ಶುಕ್ರವಾರ, ಏಪ್ರಿಲ್ 21, 2023

ಭಾರತೀಯರಾಗಿ, ನಮ್ಮ ಕರ್ತವ್ಯ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ನಾವೀಗ 21ನೇ ಶತಮಾನದಲ್ಲಿ ಇದ್ದೇವೆ. ಪ್ರಪಂಚ ತುಂಬಾ ಮುಂದುವರೆದಿದೆ. ಅಂದುಕೊಂಡದ್ದನ್ನೆಲ್ಲ ಸಾಧಿಸುವ ಕಲೆಯಲ್ಲಿ ಮನುಷ್ಯ ನಿಪುಣನಾಗಿದ್ದಾನೆ. ಅದೇ ರೀತಿ ಪ್ರಪಂಚದ ಭೂಪಟದಲ್ಲಿ ಏಷ್ಯಾ ಖಂಡದಲ್ಲಿ ಬರುವ ನಮ್ಮ ಭಾರತ ದೇಶವು ಮುಂದುವರಿಯುತ್ತಿರುವ ರಾಷ್ಟ್ರಗಳ  ದೇಶಗಳ ಸಾಲಿನಲ್ಲಿದೆ. ಪುರಾತನ ಕಾಲದಿಂದಲೂ ಹಲವು ಧರ್ಮಗಳ ನೆಲೆಯಾಗಿರುವ ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಚೌಕಟ್ಟುಗಳಿವೆ. ಅದೇ ರೀತಿ ಹಿಂದೂ ಧರ್ಮವೂ ಸಹ ಹಲವು ವೈವಿಧ್ಯತೆಗಳಿಂದ ಕೂಡಿದೆ. ವೇದಗಳ ತವರೂರಾದ ಭಾರತವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ನೆಲೆಗಟ್ಟಿನಲ್ಲಿಯೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಾಗೆಯೇ ವೈಜ್ಞಾನಿಕವಾಗಿಯೂ ಖಗೋಳ ಜ್ಞಾನದ ಪರಿಚಯ ಪುರಾತನ ಕಾಲದಿಂದಲೇ ನಮಗೆ ತಿಳಿಯುತ್ತಾ ಬಂದಿದೆ.
          ಆರ್ಯಭಟ, ಬ್ರಹ್ಮಗುಪ್ತ, ಸುಶ್ರುತ, ಇತ್ಯಾದಿಯಾಗಿ ಅನೇಕ ವೈಜ್ಞಾನಿಕ ಆವಿಷ್ಕಾರಗಳನ್ನು ನಮಗೆ ತಿಳಿಸಿದವರನ್ನು ಸ್ಮರಿಸುವುದು ಅಷ್ಟೇ ಸೂಕ್ತ. ಹಂತ ಹಂತವಾಗಿ ವಿಜ್ಞಾನ ಬೆಳೆದಂತೆಲ್ಲಾ ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಾಗಿ ಪ್ರತಿಯೊಂದು ಕೆಲಸವನ್ನು ನಾವೀಗ ಯಂತ್ರದ ಮೂಲಕವಾಗಿ ಮಾಡಿಕೊಳ್ಳುತ್ತಿದ್ದೇವೆ. ಮೊದಲಿದ್ದ ಯಾವುದೇ ಶ್ರಮದದಾಯಕ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಯಂತ್ರಗಳು ಪೂರ್ಣಗೊಳಿಸುತ್ತವೆ. ಆ ಒಂದು ಸಾಧನೆ ಸಾಧಿಸುವ ಮೊದಲು ಒಂದು ಕ್ಷಣ ಹಿಂದಿರುಗಿ ನೋಡಿದರೆ ಆ ಸಾಧನೆಯ ಹಾದಿಯಲ್ಲಿಯ ಕಲ್ಲು ಮುಳ್ಳುಗಳ ಹಾಸಿಗೆ ಮೇಲೆ ನಡೆದು ಸಾಧಿಸಿದ ಸಾಧಕರ ನೆನಪು ನಮ್ಮ ಕಣ್ಮುಂದೆ ಬಂದು ಹೋಗುತ್ತದೆಯಲ್ಲವೇ....? ಏಕೆಂದರೆ ಸಿಂಧೂ ನಾಗರಿಕತೆಯಿಂದ ಆರಂಭವಾದ ನಮ್ಮ ಭಾರತೀಯ ಇತಿಹಾಸವನ್ನು ಮಹಾನ್ ಸಾಧಕರ ಸಾಧನೆಗಳು ಕಣ್ತುಂಬಿಕೊಂಡು ಅವರನ್ನು ಈ 21 ನೇ ಶತಮಾನದಲ್ಲೂ ಕಾಣುತ್ತಿದ್ದೇವೆ. ಮೌರ್ಯ ಚಕ್ರವರ್ತಿ ಅಶೋಕ, ಗುಪ್ತರ ಸಮುದ್ರಗುಪ್ತ, ಗೌತಮಿಪುತ್ರ ಶಾತಕರ್ಣಿ, ಶ್ರೀ ಕೃಷ್ಣದೇವರಾಯ, ಮಯೂರವರ್ಮ, ರಾಜರಾಜ ಚೋಳ, ಅಕ್ಬರ್, ಶಹಜಾನ್ ಹೀಗೆ ಭಾರತದ ಇತಿಹಾಸದುದ್ದಕ್ಕೂ ರಾಜ ಮಹಾರಾಜರ ಆಳ್ವಿಕೆಯ ಗತವೈಭವದ ಸಾಧನೆಯನ್ನು ಮೆಲಕು ಹಾಕುತ್ತಿರುವುದು ಅವರು ಕೊಡುಗೆಯಾಗಿ ನೀಡಿದ ವಾಸ್ತುಶಿಲ್ಪಗಳು, ಶಾಸನಗಳು, ಭಿತ್ತಿಪತ್ರಗಳನ್ನು ಇಂದಿಗೂ ನಾವು ನೋಡುತ್ತಾ ಅವರೆಲ್ಲರೂ ಗತಿಸಿ ಶತಮಾನಗಳೇ ಕಳೆದಿದ್ದರೂ ಅವರ ಕೊಡುಗೆಗಳು ಅವರನ್ನು ಜೀವಂತವಾಗಿರಿಸಿವೆ.
        ಈ ರಾಜಮಹಾರಾಜರ ಆಳ್ವಿಕೆಯ ಮಧ್ಯದಲ್ಲಿ ಪಾಶ್ಚಿಮಾತ್ಯ  ಐರೋಪ್ಯರು ನಮ್ಮ ದೇಶಕ್ಕೆ ವ್ಯಾಪಾರಕ್ಕಾಗಿ ಆಗಮಿಸಿ, ಕಾಲಕ್ರಮೇಣ ರಾಜಕೀಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿ, ನಮ್ಮ ರಾಜರುಗಳನ್ನು ಪರಾಭವ ಗೊಳಿಸುತ್ತಾ ತಮ್ಮ ರಾಜಕೀಯ ಚದುರಂಗದಾಟದಲ್ಲಿ ನಮ್ಮ ರಾಜರುಗಳನ್ನು ದಾಳವಾಗಿ ಮಾಡಿಕೊಂಡು ಶತಶತಮಾನಗಳ ಕಾಲ ನಮ್ಮ ರಾಷ್ಟ್ರದ ಸಂಪತ್ತು ಲೂಟಿ ಮಾಡಿ ನಮ್ಮನ್ನೇ ದಾಸ್ಯದ ಕೂಪಕ್ಕೆ ತಳ್ಳಿ ಆಳ್ವಿಕೆ ನಡೆಸಿದರು. ನಮ್ಮ ರಾಷ್ಟ್ರಕ್ಕಾಗಿ, ನಮ್ಮ ನೆಲಕ್ಕಾಗಿ, ನಮ್ಮ ರಾಷ್ಟ್ರದ ಸಾವಿರಾರು ದೇಶಭಕ್ತರ ಪ್ರಾಣತ್ಯಾಗ, ಬಲಿದಾನ ಕೊಡುವಂತಹ ಸ್ಥಿತಿ ನಿರ್ಮಾಣವಾಯಿತು. ಈ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕ್ಷಣದ ಶ್ರಮದಾಯಕ ಜೀವನದಿಂದಾಗಿ ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿರುವುದು ಅಷ್ಟೇ ಸತ್ಯ.
      ಸ್ವಾತಂತ್ರ್ಯ ಹೋರಾಟಗಾರರ ಶ್ರಮದ ಫಲದಿಂದಾಗಿ ಭಾರತ ತನ್ನ ಪ್ರಜೆಗಳಿಗೆ ಪ್ರಜಾಪ್ರಭುತ್ವದಂತಹ *ನಮ್ಮನ್ನು ನಾವೇ ಆಳಿಕೊಳ್ಳುವಂತಹ ಸರ್ಕಾರದ* ಕೊಡುಗೆ ನೀಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರರು, ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುತ್ತ, ಪ್ರಜಾಪ್ರಭುತ್ವದ ಸವಿಯನ್ನ ಉಣ್ಣುತ್ತಿದ್ದೇವೆ. ರಾಷ್ಟ್ರದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರನ್ನು ಒಳಗೊಂಡು, ರಾಷ್ಟ್ರದ ಪ್ರಥಮ ಆಡಳಿತದ ಚುಕ್ಕಾಣಿ ಹಿಡಿದ ಪ್ರತಿಯೊಬ್ಬ ಪ್ರಧಾನಮಂತ್ರಿ ತನ್ನದೇ ಕೊಡುಗೆ ನೀಡುತ್ತಾ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುತ್ತಾ ಹಲವು ಸಾಧನೆಗಳಲ್ಲಿ ಜಗತ್ತಿನ ಭೂಪಟದಲ್ಲಿ ಭಾರತ ರಾರಾಜಿಸುವಂತೆ ಮಾಡಿದ್ದಾರೆ. ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಸಾಧನೆಯ ಹೆಜ್ಜೆ ಹಾಕುತ್ತಿರುವುದು ಹೆಮ್ಮೆಯ ವಿಷಯ.
         ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ಜೀವನ ಚಕ್ರದಲ್ಲಿ ಸ್ವಾರ್ಥಪರತೆ ತುಂಬಿ, ಜಾತಿಯತೆಯ ನೆಲೆಗಟ್ಟಿನಲ್ಲಿ ಹಲವಾರು ಅಹಿತಕರ ಘಟನೆಗಳು ಸಂಭವಿಸುತ್ತಾ ಕೋಮುಗಲಭೆಗಳು, ಭಯೋತ್ಪಾದನೆ, ದೇಶಾದ್ಯಂತ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ. ವೈಜ್ಞಾನಿಕ ಆವಿಷ್ಕಾರಗಳಿಂದ ಬಹುದೂರದ ಸ್ಥಳವನ್ನು ತಲುಪಲು ಸಹಾಯಕವಾಗುವಂತೆ ವೈವಿಧ್ಯಮಯವಾದ ಸಾರಿಗೆ ಸೌಲಭ್ಯಗಳು ಅನುಕೂಲ ಕಲ್ಪಿಸಿವೆ. ಅದರಲ್ಲೂ ವಾಯು ಸಾರಿಗೆಯಿಂದ ದೇಶವಿದೇಶಗಳ ಸಂಚಾರ ಅತಿ ಸುಲಭ ಮಾರ್ಗವಾಗಿದೆ. ಇದರಿಂದಾಗಿ ಪ್ರಪಂಚದ ವಿವಿಧ ಸಂಗತಿಗಳ ಪರಿಚಯಕ್ಕೆ ಅನುಕೂಲವಾಗಿದೆ. ಸಂಪರ್ಕ ಮಾಧ್ಯಮದ ಅತ್ಯಮೂಲ್ಯವಾದ ಸೌಕರ್ಯ ದೊರೆತಿದ್ದು ನಮಗೆ ವರವೂ ಹೌದು. ಪತ್ರಿಕೆಗಳು, ದೂರವಾಣಿ, ಅಂತರ್ಜಾಲದ ಸೌಲಭ್ಯದಿಂದಾಗಿ ಕುಳಿತಲ್ಲಿಯೇ ಪ್ರಪಂಚದ ಯಾವುದೇ ದೇಶದಲ್ಲಿ ನಡೆದ ಘಟನೆಗಳನ್ನು ನೋಡುವ ಅವಕಾಶ ವೈಜ್ಞಾನಿಕ ಆವಿಷ್ಕಾರಗಳಿಂದ ನಮಗೆ ದೊರೆತಿದೆ. ವೇದಕಾಲ ನಾಗರಿಕತೆಯ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಖಜೀವನ ನಡೆಸುತ್ತಾ ಬಂದಿರುವ ಅದ್ಬುತ ಅನ್ಯೂನ್ಯ ಸಂಬಂಧಗಳ ರಾಷ್ಟ್ರ ನಮ್ಮ ಭಾರತ. ಕಾಲಚಕ್ರದಲ್ಲಿ ಪಾಶ್ಚಿಮಾತ್ಯರ ಆಗಮನದಿಂದಾಗಿ ವಿವಿಧ ಧರ್ಮಗಳನ್ನು ಸ್ವೀಕರಿಸುವ  ಔದಾರ್ಯತೆ ಭಾರತೀಯರಲ್ಲಿ ಅನಿವಾರ್ಯವಾಗಿ ಬೆಳೆಯಿತು. ಜೈನ ಧರ್ಮ, ಬೌದ್ಧ ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಹೀಗೆ ಹಲವು ಧರ್ಮಗಳ ಧಾರ್ಮಿಕ ಮನೋಭಾವನೆಗಳೊಂದಿಗೆ ಬೆರೆತ ಎಲ್ಲಾ ಭಾರತೀಯರು ಏಕತೆಯಿಂದ ರಾಷ್ಟ್ರೀಯ ಭಾವೈಕ್ಯತೆಗೆ ಮುನ್ನುಡಿಯಾಗುವಂತೆ ನಮ್ಮ ರಾಷ್ಟ್ರದ ಸಂವಿಧಾನದಲ್ಲಿ *ಜಾತ್ಯಾತೀತ ಮತ್ತು ಸಮಾಜವಾದಿ*) ಎಂಬ ಅಂಶಗಳನ್ನು ಸೇರ್ಪಡೆಗೊಳಿಸಿ *ಸರ್ವರೂ ಸಮಾನರು* ಎಂಬ ಭಾವನೆ ಬೆಳೆಸಿದೆ. ಸರ್ವಧರ್ಮೀಯರು ನೆಲೆಸಿರುವ ಈ ಭಾರತ ಎಣಿಕೆ ಇಲ್ಲದಷ್ಟು ಅಗಾಧವಾದ ಕೊಡುಗೆಯನ್ನು ನಮಗೆಲ್ಲ ಕೊಟ್ಟಿದೆ ಹಾಗಾದರೆ.......... ನಮ್ಮ ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ? ಎಂದು ಒಂದು ಕ್ಷಣ ಎಲ್ಲರೂ ವಿಚಾರ ಮಾಡಬೇಕಾದ ಸಂಗತಿ. ಏಕೆಂದರೆ ಮೊದಲಿನಂತೆ ಮೌಲ್ಯದ ಜೀವನ ನಶಿಸಿ ಎಲ್ಲಿ ನೋಡಿದರಲ್ಲಿ ಕೊಲೆ, ದರೋಡೆ, ಅಂಹಿಂಸಾತ್ಮಕ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಅವುಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗಬೇಕು. ಕೋಮುಗಲಭೆಯಿಂದಾಗಿ ಜಾತಿ ಜಾತಿಗಳ ನಡುವೆ ತಾರತಮ್ಯ ಹೆಚ್ಚಾಗಿ ಅಖಂಡ ದೇಶದ ವಿಘಟನೆಗೆ ಕಾರಣವಾಗುವಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಇದು ನಿಲ್ಲಬೇಕಾದರೆ ವೈಯಕ್ತಿಕ ಸುಖಕ್ಕಿಂತ ದೇಶದ ಹಿತರಕ್ಷಣೆ ದೊಡ್ಡದು ಎಂಬ ಅರಿವು ಮೂಡಿಸುವ ಪ್ರಯತ್ನದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬ ವಾಸ್ತವಿಕ ಸತ್ಯವನ್ನು ಮನದಟ್ಟು ಮಾಡಿಕೊಂಡು ಎಲ್ಲಾ ಧರ್ಮೀಯರು ಅನ್ಯೂನ್ಯತೆಯಿಂದ ಇದ್ದಾಗ ಮಾತ್ರ ರಾಷ್ಟ್ರದ ರಕ್ಷಣೆ ಸಾಧ್ಯ. ಇದಕ್ಕೆ ಸಹಕರಿಸುವುದೇ ಭಾರತದ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸಲ್ಲಿಸುವ ಕೊಡುಗೆ. ಪ್ರಾದೇಶಿಕತೆ, ಭಾಷಾಭಿಮಾನ ಇರಬೇಕು ಅದರ ಜೊತೆಗೆ ಉಳಿದ ರಾಜ್ಯ, ರಾಷ್ಟ್ರ, ಭಾಷೆಗಳನ್ನು ಗೌರವಿಸುವುದರಿಂದ ನಮ್ಮ ರಾಷ್ಟ್ರದ ಸುರಕ್ಷತೆ ಸಾಧ್ಯ. ಸಂಪರ್ಕ ಮಾಧ್ಯಮಗಳನ್ನು ನಮ್ಮ ಉಪಯುಕ್ತತೆಗೆ ಅನುಗುಣವಾಗಿ ಧನಾತ್ಮಕ ಚಿಂತನೆಗೆ ತಕ್ಕಂತೆ ಬಳಸಿಕೊಂಡರೆ ನಮಗೆ ವರವಾಗಿ ಪರಿಣಮಿಸುತ್ತದೆ. ದುರುಪಯೋಗ ಮಾಡಿಕೊಂಡರೆ ಅವುಗಳೇ ನಮಗೆ ಶಾಪವಾಗಿ ಕಾಡುತ್ತವೆ. ಆದ್ದರಿಂದ ಉತ್ತಮ ನಾಗರಿಕರಾದ ನಾವು ಸಂಪರ್ಕ ಮಾಧ್ಯಮಗಳ ದುರ್ಬಳಕೆಯಾಗದಂತೆ ಜಾಗೃತಿ ವಹಿಸಿ ಮಕ್ಕಳು ಆ ಮಾಧ್ಯಮಗಳಿಂದ ಹಾಳಾಗದಂತೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು.
         ಪುರಾತನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಲಘು ಶಿಕ್ಷೆಯ ಮೂಲಕ ಶಿಲೆಯಂತಿದ್ದ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಮೂರ್ತಿಯಾಗಿ ಮಾಡುವಲ್ಲಿ ಅನವರತ ಶ್ರಮಿಸುತ್ತಿದ್ದ *ಗುರು* ಅತ್ಯುತ್ತಮ ಗುಣಗಳಿಂದ ವೃತ್ತಿ ಶಿಕ್ಷಣದ ತರಬೇತಿಯ ಜೊತೆಗೆ ಸಮಾಜದಲ್ಲಿ ಆ ಮಗು ಪ್ರವೇಶ ಪಡೆಯುವಂತಹ ವ್ಯವಸ್ಥೆ ಇತ್ತು. ಆದರೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಾದ ಅನೇಕ ಬದಲಾವಣೆಗಳಿಂದಾಗಿ ಮಕ್ಕಳ ತಪ್ಪಿಗೆ ಶಿಕ್ಷೆಯೇ ಇಲ್ಲದಂತಾಗಿದೆ. ಗುರುಗಳೇ ಶಿಷ್ಯನೆದರೂ ತಲೆತಗ್ಗಿಸುವಂತಹ ಹೀನ ಮಟ್ಟಕ್ಕೆ ವಿದ್ಯಾರ್ಥಿಗಳು ತೊಡಗುತ್ತಿರುವುದು ಸಮಾಜದ ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು. ಇದರ ಬಗ್ಗೆ ಪ್ರತಿಯೊಬ್ಬ ಪಾಲಕರು ಒಂದು ಕ್ಷಣ ವಿಚಾರ ಮಾಡಿದರೆ ಒಳಿತು ಎನಿಸುತ್ತದೆ. ಏಕೆಂದರೆ ಒಂದು ಮಗು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂಬ ಕನಸಿದ್ದರೆ ಸಾಲದು ಆ ಕನಸು ನನಸು ಮಾಡಲು ಆ ಮಗುವಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಮಾರ್ಗದರ್ಶಕರಾದ ಗುರುಗಳ ಬಗ್ಗೆ ಧನಾತ್ಮಕ ಭಾವನೆ ಇರಬೇಕು. ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ನೀಡುವ ಅಧಿಕಾರ ತಂದೆ ತಾಯಿಯವರಿಗೆ ಬಿಟ್ಟರೆ ಗುರುಗಳಿಗೆ. ಆ ರೀತಿಯ ಧನಾತ್ಮಕ ಆಲೋಚನೆಯೊಂದಿಗೆ ಪಾಲಕರು ಶಿಕ್ಷಕ ವೃಂದದ ಜೊತೆಗೆ ಸಹಕರಿಸಿದರೆ ತಪ್ಪು ಹೆಜ್ಜೆ ಇಡುತ್ತಿರುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಸಹಾಯಕವಾಗಬಹುದು.
        ಸ್ವಚ್ಛತೆಯ ಕೊರತೆಯಿಂದಾಗಿ ಹಲವು ರೋಗಗಳು ಸೃಷ್ಟಿಯಾಗಲು ಅವಕಾಶ ನೀಡದೆ ಸ್ವಚ್ಛತೆಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿ, *ಮನೆಗೆದ್ದು ಮಾರುಗೆಲ್ಲು* ಎನ್ನುವಂತೆ ಮೊದಲು ನಾವು ನಮ್ಮ ಊರಿನ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರು ಗಮನಹರಿಸಿದರೆ ಊರಿಂದ ನಾಡು, ನಾಡಿನಿಂದ ದೇಶ, ತನ್ನಿಂದ ತಾನೇ ಸ್ವಚ್ಛತೆಯ ಹಾದಿಯಲ್ಲಿ ಸಾಗಿ ಸ್ವಚ್ಛ ಭಾರತದ ಅಭಿಯಾನಕ್ಕೆ ಪಣತೊಟ್ಟಿರುವ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರ ಆಶಯದಂತೆ ಉತ್ತಮ ಪರಿಸರದಿಂದ ಕೂಡಿದ ಸ್ವಚ್ಛ ಭಾರತ ಎಂಬ ಹೆಗ್ಗಳಿಕೆಗೆ ಎಲ್ಲರೂ ಕೈಜೋಡಿಸಬೇಕು. ಪ್ರಜಾಪ್ರಭುತ್ವದ ಕನಸನ್ನು ಸಾಕಾರಗೊಳಿಸಲು ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು, ರಾಜನೀತಿ ನಿರ್ದೇಶಕ ತತ್ವಗಳನ್ನು ನೀಡಿದೆ. ಮೂಲಭೂತ ಹಕ್ಕುಗಳ ರಕ್ಷಣೆಗೆ ರಕ್ಷಣಾ ಕವಚದಂತೆ ಸಂವಿಧಾನಬದ್ಧ ಪರಿಹಾರದ ಹಕ್ಕಿದೆ. ಅದೇ ರೀತಿ ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಕರ್ತವ್ಯಗಳ ಜವಾಬ್ದಾರಿಯು ನಮ್ಮ ಮೇಲಿದೆ. ಆ ಕರ್ತವ್ಯಗಳನ್ನು ಪಾಲಿಸುವ ನಿಷ್ಠೆಗೆ ಸರ್ವರೂ ಬದ್ಧರಾಗೋಣ.
       ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಅವಿಭಕ್ತ ಕುಟುಂಬದಂತೆ ನಮ್ಮ ಭಾರತವಿದೆ. ಈ ಅವಿಭಕ್ತ ಕುಟುಂಬದಂತಿರುವ ರಾಷ್ಟ್ರ ಎಂದು ವಿಘಟನೆಯಾಗದಂತೆ ನೋಡಿಕೊಳ್ಳುವುದು ಆಡಳಿತದ ಚುಕ್ಕಾಣಿ ಹಿಡಿದ ಕುಟುಂಬದ ಯಜಮಾನನ ಕೆಲಸ. ಕುಟುಂಬದ ಮುಖ್ಯಸ್ಥ ಕುಟುಂಬದ ಎಲ್ಲಾ ಸದಸ್ಯರಿಗೆ ಬೆಲೆ ಕೊಡುವಂತೆ ರಾಷ್ಟ್ರದ ಆಡಳಿತಗಾರ ಎಲ್ಲಾ ರಾಜ್ಯಗಳಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ಆಡಳಿತ ನಡೆದಾಗ ಆ ರಾಷ್ಟ್ರ ಎಂದು ವಿಘಟನೆ ಯಾಗದೆ ಕುಟುಂಬದ ಸರ್ವ ಸದಸ್ಯರು ಗೌರವ ಸಲ್ಲಿಸುತ್ತಾ ಯಜಮಾನನ ಮಾರ್ಗದರ್ಶನದಲ್ಲಿ ನಡೆಯುತ್ತಾರೆ. ಅಂತಹ ಸಮರ್ಥ ಯಜಮಾನನನ್ನು ಗುರುತಿಸುವುದು, ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.ಆ ಯಜಮಾನ ಯಾವುದೇ ರಾಜ್ಯ, ಜಾತಿ, ಪಕ್ಷದವನಾಗಿರಲಿ ಅದಕ್ಕೆ ಬೆಲೆ ನೀಡದೆ ನಮ್ಮ ರಾಷ್ಟ್ರವನ್ನು ಪ್ರಗತಿಯತ್ತ ಕೊಂಡಯುವ ಸಮರ್ಥ ನಾಯಕತ್ವ ಯಾರಲ್ಲಿದೆ ಎಂಬುದನ್ನು ನಾವು ಮನಗಂಡಾಗ ಅವರನ್ನೇ ರಾಷ್ಟ್ರದ ಆಡಳಿತಕ್ಕೆ ಸೂಕ್ತ ವ್ಯಕ್ತಿಯಾಗಿ ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವದ ಕನಸು ನನಸಾಗುವುದು. ಇಲ್ಲಿ ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಅನುಭವವುಳ್ಳ ವ್ಯಕ್ತಿಯ ಸಾಮರ್ಥ್ಯ ಮುಖ್ಯವೆ ವಿನಹ ಪಕ್ಷವಲ್ಲ. ಆದ್ದರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರದೊಂದಿಗೆ ಉತ್ತಮ ನಾಯಕರ ಆಯ್ಕೆ ನಮ್ಮದಾಗಿರಲಿ.
          ಅದೇ ರೀತಿ ನಮ್ಮತನ ನಮಗೆ ಚೆಂದ. ನಮ್ಮ ಸಂಸ್ಕೃತಿ ನಮಗೆ ಅಂದ. ಪಾಶ್ಚಿಮಾತ್ಯರ ಉಡುಗೆ ತೊಡುಗೆಗೆ ಆಕರ್ಷಿತರಾಗಿ ದೇಶಿಯ ಸೊಗಡನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಜರ ಆಚಾರ ವಿಚಾರಗಳೆಲ್ಲವೂ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ನಿಂತಿವೆ. ಪಾಶ್ಚ್ಯಾತೀಕರಣದಿಂದಾಗಿ ಅವುಗಳಿಗೆ ಬೆಲೆ ನೀಡದೆ ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಅಷ್ಟೇ ಸತ್ಯ. ಯಾವುದೇ ಪಾಶ್ಚಿಮಾತ್ಯ ಅನುಕರಣೆಯ ಸಂಸ್ಕೃತಿ ನಮ್ಮ ಊಟದಲ್ಲಿ ಉಪ್ಪಿನಕಾಯಿಯ ಆಗಬೇಕೆ ವಿನಹ ಅದುವೇ ಊಟವಾಗಬಾರದು. ಆದ್ದರಿಂದ ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ದೇಶಕ್ಕೆ ನಾವು ಕೊಡುವ ಕೊಡುಗೆಯಾಗಿದೆ.
         ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದಲ್ಲಿದ್ದ ಗುಡಿ ಕೈಗಾರಿಕೆಗಳಲ್ಲ ನಶಿಸಿ ಹೋಗುತ್ತಿವೆ. ಅನ್ನದಾತರೆನಿಸಿಕೊಂಡ ರೈತರು ಕೃಷಿಯಿಂದ ವಿಮುಖರಾಗಿ ನಗರ ಜೀವನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಹಲವಾರು ನದಿಗಳ ತಾಣವಾಗಿರುವ ಭಾರತ ಫಲವತ್ತಾದ ಮಣ್ಣಿನಿಂದ ಕೂಡಿದ್ದು, ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವ ಶಕ್ತಿಯನ್ನು ನಮ್ಮ ಯುವ ಪೀಳಿಗೆ ಬೆಳೆಸುವಂತಹ ಮಾರ್ಗದರ್ಶನ ಅವರಿಗೆ ನೀಡಿ ಪುನಹ ಕೃಷಿಯತ್ತ ಅನ್ನದಾತ ಮರಳಿ ಬರುವಂತಹ ಬದಲಾವಣೆ ಮಾಡುವುದು ನಮ್ಮ ಕರ್ತವ್ಯ. ಸ್ತ್ರೀ- ಪುರುಷರು ಸಮಾನರು ಎನ್ನುವುದು ಎಷ್ಟು ಮುಖ್ಯವೋ.... ಸ್ತ್ರೀ- ಪುರುಷರ ನಡುವಿನ ಅಂತರದ ಬಗ್ಗೆ ಜಾಗೃತಿ ಮೂಡಿಸುವುದು ಅಷ್ಟೇ ಮುಖ್ಯ. ಏಕೆಂದರೆ ಸ್ವಾತಂತ್ರ್ಯ, ಸಮಾನತೆಯ ಗುಂಗಿನಲ್ಲಿ ಯುವಪೀಳಿಗೆ ತಪ್ಪು ಹೆಜ್ಜೆ ಹಾಕುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಕ್ಕ, ತಂಗಿ ,ಅಣ್ಣ, ತಮ್ಮ, ಅತ್ತಿಗೆ, ಸ್ನೇಹಿತ,ಇಂತಹ ಪವಿತ್ರ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುವ ಮನೋಭಾವನೆ ಯುವಪೀಳಿಗೆಯಲ್ಲಿ ಬೆಳೆಯುತ್ತಿರುವುದು ಆತಂಕಕರ ವಿಷಯ. *ವೈವಾಹಿಕ ಜೀವನವೆಂಬ* ಪವಿತ್ರ ಸಂಬಂಧದೊಂದಿಗೆ ತಮ್ಮ ಜೀವನ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ಸಮಾಜದಲ್ಲಿ ಸ್ವೇಚ್ಛಾಚಾರ ತಾಂಡವವಾಡುತ್ತದೆ. ಇದರಿಂದ ಅದೆಷ್ಟೋ ಮುಗ್ಧರು ಬಲಿಯಾಗಿ ಆತ್ಮಹತ್ಯೆಯಂತಹ ಅಸಹಾಯಕ ಸ್ಥಿತಿಗೆ ತಮ್ಮನ್ನು ತೊಡಗಿಸಿಕೊಳ್ಳಬಹುದು.ಇಂತಹ ಸ್ಥಿತಿ ನಿರ್ಮಾಣವಾಗದಂತೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ರಾಷ್ಟ್ರ ನಮಗೇನು ಕೊಟ್ಟಿದೆ....? ಎಂದು ವಿಚಾರ ಮಾಡದೆ ರಾಷ್ಟ್ರಕ್ಕೆ ನಾವೇನು ಕೊಟ್ಟಿದ್ದೇವೆ....? ಎಂದು ವಿಚಾರ ಮಾಡುತ್ತಾ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡೋಣ. ಇಂತಹ ಸರ್ವಧರ್ಮಗಳ ಸಮನ್ವಯದ ನಾಡನ್ನು ಪ್ರಪಂಚದ ಭೂಪಟದಲ್ಲಿ ಉನ್ನತ ಸ್ಥಾನಕ್ಕೇರಿಸೋಣ ಎಂದು ಆಶಿಸುತ್ತಾ..

- ಶ್ರೀಮತಿ  ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...