ಇರುಳರಸನು ಇರುಳೆಲ್ಲಾ ಇಳೆದೇವಿಯನು
ರಮಿಸುತ ಮುದ್ದಿಸುತ..ಅವಳಾಳಕ್ಕಿಳಿಯುತ
ಕಣಿವೆಕತ್ತಲೆಗಳಲಿ ರಸಿಕನಂತೆ ಅಲೆಯುತ
ಸುಖಿಸಿ ಸುಸ್ತಾಗಿ ಎದ್ದು ಹೋದ ಸಮಯದಲಿ..
ಹುಣ್ಣಿಮೆ ಚಂದಿರನು ಸರಿರಾತ್ರಿಯ ಕದತೆರೆದು
ಪ್ರಕೃತಿದೇವಿಯ ಚೆಂದುಟಿಯನು ಚುಂಬಿಸುತ
ಅವಳೆದೆಯ ಬಿಸುಪಿನಲಿ ಹಾಲ್ಬೆಳದಿಂಗಳನು
ಸುರಿದು..ಸರಿದು ಎದ್ದು ಹೋದ ಘಳಿಗೆಯಲಿ..
ಮುಂಗಾರಿನ ಮಳೆಹನಿಯು ಮೇಘಗಳಿಂದಿಳಿದು
ಧರಣಿಯ ಹಣೆಯ ಸಿಂಧೂರವನು ತಾಕುತ
ಅವಳದೇ ಕಿಬ್ಬೊಟ್ಟೆಯ ಸೊಬಗಿನಲಿ ಧುಮ್ಮಿಕ್ಕುತ
ದಣಿದ ಭೂರಮೆಯ ಮೊಗದ ಬೆವರಹನಿಯನು
ಒರೆಸುತ..ಸುಖಿಸಿ ಎದ್ದು ಹೋಗುವ ವೇಳೆಯಲಿ..
ಆಗ..ಆಗತಾನೇ..ಉದಯಿಸಿಹನು ಬಾಲಭಾಸ್ಕರ..
ಸಮಸ್ತ ಜಗತ್ತಿಗೇ ಸಾರುತಿಹನು ಶುಭಸಮಾಚಾರ.
- ಜಿಂಕೆಗಳ ಮಂಜುನಾಥ್, ಕಲ್ವಮಂಜಲಿ,ಕೋಲಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ