ಬಿಸಿಯುಸಿರ ತಾಪವು
ಚಿಲುಮೆಯಾಗಿ ಚಿಮ್ಮಿ
ಮೊಸರ ಮಳೆಯಾಗಿ ಹರಿದು
ಹಾಲ್ಗಡಲು ಉಕ್ಕುವಂತೆ ಉಕ್ಕಿ
ತೆರೆಗಳ ನೊರೆಯಂತೆ ಪುಟಿದು
ಶರವೇಗದಲಿ ಶರಧಿಯ ಸೇರುತಿದೆ
ಮನವು ತಣಿಯುತಿದೆ,
ಭಾರವು ಕರಗುತಿದೆ,
ಜೀವ ಉಲ್ಲಾಸಗೊಂಡಿದೆ,
ಮನದ ಮರ್ಕಟದ ಲಗಾಮು
ಸಡಿಲಿಸಿ ಕಡಲ ಕಡೆಗೆ ಎವಯಿಕ್ಕದೆ ನೋಡುತಿದೆ.
ಸಭ್ಯ ಅಸಭ್ಯಗಳ ತಿಕ್ಕಾಟಕ್ಕೆ
ಬುದ್ಧಿಯ ಕುಲುಮೆ ಬೇಯುತಿದೆ, ನಲಿಯುತಿದೆ,
ಉತ್ತುಂಗದ ಉನ್ಮಾದಕ್ಕೆ
ಕಾಯುತ್ತಿದೆ ಕಾತುರದಿಂದ
ಬೆವರಹನಿಯು ಸೇರಿ
ಬೊಗಸೆ ತುಂಬಿದೆ ಜೋಳಿಗೆಯಲಿ
ಹರಿದು ಹೋಗುತ್ತಿದೆ
ಚರಂಡಿಯ ಕಾಲುವೆಯಲ್ಲಿ
ಸತ್ತ ಹಸುಳೆಯ ಆಕ್ರಂದನ
ಕಿವಿಯಲ್ಲಿ ಗುನುಗುತ್ತಿದೆ
ತಪ್ಪು ಮಾಡಿದೆ ನೀ ಎಂದು
ತಪ್ಪಲ್ಲದ ತಪ್ಪಿಗೂ
ಮರುಗುತ್ತಿದೆ ಜೀವ
ಪ್ರಕೃತಿಯ ನಿಯಮಕ್ಕೆ
ಯಾರು ಹಿತವರು ಎಂದು
ಸಮಾಧಾನಿಸಿಕೊಳ್ಳುತ್ತಲೆ
ಸಾಗುತ್ತಿದೆ ಕರ್ಮ ಹೀಗೆ
ನಿತ್ಯ ನಿರಂತರ ಸುಖದಾಸೆಗೆ
- ಶ್ರೀಧರ ಬಿ ಸಿ ಭುವನಹಳ್ಳಿ, ಮಾಲೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ