ಆಗಲೇ ವಯಸ್ಸು 90ರ ಆಸು ಪಾಸು. ಸುಕ್ಕುಗಟ್ಟಿದ್ದ, ಚರ್ಮ ಮಂಜುಮಂಜಾಗಿದ್ದ ಕಣ್ಣುಗಳು, ತಲೆಯ ತುಂಬಾ ಬಿಳಿ ಕೂದಲು, ಥೇಟ್ ! ಬೆಳ್ಳಿ ಕೂದಲ ಚೆಲುವೆಯಂತಿದ್ದ ಅವಳ ದೇಹಕ್ಕೆ ಊರುಗೋಲೊಂದೆ ಆಸರೆ. ಬಾಯಲ್ಲಿ ಅಡಿಕೆ ಎಲೆ ಜಗಿಯುತ್ತ ಉಗಿಯುತ್ತ ತಲೆಯ ತುಂಬಾ ಸೆರಗು ಹೊದ್ದುಕೊಂಡು ಬಾಗಿದ ಬೆನ್ನಿನ ನಡಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಳು. ಆಗಲೇ ಗಡಿಯಾರದ ಮುಳ್ಳು ಐದರ ಆಸುಪಾಸಿನ ನಡುವೆ ತಿರುಗುತ್ತಿತ್ತು.
ಸುಡುತ್ತಿದ್ದ ಮೈ ಪದೇ ಪದೇ ಬಾಯಾರುತ್ತಿದ್ದ ಬಾಯಿಗೆ ಆಗಾಗ ತಾನು ತಂದಿದ್ದ ಹಳೆ ಪ್ಲಾಸ್ಟಿಕ್ ಬಾಟಲಿಯಿಂದ ಗುಟುರು ನೀರು ಬಿಟ್ಟುಕೊಂಡು ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಕಣ್ಣು ಹಾಯಿಸಿದಳು. ಹಾಳಾದ ಕಾಣದ ಕಣ್ಣುಗಳು ಯಾಕಾದರೂ ಇದಾವೋ.? ಈ ಜೀವನಾದ್ರೂ ದೇವರು ಯಾಕೆ ಇಟ್ಟಿದ್ದಾನೋ.? ಈ ಮುದಿ ದೇಹದಲ್ಲಿ ಎಂದು ಶಪಿಸುತ್ತಿದ್ದಳು. ಸಂಜೆಯಾಗಿದ್ದರಿಂದ ಆಸ್ಪತ್ರೆಯ ಆವರಣವೆಲ್ಲಾ ಅಜ್ಞಾತವಾಗಿತ್ತು. ಸಿಮೆಂಟ್ ಕಾಡಿನಂತೆ ಭಾಸವಾಗುತ್ತಿದ್ದ ಆ ಕಟ್ಟಡದಲ್ಲಿ ಡಾಕ್ಟ್ರು ಎಲ್ಲಿರುತ್ತಾರೆ ಏನು.? ಎಂದು ಬಳಲಿಕೆಯ ಮಂಪರಿನಲ್ಲಿ ಸುಮ್ಮನೆ ಕೂತಳು ಮುದುಕಿ.
ಆ ಕಡೆಯಿಂದ ಬಿಳಿ ಶರ್ಟ್ ಕಪ್ಪು ಪ್ಯಾಂಟ್ ಧರಿಸಿ ಕೊರಳೊಳಗೆ ಸ್ಟೇತಸ್ ಸ್ಕೋಪ್ ಹಾಕೊಂಡು ಥೇಟ್ ಸಾಯಿಬಾಬನ ರೀತಿ ಗುಂಗುರ ಕೂದಲಿನ ಆರು ಅಡಿ ಎತ್ತರವಾಗಿದ್ದ ಅತಿ ಸುಂದರ ಸ್ಫುರದ್ರೂಪಿಯಾಗಿದ್ದವನೊಬ್ಬ ಬಂದ.
ತಾರುಗೋಲು ಹಿಡಿದು ಮುದುಕಿ ರಪ್ ಅಂತ ಎದ್ದು ಬಿದ್ದು ಸಾಹೇಬ್ರ ಸಾಹೇಬ್ರ ಮೈಯಾಗ ಹುಷಾರ್ ಇಲ್ರಿ ಎಂದಳು ದಿನಪೂರ್ತಿ ರೋಗಿಗಳ ನೋಡಿ ನೋಡಿ ಹೈರಾಣಾಗಿದ್ದ ಆ ವೈದ್ಯ ಕೈಯಲ್ಲಿ ಸ್ಮಾರ್ಟ್ ಫೋನ್ ಪರದೆ ಗೀಚುತ್ತ ಅಜ್ಜಿ ಡಾಕ್ಟರ್ ಇಲ್ಲ ನಾಳೆ ಬಾ ಎಂದು ವ್ಯವಧಾನವೇ ಇಲ್ಲದ ಈ ಬದುಕಿನಲ್ಲಿ ದಿನ ಸಾಯುವವರಿಗೆ ಅಳುವವರು ಯಾರು.? ಎಂಬಂತೆ ಅವಳ ಮುಖವನ್ನೇ ನೋಡಲಿಲ್ಲ.
ಅಜ್ಜಿ: ಹೌದಾ .? ಯಪ್ಪಾ ಆಗಿದ್ರೆ ಈ ನಂಬರಿಗೆ ಫೋನ್ ಆದ್ರು ಮಾಡು ನನ್ನ ಮಗ ಬಂದು ಮನೆಗಾದರೂ ಕರ್ಕೊಂಡು ಹೋದಾನು. ಹಾಳಾದ ಈ ಮುಪ್ಪು ದೇಹನ ಇಟ್ಕೊಂಡು ದೂರದ ಹಳ್ಳಿಗೆ ವಾಪಸ್ ಹೋಗೋಕೆ ಬಸ್ ಇಲ್ಲ ಎಂದು ನಿಟ್ಟುಸಿರು ಬಿಡುತ್ತಾ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಸಣ್ಣ ಚೀಟಿ ತೆಗೆದುಕೊಟ್ಟಳು. ಆಗಲೇ ಜ್ವರದಿಂದ ಬಳಲುತ್ತಿದ್ದರಿಂದ ಬೆವರಿನ ಹನಿಗೆ ಚೀಟಿ ಒದ್ದೆಯಾಗಿತ್ತು.
ಆ ಫೋನ್ ನಂಬರ್ ನೋಡಿದ ವೈದ್ಯನಿಗೆ ಕಣ್ಣು ಅರಳಿತು, ಹೃದಯ ತೆರೆಯಿತು. ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿದ.! ತನ್ನ ಅಜಾಗೃತ ಮನಸ್ಥಿತಿಗೆ ಮರುಗಿದ ಕೊರಗಿದ ತನ್ನ ದಣಿವರಿಯದ ಬದುಕಿಗೆ ಅರ್ಥವಿಲ್ಲವೆಂದು ಬೇಸರಗೊಂಡ. ಅವನು ಮರುಗಿದ್ದು ಕೊರಗಿದ್ದು ಬೇರೆ ಯಾವ ಉದ್ದೇಶಕ್ಕೂ ಅಲ್ಲ ಆ ಅಜ್ಜಿ ಕೊಟ್ಟ ಫೋನ್ ನಂಬರ್ ಅವನದೇ ಆಗಿತ್ತು. ಅಲ್ಲಿದ್ದ ಮುದುಕಿ ಅವನನ್ನ ಹೆತ್ತು ಹೊತ್ತು ಬೆಳೆಸಿದ ಮಹಾಮಾತೆಯಾಗಿದ್ದಳು.!
ಮೊದಲೇ ಅಸ್ಪಷ್ಟವಾಗಿ ಕೇಳುತ್ತಿದ್ದ ಕಿವಿಯೊಳಗೆ ಬೀಳುತ್ತಿದ್ದ ಅವನ ತೊಳಲಾಟವ ಕಂಡು ಮಗ ಮರುಗಬೇಡ ಯಾಕೆ ರೋಧಿಸುತ್ತಾ ಇದ್ದಿಯ ಎಂದು ಅವಳು ಅವನನ್ನ ಸಂತೈಸುತ್ತಿದ್ದಳು ಅವನು ಮರುಗುತ್ತಿದ್ದ ಆಸ್ಪತ್ರೆ ನಿಶಬ್ದವಾಗಿ, ಮೌನ ಆವರಿಸಿತು. ಮಾತೆಯ ಮಾತುಗಳಲ್ಲಿ ಮಮತೆಯ ಸಾಗರವೇ ಹರಿಯಿತು ಕತ್ತಲು ಆಸ್ಪತ್ರೆಯನ್ನು ಮುತ್ತುತ್ತಿತ್ತು ಯಾರೋ ಬಂದು ದೀಪ ಹಚ್ಚಿದರು. ಅವನೆದೆಯ ಹಣತೆಯಲ್ಲಿ ತಾಯಿಯ ಮಮಕಾರದ ದೀಪವು ಬೆಳಗತೊಡಗಿತ್ತು. ಅವನೊಳಗಿನ ಮಾನವೀಯತೆ ಮತ್ತೊಮ್ಮೆ ಚಿಗುರೊಡೆಯಿತು ಇದಕಂಡ ತಾಯಿ ಹೃದಯ ಹರುಷಗೊಂಡಿತು.
- ಬಸವರಾಜ ಕರುವಿನ, ಬಸವನಾಳು.
ಉತ್ತಮವಾಗಿದೆ..
ಪ್ರತ್ಯುತ್ತರಅಳಿಸಿ