ಬುಧವಾರ, ಸೆಪ್ಟೆಂಬರ್ 13, 2023

ಶರಣ ಪುರದ ನಾಗಣ್ಣ (ಲೇಖನ) - ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.

ಹನ್ನೆರಡನೆಯ ಶತಮಾನದ ಕಾಲಘಟ್ಟ
ಒಟ್ಟಾರೆ ಹೇಳುವುದಾದರೆ ಅದೊಂದು ವ್ಯಕ್ತಿ ಮತ್ತು ಸಮಾಜದ ಆಂತರ್ಯದಲ್ಲಿನ ಸರ್ವತೋಮುಖದ ಸಂಘರ್ಷದ ಪರ್ವ ಕಾಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಅಪ್ಪ ಬಸವಾದಿ ಶರಣರು ಮಾಡಿದ ಆ ಕಲ್ಯಾಣ ಕ್ರಾಂತಿಯ ಚಾರಿತ್ರಿಕ ಘಟನೆಗಳನ್ನು ಹಾಗೂ ವಚನಗಳ ಆಂತರ್ಯದ ಆಳವನ್ನು ಪರಿಶೀಲನೆ ಮಾಡಿ ನೋಡ ಬಹುದಾಗಿದೆ. ಇಂದು ಶರಣರು ಹಾಗೂ ವಚನಗಳು ಜನಮಾನಸದಲ್ಲಿ ಉನ್ನತ ಸ್ಥಾನವನ್ನು ಪಡೆದಿವೆಯೇನೋ ನಿಜ. ಆದರೆ, ಅಂದು ಶರಣರು ಎದುರಿಸಿದ ಸಂಘರ್ಷ ವ್ಯಕ್ತಿ ನೆಲೆಯಲ್ಲಿ ಹಾಗೂ ಸಾಮಾಜಿಕ ನೆಲೆಯಲ್ಲಿ ಎಂಥಾ ಕಡುಕಷ್ಟದ್ದಿತ್ತು ಎಂಬ ಸಂಗತಿಯೇ ಹೃನ್ಮನಗಳ ಹಿಂಡುತ್ತದೆ. ಅಂತಹವರಲ್ಲಿ ನಮ್ಮ ಪುರದ ನಾಗಣ್ಣನವರ ಹತ್ತು ವಚನಗಳು ಪ್ರಚಲಿತದಲ್ಲಿವೆ.
ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಮೊದಲಾದ ವಿಷಯಗಳ ವಿವರಗಳು ಇವರ ವಚನಗಳಲ್ಲಿ ಕಂಡುಬರುತ್ತವೆ.  ಕೆಲವು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಇನ್ನು ಕೆಲ ವಚನಗಳಲ್ಲಿ ಈ ಪುರದ ನಾಗಣ್ಣನವರು ಪಾದೋದಕದ ಮಹಿಮೆಯನ್ನು ಹೇಳಿರುವರು.
ಈ ಶರಣರ ಜನ್ಮಸ್ಥಳ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಮರಗುಂಡ ಗ್ರಾಮವಾಗಿದೆ. ಕಾಲ ೧೧೬೦, ಇವರ ತಂದೆ ಅಮರಗುಂಡ ಮಲ್ಲಿಕಾರ್ಜುನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಪುರದ ನಾಗಣ್ಣ ಕೂಡ ಒಬ್ಬ ವಚನಕಾರ ಶರಣರು. 'ಅಮರಗುಂಡದ ಮಲ್ಲಿಕಾರ್ಜುನ' ಅಂಕಿತನಾಮದಲ್ಲಿ  ಶರಣರು ಬರೆದ ಹತ್ತು ವಚನಗಳು ದೊರೆತಿವೆ.    

ವಚನ 
ನೆನೆವ ಮನಕ್ಕೆ ಮೆತ್ತನೆ ತೋರಿದೆ
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ
ಪೂಜಿಸುವ ಕೈಗೆ ಹೊನ್ನನೆ ತೋರಿದೆ
ಇಂತೀ ತ್ರಿವಿಧವನೆ ತೋರಿ ಕೊಟ್ಟು ಮರಹನಿಕ್ಕಿದೆಯಯ್ಯಾ
ಅಮರಗುಂಡ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೇರಗಾದೆನು

ವಿಶ್ಲೇಷಣೆ
ಲಿಂಗ ನೆನೆಯುವ ಮನಸ್ಸಿನಲ್ಲಿ ಭೂಮಿ ಗಳಿಸುವ ಆಸೆ ತೋರಿದೆ. ಲಿಂಗ ನೋಡುವ ಕಣ್ಣಿಗೆ ಹೆಣ್ಣನ್ನು ತೋರಿಸಿದೆ.ಪೂಜಿಸುವ ಕೈಗೆ ಹೊನ್ನಿನ ಆಸೆ ತೋರಿಸಿ ನಿನ್ನ ಮರೆವನ್ನು ಕೊಟ್ಟೆ. ಮಲ್ಲಿಕಾರ್ಜುನಾ ನೀ ತೋರಿದ ನಾಟಕವನ್ನು, ಮೋಹಮಾಯೆಯನ್ನು ನೋಡಿ ಬೆರೆಗಾದೆನು.
ಪರಮಾತ್ಮನು ಭಕ್ತನಿಗೆ ಹೆಣ್ಣು, ಹೊನ್ನು, ಮಣ್ಣನ್ನು ತೋರಿಸಿಕೊಟ್ಟು ತನ್ನ ಧ್ಯಾನದಿಂದ ಮರೆಯಾಗುವ ಕತೆ ಮಾಡಿದ ಮಾಯಾಜಾಲ ನನ್ನು ಕಂಡು ಬೆರಗಾಗಿದ್ದೆನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶರಣರು ಈ ಅರಿವಿನ ಮೂಲ ಅರಿತು ಆಸೆಯ, ಮಾಯೆಯ ಒಳಗಾಗದೆ ಮುಕ್ತರಾಗಿದ್ದಾರೆ.
ಅಲ್ಲಮ ಪ್ರಭುಗಳ ಒಂದು ವಚನ ಕೂಡ ಹೀಗೆ ಇದೆ. 
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.

ತಮ್ಮ ಒಂದು ವಚನದಲ್ಲಿ; ಬೇಸಾಯದ ಕ್ರಿಯೆಯನ್ನು ಹೇಳುತ್ತಾ ಆಧ್ಯಾತ್ಮವನ್ನು ಅದಕ್ಕೆ ಅನ್ವಯಿಸುವರು. ಭಕ್ತನ ಲಿಂಗ ಭಿನ್ನವಾಗಲು ಆ ಲಿಂಗದೊಡನೆ ಪ್ರಾಣ ವನ್ನು ಬಿಡಬೇಕೆನ್ನುವ ನಿಷ್ಠುರ ವ್ರತವನ್ನು ಆಚರಿಸ ಬೇಕೆಂದು ಪ್ರತಿಪಾದಿಸಿದ ನಿಷ್ಠುರ ಶರಣರಿವರು.

ವಚನ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ: 
ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ 
ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ?
ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.      ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.
ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ
ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
  
ವಿಶ್ಲೇಷಣೆ 

 ಇಲ್ಲಿ ವಚನಕಾರರು ಅಂದಿನ ಕಾಲದ ವ್ಯಕ್ತಿ ತಾನು ಭಕ್ತಿಯ ಮಾರ್ಗಕ್ಕೆ ಬರುವ ಹಂಬಲದಿಂದ ಶರಣನಾಗಲು ಬಂದು ಸೇರಿದಂತೆಯೇ ಎದುರಿಸುವ ಆಂತರಿಕ ಸಂಘರ್ಷದ ತುಮುಲವನ್ನು ತಿಳಿಸಿದ್ದಾರೆ. ಇಲ್ಲಿ ಕಾಯದ ಅರುವಿನ ಅಂಗಪ್ರಜ್ಞೆಯಲ್ಲಿ ತನ್ನನ್ನು ತಾನು ಪರಿಶೀಲಿಸಿ ನೋಡಿದರೆ ಸ್ಪಷ್ಟವಾಗಿ ಎರಡು ಸ್ಥಿತಿ ಕಂಡಿವೆ. ಅದರ ಬಗ್ಗೆ ವಚನಕಾರರು ತಮ್ಮ ಇಷ್ಟಲಿಂಗಕ್ಕೆ ನಿವೇದನೆ ಮಾಡಿಕೊಂಡು, ಒಂದು ಭ್ರಾಂತಿಯತ್ತ ಎಳೆಯುತ್ತದೆ ಮತ್ತೊಂದು ನಿಮ್ಮತ್ತ ಎಳೆಯುತ್ತದೆ ದೇವಾ ಎನ್ನುವರು. ಇವು ಪರಸ್ಪರ ಅರಿತು ಅನುಸರಿಸಿ ನಡೆಯದೇ ಇರುವಾಗ ನಾನು ಸತ್ಪಥಕ್ಕೆ (ನೇರ)ಹೇಗೆ ಅಡಿಯಿಡಲು ಸಾಧ್ಯವೆನ್ನುವರು.
ಹೀಗೆ ಅವುಗಳ ಪರಸ್ಪರರ ಸಂಘರ್ಷದಲ್ಲಿ ಕಾಲಚಕ್ರದಲ್ಲಿ ಹುಟ್ಟಿ, ಕರ್ಮ ಚಕ್ರದಲ್ಲಿಯೇ ಆಯುಷ್ಯ ಕಳೆಯುತ್ತಿದ್ದೆ. ಎರಡು ತಲೆಯ ಗಂಡಬೇರುಂಡ ಪಕ್ಷಿಯಂತೆ ಒಂದು ತಲೆಯಿಂದ ವಿಷವನ್ನು ಮತ್ತೊಂದರಿಂದ ನಿರ್ವಿಷವನ್ನು ಸೇವಿಸಿದಂತೆ ಆಗಿದೆ. ಅಂದಿನ ಅರಿವು ಅಂದಿಗೇ ಮರೆತು ಹೋಯಿತೆಂದು ಪರಿತಪಿಸುವರು. ಮುಂದೆ ಇಷ್ಟಲಿಂಗ ಸಾಧನೆಯನ್ನು ಮಾಡಲು ಯಾವಾಗ ಯತ್ನಿಸುತ್ತಿದ್ದಾರೆಯೋ ಆಗ ಈ ರೀತಿಯ ಗೊಂದಲ ಉಂಟಾಗುತ್ತದೆ. ಇದನ್ನು ಹೋಗಲಾಡಿಸಿ, ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ ಎಂದು ಪರಿಪರಿಯಾಗಿ ಬಿನ್ನವಿಸುವಲ್ಲಿ ಶರಣತತ್ವ ಗಳ (ಇಷ್ಟಲಿಂಗದ) ನಿಜವಾದ ಅನುಷ್ಠಾನ ಎಷ್ಟು ಕಷ್ಟದ್ದೆಂಬುದನ್ನು ಈ ವಚನದಲ್ಲಿ ಲೌಕಿಕದ ನೇರ ಅನುಭವದ ಚಿತ್ರಣ ನೀಡುವ ಮೂಲಕ ಸ್ಪಷ್ಟಪಡಿಸಲಾಗಿದೆ.

- ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...