ನೀ ಜನಿಸಿದಂದು ನನ್ನೆಲ್ಲಾ ಕಷ್ಟ ಕರಗಿ
ಶಾಪ ವಿಮೋಚಿತಳಾದೆ ಆನಂದವಾಗಿ
ನನ್ನ ಬದುಕಿಗೊಂದು ಅರ್ಥ ಸಿಕ್ಕಿತೆಂದು
ಹಿರಿ ಹಿರಿ ಹಿಗ್ಗಿದೆ ಜೀವನವು ಬೇಕಾಗಿ//೧//
ಮಗು ನೀ ಕಂಡ ಕನಸೆಲ್ಲಾ ನನಸಾಗಲಿ
ಹಡೆದಿರುವೆ ಹಣೆ ಬರಹ ಬರೆಯಲಿಲ್ಲ
ಹೋರಾಟದಲ್ಲಿಂದು ಏಕಾಂಗಿ ನೀನು
ಗೆದ್ದಾಗ ಜಗ ನಿನ್ನ ಹಿಂದೇ ಬರುವುದಲ್ಲ..! //೨//
ನಿನ್ನ ಹಿತ ಶತ್ರುಗಳನ್ನು ಸದಾ ದೂರವಿಡು
ಶರಣಾದ ಬದ್ಧ ವೈರಿಯನ್ನೂ ಕ್ಷಮಿಸಿಬಿಡು
ಯುದ್ಧವೇ ಜೀವನವು ಅಂತಾದ ಮೇಲೆ
ವೈರಿಗಳು ಎಷ್ಟಾದರೂ ಇರಲಿ ಬಿಡು//೩//
ಕಷ್ಟವೆಷ್ಟೇ ಬರಲಿ ಧರ್ಮವನ್ನು ಬಿಡದಿರು
ಸತ್ಯ ನಿಷ್ಠೆಗೆ ಗೆಲುವು ಶತ ಸಿದ್ಧವು ತಿಳಿದಿರು
ಬದಲಾವಣೆ ಜಗದ ನಿಯಮವು ತಿಳಿ ನೀನು
ರಾಜಿಸೂತ್ರಕೆ ಬಂದರೆ ರಾಜ್ಯಭಾರ ಬಿಡದಿರು//೪//
ಸೋಲಿನಾ ನಂತರ ಗೆಲುವಿರುವುದು ತಾಳು
ಇತಿಹಾಸ ರಚಿಸಿದವರು ಸೋತವರೆ ಕೇಳು
ಅದೃಷ್ಟದ ಬಾಗಿಲು ನಿನಗೆ ತೆರೆಯ ಬೇಕಷ್ಟೇ
ಮುಂದೊಂದು ದಿನ ಸಾಧಿಸುವೆ ಕೇಳು//೫//
ಅಕ್ಕ, ತಂಗಿಯರ ಹಾರೈಕೆ ನಿನಗಿರುವುದು
ಮಗ ಗೆದ್ದು ಬರಲೆಂದು ತಾಯಿ ಬೇಡುವುದು
ಎಲ್ಲೇ ಇದ್ದರೂ ನೀ ನೆಮ್ಮದಿಯಿಂದಿರು ಮಗು
ನಿನಗೆ ಪರಶಿವನ ಕೃಪೆಯು ಕವಚ ಆಗುವುದು//೬//
ಅನ್ಯಾಯವನ್ನು ನೀನಿನ್ನು ಸಹಿಸಿದ್ದು ಸಾಕು
ಧರ್ಮ ಮಾರ್ಗದಿ ನೀನು ನಡೆಯಲೇ ಬೇಕು
ಕತ್ತೆಗೆ ಲತ್ತೆ ಪೆಟ್ಟೇ ಕೊಡ ಬೇಕು ಎಂದಾಗ
ರೌದ್ರ ರೂಪವ ನೀನು ತಾಳಲೇ ಬೇಕು //೭//
- ಪ್ರೊ. ಜಯಶ್ರೀ ಹಿರೇಮಠ
ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ, ಧಾರವಾಡ.
ಮೋ. 9449819425.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ