಯಿ ಪಡೆದಿದ್ದನು. " ಮಂಜಣ್ಣ ತಿಳಿದವ್ನೆ ಬಿಡು ಅವ್ನೆ ಮಾಡಿಸ್ತಾನೆ ಎಷ್ಟೇ ಆದ್ರು ನಮ್ಮಕ್ಕನ ಮಗ ಅವ್ನು " ಎಂಬುದು ಮಾದಿಯ ಹಠ ಆದರೆ ಮಾದನಿಗೆ ಅವನೆಂಥವನೆಂದು ಗೊತ್ತಿತ್ತು   " ನಂಗೇನ್ ಬೇಕು ಉರೋರ್ ಉಸಾಬ್ರಿ ನಮ್ ಪಾಲಿಂದು ನಮ್ಗೆ ಬಂದ್ರೆ ಸಾಕು " ಎಂದುಕೊಳ್ಳುತ್ತಿದ್ದ. ಆದರೆ ಆಟ ಬೇರೆಯದೇ ಮಾಡಿದ್ದ ಮಂಜಣ್ಣ. ಮಾದ - ಮಾದಿ ಕಷ್ಟ ಪಟ್ಟು ತೆಗೆದ ಗೋಮಾಳಕ್ಕೆ ಈಗ ಈರಣ್ಣನ ಹೆಸರ ಮೇಲೆ ಸಾಗುವಳಿ ಬಂದಿದೆಯಂತೆ ಹಾಗಾಗಿ ಆ ಜಮೀನಿಗೆ ಆತನೇ ಒಡೆಯ ಎಂಬ ಸುದ್ದಿ ತಡವಾಗಿಯಾದರೂ ಊರಿನವರ ಬಾಯಿಯ ಸುದ್ದಿಯಾಗಿತ್ತು,ಆಧಾರವು ಕೂಡ ಅವನ ಬಳಿ ಇತ್ತು.
ಆದರೆ ಮಂಜಣ್ಣ ಊರು ಬಿಟ್ಟು ಹೋಗಿದ್ದ.ಮಾದ - ಮಾದಿ         ವಿಚಾರಿಸಿದರೆ ತಾವು ಹಣವನ್ನು ಕೊಟ್ಟು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಾಗಿಯೂ ಈರಣ್ಣ ಹೇಳಿದ. ಮಾದನ ಎದೆ ಒಡೆದು ಹೋಯಿತು " ಇದ್ದ ಭೂಮಿಯನ್ನು ಉಳಿಸಿಕೊಳ್ಳಲಾಗಲಿಲ್ಲ, ಶ್ರಮ ಒಬ್ಬನದಾದ್ರೆ ಪ್ರತಿಫಲ ಮತ್ತೊಬ್ಬನದು. ಹೀಗೆ ಪ್ರಾರಂಭದಿಂದಲೂ ನಡೆಯುತಿಹುದು ಸಮಾಜದೊಳಗೆ  ನಮ್ಮಂಥವರನ್ನು ಕಂಡೆ   ಈ ಜನ ಮೋಸ ಮಾಡ್ತಾರೆ ಏನೋ, ಅವ್ರ ಮನೆ ಹಾಳಾಗ " ಎಂದು  ಹಿಡಿ ಶಾಪ ಹಾಕಿದ. ಮನೆಗೆ ಬಂದವನೇ ಯಾರ ಜೊತೆಗೂ ಮಾತಾಡದೆ ಸುಮ್ಮನೆ ಮಲಗಿದ್ದ. ಮಾದಿಯು ಒಲೆ ಹಚ್ಚಿರಲಿಲ್ಲ ಮಕ್ಕಳು ಉಪವಾಸ ಮಲಗಿದ್ದವು,ಇಡೀ ಮನೆಯೇ ದುಃಖ್ಖದಲ್ಲಿದ್ದಾಗ ಊರಿನ ಗೌಡನ ಮನೆಯ ಮಾಂಸದ ಸಾರಿನ ವಾಸನೆ ಮಾದನ ಮನೆಯ ಅಸಹಾಯಕತೆಯನ್ನು ಪ್ರಶ್ನಿಸುತ್ತಿತ್ತು  ಏಳು, ಏಳು ಮಾದ ಎಂದು. ನಿತ್ರಾಣ ತಪ್ಪಿದ್ದರು ಮಾದ ಮರುದಿನ ತನ್ನ ಕಾರ್ಯಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ " ಕಳ್ಳಸೂಳೇ ಮಕ್ಳು ತಾವು ಮಾತ್ರ ತಿಂದುಂಡು ಹೋಗವ್ರೆ ಹುಟ್ಸೋಮೊದ್ಲು ಹರುವಿರ್ಬಾರ್ದ ಮಕ್ಕಳಿಗೂ ಒಂದಿಷ್ಟು ಕೂಡಿಡ್ಬೇಕು ಅನ್ನೋದು " ಎಂದು ಮನಸ್ಸಿನಲ್ಲಿಯೇ ಬೈದು ವಲ್ಲದ ಮನಸ್ಸಿಂದ ಹೋದನು. ಹೋದವನೇ ಮನಸ್ಸಿನ ತುಂಬಾ ನೂರಾರು ಆಲೋಚನೆಗಳಿದ್ದವು ಕಲ್ಲಿಗೆ ಹೊಡೆದು ಏಟು ಜಾರಿ ಕಾಲಿಗೆ ಬಿದ್ದು ಮೊಣಕಾಲ ಮೂಳೆಗೆ ಹೊಡೆತ ಬಿತ್ತು, ಬಿದ್ದು ವದ್ದಾಡ ತೊಡಗಿದ ಅಲ್ಲೇ ಕೂತವರು ನೀರು ಕೊಡಿಸಿ ಆಸ್ಪತ್ರೆಗೆ ಸೇರಿಸಿ ನಂತರ ಮನೆಗೆ ಕರೆತಂದಿದ್ದರು. ಆಯ್ದು ತಿನ್ನೋ ಕೋಳಿಯ ಕಾಲು ಮುರಿದಂಗಾತು ಅವರ ಬದುಕು.
ಇತ್ತ ಮಾದಿಯ ಪಾಡು ದಿಕ್ಕೆಟ್ಟ ಕರುವಿನಂತಾಯಿತು, ಇದ್ದ ಕಾಸನ್ನು ಭೂಮಿಯ ಆಸೆಗೆ ಬೇರೆಯವರ ಬಾಯಿಗೆ ಹಾಕಿ ಅವರಿಗೆ - ಇವರಿಗೆ ಕೇಳಿ ಸುಸ್ತಾಗಿದ್ದಳು ಏನಾದರೂ ಮಾರೋಣವೆಂದರೆ ಮನೆಯಲ್ಲಿ ಕಡಿಕಾಳುಗಳಿಲ್ಲ, ಕೈಯಲ್ಲಿ ಬಿಡಿಗಾಸಿಲ್ಲ ಕೊನೆಗೆ ಊರಗೌಡನ ಸಹಾಯದಿಂದ ಆಸ್ಪತ್ರೆಯ ಖರ್ಚನ್ನು ಭರಿಸಿದ್ದಾಯಿತು ಅವರಿಗೆ ಇದ್ದಾಗ ಕೊಟ್ಟರಾಯಿತು. ಎಂದು ಸಮಾಧಾನಪಟ್ಟಳು. ಸಂಸಾರದ ಹೊರೆ, ಮಕ್ಕಳ ಪಾಲನೆ, ಗಂಡನ ಆರೈಕೆ ಎಲ್ಲದನ್ನು ನಿಭಾಯಿಸತೊಡಗಿದಳು. ಮಾದನ ಕಾಟ ತಡೆಯಲಾಗಲಿಲ್ಲ ಅವನಿಗೆ ಪ್ರತಿನಿತ್ಯವೂ ಸರಾಬು ಬೇಕೇ-ಬೇಕು, ಸೂರ್ಯನುದಯಿಸುವುದು ಸ್ವಲ್ಪ ತಡವಾಗಬಹುದು ಆದರೆ ಮಾದನ ಶರಾಬು ಟೈಮು ಸರಿಯಾದ ಸಮಯದಲ್ಲೇ ಆಗಬೇಕಿತ್ತು, ಮೀರಿದರೆ ಆತನ ಬಾಯಿಂದ ಬರುವ ಭಗವದ್ಗೀತೆಯ ಶ್ಲೋಕಗಳನ್ನು ಕೇಳಲು  ಜನ ಮನೆ ಮುಂದೇ ಜಮಾಯಿಸುತ್ತಿದ್ದರು.  ಹಾಗಾಗಿ ವಲ್ಲದ ಮನಸ್ಸಿಂದಲೇ ಆತನಿಗೆ ಸರಾಬು ಪೂರೈಸುತ್ತಿದ್ದಳು, ಅದೇ ಚಿಂತೆಯಲ್ಲಿ ತಾನು ಹಾಕಿಕೊಳ್ಳುತ್ತಿದ್ದಳು.
     ಈಗ ಮಾದ ಸಂಪೂರ್ಣ ಗುಣಮುಖನಾಗಿದ್ದಾನೆ. ಈಗಿಗ ಮಕ್ಕಳ ಚಿಂತೆ  ಅವರಿಗೆ, ತಮ್ಮ ಮಕ್ಕಳಿಗೋಸ್ಕರ ಏನು ಮಾಡಲಿಲ್ಲವಲ್ಲ ಎಂಬ ಅಳುಕು ಅವರದು. ಈಗಲಾದರೂ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ ಸಾಕೆಂದು ಚಿಂತಿಸಿ ದಾವಣಗೆರೆಯ ಕಾಲೇಜಿಗೆ ಸೇರಿಸಿದರು. ವಸತಿ ನಿಲಯದಲ್ಲೆ ವ್ಯವಸ್ಥೆ ಮಾಡಿಸಿ ತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಹೋಗಿ ಬರುತ್ತಿದ್ದರು.
     ಒಂದು ದಿನ ಇಬ್ಬರು ಜೊತೆಯಲ್ಲಿಯೇ ಕೆಲಸಕ್ಕೆ ಹೊರಟರು ಅವತ್ತು ಅಷ್ಟೇ ಮಾದಿ ಅವಸರವಾಗಿ ಹೊರಟಳು ಮಾತನಾಡುತ್ತಾ ದಾರಿ ಸಾಗಿತು "ಮಾದ ಮಕ್ಳು ಚನ್ನಾಗ್ ಓದ್ತಾವೆ ಹಿಂಗೇ ಓದಿದ್ರೆ ಸಾಕು ಅವ್ರ ಪಾಡಿಗೆ ಅವ್ರು ಬಾಳ್ವೆ ಮಾಡ್ತಾರೆ " ಎಂದನು. ಮಾದಿ " ಹೂಂ ಅದೇ ನಂಬಿಕೆ ನಂದು " ಎಂದು ಬಾಲಂಗೋಚಿಯಂತೆ ಹಿಂದೆಯೇ ನಡೆಯುತ್ತಿದ್ದಳು. 'ದಾರಿ ಮುಗಿದಿತ್ತು ಕಾಡು ಬಾ ಅಂದಿತ್ತು' ಎಂಬಂತೆ ವಿಪರ್ಯಾಸವೇನೆಂದರೆ ಮಕ್ಕಳ ಮತ್ತವರ ಜೀವನದ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದ ಆ ಮುದಿ ಜೀವಗಳ ಕೊನೆಗಾಲಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಪಕ್ಕದ ಬಂಡೆಯವರು ಬ್ಲಾಸ್ಟ್ ಮಾಡುತ್ತಿದ್ದೇವೆ ದೂರ-ದೂರ ಎಂದು ಎಷ್ಟು ಕೂಗಿದರು ಮಾತಿನ ಭರದಲ್ಲಿ ಇವರಿಗೆ ಕೇಳಿಸದಾಯಿತು. ಬಂಡೆಗೆ ಹೋಗಿ ಇನ್ನೇನು   ಕೆಲಸಕ್ಕೆ  ತಯ್ಯಾರಿಯಾಗಬೇಕು  ಅನ್ನುವಷ್ಟರಲ್ಲಿ ಛಿದ್ರಗೊಂಡ  ದೊಡ್ಡ ಬಂಡೆ ಇಬ್ಬರ ಮೇಲು ಹರಿದು ಚಪ್ಪಟೆಯಾದರು. ವಸಂತ ಚಿಗುರು ಚಿಗುರಿದಂತೆ ಅವರ ಜೀವನದ ಬಗ್ಗೆ ಚಿಗುರುತ್ತಿದ್ದ ನಂಬಿಕೆಯ ಚಿಗುರು ಚಿಗುರಿನಲ್ಲೇ ಚಿವುಟಿಹೋಯಿತು. ಪಿಸುಮಾತಾಡಲಿಲ್ಲ ಕಟ್ಟಿಟ್ಟ  ಬುತ್ತಿಯ ಗಂಟು ಪರರ ಪಾಲಾಯಿತು. ರೆಕ್ಕೆ ಬಲಿತ ಆ ಎರೆಡು ಹಕ್ಕಿಗಳು ಪರರಿಗೆ ಭಾರವಾದವು  ಕ್ವಾರೆಯಲ್ಲಿಯೇ ಜೀವನವನ್ನು ಕಟ್ಟಿಕೊಂಡಿದ್ದ ಆ ಎರೆಡು ಜೀವಗಳು ಗುರುತು ಸಿಗದಂತಾದವು. ಕಲ್ಲೇ ಅವರಿಗೆ ಬಾಳಿಗೆ ಆಸರೆ ಮತ್ತೆ, ಮುಳುವಾಯಿತು.
       
 - ಸುನಿಲ್  ಐ. ಎಸ್,  ಸಂಶೋಧನಾರ್ಥಿ.
  ಕನ್ನಡ ವಿಶ್ವವಿದ್ಯಾಲಯ, ಹಂಪಿ.
 # 7349177749.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...