ಶನಿವಾರ, ಫೆಬ್ರವರಿ 25, 2023

ಮಳೆಯ ಮಹತ್ವ (ಕೃತಿ ಪರಿಚಯ) - ವರುಣ್‌ರಾಜ್‌ ಜಿ.


ಮಳೆಯಿಂದ ಬರುವ ನೀರಿನ ಮೂಲಕ್ಕೆ ದೇವಮಾತೃಕ ಎನ್ನುವರು. ಮಳೆಯಿಂದಲೇ ನದಿ, ಕೆರೆ-ಕಟ್ಟೆಗಳಿಗೆ ನೀರು. ಅಂತರ್ಜಲಕ್ಕೂ ಮಳೆಯೇ ಮೂಲ. ಮಳೆ ಇಳೆಯ, ಇಳೆಯ ಜನರ ಬಾಳಿಗಾಧಾರ. ಮಳೆಯಿಂದಲೇ ಬೆಳೆ, ಬೆಳೆಯಿಂದಲೇ ಬದುಕು. ಜಲವೇ ನಮ್ಮ ಜೀವನ. ಆಹಾರವಿಲ್ಲದೆ ಮನುಷ್ಯ ಸ್ವಲ್ಪಕಾಲ ಜೀವಿಸಬಹುದಾದರೂ ನೀರಿಲ್ಲದೇ ಬದುಕಲಾರ. ಕೇವಲ ಮನುಷ್ಯನಿಗಷ್ಟೇ ಅಲ್ಲ, ಲೋಕದ ಸಕಲ ಜೀವ ಜಂತುಗಳಿಗೂ, ಗಿಡ ಮರಗಳಿಗೂ ನೀರು ಬೇಕೇ ಬೇಕು. ಮಳೆ ಹೆಚ್ಚಾದರೂ, ಕಡಿಮೆಯಾದರೂ ಜನರಿಗೆ ಸಂಕಷ್ಟ ತಪ್ಪಿದಲ್ಲ.

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರು ನೀರನ್ನು ಕೃತಕವಾಗಿ ತಯಾರಿಸಲಾಗುವುದಿಲ್ಲ. ಆದರೆ, ಮಳೆಯ ಮಹತ್ವವನ್ನು ಅರಿತು ಪರಿಸರ ಸಂರಕ್ಷಣೆ ಮಾಡುತ್ತಾ, ವೈಜ್ಞಾನಿಕ ವಿಧಾನಗಳ ಮೂಲಕ ಮಳೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದು. ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು, ಆಹಾರಗಳನ್ನು ಉಳಿಸಿ ಹೋಗುವುದು ನಮ್ಮ ಮೇಲಿರುವ ಜವಾಬ್ದಾರಿ. ಈ ನಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವೊ ಎಂಬಂತೆ ಮಾನ್ಯ ಡಾ. ಜಿ. ಶರಶ್ಚಂದ್ರ ರಾನಡೆ ಯವರು ಮಳೆಯ ಮಹತ್ವ ಎಂಬ ಕೃತಿ ಮೂಡಿ ಬಂದಿದೆ.

ಮಳೆಯ ಮಹತ್ವವನ್ನು ಮತ್ತು ಸಂರಕ್ಷಣಾ ಕ್ರಮಗಳನ್ನು ವಿವರವಾಗಿ ತಿಳಿಸುವ ಒಟ್ಟು ೧೭ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಒಳಗೊಂಡಿರುವ ಈ ಕೃತಿ, ತೀವ್ರವಾದ ಆಸಕ್ತಿ ಮತ್ತು ಆಳವಾದ ಅಧ್ಯಾಯನದಿಂದ ಮೂಡಿಬಂದದ್ದು. ನಾವು ಈ ಲೇಖನಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಒಂದು, ರೈತರ ಅಥವಾ ಜನಸಾಮಾನ್ಯರ ದೃಷ್ಠಿಯಲ್ಲಿ ಮಳೆಯನ್ನು ನೋಡುವ ವಿಧಾನ. ಇಲ್ಲಿ, ಮಳೆಯ ಕುರಿತಾದ ಜನಪದರ ನಂಬಿಕೆಗಳು, ಆಚರಣೆಗಳು, ಸರ್ವಜ್ಞ, ತಿರುವಳ್ಳುವರ್‌ ಮುಂತಾದವರ ಬರಹಗಳಲ್ಲಿ ಮಳೆ ವ್ಯಕ್ತಗೊಂಡಿರುವ ಬಗೆ, ಮಳೆ ನಕ್ಷತ್ರಗಳು, ಮಳೆಯ ಕುರಿತಾದ ಗಾದೆಗಳು, ಮಳೆಯ ಕುರಿತಾದ ಪೌರಾಣಿಕ ಮತ್ತು ಸಾಂಸ್ಕೃತಿಕ ಐತಿಹ್ಯಗಳನ್ನು ಆಸಕ್ತಿಕರವಾಗಿ ವಿಶ್ಲೇಷಿಸಲಾಗಿದೆ.

ಇನ್ನು ಎರಡನೇ ಭಾಗವು ಸಂಪೂರ್ಣ ಮಳೆಯ ವೈಜ್ಞಾನಿಕ ವಿಶ್ಲೇಷಣೆಗೆ ಸಂಬಂಧಿಸಿದ್ದು. ಚಂಡಮಾರುತಗಳ ವಿವರ, ಮಾನ್ಸೂನ್‌ ಮಳೆಯ ವಿವರಗಳು, ಹನಿ ನೀರಾವರಿ, ಇಂಗುತ್ತಿರುವ ಅಂತರ್ಜಲ ಮತ್ತು ಅದಕ್ಕೆ ಪರಿಹಾರಗಳು, ಜಲಾನಯನ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ಮಹತ್ವ, ಜಲಭಾಗ್ಯ ಮತ್ತು ಕೃಷಿ ಸಂಚಾಯಿ ಯೋಜನೆಗಳ ವಿವರ, ಜಲ ಮಾಲಿನ್ಯ ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ಇಲ್ಲಿ ವಿವರಿವಾಗಿ ಚರ್ಚಿಸಲಾಗಿದೆ.

ಮೊದಲ ಭಾಗದಲ್ಲಿ ಜನ ಮಳೆಯೊಂದಿಗೆ ಇಟ್ಟುಕೊಂಡಿದ್ದ ಸಾಂಸ್ಕೃತಿಕ ಸಂಬಂಧಗಳನ್ನು ವಿವರಿಸುತ್ತಾ, ಈ ಸಂಬಂಧಗಳು ಇತ್ತೀಚೆಗೆ ತಪ್ಪಿಹೋಗುತ್ತಿರುವುದನ್ನು ಮತ್ತು ಅದರಿಂದಾಗುವ ಅಪಾಯಗಳನ್ನು ಮನಗಾಣಿಸಲು ಪ್ರಯತ್ನಿಸಲಾಗಿದ್ದು, ಎರಡನೇ ಭಾಗದಲ್ಲಿ ಅಂಕಿಅಂಶಗಳ ಸಹಿತವಾಗಿ ಮಳೆಯನ್ನು ವೈಜ್ಞಾನಿಕ ದೃಷ್ಠಿಕೋನಗಳಿಂದ ವಿವರಿಸುತ್ತಾ, ಮಳೆಯ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆಯ ಕ್ರಮಗಳನ್ನು ಸವಿಸ್ತಾರವಾಗಿ ಚರ್ಚಿಸಲಾಗಿದೆ.

ಕೃತಿಕಾರರು ಜಲ ಸಂರಕ್ಷಣೆಯ ಕುರಿತು ಮಾತನಾಡುತ್ತಾ, ಹೇಳುವ “ಈ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗೋಸ್ಕರ ಎಂಬ ಅನುಮಾನವಿಲ್ಲ. ಆ ಅನುಮಾನ ನಿಜವಾಗುವ ಆತಂಕ ಈಗೀಗ ಸ್ಪಷ್ಟವಾಗತೊಡಗಿದೆ. ನೀರಿನ ಬಳಕೆಯಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಒಂದು ಶಿಸ್ತು ಬರದಿದ್ದರೆ ಹನಿ ನೀರಿಗೂ ಕಷ್ಟಪಡಬೇಕಾದ ಸ್ಥಿತಿ ತಲುಪಲು ಹೆಚ್ಚು ಕಾಲ ಉಳಿದಿಲ್ಲ” ಎಂಬ ಮಾತನ್ನು ನಾವೆಲ್ಲರೂ ಬಹಳ ಗಂಬೀರವಾಗಿ ಪರಿಗಣಿಸಬೇಕಿದೆ. ಇಂತಹ ಹಲವು ಎಚ್ಚರಿಕೆಗಳನ್ನು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನೂ ಒಳಗೊಂಡ ಈ ಕೃತಿಯನ್ನು ನಾವೆಲ್ಲರೂ ಓದಿ- ಓದಿಸಿ, ಅದನ್ನು ಅನುಸರಿಸಬೇಕು.

ಜಲ ಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ನಮ್ಮ ಮೇಲಿರುವ ಜವಾಬ್ದಾರಿಯಷ್ಟೇ ಅಲ್ಲ, ಇದು ನಮ್ಮ ಮುಂದಿನ ಪೀಳಿಗೆಯ ಅಳಿವು ಉಳಿವಿನ ಪ್ರಶ್ನೆಯೂ ಹೌದು. ಇಂದು ಜಲಮಾಲಿನ್ಯದ ಕಾರಣದಿಂದಾಗಿ ಮಾನವ ಹಲವು ರೀತಿಯ ರೋಗ - ರುಜಿನಗಳಿಗೆ ತುತ್ತಾಗುತ್ತಿರುವುದು ನಮ್ಮಗೆಲ್ಲ ತಿಳಿದ ವಿಚಾರವೇ. ಇಷ್ಟಾದರೂ ನಾವಿನ್ನೂ ಎಚ್ಚೆತ್ತುಕೊಳ್ಳದೇ ಇರುವುದು ದುರಂತ. ಜಲ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ಆವಿಷ್ಕಾರಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ಆದರೆ, ಇವುಗಳನ್ನು ಅನುಸರಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಈ ಸಂಬಂಧ ಸರ್ಕಾರವು ಹಲವು ಯೋಜನೆಗಳನ್ನು ತಂದಿದ್ದರೂ ಅವು ಜನರಿಗೆ ತಲುಪದೇ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿಯುವಂತಾಗಿದೆ. ಅನೇಕ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಲೇ ಇವೆ. ಇನ್ನಾದರೂ ನಾವು ಪರಿಸ್ಥಿತಿಯ ತೀವ್ರತೆಯನ್ನು ಅರಿಯಬೇಕಾಗಿದೆ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಈ ಅರಿವನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಾನ್ಯ ಶರಶ್ಚಂದ್ರರದ್ದು ಒಂದು ಸಾರ್ಥಕ ಪ್ರಯತ್ನ ಎನ್ನಬಹುದು.

ಮಳೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದಲೇ ರಚನೆಯಾಗಿರುವ ಈ ಮಹತ್ವದ ಕೃತಿಯ ಕುರಿತು ಒಂದೆರಡು ಅನಿಸಿಕೆಗಳನಷ್ಟೇ ಇಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕೃತಿಯನ್ನು ಓದುವುದು - ಅನುಸರಿಸುವುದು ಈ ಕ್ಷಣದ ಅನಿವಾರ್ಯವಾಗಿದ್ದು, ಓದುಗರು ಪುಸ್ತಕವನ್ನು ಕೊಂಡು ಓದಿ ಮತ್ತಷ್ಟು ಮಾಹಿತಿ ಹಾಗೂ ಜ್ಞಾನವನ್ನು ಪಡೆದು ವಿಸ್ತರಿಸಿಕೊಳ್ಳಬಹುದು. ಪುಸ್ತಕಕ್ಕಾಗಿ ಸಂಪರ್ಕಿಸಿ: ಡಾ. ಜಿ. ಶರಶ್ಚಂದ್ರ ರಾನಡೆ #೯೦೦೮೨೩೧೬೮೬.

-    ವರುಣ್‌ರಾಜ್‌ ಜಿ.

ಅಧ್ಯಕ್ಷರು, ವಿಚಾರ ಮಂಟಪ ಬಳಗ.

#೯೪೪೮೨೪೧೪೫೦


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...