ಭಾರತದಲ್ಲಿ ಶಿಕ್ಷಣದ ಹಕ್ಕು ಮೂಲಭೂತ ಹಕ್ಕಾಗಿದೆ, ಇದು 6 ರಿಂದ 14 ವರ್ಷಗಳ ನಡುವಿನ ಭಾರತದ ಪ್ರತಿಯೊಬ್ಬ ನಾಗರಿಕನು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಾನೆ ಎಂದು ಹೇಳುತ್ತದೆ. ಆದರೆ ಅತಿ ಹೆಚ್ಚು ಶಿಕ್ಷಣದ ಕೊರತೆ ಕಂಡು ಬರುವುದು ಹಳ್ಳಿ ಮತ್ತು ಗ್ರಾಮಗಳಲ್ಲಿ ಯಾಕೆ ಇದರ ಸಮಸ್ಯೆ ನಗರಗಳಲ್ಲಿ ಇರುವುದಿಲ್ಲ ಎಂಬುವುದು ಕೆಲವರಿಗೆ ಕಾಡುವ ಪ್ರಶ್ನೆ ನಗರಗಳಲ್ಲಿಯೂ ಸಹ ಶಿಕ್ಷಣದ ಸಮಸ್ಯೆಗಳು ಕಂಡುಬರುತ್ತದೆ ಆದರೆ ಅಲ್ಲಿ ಯಾರು ಅದರ ಬಗ್ಗೆ ಮಾತನಾಡುವುದಿಲ್ಲ ಶಿಕ್ಷಣ ಮತ್ತು ಆರ್ಥಿಕ ಭದ್ರತೆಗಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಾರೆ ಮಕ್ಕಳ ಭವಿಷ್ಯ ಎಷ್ಟು ಮುಖ್ಯ ಅದರಲ್ಲೂ ಇಂದಿನ ಸಮಾಜದಲ್ಲಿ ಎಷ್ಟು ಮುಖ್ಯವೆಂಬುದು ನಿಮಗೆಲ್ಲಾ ತಿಳಿದಿದೆ.
ಕೊರೊನಾ ಸಂದರ್ಭದಲ್ಲಿಯಂತು ಹಲವಾರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ಕಳಿಸಲು ಶುರು ಮಾಡಿದ್ದರು. ಆಗ, ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಅದರನ್ವಯ, ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳು ಇರುವ ಮನೆಗಳ ಸುತ್ತಮುತ್ತಲಿನ ಮೈದಾನ, ಪಾರ್ಕ್ ಹಾಗೂ ಸಮುದಾನ ಭವನ, ಜಗುಲಿಗಳ ಮೇಲೆ ನಿಂತು ಪಾಠ ಮಾಡುತ್ತಿದ್ದರು. ಈಗ, ಪರಿಸ್ಥಿತಿ ತಿಳಿಯಾಗಿದೆ. ಶಾಲೆಗಳು ಪುನರಾರಂಭವಾಗಿವೆ. ಆದರೆ, ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಶಾಂತನಹಳ್ಳಿಯಲ್ಲಿ ಶಿಕ್ಷಣದ ಕೊರತೆ ಇದೆ. ಇಲ್ಲಿನ ಜನಸಂಖ್ಯೆ ಒಟ್ಟು ಸರಾಸರಿ ಐನೂರು ಜನರು ಈ ಪುಟ್ಟ ಪ್ರದೇಶದಲ್ಲಿ100 ಯುವಜನರು ಇದ್ದಾರೆ. ಉಳಿದವರೆಲ್ಲ 400 ಜನ ಇದ್ದಾರೆ. ಒಂದರಿಂದ ಐದನೇ ತರಗತಿಗೆ ಮಾತ್ರವೇ ಶಿಕ್ಷಣ ಇರುವುದರಿಂದ ಮುಂದಿನ ಶಿಕ್ಷಣಕ್ಕಾಗಿ ಬೇರೆ ಹಳ್ಳಿಗಳ ಕಡೆಗೆ ಹೋಗಬೇಕು. ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದೆ ಎಷ್ಟೋ ಜನರು ಶಿಕ್ಷಣವನ್ನು ತೊರೆಯುತ್ತಿದ್ದಾರೆ. ಇನ್ನೂ ಹೆಣ್ಣು ಮಕ್ಕಳ ಸ್ಥಿತಿಯಂತೂ ಹೀನಾಯವಾಗಿದೆ ಹತ್ತನೇ ತರಗತಿಯವರೆಗೆ ಓದುವುದು ತುಂಬಾ ಅಪರೂಪವಾಗಿದೆ. 8ನೇ ಅಥವಾ 9ನೇ ತರಗತಿವರೆಗೆ ಮಾತ್ರವೇ ಓದುತ್ತಾರೆ.
ಮುಂದಿನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಕಾರಣ ಮದುವೆಯ ವಯಸ್ಸಾಯ್ತು ಇನ್ನೂ ಹೊಲ, ಮನೆ ಕೆಲಸ ಇದೆಲ್ಲ ಕಲಿಯಲಿ ಎಂದು ಅವರ ಭವಿಷ್ಯವನ್ನು ಹಾಳು ಮಾಡುತ್ತಾರೆ. ತಮ್ಮ ಮಗಳಿಗೆ ಮದುವೆ ಮಾಡಬೇಕು ಪಕ್ಕದ ಮನೆಯವರ ಮಗಳಿಗೆ ಮದುವೆಯಾಗಿದೆ, ಜನರು ಮಾತನಾಡುತ್ತಾರೆ ಮತ್ತು ಅವಳು ಯಾರನ್ನಾದರೂ ಇಷ್ಟಪಟ್ಟು ಮದುವೆ ಆದರೆ ನಮ್ಮ ಜಾತಿ ಕೆಡುತ್ತದೆ ಮಾನ ಮರ್ಯಾದೆ ಹೋಗುತ್ತದೆ ಹೀಗೆ ಇಂತಹ ಭಯಗಳಿಗೆ ಹೆಣ್ಣನ್ನು ಬಲಿಯಾಗಿ ಮಾಡುತ್ತಾರೆ.
ಅದೇ ಪಕ್ಕದ ಮನೆಯ ಹುಡುಗಿ ಡಿಗ್ರಿ ಅಥವಾ ಪಿಯುಸಿ ಓದುತ್ತಿದ್ದಾಳೆ ನನ್ನ ಮಗಳು ಓದಲಿ ಎಂಬ ಅರಿವು ಮಾತ್ರ ಅವರಲ್ಲಿ ಇರುವುದಿಲ್ಲ. ಇನ್ನೂ ಯುವಕರು ಪಿಯುಸಿ ಅಥವಾ SSLC ಅಷ್ಟಕ್ಕೇ ಅವರಿಗೆ ಸಾಕು ಆಗಿರುತ್ತದೆ. ತಂದೆ ತಾಯಿ ಮಾಡುವ ಕಸುಬನ್ನೆ ಮುಂದುವರಿಸಿಕೊಂಡು ಹೋಗುತ್ತಾರೆ. ಮನೆಯ ಜವಾಬ್ದಾರಿ ತಂಗಿ,ಅಕ್ಕನ ಮದುವೆ ಮಾಡಬೇಕು ಎಂಬ ಕಾರಣಕ್ಕೆ ಶಿಕ್ಷಣವನ್ನು ಮುಂದುವರಿಸುವುದಿಲ್ಲ ಪ್ರಾಥಮಿಕ ಶಿಕ್ಷಣದ ಕೊರತೆ ಪ್ರತಿಯೊಬ್ಬರಿಗೂ ಇದೆ. ಉತ್ತಮ ಶಿಕ್ಷಣದ ಕೊರತೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕೊರತೆ ಮತ್ತು ಶಿಕ್ಷಕ ಅಥವಾ ಶಿಕ್ಷಕಿಯರ ಕೊರತೆ ಅತಿ ಹೆಚ್ಚಾಗಿ ಕಂಡು ಬರುತ್ತದೆ ಜೊತೆಗೆ ಪೌಷ್ಟಿಕ ಆಹಾರ, ಪಠ್ಯಪುಸ್ತಕ, ಬಟ್ಟೆ, ಬ್ಯಾಗು ಹೀಗೆ ಮುಂತಾದವುಗಳು ಮಕ್ಕಳಿಗೆ ಇದು ಯಾವುದು ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಎಷ್ಟೋ ಮಕ್ಕಳು ಶಾಲೆಗೆ ಬರುವುದಿಲ್ಲ. ಮುಂದೆಯಿಂದ ನೋಡಿದರೆ ಶಾಲೆಗಳ ಕಟ್ಟಡಗಳು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಒಳಗೆ ಹೋಗಿ ನೋಡಿದರೆ ಶಾಲೆಗಳ ಕಟ್ಟಡ, ಮುರುಕು ಗೋಡೆ, ಚಾವಣಿ, ಕುಡಿಯುವ ನೀರು, ಸ್ಪಚತೆ ಇದೆಲ್ಲ ಇಲ್ಲದೆ ಇರುವುದು ಕಂಡುಬರುತ್ತಿದೆ. ಎರಡು ಮೂರು ವಿಷಯಾಧಾರಿತ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಯನ್ನು ನೇಮಿಸುತ್ತಾರೆ. ಹೀಗಿರುವಾಗ ಒಬ್ಬ ವಿದ್ಯಾರ್ಥಿಗೆ ಅಥವಾ ವಿದ್ಯಾರ್ಥಿನಿಗೆ ಅಷ್ಟೇ ಗುಣಮಟ್ಟದ ಶಿಕ್ಷಣ ದೊರಕಲು ಹೇಗೆ ಸಾಧ್ಯ? ಗುಣಮಟ್ಟದ ಆಹಾರ, ಗುಣಮಟ್ಟದ ತಂತ್ರಜಾಲದ ವ್ಯವಸ್ಥೆ ಅಷ್ಟೇ ಯಾಕೆ ಒಂದು ಸ್ವಚ್ಛವಾದ ಶೌಚಾಲಯ ಕೂಡ ಇರುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಲಭ್ಯತೆಯೂ ಕಡಿಮೆ ಇದೆ. ಅನೇಕ ವಿದ್ಯಾರ್ಥಿಗಳು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಮೈಲುಗಟ್ಟಲೆ ದೂರ ಕ್ರಮಿಸಿ ಹೋಗಬೇಕು. ಸಾರಿಗೆ ಸೌಲಭ್ಯ ಇಲ್ಲದಿರುವುದು ಮತ್ತೊಂದು ಸವಾಲಾಗಿದೆ. ಶಾಲೆಗೆ ತಲುಪಲು ಮತ್ತು ಮನೆಗೆ ಹಿಂತಿರುಗಲು ಬಹಳ ಗಂಟೆಗಳು ತೆಗೆದುಕೊಳ್ಳುತ್ತದೆ.
ಗ್ರಾಮೀಣ ಶಿಕ್ಷಣವನ್ನು ಉತ್ತೇಜಿಸುವ ಪ್ರಮುಖ ಮಾರ್ಗವೆಂದರೆ ಉಚಿತ ಶಿಕ್ಷಣವನ್ನು ಹೆಚ್ಚಿಸುವುದು. ನಮ್ಮ ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳ ದಾಖಲಾತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ಸರ್ಕಾರ ಗಮನಹರಿಸಬೇಕು.
ಹೆಚ್ಚಿನ ಶಾಲೆಗಳನ್ನು ಸ್ಥಾಪಿಸುವ ಮೂಲಕ, ಸರಿಯಾದ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಇದನ್ನು ಮಾಡಬಹುದು. ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯು ಪ್ರಾಥಮಿಕ ಹಂತದವರೆಗೆ ಶಿಕ್ಷಣವನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಸಂಪನ್ಮೂಲಗಳಲ್ಲಿ ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಪ್ರಯೋಗಾಲಯಗಳು, ಆಟದ ಮೈದಾನಗಳು ಮತ್ತು ಬೆಂಚುಗಳು ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಿರಬೇಕು. ಇದು ಶಿಕ್ಷಣದ ಉದ್ದೇಶವನ್ನು ಸಾಧಿಸಲು ಮತ್ತು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹೆಣ್ಣು ಮಕ್ಕಳಿಗೆ ಋತು ಚಕ್ರದ ಬಗ್ಗೆ ಅರಿವು ನೀಡಬೇಕು ಅವರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರತಿ ತಿಂಗಳು ಸಿಗುವಂತೆ ನೋಡಿಕೊಳ್ಳಬೇಕು ಇದು ಯಾವುದು ಹಳ್ಳಿಗಳ್ಳಿ ಸಿಗುವುದಿಲ್ಲ. ಮತ್ತೆ ಮುಟ್ಟಿನ ಸಮಯದಲ್ಲಿ ಅವರು ದೂರದ ಶಾಲೆಗೆ ಹೋಗುವುದಿಲ್ಲ ಇದರಿಂದ ಅವರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗದೆ ಅವರ ಶಿಕ್ಷಣವನ್ನು ಮುಂದುವರಿಸದೇ ಅಲ್ಲಿಗೆ ನಿಲ್ಲಿಸುತ್ತಾರೆ.
ಇದು ನನ್ನ ಊರಿನ ಸಮಸ್ಯೆ ಒಂದೇ ಅಲ್ಲ ಪ್ರತಿ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಗಳ ಸಮಸ್ಯೆಯಾಗಿದೆ. ಮತ ಪ್ರಚಾರ ಮಾಡುವಾಗ, ಮತವನ್ನು ಚಲಾಯಿಸುವಾಗ, ಭರವಸೆಗಳ ಬಂಡಿಯನ್ನು ನೀಡುವಾಗ ಯಾರಿಗೂ ನೆನಪಿಗೂ ಬಾರದೆ ಇರುವುದು ಸರ್ಕಾರಿ ಶಾಲೆಗಳು. ಗ್ರಾಮೀಣ ಪ್ರದೇಶದ ಜನರಿಗೂ ಇದರ ಅರಿವು ಇಲ್ಲ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ . ಏನನ್ನೂ ತಿಳಿಯದ ಮಕ್ಕಳು ಪ್ರತಿ ದಿನವೂ ಶಾಲೆಗೆ ಹೋಗಿ ಬರುತ್ತಾರೆ. ಎಲ್ಲಿಯವರೆಗೆ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದಿಲ್ಲ. ಅಲ್ಲಿಯವರೆಗೂ ಅಂಬೇಡ್ಕರ್ ಅವರ ಕನಸು ನನಸಾಗಿದೆ. ಪ್ರತಿ ನಿಮಿಷ ನಾವು ಸಂವಿಧಾನಕ್ಕೆ ಅವಮಾನ ಮಾಡಿದಂತೆಯಾಗುತ್ತದೆ.
- ಆಶಾ ಎನ್., ಬಳ್ಳಾರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ