ಮಂಗಳವಾರ, ಫೆಬ್ರವರಿ 21, 2023

ಯಶಸ್ವಿಯಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತಾದ ಉಪನ್ಯಾಸ ಕಾರ್ಯಕ್ರಮ.

ವಿಚಾರ ಮಂಟಪ ಬಳಗ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ ಹಾಸನ ಇವರ ಜಂಟಿ ಸಹಯೋಗದಲ್ಲಿ ದಿನಾಂಕ ೨೧.೦೨.೨೦೨೩ ರಂದು ಸಂಜೆ ೦೭:೦೦ ಕ್ಕೆ ಗೂಗಲ್‌ ಮೀಟ್‌ ಆನ್‌ಲೈನ್‌ ಜಾಲತಾಣದಲ್ಲಿ ಸಂತಕವಿ ಸರ್ವಜ್ಞ ಹಾಗೂ ಪರಮಹಂಸ ರಾಮಕೃಷ್ಣರ ಜಯಂತಿಯ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂತಕವಿ ಸರ್ವಜ್ಞ ಎಂಬ ವಿಷಯದ ಕುರಿತು ಮಾತನಾಡಿದ ಸಂಶೋಧಕರಾದ ಪ್ರಭುಕುಮಾರ ಪಿ ಇವರು ಸರ್ವಜ್ಞನ ಕುರಿತು ನಮಗೆ ಯಾವ ಅಧಿಕೃತ ಮಾಹಿತಿಯೂ ಲಭ್ಯವಿಲ್ಲದಿದ್ದರೂ ಅವನ ಕುರಿತಾದ ಐತಿಹ್ಯಗಳು, ಕೆಲವು ಸಂಶೋಧನೆಗಳು ಹಾಗೂ ಸ್ವತಃ ಸರ್ವಜ್ಞನೇ ರಚಿಸಿರುವ ತ್ರಿಪದಿಗಳ ಆಧಾರದಲ್ಲಿ ಸರ್ವಜ್ಞನ ಊರು, ತಂದೆ ತಾಯಿ ಇತ್ಯಾದಿ ವಿವರಗಳನ್ನು ಊಹಿಸಲಾಗಿದೆ. ಬಸವರಸ ಹಾಗೂ ಮಾಳಿ ಸರ್ವಜ್ಞನ ತಂದೆ ತಾಯಿಗಳೆಂದು, ಇವನ ನಿಜ ನಾಮ ದೇವದತ್ತ ಅಥವಾ ಪುಷ್ಟದತ್ತನೆಂದು, ಇವನ ಊರು ಈಗಿನ ಹಾವೇರಿ ಜಿಲ್ಲೆಯ ಮಾಸೂರು ಎಂದು ತಿಳಿದುಬಂದಿದೆ. ಒಂದು ಐತಿಹ್ಯದ ಪ್ರಕಾರ ಮಕ್ಕಳಿಲ್ಲದ ಬಸವರಸನು ಮಕ್ಕಳ ಭಾಗ್ಯಕ್ಕಾಗಿ ಕಾಶಿಯಾತ್ರೆಗೆ ಹೋಗಿ ಮರಳಿ ಬರುವ ಹಾದಿಯಲ್ಲಿ ಮಾಳಿಯನ್ನು ಸಂಧಿಸಿದ ಕಾರಣದಿಂದ ಸರ್ವಜ್ಞನು ಹುಟ್ಟಿದನೆಂದು ಹೇಳಲಾಗುವುದು. ಆದರೆ ಸರ್ವಜ್ಞ ʼಊರೆಲ್ಲ ನೆಂಟರು, ಕೇರಿಯಲ್ಲ ಬಳಗ ಎಂಬಂತೆ ಬದುಕಿದವನು.

      ಸರ್ವಜ್ಞ ತನ್ನ ಒಂದು ವಚನದಲ್ಲಿ “ಸರ್ವಜ್ಞನೆಂಬವನು ಗರ್ವದಿಂದಾವನೆ, ಸರ್ವರಿಂದೊಂದು ನುಡಿಕಲಿತು ವಿದ್ಯಯಾ ಪರ್ವತವೇ ಆದ ಸರ್ವಜ್ಞ” ಎಂದು ಹೇಳಿರುವನು. ಈ ವಚನವು ಒಂದು ಕಡೆ ಒಬ್ಬ ವ್ಯಕ್ತಿ ಸರ್ವಜ್ಞನೆಂದು ಕರೆಸಿಕೊಳ್ಳಬೇಕಾದರೆ ಅಥವಾ ಅವನು ಸರ್ವವನ್ನೂ ಅರಿಯಬೇಕಾದರೆ ಅವನಿಗಿರುವ ಮಾರ್ಗ ಏನು ಎಂಬುದನ್ನು ಹೇಳುತ್ತಲೇ, ಮತ್ತೊಂದು ಕಡೆ ಸರ್ವಜ್ಞನು ತನ್ನ ವ್ಯಕ್ತಿತ್ವವನ್ನು ಕುರಿತು ತಾನೇ ಹೇಳಿಕೊಂಡಂತೆ ಇದೆ. ಇಂತಹ ಸಂಕೀರ್ಣವಲ್ಲದ, ಸರಳವಾದ, ಅಲಂಕಾರವಿಲ್ಲದ, ರೂಪಕಗಳಿಂದ ಕೂಡಿದ ಸಾವಿರಾರು ವಚನಗಳನ್ನು ಸರ್ವಜ್ಞ ರಚಿಸಿದ್ದಾನೆ.

      ತನ್ನ ಸುದೀರ್ಘವಾದ ಜೀವನಾನುಭವ, ಜೀವನ ಧರ್ಮ, ಜೀವ ಪೋಷಕ ತತ್ತ್ವಗಳನ್ನು ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಹಾಗೆ ಮೂರೇ ಮೂರು ಸಾಲುಗ ತ್ರಿಪದಿಗಳ ಮೂಲಕ ಸರ್ವಜ್ಞ ನಮಗೆ ಕಾಣಿಸಿದ್ದಾನೆ. ಸರ್ವಜ್ಞನ ಕೆಲವು ವಚನಗಳಲ್ಲಿ ಮಾತಿನ ಚಮತ್ಕಾರವಿದ್ದರೆ, ಮತ್ತೆ ಕೆಲವುಗಳಲ್ಲಿ ವಿಡಂಬನಾತ್ಮಕತೆ, ಮತ್ತೆ ಕೆಲವುಗಳಲ್ಲಿ ನೀತಿ ಬೋಧನೆ ಪ್ರಧಾನವಾದ ಅಂಶಗಳು ಮುಖ್ಯವಾಗಿ ಕಾಣಬರುತ್ತವೆ. ಸರ್ವಜ್ಞನ ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ಸಾಲವನು ಕೊಂಬಾಗ ಹಾಲೊಗರುಂಡಂತೆ, ನಡೆವುದೊಂದೆ ದಾರಿ ಸುಡುವುದೊಂದೆ ಅಗ್ನಿ ಮುಂತಾದ ತ್ರಿಪದಿಗಳಲ್ಲಿ ಮೇಲೆ ಚರ್ಚಿಸಿದ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದರು.

 

ಪರಮಹಂಸ ರಾಮಕೃಷ್ಣರು ಎಂಬ ವಿಷಯದ ಮೇಲೆ ಮೊದಲನೆಯದಾಗಿ ಗುಡಿಬಂಡೆಯ ಶಿಕ್ಷಕರಾದ ಡಿ.ಎಲ್.‌ ಪರಿಮಳಾ ಅವರು ಮಾತನಾಡುತ್ತಾ, ಒಬ್ಬ ಸಾಮಾನ್ಯ ಮಾನವನಾಗಿ ಜನಿಸಿದ ರಾಮಕೃಷ್ಣ ಪರಮಹಂಸರು ದೈವೀ ಪುರುಷರಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾದವರು. ಭಾರತದ ಸಂಸ್ಕೃತಿ ಆಧ್ಯಾತ್ಮಿಕತೆಯನ್ನು ದೇಶ ವಿದೇಶಗಳಿಗೆ ಪಸರಿಸಿದವರು.

ಗಂಗಾಧರ ಅಥವಾ ಗದಾಧರ ಎಂಬುದು ರಾಮಕೃಷ್ಣ ಪರಮಹಂಸರ ಮೊದಲ ಹೆಸರು. ಇವರು ಜನಿಸಿದ್ದು ೧೮೩೬ ರಲ್ಲಿ. ಹುಟ್ಟಿನಿಂದಲೇ ಚತುರನೂ ಚಾಲಾಕಿಯೂ ಆಗಿದ್ದ ರಾಮಕೃಷ್ಣರು ಅಷ್ಟೇ ತುಂಟ ಸ್ವಭಾವದವರೂ ಆಗಿದ್ದರು. ಇವರಿಗೆ ಶಾಲೆಯಲ್ಲಿ ಸಿಗುತ್ತಿದ್ದ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ಶಾಲೆಯನ್ನು ತೊರೆದು ನಾಟಕ ಕಲಿಯಲು ಹೋಗುತ್ತಿದ್ದರು. ತಮ್ಮ ೨೦ ನೇ ವಯಸ್ಸಿನಲ್ಲಿಯೇ ದಕ್ಷಿಣೇಶ್ವರದ ಕಾಳಿಯ ಅನುಗ್ರಹಕ್ಕೆ ಪಾತ್ರರಾಗುವರು. ತಮ್ಮನ್ನು ಸದಾ ಕಾಡುತ್ತಿದ್ದ, ಈ ಜೀವನದ ಗುರಿ ಏನು?, ದೇವರು ಎಂದರೇನು?, ಈ ಜಗತ್ತಿನ ಸ್ವರೂಪ ಯಾವುದು ಇತ್ಯಾದಿ ಪ್ರಶ್ನೆಗಳಿಗೆ ತಮ್ಮ ಧ್ಯಾನದಲ್ಲಿಯೇ ಉತ್ತರಗಳನ್ನು ಪಡೆದುಕೊಳ್ಳತ್ತಾ, ಜಾತಿ ಧರ್ಮಗಳನ್ನು ಮೀರುವ ಸರ್ವರನ್ನು ಸಮಾನವಾಗಿ ಕಾಣುವ, ಸಕಲ ಚರಾಚರಗಳಲ್ಲಿ ದೇವರನ್ನೇ ಕಾಣುವ ಸಂದೇಶವನ್ನು ಜಗತ್ತಿಗೆ ಕೊಟ್ಟವರು ರಾಮಕೃಷ್ಣ ಪರಮಹಂಸರು.

ʼವಸುದೈವ ಕುಟುಂಬಕಂʼ ಎಂಬ ವಾಕ್ಯವನ್ನು ಯಥಾವತ್ತಾಗಿ ಪಾಲಿಸುತ್ತಿದ್ದವರು, ಅದರಂತೆ ಬದುಕಲು ತಮ್ಮ ಶಿಷ್ಯ ಕೋಟಿಗೆ ನಿತ್ಯ ಮಾರ್ಗದರ್ಶನ ಮಾಡಿದವರು ರಾಮಕೃಷ್ಣ ಪರಮಹಂಸರು. ತಮ್ಮ ಜೀವಿತಕಾಲವನ್ನೆಲ್ಲ ಪ್ರವಚನ ಬೋಧನೆಗಳ ಮೂಲಕ ಕಳೆದ ರಾಮಕೃಷ್ಣರು ಗಂಟಲು ಬೇನೆಗೆ ತುತ್ತಾಗುವರು. ಇಷ್ಟಾದರೂ ತಮ್ಮ ಕಾರ್ಯವನ್ನು ಬಿಡದೇ ಸದಾ ಕ್ರಿಯಾಶೀಲರಾಗಿರುತ್ತಿದ್ದ ಇವರು ೧೮೮೬ ಆಗಸ್ಟ್‌ ೧೬ ರಂದು ತಮ್ಮ ದೇಹವನ್ನು ಬಿಟ್ಟರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಜ್ಞಾನ, ಅನುಭವದ ಭೋದನೆಗಳು ನಮಗೆ ನಿತ್ಯ ಮಾರ್ಗದರ್ಶಿಗಳಾಗಿದ್ದು, ಇವರ ಚಿಂತನೆಗಳನ್ನು ಬೋಧನೆಗಳನ್ನು ನಾವು ಸದಾ ಕಾಲ ಅನುಸರಿಸಿ ಅವರು ತೋರಿಸಿದ ಜ್ಞಾನದ ಬೆಳಕಿನಲ್ಲಿ ನಮ್ಮ ಜೀವನಗಳನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಮುಂದೆ ರಾಮಕೃಷ್ಣ ಪರಮಹಂಸರ ಭೋದನೆಗಳನ್ನು ಕುರಿತು ಮಾತನಾಡಿದ ಶಿಕ್ಷಕಿ ಶಶಿವಸಂತ ಇವರು, ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯ ಕಾಮಾರಕಪುರ ಎಂಬ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಸಂಸ್ಕೃತಿಯನ್ನು ದೇಶವಿದೇಶಗಳಿಗೆ ಪಸರಿಸುವಂತೆ ಮಾಡಿದವರು. ಇವರ ತಂದೆ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ತಾಯಿ ಚಂದ್ರಮಣಿದೇವಿ. ಜನ್ಮತಃ ಧೈರ್ಯಶಾಲಿಗಳಾಗಿದ್ದ ರಾಮಕೃಷ್ಣರು ಸಜ್ಜನರು, ಸಮಾನ ಚಿತ್ತರೂ ಆಗಿದ್ದರು. ಇವರು ಶಾಲೆಯಲ್ಲಿ ಕಲಿತದ್ದು ಬಹಳ ಕಡಿಮೆಯಾದರೂ, ತಮ್ಮ ಸುತ್ತಮುತ್ತಲ ಪರಿಸರ ಹಾಗೂ ತಮ್ಮ ಆಂತರಂಗದ ಅನುಭವಗಳ ಮೂಲಕ ಪಡೆದ ಜ್ಞಾನ ಅಗಾಧವಾದದ್ದು.

ರಾಮಕೃಷ್ಣರದ್ದು ಎಲ್ಲ ಧರ್ಮಗಳನ್ನು ಒಳಗೊಂಡು ಮತ್ತು ಎಲ್ಲ ಧರ್ಮಗಳನ್ನು ಮೀರಿದ ಧರ್ಮ. ಇಂತಹ ಒಂದು ಧರ್ಮವನ್ನು ರಾಮಕೃಷ್ಣರು ಭೋಧಿಸಿದ ಕಾರಣದಿಂದ ʼಸ್ಥಾಪಕಾಯಚ ಧರ್ಮಸ್ಯʼ ಎಂಬುದಾಗಿ ಶ್ರೀ ವಿವೇಕಾನಂದರು ರಾಮಕೃಷ್ಣರನ್ನು ಸ್ತೋತ್ರ ಮಾಡಿರುವರು. ರಾಮಕೃಷ್ಣ ಪರಮಹಂಸರು ಅಷ್ಟಾಂಗ ಯೋಗಗಳಲ್ಲಿ ಕೊನೆಯ ಹಂತವಾದ ನಿರ್ವಿಕಲ್ಪ ಸಮಾಧಿ ಸ್ಥಿತಿಯನ್ನು ಸಾಧಿಸಿದ್ದರು. ಹೀಗಾಗಿಯೇ ಅವರು ಹಲವು ಘಂಟೆಗಳ, ವಾರಗಳ ಕಾಲದವರೆಗೂ ಧ್ಯಾನಸ್ಥ ಸ್ಥಿತಿಯಲ್ಲಿಯೇ ಇದ್ದು ಬಿಡಬಹುದಾದ ಶಕ್ತಿಯನ್ನು ಪಡೆದಿದ್ದರು. ಪರಮಹಂಸ ಎಂಬ ಸ್ಥಾನವೂ ಅವರ ಆಧ್ಯಾತ್ಮಿಕ ಔನತ್ಯವನ್ನು ಪ್ರತಿನಿಧಿಸುವಂತದ್ದೇ ಆಗಿದೆ. ಈ ಆಧ್ಯಾತ್ಮಿಕ ಹಂತಗಳನ್ನು ಯೋಗಿಯಾದವನು ಅನುಭವಿಸಬಹುದೇ ವಿನಃ ಅವನ್ನು ಮತ್ತೊಬ್ಬರಿಗೆ ವಿವರಿಸಲಾರನು, ಏಕೆಂದರೆ ಇದು ಮಾತಿಗೆ ಊಹೆಗೆ ಮೀರಿದ/ನಿಲುಕದ ಅನುಭವವಾಗಿರುತ್ತದೆ.

ರಾಮಕೃಷ್ಣ ಪರಮಹಂಸರ ಹೆಂಡತಿ ಶ್ರೀಮತಿ ಶಾರದಾ ದೇವಿ ಹಾಗೂ ಪ್ರಿಯಶಿಷ್ಯನಾದ ವಿವೇಕಾನಂದರು ರಾಮಕೃಷ್ಣರ ಕೀರ್ತಿಯನ್ನು ಮತ್ತಷ್ಟು ಬೆಳಗಿಸಿದವರು. ಇಬ್ಬರೂ ರಾಮಕೃಷ್ಣರ ಮಾರ್ಗದರ್ಶನದಲ್ಲಿ ಅವರು ಹೇಳಿದಂತೆ ನಡೆಯುತ್ತಾ ರಾಮಕೃಷ್ಣರ ಭೋಧನೆಗಳನ್ನು ಮುಂದಿನವರಿಗೆ ದಾಟಿಸುವ ಕೆಲಸವನ್ನು ಮಾಡಿದರು. ಎಲ್ಲ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ ಏಕತೆ, ಎಲ್ಲ ಧರ್ಮಗಳ ಸಾಮರಸ್ಯ ಇವು ರಾಮಕೃಷ್ಣ ಪರಮಹಂಸರು ಮುಖ್ಯವಾಗಿ ನಮಗೆ ನೀಡಿರುವ ನಾಲ್ಕು ತತ್ತ್ವಗಳು. ಇಂತಹಾ ಆಧ್ಯಾತ್ಮಜೀವಿಯ ಭೋಧನೆಗಳನ್ನು ಕಲಿತು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ನಮ್ಮ ನಮ್ಮ ಜೀವನಗಳನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಕಲಾವತಿ ಮಧುಸೂಧನ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರು ಮಾತನಾಡುತ್ತಾ, ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ ಎರಡು ಮೇರು ವ್ಯಕ್ತಿತ್ವಗಳಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತ ಈ ಉಪನ್ಯಾಸ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚು ನಡೆಯುತ್ತಿರಲಿ, ಇಂತಹ ಸಾಧಕರ ಜೀವನ ಸಾಧನೆ ಹಾಗೂ ಭೋಧನೆಗಳು ಕೇಳುವ ಅನುಸರಿಸುವ ಮೂಲಕ ನಮ್ಮ ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳುವಂತಾಗಲಿ.

ಸರ್ವಜ್ಞನಾಗಲೀ, ರಾಮಕೃಷ್ಣ ಪರಮಹಂಸರಾಗಲೀ, ತಮ್ಮ ಅನುಭವಗಳ ಮೂಲಕವೇ ಲೋಕಕ್ಕೆ ಜ್ಞಾನ ಭೋಧನೆಯನ್ನು ಮಾಡಿದವರು. ಸಂಸ್ಕೃತಿ, ಸನ್ನಡತೆ, ದಾನ, ನೈತಿಕತೆಗಳನ್ನು ಭೋಧಿಸಿದವರು. ಇಡೀ ವಿಶ್ವಕ್ಕೆ ಇವರು ಮಾದರಿ ಶಕ್ತಿಗಳು. ಸರ್ವವನ್ನು ಅರಿತ ಸರ್ವಜ್ಞ, ತಾನು ಸರ್ವವನ್ನೂ ಅರಿತಿದ್ದರೂ ತನ್ನಲ್ಲಿ ಎಳಷ್ಟೂ ಅಹಂಕಾರವಿರಲಿಲ್ಲ. ಸರ್ವರಿಂದ ಒಂದೊಂದ ನುಡಿ ಕಲಿತು ವಿದ್ಯೆಯ ಪರ್ವತವಾದೆ ಎಂದು ಸರ್ವಜ್ಞ ಹೇಳಿಕೊಳ್ಳುವನು. ರಾಮಕೃಷ್ಣರು ಪರಮಹಂಸತ್ವವನ್ನು ಪಡೆದಿದ್ದರೂ ಎಂದೂ ಅಹಂಕರಿಸದೇ ತಮ್ಮ ಕಾಯಿಲೆಯ ದಿನಗಳಲ್ಲಿಯೂ ಶಿಷ್ಯರಿಗೆ ಜ್ಞಾನ ಭೋಧನೆ ಮಾಡುವುದರಲ್ಲಿ ಕಳೆದರು. ಇಂತಹವರ ಬರಹಗಳನ್ನು ಮತ್ತೆ ಮತ್ತೆ ಓದುವ ಅವರ ಚಿಂತನೆಗಳೊಂದಿಗೆ ಅನುಸಂಧಾನಗೊಳ್ಳುವ ಹಾಗೂ ಅವನ್ನು ಅನುಸರಿಸುವ ಮೂಲಕ ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳಬೇಕಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ಶ್ರೀ ಪಯಾಜ್ ಅಹಮದ್ ಖಾನ್, ರಾಜ್ಯಾಧ್ಯಕ್ಷರು, ಕರುನಾಡು ಸಾಹಿತ್ಯ ಪರಿಷತ್ತು ಇವರು ಮಾತನಾಡುತ್ತಾ, ಈ ಕಾರ್ಯಕ್ರಮವು ಬಹಳ ಅಭೂತಪೂರ್ವವಾಗಿ ಮೂಡಿ ಬಂದಿದೆ. ಜಾನಪದ ಕವಿ, ತ್ರಿಪದಿ ಬ್ರಹ್ಮ ಎನಿಸಿರುವ ಸರ್ವಜ್ಞ ಹಾಗೂ ಯುಗಪುರುಷ ನೆನಿಸಿರುವ ರಾಮಕೃಷ್ಣ ಪರಮಹಂಸರನ್ನು ಅವರ ಜನ್ಮದಿನಾಚರಣೆಯ ಪ್ರಯುಕ್ತ ಮತ್ತೆ ಮತ್ತೆ ನೆನೆಯುವುದು ಅತ್ಯವಶ್ಯಕವಾದದ್ದು, ಕೇವಲ ಅವರ ಜನ್ಮ ದಿನಾಚರಣೆಯಂದು ಮಾತ್ರವಲ್ಲದೇ ಸದಾ ಕಾಲ ಇವರ ಚಿಂತನೆಗಳು ಚರ್ಚಿಸುವ ಆಚರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಮುಂದುವರೆಯೋಣ ಎಂದು ಹೇಳಿದರು.

ಸಂಶೋಧನಾರ್ಥಿ ಧನುಷ್‌ ಎಚ್‌ ಶೇಖರ್‌ ಇವರು ಕಾರ್ಯಕ್ರಮವನ್ನು ಅಚ್ಚುಕ್ಕಟ್ಟಾಗಿ ನಿರ್ವಹಿಸಿದರು, ವಿಚಾರ ಮಂಟಪ ಬಳಗ ಸಂಚಾಲಕರಾದ ಗೌತಮ್‌ ಗೌಡ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು, ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷರಾದ ಆಶಾ ಕಿರಣ ಎಂ, ಅಮರ್‌ ಬಿ, ಆಶಾನೂಜಿ, ರಂಗಸ್ವಾಮಿ ಎಚ್‌, ಲಕ್ಷ್ಮಿ ಕೆ. ಬಿ, ಸುರೇಶ್‌ ನೆಗಳಗುಳಿ ಮುಂತಾದವರು ಉಪಸ್ಥಿತರಿದ್ದರು.

                                                         - ವರದಿ : ವರುಣ್‌ರಾಜ್‌ ಜಿ.


 (ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...